ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭ್ಯರ್ಥಿಗಳ ಗೆಲುವಿಗೆ ಮುಖಂಡರು ನೆರವಾಗಿ

ಜೆಡಿಎಸ್ ಕಾರ್ಯಕರ್ತರ ಸಭೆ; ವಿಧಾನ ಪರಿಷತ್ ಸದಸ್ಯ ಆರ್.ಚೌಡರೆಡ್ಡಿ
Last Updated 4 ಮೇ 2018, 10:34 IST
ಅಕ್ಷರ ಗಾತ್ರ

ಕೋಲಾರ: ‘ವಿಧಾನಸಭಾ ಚುನಾವಣೆ ಮುಗಿಯುವ ತನಕ ಪಕ್ಷದ ನಾಯಕರು ಕ್ಷೇತ್ರಗಳಲ್ಲಿದ್ದು, ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಆರ್.ಚೌಡರೆಡ್ಡಿ ಸೂಚಿಸಿದರು.

ನಗರದಲ್ಲಿ ಗುರುವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ‘ನಾಯಕರು ನಿರಂತರವಾಗಿ ಬೂತ್‌ ಮಟ್ಟದ ಕಾರ್ಯಕರ್ತರ ಸಂಪರ್ಕದಲ್ಲಿರಬೇಕು. ಇಲ್ಲದಿದ್ದರೆ ಮತದಾರರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಅದಕ್ಕೆ ಅವಕಾಶ ಕೊಡಬಾರದು’ ಎಂದು ಕಿವಿಮಾತು ಹೇಳಿದರು.

‘ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಮೇ 5ರಂದು ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ. ಆ ದಿನ ಆಯೋಜನೆಯಾಗಿರುವ ಪಕ್ಷದ ಸಮಾವೇಶ ಯಶಸ್ವಿಗೊಳಿಸಲು ಎಲ್ಲರೂ ಸಹಕರಿಸಬೇಕು. ಕಾರ್ಯಕರ್ತರು ಭಿನ್ನಾಭಿಪ್ರಾಯ ಬದಿಗಿಟ್ಟು ಅಭ್ಯರ್ಥಿಗಳ ಪರ ಕೆಲಸ ಮಾಡಬೇಕು’ ಎಂದು ತಿಳಿಸಿದರು.

‘ಎಲ್ಲರನ್ನು ಒಗ್ಗೂಡಿಸಿ ಕ್ರಮಬದ್ಧವಾಗಿ ಪ್ರಚಾರ ನಡೆಸಬೇಕು. ಪ್ರತಿ ಗ್ರಾಮದಲ್ಲೂ ಅಭ್ಯರ್ಥಿ ಪರ ಪ್ರಚಾರ ಮಾಡಬೇಕು. ಕರಪತ್ರ ಮತ್ತು ಪ್ರಚಾರ ಸಾಮಗ್ರಿಗಳಿಗಾಗಿ ಪದೇಪದೇ ಕಚೇರಿಗೆ ಅಲೆಯುತ್ತಾ ಕಾಲಹರಣ ಮಾಡಬಾರದು. ಪ್ರಚಾರದ ಸ್ಥಳಕ್ಕೆ ಸಾಮಗ್ರಿಗಳನ್ನು ತಲುಪಿಸುತ್ತೇವೆ. ಗ್ರಾಮ, ಗ್ರಾಮ ಪಂಚಾಯಿತಿ ಮಟ್ಟದ ಮುಖಂಡರು ಮತ್ತು ಕಾರ್ಯಕರ್ತರು ತಮ್ಮ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಚಾರ ಮಾಡಬೇಕು’ ಎಂದರು.

‘ಜನ ರಾಜ್ಯದಲ್ಲಿ ರಾಜಕೀಯ ಬದಲಾವಣೆ ಬಯಸಿದ್ದಾರೆ. ಜಿಲ್ಲೆಯಲ್ಲೂ ಅದೇ ವಾತಾವರಣವಿದೆ. ಜಿಲ್ಲೆಯ 6 ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುವುದರಲ್ಲಿ ಅನುಮಾನವಿಲ್ಲ. ಆದರೆ, ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲುವಂತೆ ಮಾಡಬೇಕು. ಇದು ಕಾರ್ಯಕರ್ತರು ಮತ್ತು ಮುಖಂಡರ ಜವಾಬ್ದಾರಿ’ ಎಂದು ಹೇಳಿದರು.

ಪಾಠ ಕಲಿಸಬೇಕು: ‘ಜಿಲ್ಲೆಯಲ್ಲಿ ಜೆಡಿಎಸ್ ಬಲಿಷ್ಠವಾಗಿದೆ ಎಂಬುದಕ್ಕೆ ಕಾಂಗ್ರೆಸ್ ಅಭ್ಯರ್ಥಿ ಕಣ್ಣೀರು ಹಾಕಿರುವುದೇ ಸಾಕ್ಷಿ. ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಿರುವ ಕಾಂಗ್ರೆಸ್ ಮತ್ತು ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು. ಅಭ್ಯರ್ಥಿ ಶ್ರೀನಿವಾಸಗೌಡರಿಗಿಂತ ಇಲ್ಲಿ ಪಕ್ಷದ ಗೆಲುವು ಮುಖ್ಯ’ ಎಂದು ಎಚ್ಚರಿಸಿದರು.

‘ಬಿಜೆಪಿ ಮತ್ತು ಕಾಂಗ್ರೆಸ್ ದುರಾಡಳಿತ, ಭ್ರಷ್ಟಾಚಾರದಿಂದ ಜನ ಬೇಸತ್ತಿದ್ದಾರೆ. ಜನರಿಗೆ ಒಳ್ಳೆಯದಾ ಗಬೇಕೆಂಬ ಉದ್ದೇಶದಿಂದ ಕುಮಾರ ಸ್ವಾಮಿ ದಿಟ್ಟ ಹೆಜ್ಜೆ ಇಟ್ಟಿದ್ದು, ಎಲ್ಲಾ ಕ್ಷೇತ್ರ ಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಅವರ ಕೈ ಬಲಪಡಿಸಬೇಕು’ ಎಂದು ಸಲಹೆ ನೀಡಿದರು.

ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ್, ಜೆಡಿಎಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ಇ.ಗೋಪಾಲ್, ಕಾರ್ಯಾಧ್ಯಕ್ಷ ನಟರಾಜ್, ತಾಲ್ಲೂಕು ಘಟಕದ ಅಧ್ಯಕ್ಷ ಬಾಬು ಮೌನಿ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಾಮು, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಕೆ.ವಿ.ಶಂಕರಪ್ಪ, ಸೋಮಣ್ಣ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT