ಬುಧವಾರ, ಡಿಸೆಂಬರ್ 11, 2019
19 °C

ಪೌರತ್ವ ಮಸೂದೆಗೆ ಒಪ್ಪಿಗೆ: ಸಂಸತ್ತಿನಲ್ಲಿ ಮಂಡಿಸಲು ಕೇಂದ್ರ ಸಂಪುಟ ತೀರ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮುಸ್ಲಿಮೇತರ ವಲಸಿಗರು ಮತ್ತು ನಿರಾಶ್ರಿತರಿಗೆ ಧರ್ಮದ ಆಧಾರದಲ್ಲಿ ಭಾರತದ ಪೌರತ್ವ ನೀಡಲು ಅವಕಾಶ ಮಾಡಿಕೊಡುವ ‘ಪೌರತ್ವ ತಿದ್ದುಪಡಿ ಮಸೂದೆ–2019’ನ್ನು ಈಗ ನಡೆಯುತ್ತಿರುವ ಸಂಸತ್ತಿನ ಅಧಿವೇಶನ ದಲ್ಲಿ ಮಂಡಿಸಲು ಕೇಂದ್ರ ಸಂಪುಟ ಒಪ್ಪಿಗೆ ಸೂಚಿಸಿದೆ. 

ಪಾಕಿಸ್ತಾನ, ಆಫ್ಗಾನಿಸ್ತಾನ ಮತ್ತು ಬಾಂಗ್ಲಾದೇಶಗಳಿಂದ ಭಾರತಕ್ಕೆ ವಲಸೆ ಬಂದಿರುವ ಹಿಂದೂ, ಸಿಖ್‌, ಬೌದ್ಧ, ಜೈನ, ಪಾರ್ಸಿ ಮತ್ತು ಕ್ರೈಸ್ತ ಧರ್ಮೀಯರಿಗೆ ಭಾರತದ ಪೌರತ್ವ ನೀಡಲು ಈ ತಿದ್ದುಪಡಿಯು ಅವಕಾಶ ಮಾಡಿಕೊಡಲಿದೆ. 2024ರ ಒಳಗೆ ಕೇಂದ್ರ ಸರ್ಕಾರವು ದೇಶದಾದ್ಯಂತ ಅನುಷ್ಠಾನಕ್ಕೆ ತರಲು ಹೊರಟಿರುವ ರಾಷ್ಟ್ರೀಯ ಪೌರತ್ವ ನೋಂದಣಿಯು ಈ ಆರೂ ಸಮುದಾಯದ ವಲಸಿಗರಿಗೆ ರಕ್ಷಣೆ ನೀಡಲಿದೆ.

ಮಂಡನೆವರೆಗೂ ವಿವರ ಬಹಿರಂಗ ಇಲ್ಲ: ‘ಈ ಸಮುದಾಯದ ಜನರು ಯಾವುದೇ ರೀತಿಯ ದಾಖಲೆ ಹೊಂದಿಲ್ಲದೇ ಇದ್ದರೂ ಅವರಿಗೆ ಭಾರತದ ಪೌರತ್ವ ದೊರೆಯಲಿದೆ. 2014ರ ಡಿಸೆಂಬರ್‌ಗೂ ಮುನ್ನ ಭಾರತಕ್ಕೆ ವಲಸೆ ಬಂದವರಿಗೆ ಇದು ಅನ್ವಯ ಆಗಲಿದೆ’ ಎಂದು ಈ ಹಿಂದೆ ಲೋಕಸಭೆಯಲ್ಲಿ ಮಂಡಿಸ ಲಾಗಿದ್ದ ‘ಪೌರತ್ವ ತಿದ್ದುಪಡಿ ಮಸೂದೆ’ ಯಲ್ಲಿ ವಿವರಿಸಲಾಗಿತ್ತು.

ಆ ಮಸೂದೆಗೆ ಲೋಕಭೆಯ ಅನುಮೋದನೆ ದೊರೆತರೂ, ರಾಜ್ಯ ಸಭೆಯ ಅನುಮೋದನೆ ದೊರೆತಿರಲಿಲ್ಲ. ಹಿಂದಿನ ಲೋಕಸಭೆಯ ಅವಧಿ ಮುಗಿದ ಕಾರಣ, ಮಸೂದೆಯೂ ಮಾನ್ಯತೆ ಕಳೆದುಕೊಂಡಿತ್ತು. ಈಗ ಅದೇ ಮಸೂದೆಯನ್ನು ಮತ್ತೆ ಲೋಕಸಭೆಯಲ್ಲಿ ಮಂಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಆದರೆ, ಮಸೂದೆಯ ಈ ಅಂಶಗಳಿಗೆ ತಿದ್ದುಪಡಿ ತರಲಾಗಿದೆಯೇ ಇಲ್ಲವೇ ಎಂಬುದರ ವಿವರ ಬಹಿರಂಗವಾಗಿಲ್ಲ.

‘ಗುರುವಾರ ಇಲ್ಲವೇ ಶುಕ್ರವಾರ ಈ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸುತ್ತೇವೆ. ಆಗ ಅದರ ಪೂರ್ಣ ವಿವರ ಗೊತ್ತಾಗಲಿದೆ’ ಎಂದು ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು