ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡಿಶಾದಲ್ಲಿ ಬಿಜೆಡಿಗೆ ಸತತ ಐದನೇ ಗೆಲುವಿನ ನಿರೀಕ್ಷೆ

Last Updated 21 ಮೇ 2019, 1:09 IST
ಅಕ್ಷರ ಗಾತ್ರ

ಲೋಕಸಭೆ ಚುನಾವಣೆಯ ಮತ ಎಣಿಕೆಗೆ ದಿನಗಣನೆ ಆರಂಭವಾಗಿದೆ. ಭಾನುವಾರ ಪ್ರಕಟವಾದ ಮತಗಟ್ಟೆ ಸಮೀಕ್ಷೆಗಳ ಫಲಿತಾಂಶವು ರಾಜಕೀಯ ಪಕ್ಷಗಳಲ್ಲಿ ಸ್ವಲ್ಪ ಮಟ್ಟಿನ ತಲ್ಲಣ ಸೃಷ್ಟಿಸಿದೆ. ಎನ್‌ಡಿಎಗೆ ಸ್ಪಷ್ಟ ಬಹುಮತ ದೊರೆಯಲಿದೆ ಎಂದು ಸಮೀಕ್ಷೆಗಳು ಹೇಳಿರುವುದರಿಂದ ಆ ಬಣದಲ್ಲಿ ಸಂಭ್ರಮ ಮನೆ ಮಾಡಿದೆ. ಯಾವ ಮೈತ್ರಿಕೂಟಕ್ಕೂ ಸ್ಪಷ್ಟ ಬಹುಮತ ಬಾರದು ಎಂದು ಭಾವಿಸಿರುವವರಲ್ಲಿ ನಿರಾಸೆ ಮೂಡಿದೆ. ಮತಗಟ್ಟೆ ಸಮೀಕ್ಷೆಗಳ ಆಧಾರದಲ್ಲಿ ರಾಜಕೀಯ ಲೆಕ್ಕಾಚಾರವೂ ಆರಂಭವಾಗಿದೆ. ಮತಯಂತ್ರದ ಬಗ್ಗೆಯೂ ಚರ್ಚೆ ಶುರುವಾಗಿದೆ.

***

ಎಸ್‌.ಟಿ. ಬೇವೂರಿಯಾ

ಭುವನೇಶ್ವರ: ಒಡಿಶಾ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜು ಜನತಾ ದಳ (ಬಿಜೆಡಿ) ಅಧಿಕಾರಕ್ಕೆ ಮರಳುವುದು ಖಚಿತ ಎಂದು ಸ್ಥಳೀಯ ಮಾಧ್ಯಮ ಸಂಸ್ಥೆಗಳ ಮತಗಟ್ಟೆ ಸಮೀಕ್ಷೆಗಳು ಹೇಳಿವೆ. ನವೀನ್‌ ಪಟ್ನಾಯಕ್‌ ನೇತೃತ್ವದ ಪಕ್ಷಕ್ಕೆ ಇದು ಸಂತಸದ ಸುದ್ದಿ. ಈ ಪಕ್ಷ ಸತತ ಐದನೇ ಅವಧಿಗೆ ಅಧಿಕಾರಕ್ಕೆ ಬರಲಿದೆ. ಯಾವ ಪಕ್ಷವೂ ಸತತವಾಗಿ ಇಷ್ಟೊಂದು ಕಾಲ ಒಡಿಶಾದಲ್ಲಿ ಅಧಿಕಾರದಲ್ಲಿ ಇರಲಿಲ್ಲ. ಕಳೆದ ಬಾರಿ ನಾಲ್ಕನೇ ಅವಧಿಗೆ ಅಧಿಕಾರಕ್ಕೆ ಬಂದಾಗಲೇ ನವೀನ್‌ ಪಟ್ನಾಯಕ್‌ ಅವರು ದಾಖಲೆ ಸೃಷ್ಟಿಸಿದ್ದರು.

147 ಸದಸ್ಯರ ವಿಧಾನಸಭೆಯಲ್ಲಿ ಬಿಜೆಡಿಗೆ 85–95 ಸ್ಥಾನಗಳು ಸಿಗಬಹುದು ಎಂದು ಮತಗಟ್ಟೆ ಸಮೀಕ್ಷೆಗಳು ಹೇಳಿವೆ. ಬಿಜೆಪಿಗೆ 25–35 ಮತ್ತು ಕಾಂಗ್ರೆಸ್‌ಗೆ 12–15 ಸ್ಥಾನಗಳು ಸಿಗಬಹುದು ಎಂದು ಅಂದಾಜಿಸಲಾಗಿದೆ. ಕಳೆದ ಚುನಾವಣೆಯಲ್ಲಿ ಬಿಜೆಡಿಗೆ 117 ಕ್ಷೇತ್ರಗಳಲ್ಲಿ ಗೆಲುವು ದೊರೆತಿತ್ತು.

‘ಕಳೆದ ಬಾರಿ ನಮ್ಮದು ಅಭೂತಪೂರ್ವ ಗೆಲುವು. ಈ ಬಾರಿ ಅದರ ಪುನರಾವರ್ತನೆ ಆಗಬಹುದು ಎಂಬ ನಿರೀಕ್ಷೆ ನಮಗೆ ಇಲ್ಲ. ಹಾಗಿದ್ದರೂ ನಾವು ಅಧಿಕಾರಕ್ಕೆ ಮರಳುವುದು ಖಚಿತ. ಮತಗಟ್ಟೆ ಸಮೀಕ್ಷೆಗಳು ಅದನ್ನೇ ಹೇಳಿವೆ’ ಎಂದು ಬಿಜೆಡಿಯ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ. 105 ಕ್ಷೇತ್ರಗಳಲ್ಲಿ ಗೆಲುವು ದೊರೆಯಬಹುದು ಎಂದು ಪಕ್ಷದ ಆಂತರಿಕ ಸಮೀಕ್ಷೆಯೂ ಹೇಳಿದೆ ಎಂದು ಅವರು ತಿಳಿಸಿದ್ದಾರೆ.

ಆದರೆ, ಒಡಿಶಾದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲಿದೆ ಎಂದು ಬಿಜೆಪಿ ರಾಜ್ಯ ಘಟಕ ಹೇಳಿಕೊಂಡಿದೆ. ‘ಬಿಜೆಡಿಯ ಅದಕ್ಷ ಸರ್ಕಾರವನ್ನು ಕಿತ್ತೊಗೆಯಲು ಜನರು ಈಗಾಗಲೇ ತೀರ್ಮಾನಿಸಿದ್ದಾರೆ. ನಮಗೆ ಬಹುಮತ ದೊರೆಯಲಿದೆ’ ಎಂದು ಬಿಜೆಡಿ ರಾಜ್ಯ ಘಟಕದ ಉಪಾಧ್ಯಕ್ಷ ವಸಂತ ಪಾಂಡಾ ಹೇಳಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಬಿಜೆಡಿಗೆ ದೊಡ್ಡ ಹೊಡೆತ ಬೀಳಿಲಿದೆ ಎಂದೂ ಮತಗಟ್ಟೆ ಸಮೀಕ್ಷೆಗಳು ಹೇಳಿವೆ. ಕಳೆದ ಬಾರಿ 21ರಲ್ಲಿ 20 ಕ್ಷೇತ್ರಗಳಲ್ಲಿ ಈ ಪಕ್ಷ ಗೆದ್ದಿತ್ತು. ಒಂದು ಸ್ಥಾನ ಬಿಜೆಪಿ ಪಾಲಾಗಿತ್ತು. ಈ ಬಾರಿ 10ಕ್ಕೂ ಹೆಚ್ಚು ಕ್ಷೇತ್ರಗಳನ್ನು ಬಿಜೆಡಿ ಕಳೆದುಕೊಳ್ಳಲಿದೆ. ಅದು ಬಿಜೆಪಿಗೆ ಸಿಗಲಿದೆ ಎಂದು ಸಮೀಕ್ಷೆಗಳು ಅಂದಾಜಿಸಿವೆ.

ಇವಿಎಂ ಭದ್ರತೆಗೆ ರಾಜ್ಯದಪೊಲೀಸರು ಬೇಡ: ಬಿಜೆಪಿ

ನವದೆಹಲಿ: ಕರ್ನಾಟಕ ಸೇರಿದಂತೆ ಬಿಜೆಪಿಯೇತರ ಸರ್ಕಾರದ ಆಡಳಿತ ವಿರುವ ಐದು ರಾಜ್ಯಗಳಲ್ಲಿ ಮತಯಂತ್ರಗಳನ್ನು ಇರಿಸಿರುವ ಸ್ಟ್ರಾಂಗ್‌ರೂಂಗಳಿಂದ ಸ್ಥಳೀಯ ಪೊಲೀಸರನ್ನು ದೂರಇಡಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ದೊಡ್ಡ ಅಪಾಯ ಎಂದು ಟೀಕಿಸಿರುವ ಬಿಜೆಪಿ, ತನ್ನ ಬೇಡಿಕೆಗೆ ಸಂಬಂಧಿಸಿ ಸೋಮವಾರ ಚುನಾವಣಾ ಅಯೋಗಕ್ಕೆ ಮನವಿ ಸಲ್ಲಿಸಿತು.

ಕರ್ನಾಟಕ, ಒಡಿಶಾ, ಮಧ್ಯಪ್ರದೇಶ, ಛತ್ತೀಸಗಡ, ಪಶ್ಚಿಮ ಬಂಗಾಳದಲ್ಲಿ ಮತಯಂತ್ರಗಳನ್ನು ಇರಿಸಿರುವ ಎಲ್ಲ ಸ್ಟ್ರಾಂಗ್‌ರೂಂಗಳಿಗೆ ಕೇಂದ್ರೀಯ ಭದ್ರತಾ ಪಡೆಯನ್ನು ಭದ್ರತೆಗೆ ನಿಯೋಜಿಸಬೇಕು ಎಂದು ಬೇಡಿಕೆ ಮಂಡಿಸಿತು.

ಅಲ್ಲದೆ, ಈ ಐದು ರಾಜ್ಯಗಳಲ್ಲಿ ಮತ ಎಣಿಕೆಯು ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಯಲಿದೆ ಎಂಬುದರ ಖಾತರಿಗಾಗಿ ವಿಶೇಷ ವೀಕ್ಷಕರನ್ನು ನಿಯೋಜಿಸಬೇಕು ಎಂದು ಬಿಜೆಪಿ ಕೋರಿತು.

ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಕಾರ್ಯಕರ್ತರು ಹಿಂಸೆಯಲ್ಲಿ ತೊಡಗಿದ, ಮತದಾರರ ಮೇಲೆ ಪ್ರಭಾವ ಬೀರಿರುವ ವಿವಿಧ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಮರುಮತದಾನ ನಡೆಸಬೇಕು ಎಂದು ಮನವಿಯಲ್ಲಿ ಆಗ್ರಹಪಡಿಸಲಾಗಿದೆ.

ಈ ರಾಜ್ಯಗಳಲ್ಲಿ ಸ್ಥಳೀಯ ಪೊಲೀಸರಿಗೆ ಇವಿಎಂ ಸ್ಟ್ರಾಂಗ್‌ರೂಂಗಳತ್ತ ಬರಲು ಅವಕಾಶ ನೀಡಬಾರದು. ಕೇಂದ್ರ ಮೀಸಲು ಪಡೆ ಸಿಬ್ಬಂದಿಯನ್ನೇ ಭದ್ರತೆಗೆ ನಿಯೋಜಿಸಬೇಕು. ಮತ ಎಣಿಕೆಯ ಟೇಬಲ್‌ ಮತ್ತು ಪಕ್ಷಗಳ ಏಜೆಂಟರ ನಡುವೆ ತಂತಿ ಜಾಲರಿ ಅಳವಡಿಸುವುದು ಸೇರಿ ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಯೋಗಕ್ಕೆ ಮನವಿ ಮಾಡಲಾಗಿದೆ.

‘ಆಯೋಗದ ಹಿರಿಯ ಅಧಿಕಾರಿಗಳು ಸಿ.ಸಿ.ಟಿ.ವಿ ಕ್ಯಾಮೆರಾದ ದೃಶ್ಯಗಳನ್ನು ಗಮನಿಸಬೇಕು. ವ್ಯವಸ್ಥಿತ ಮತಎಣಿಕೆಗೆ ಕ್ರಮವಹಿಸಲು ಕೋರಿದ್ದೇವೆ’ ಎಂದು ನಿಯೋಗದ ನೇತೃತ್ವ ವಹಿಸಿದ್ದ ಕೇಂದ್ರ ಸಚಿವ ಪೀಯೂಷ್ ಗೋಯಲ್‌ ತಿಳಿಸಿದರು.

ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರದ ಹಿನ್ನೆಲೆಯಲ್ಲಿ ಅಲ್ಲಿ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಕೇಂದ್ರ ಸಶಸ್ತ್ರ ಮೀಸಲು ಪಡೆ ನಿಯೋಜಿಸಬೇಕು ಎಂದು ಮನವಿ ಮಾಡಲಾಗಿದೆ ಎಂದರು.

***

ಮತಗಟ್ಟೆ ಸಮೀಕ್ಷೆಯಲ್ಲಿ ಇವಿಎಂಗಳ ಪಾಲು ಏನೂ ಇಲ್ಲ. ಆದ್ದರಿಂದ ಚುನಾವಣೆಯ ಫಲಿತಾಂಶಗಳು ಮತಗಟ್ಟೆ ಸಮೀಕ್ಷೆಯ ದಿಕ್ಕಿನಲ್ಲೇ ಇದ್ದರೆ ಇವಿಎಂಗಳ ವಿರುದ್ಧ ವಿರೋಧಪಕ್ಷಗಳವರು ಎತ್ತಿರುವ ಹುಸಿ ಆಕ್ಷೇಪಗಳೂ ಅರ್ಥರಹಿತ ಎಂಬದು ಸಾಬೀತಾಗುತ್ತದೆ.

–ಅರುಣ್‌ ಜೇಟ್ಲಿ, ಕೇಂದ್ರದ ಹಣಕಾಸು ಸಚಿವ

ಮತಯಂತ್ರಗಳನ್ನು ತಿರುಚಲು ಸಾಧ್ಯವಿದೆ ಎಂದು ಮನವರಿಕೆಯಾಗಿದ್ದರಿಂದಲೇ ಅವುಗಳಿಗೆ ವಿವಿಪ್ಯಾಟ್‌ಗಳನ್ನು ಅಳವಡಿಸಲು ಸುಪ್ರೀಂ ಕೋರ್ಟ್‌ ಸೂಚನೆ ನೀಡಿತ್ತು. ಇವಿಎಂಗಳ ಮೇಲೆ ವಿರೋಧಪಕ್ಷದವರು ಸಂದೇಹ ವ್ಯಕ್ತಪಡಿಸಿರುವುದರ ಹಿಂದೆ ಜನಪರ ಕಾಳಜಿ ಹಾಗೂ ಪ್ರಜಾತಂತ್ರವನ್ನು ರಕ್ಷಿಸುವ ಉದ್ದೇಶವಿದೆ

–ಅಶೋಕ್‌ ಗೆಹ್ಲೋಟ್‌, ರಾಜಸ್ಥಾನದ ಮುಖ್ಯಮಂತ್ರಿ

ಅಧಿಕಾರದಲ್ಲಿ ಇರುವವರು ಸರ್ಕಾರಿ ಯಂತ್ರವನ್ನು ಬಳಸಿಕೊಂಡು, ಜನರು ನೀಡಿದ ತೀರ್ಪನ್ನು ‘ತಿದ್ದಿ ಬರೆಯುವ ಪ್ರಯತ್ನ’ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿರುವ ಪ್ರತಿಯೊಂದು ಪಕ್ಷವೂ ಈ ಯೋಜನೆಯನ್ನು ವಿಫಲಗೊಳಿಸಲು ಕೈಜೋಡಿಸಬೇಕು

–ಎಂ.ಕೆ. ಸ್ಟಾಲಿನ್‌, ಡಿಎಂಕೆ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT