ಮೋದಿ ಸಾಧನೆಯ ಪುಸ್ತಕ ಬಿಡುಗಡೆಗೆ ಸಿದ್ಧ

7

ಮೋದಿ ಸಾಧನೆಯ ಪುಸ್ತಕ ಬಿಡುಗಡೆಗೆ ಸಿದ್ಧ

Published:
Updated:

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಬಿಜೆಪಿ ತರಬೇತಿ ಕೇಂದ್ರ ಸಮಿತಿ ಸದಸ್ಯ ಮತ್ತು ಆರ್‌ಎಸ್‌ಎಸ್‌ ಮುಖವಾಣಿ ‘ಆರ್ಗನೈಸರ್‌’ ಮಾಜಿ ಸಂಪಾದಕ ಆರ್‌. ಬಾಲಶಂಕರ ಬರೆದಿರುವ ಪುಸ್ತಕ ಬಿಡುಗಡೆಗೆ ಸಿದ್ಧವಾಗಿದೆ.

ನರೇಂದ್ರ ಮೋದಿ: ಕ್ರಿಯೇಟಿವ್‌ ಡಿಸ್‌ರಪ್ಟರ್‌, ದಿ ಮೇಕರ್‌ ಆಫ್‌ ನ್ಯೂ ಇಂಡಿಯಾ’ ಇಂಗ್ಲಿಷ್‌ ಭಾಷೆಯಲ್ಲಿ ಬರೆದಿರುವ ಪುಸ್ತಕ ಭಾರತದ ರಾಜಕೀಯದಲ್ಲಿ ಮೋದಿ ಪ್ರಭಾವವನ್ನು ಅನಾವರಣಗೊಳಿಸಲಿದೆ.

ಈ ಪುಸ್ತಕದಲ್ಲಿ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಕುರಿತು ಒಂದು ಇಡೀ ಅಧ್ಯಾಯವನ್ನು ಮೀಸಲಿಟ್ಟಿರುವುದಾಗಿ ಲೇಖಕರು ಹೇಳಿದ್ದಾರೆ.

ಪ್ರಧಾನಿ ಕುರಿತು ಶಶಿ ತರೂರ್‌ ಬರೆದ ‘ದಿ ಪ್ಯಾರಾಡಾಕ್ಸಿಯಲ್‌ ಪ್ರೈಮ್‌ ಮಿನಿಸ್ಟರ್‌: ನರೇಂದ್ರ ಮೋದಿ ಅಂಡ್‌ ಹಿಸ್‌ ಇಂಡಿಯಾ’ ಪುಸ್ತಕ ಓದಿದ ನಂತರ ಈ ನಿರ್ಧಾರ ತೆಗೆದುಕೊಂಡೆ ಎಂದು ಬಾಲಶಂಕರ ತಿಳಿಸಿದ್ದಾರೆ.

ಪ್ಯಾರಾಡಾಕ್ಸಿಯಲ್‌ ಪ್ರೈಮ್‌ ಮಿನಿಸ್ಟರ್‌ ಪುಸ್ತಕದಲ್ಲಿ ಮೋದಿ ವಿರುದ್ಧ ತರೂರ್‌ ಮಾಡಿರುವ ಆರೋಪ ಮತ್ತು ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸಲು ‘ತರೂರ್‌ ಅವರನ್ನು ಆವರಿಸಿರುವ ಮೋದಿ’ ಎಂಬ ಅಧ್ಯಾಯ ಬರೆದಿದ್ದಾಗಿ ಅವರು ಹೇಳಿದ್ದಾರೆ.

ಪುಸ್ತಕವನ್ನು ಕೋನಾರ್ಕ್‌ ಪ್ರಕಾಶನ ಸಂಸ್ಥೆ ಪ್ರಕಟಿಸಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮುನ್ನುಡಿ ಬರೆದಿದ್ದು, ಹಣಕಾಸು ಸಚಿವ ಅರುಣ್‌ ಜೇಟ್ಲಿ ಪುಸ್ತಕ ಪರಿಚಯಿಸಿದ್ದಾರೆ. ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ಸಂದೇಶ ನೀಡಿದ್ದಾರೆ.

‘ದೇಶದ ರಾಜಕೀಯ ಮತ್ತು ಆರ್ಥಿಕ ಸ್ಥಿತಿಗತಿಯ ಕುರಿತು ಲೇಖಕರು ವ್ಯಕ್ತಪಡಿಸಿರುವ ಎಲ್ಲ ಅಭಿಪ್ರಾಯಗಳನ್ನು ಸಾರಾಸಗಟಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂದು ಶಾ ಮುನ್ನುಡಿಯಲ್ಲಿ ಹೇಳಿದ್ದಾರೆ.

ಚುನಾವಣೆಗೂ ಮುನ್ನ ಲಕ್ಷ ಪ್ರತಿ!

300 ಪುಟಗಳ ಪುಸ್ತಕವನ್ನು ಕೊನಾರ್ಕ್‌ ಪ್ರಕಾಶನ ಸಂಸ್ಥೆ ಪ್ರಕಟಿಸಿದ್ದು, ಆನ್‌ಲೈನ್‌ನಲ್ಲಿಯೂ ದೊರೆಯಲಿದೆ. 17 ಅಧ್ಯಾಯಗಳಿದ್ದು ಮೋದಿ ಅವರ 40 ಅಪರೂಪದ ಛಾಯಾಚಿತ್ರಗಳನ್ನು ಬಳಸಲಾಗಿದೆ.

ಡಿಸೆಂಬರ್‌ ಎರಡನೇ ವಾರದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ದೆಹಲಿಯಲ್ಲಿ ಇಂಗ್ಲಿಷ್‌ ಆವೃತ್ತಿ ಪುಸ್ತಕ ಬಿಡುಗಡೆ ಮಾಡಲಿದ್ದಾರೆ ಎಂದು ಹೇಳಲಾಗಿದೆ.

2019ರ ಲೋಕಸಭಾ ಚುನಾವಣೆ ಒಳಗಾಗಿ ಭಾರತದ ಇತರ ‍ಪ್ರಾದೇಶಿಕ ಭಾಷೆಗಳಲ್ಲಿಯೂ ಪುಸ್ತಕ ಪ್ರಕಟವಾಗಲಿದೆ. ಹಿಂದಿ, ಗುಜರಾತಿ, ಪಂಜಾಬಿ, ಮರಾಠಿ, ತಮಿಳು, ಕನ್ನಡ ಮತ್ತು ಮಲಯಾಳ ಭಾಷೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಪ್ರತಿ ಅಚ್ಚು ಹಾಕಿಸುವ ಯೋಚನೆ ಇದೆ ಎಂದು ಮೂಲಗಳು ತಿಳಿಸಿವೆ.

ಮೋದಿ ಮತ್ತು ಅಮಿತ್‌ ಶಾ ಒಡನಾಟ, ರಫೇಲ್‌ ಒಪ್ಪಂದ, ನೋಟು ರದ್ದು, ವಿದೇಶಾಂಗ ನೀತಿ, ಬ್ಯಾಂಕ್‌ಗಳ ವಾಪಸಾಗದ ಸಾಲ (ಎನ್‌ಪಿಎ) ಸಮಸ್ಯೆ, ಪ್ರಶಸ್ತಿ ವಾಪಸ್‌ ಚಳವಳಿ, ಅಸಹಿಷ್ಣುತೆ ಮುಂತಾದ ವಿಷಯಗಳ ಬಗ್ಗೆ ಪುಸ್ತಕ ಹೊಸ ಒಳನೋಟ ನೀಡಲಿದೆ ಎಂದು ಹೇಳಲಾಗಿದೆ.

***

ಈ ಪುಸ್ತಕವನ್ನು ಇನ್ನೂ ಓದಿಲ್ಲ. ಆರೋಗ್ಯಕರ ಚರ್ಚೆಗೆ ಮೋದಿ ಬೆಂಬಲಿಗರು ಸಿದ್ಧರಿಲ್ಲ. ಪುರಾವೆ ಸಹಿತ ಮಾಡಲಾದ ಆರೋಪಗಳನ್ನು ಒಪ್ಪಿಕೊಳ್ಳದ ಮೋದಿ ಬೆಂಬಲಿಗರ ದುರಂಹಕಾರ ಮತ್ತು ಧೀಮಾಕಿನ ಮನಸ್ಥಿತಿಯನ್ನು ಇದು ತೋರಿಸುತ್ತದೆ.

–ಶಶಿ ತರೂರ್‌ , ಕಾಂಗ್ರೆಸ್‌ ಸಂಸದ

ಪುಸ್ತಕದಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳು ಲೇಖಕರ ವೈಯಕ್ತಿಕ ನಿಲುವುಗಳು. ಪಕ್ಷಕ್ಕೂ ಅದಕ್ಕೂ ಸಂಬಂಧ ಇಲ್ಲ

–ಅಮಿತ್‌ ಶಾ , ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

ಸರಳ ಜೀವನ ನಡೆಸುತ್ತಿರುವ ಪ್ರಧಾನಿ ಮೋದಿ ದೇಶ ಮತ್ತು ಜನತೆಗಾಗಿ ಜೀವನ ಮುಡುಪಾಗಿಟ್ಟಿದ್ದಾರೆ. ತರೂರ್‌ ತಮ್ಮ ಪಕ್ಷದ ವರಿಷ್ಠರನ್ನು ಮೆಚ್ಚಿಸಲು ಮೋದಿ ಕುರಿತು ಅಸಂಗತ ಮತ್ತು ಸಂಕೀರ್ಣ ಪ್ರಶ್ನೆ ಕೇಳುತ್ತಿದ್ದಾರೆ

– ಆರ್‌. ಬಾಲಶಂಕರ್‌ , ಲೇಖಕ, ಬಿಜೆಪಿ ನಾಯಕ

 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !