ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯ್ಕೆಯಾದ 678 ಶಾಸಕರಲ್ಲಿ ಅಪರಾಧ ಹಿನ್ನಲೆಯುಳ್ಳವರ ಸಂಖ್ಯೆ ಇಷ್ಟು ದೊಡ್ಡದು

ಕ್ರಿಮಿನಲ್‌ಗಳ ಸಂಖ್ಯೆಯ ಜೊತೆಗೆ ಆಸ್ತಿಮೌಲ್ಯದಲ್ಲಿಯೂ ಭಾರೀ ಏರಿಕೆ
Last Updated 16 ಡಿಸೆಂಬರ್ 2018, 4:53 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ಗಮನ ಸೆಳೆದಿದ್ದ ಪಂಚರಾಜ್ಯಗಳ ವಿಧಾನಸಭೆ ಚುನಾವಣೆ 2019ರ ಸಾರ್ವತ್ರಿಕ ಚುನಾವಣೆಯ ಸೆಮಿಫೈನಲ್‌ ಎಂದೇ ಬಿಂಬಿತವಾಗಿತ್ತು. ದೇಶದ ಭವಿಷ್ಯದ ಆಡಳಿತ ವ್ಯವಸ್ಥೆಗೆ ದಿಕ್ಸೂಚಿ ಎನ್ನಬಹುದಾಗಿದ್ದ ಈ ಚುನಾವಣೆಗಳಲ್ಲಿ ಒಟ್ಟು 678 ಶಾಸಕರು ಚುನಾಯಿತರಾಗಿದ್ದಾರೆ.ಇವರಲ್ಲಿ ಅಪರಾಧ ಹಿನ್ನಲೆಯುಳ್ಳವರ ಸಂಖ್ಯೆ ಬರೋಬ್ಬರಿ 237. ಗಂಭೀರ ಪ್ರಕರಣಗಳನ್ನು ಎದುರಿಸುತ್ತಿರುವವರ ಸಂಖ್ಯೆ 136.

ಸಾಮಾನ್ಯ ಗದ್ದಲಗಳನ್ನು ಹೊರತುಪಡಿಸಿದರೆ ವಿವಾದ ರಹಿತವಾಗಿ ನಡೆದ ಪಂಚರಾಜ್ಯ ಚುನಾವಣೆಗೆ ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಛತ್ತೀಸಗಡ ಹಾಗೂ ಮಿಜೋರಾಂ ರಾಜ್ಯಗಳು ವೇದಿಕೆ ಕಲ್ಪಿಸಿದ್ದವು. ಈ ರಾಜ್ಯಗಳಲ್ಲಿ ಆಯ್ಕೆಯಾದ ಶಾಸಕರ ಅಪರಾಧ, ಆರ್ಥಿಕ ಹಾಗೂ ಶೈಕ್ಷಣಿಕ ವಿವರಗಳ ಕುರಿತು ‘ಅಸೋಸಿಯೇಷನ್‌ ಆಫ್‌ ಡೆಮಾಕ್ರಿಟಿಕ್‌ ರೀಫಾರ್ಮ್‌’ (ಪ್ರಜಾಪ್ರಭುತ್ವದ ಸುಧಾರಣೆಗಳ ಸಂಘ) ಪ್ರಕಟಿಸಿರುವ ವರದಿಯ ಮುಖ್ಯ ಅಂಶಗಳು ಇಲ್ಲಿದೆ.

ಮಧ್ಯಪ್ರದೇಶ: ದುಪ್ಪಟ್ಟಾಗಿದೆ ಆಸ್ತಿ ಮೌಲ್ಯ

ಸದ್ಯ ಚುನಾವಣೆ ಮುಗಿಸಿಕೊಂಡ ಐದು ರಾಜ್ಯಗಳ ಪೈಕಿ ಮಧ್ಯಪ್ರದೇಶವೇ ದೊಡ್ಡದು. ಕೊನೆವರೆಗೂ ಕಾಂಗ್ರೆಸ್‌–ಬಿಜೆಪಿ ಹಾವು ಏಣಿ ಆಟಕ್ಕೆ ಸಾಕ್ಷಿಯಾದಇಲ್ಲಿನ ವಿಧಾನಸಭೆಯ ಒಟ್ಟು ಸದಸ್ಯ ಬಲ 230. ಪಕ್ಷಗಳ ನಾಯಕರು, ಕಾರ್ಯಕರ್ತರು, ರಾಜಕೀಯ ವಿಶ್ಲೇಷಕರು ಹಾಗೂ ಮತದಾರರನ್ನು ತುದಿಗಾಲಲ್ಲಿ ನಿಲ್ಲಿಸಿದ ಸ್ಪರ್ಧೆಯಲ್ಲಿ ಅಂತಿಮವಾಗಿ ಕಾಂಗ್ರೆಸ್‌ ಹೆಚ್ಚು ಸ್ಥಾನಗಳಿಸಿಕೊಂಡಿತು. ಒಟ್ಟು 114 ಸ್ಥಾನ ಗಳಿಸಿರುವ ಕಾಂಗ್ರೆಸ್‌ಗೆಬಹುಮತ ಸಾಬೀತುಪಡಿಸಲು ಎರಡು ಸ್ಥಾನಗಳ ಅಗತ್ಯವಿದೆ. 2 ಕಡೆ ಗೆದ್ದಿರುವ ಬಿಎಸ್‌ಪಿ ಹಾಗೂ ಒಂದು ಕಡೆ ಖಾತೆ ತೆರೆದಿರುವ ಎಸ್‌ಪಿ ಬೆಂಬಲ ನೀಡುವುದಾಗಿ ಹೇಳಿಕೊಂಡಿರುವುದರಿಂದ ಚಿಂತೆಯಿಲ್ಲ.ಉಳಿದಂತೆ ಬಿಜೆಪಿ 109 ಹಾಗೂ ಪಕ್ಷೇತರರು 4 ಕಡೆಗಳಲ್ಲಿ ಜಯದ ನಗೆ ಬೀರಿದ್ದಾರೆ.

ಅಪರಾಧ ಹಿನ್ನಲೆ

ಒಟ್ಟು 230 ಶಾಸಕರಲ್ಲಿ 94 ಮಂದಿ ತಮ್ಮ ವಿರುದ್ಧ ದಾಖಲಾಗಿರುವ ಅಪರಾಧ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ. ಅದರಲ್ಲಿ 47 ಶಾಸಕರು ಗಂಭೀರ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. 2013ರ ಚುನಾವಣೆ ವೇಳೆ73 ಶಾಸಕರು ಮಾತ್ರವೇ ತಮ್ಮ ವಿರುದ್ಧ ದಾಖಲಾಗಿರುವ ಅಪರಾಧ ಪ್ರಕರಣಗಳ ಕುರಿತು ಘೋಷಿಸಿಕೊಂಡಿದ್ದರು.

ಕೋಟ್ಯಧಿಪತಿಗಳು

ಆಯ್ಕೆಯಾಗಿರುವವರಲ್ಲಿ 187 ಶಾಸಕರು ಕೋಟ್ಯಧಿಪತಿಗಳು. ಇದರಲ್ಲಿ ಕಾಂಗ್ರೆಸ್ ಪಕ್ಷದ 90, ಬಿಜೆಪಿಯ 91, ನಾಲ್ಕು ಜನ ಪಕ್ಷೇತರರು,ಎಸ್‌ಪಿ ಹಾಗೂಬಿಎಸ್‌ಪಿಯ ತಲಾ ಒಬ್ಬರು ಶಾಸಕರು ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆಸ್ತಿ ಹೊಂದಿದ್ದಾರೆ. ಒಟ್ಟು ಸದಸ್ಯಬಲವಾಗಿರುವ 230 ಶಾಸಕರ ಆಸ್ತಿ ಮೌಲ್ಯವನ್ನು ಸರಾಸರಿಯಾಗಿ ಲೆಕ್ಕ ಹಾಕಿದರೆ ₹10.17 ಕೋಟಿ ಆಗುತ್ತದೆ. ಈ ಪ್ರಮಾಣವು ಕಳೆದ ಚುನಾವಣೆ ವೇಳೆ ₹ 5.24 ಕೋಟಿಯಷ್ಟಿತ್ತು.

ವಿದ್ಯಾಭ್ಯಾಸ

5–12ನೇ ತರಗತಿ ವರೆಗೆ ಶಿಕ್ಷಣ ಪಡೆದಿರುವುದಾಗಿ64 ಶಾಸಕರು ಘೋಷಿಸಿಕೊಂಡಿದ್ದಾರೆ. ಪದವಿ ಮತ್ತು ಉನ್ನತ ಶಿಕ್ಷಣ ಪಡೆದಿರುವುದಾಗಿ 155 ಶಾಸಕರು ಹಾಗೂ ನಮಗೆ ಓದಲು ಮಾತ್ರ ಬರುತ್ತದೆ ಎಂದು ಐವರು ಶಾಸಕರು ಮಾಹಿತಿ ನೀಡಿದ್ದಾರೆ.

ತೆಲಂಗಾಣ: ಅಪರಾಧ ಹಿನ್ನೆಲೆ ಇರುವವರ ಸಂಖ್ಯೆಯೇ ಹೆಚ್ಚು

119 ಸದಸ್ಯ ಬಲದ ತೆಲಂಗಾಣ ವಿಧಾನಸಭೆಯಲ್ಲಿ ಕೆ.ಚಂದ್ರಶೇಖರ್‌ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್‌ಎಸ್‌) ಬಹುಮತ ಪಡೆದಿದೆ. ಒಟ್ಟು 88 ಸ್ಥಾನಗಳನ್ನು ಗೆದ್ದುಕೊಂಡಿರುವ ಟಿಆರ್‌ಎಸ್ ಸ್ವಂತ ಬಲದಲ್ಲಿ ಸರ್ಕಾರ ರಚಿಸಿದೆ. ಉಳಿದಂತೆ ಕಾಂಗ್ರೆಸ್‌ 19, ಆಲ್‌–ಇಂಡಿಯಾ ಮಜ್ಲಿಸ್‌–ಎ–ಇತ್ತೇಹಾದುಲ್ ಮುಸ್ಲಮೀನ್ (ಎಐಎಂಐಎಂ) 7, ಟಿಡಿಪಿ 2, ಆಲ್‌ ಇಂಡಿಯಾ ಫಾರ್ವರ್ಡ್‌ ಬ್ಲಾಕ್‌, ಬಿಜೆಪಿ ತಲಾ ಒಂದು ಸ್ಥಾನಗಳನ್ನು ಗಳಿಸಿವೆ. ಪಕ್ಷೇತರ ಅಭ್ಯರ್ಥಿಯೂ ಒಂದು ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.

ಅಪರಾಧ ಹಿನ್ನಲೆ

ತೆಲಂಗಾಣ ವಿಧಾನಸಭೆಗೆ ಹೊಸದಾಗಿ ಆಯ್ಕೆಯಾಗಿರುವ ಶೇ61ರಷ್ಟು ಶಾಸಕರು ಅಂದರೆ ಒಟ್ಟು 73 ಶಾಸಕರು ಅಪರಾಧ ಹಿನ್ನಲೆ ಹೊಂದಿದ್ದಾರೆ. ಇದರಲ್ಲಿ ಕೊಲೆಗೆ ಯತ್ನ, ಮಹಿಳೆಯರ ವಿರುದ್ಧದ ಪ್ರಕರಣಗಳಂತಹ ಗಂಭೀರ ಪ್ರಕರಣಗಳನ್ನು ಎದುರಿಸುತ್ತಿರುವವರ ಸಂಖ್ಯೆ 47. ಟಿಆರ್‌ಎಸ್‌ ಪಕ್ಷದ 50, ಕಾಂಗ್ರೆಸ್ ಪಕ್ಷದ 14,ಎಐಎಂಐಎಂನ 2, ಬಿಜೆಪಿಯ ಒಬ್ಬ ಶಾಸಕರ ವಿರುದ್ಧ ಅಪರಾಧ ಪ್ರಕರಣಗಳು ದಾಖಲಾಗಿವೆ. ಕಳೆದ ಅವಧಿಯಲ್ಲಿ 67 ಶಾಸಕರ ವಿರುದ್ಧ ಅಪರಾಧ ಪ್ರಕರಣಗಳನ್ನು ದಾಖಲಾಗಿದ್ದವು.

ಕೋಟ್ಯಧಿಪತಿಗಳು

2014ರ ಚುನಾವಣೆ ಸಂದರ್ಭದಲ್ಲಿ ಇದ್ದ ಕೋಟ್ಯಧಿಪತಿ ಶಾಸಕರ ಸಂಖ್ಯೆ 83. ಆದರೆ, ಈ ಬಾರಿ ಈ ಸಂಖ್ಯೆ 106ಕ್ಕೆ ಏರಿದೆ. ಆಡಳಿತ ಪಕ್ಷ ಟಿಆರ್‌ಎಸ್‌ನ 83 ಶಾಸಕರು ಕೋಟ್ಯಧಿಪತಿಗಳು. 2014ರಲ್ಲಿ ಆಯ್ಕೆಯಾಗಿದ್ದ ಎಲ್ಲ ಶಾಸಕರ ಸರಾಸರಿ ಆಸ್ತಿ ಮೌಲ್ಯಕ್ಕೆ ಹೋಲಿಸಿದರೆ ಈ ಬಾರಿ ಆಯ್ಕೆಯಾಗಿರುವ ಶಾಸಕರ ಆಸ್ತಿ ಮೌಲ್ಯವು ದುಪ್ಪಟ್ಟಾಗಿದೆ. 2014ರಲ್ಲಿ ₹ 7.70 ಕೋಟಿಯಷ್ಟಿದ್ದ ಸರಾಸರಿ ಆಸ್ತಿ ಪ್ರಮಾಣ ₹ 15 ಕೋಟಿ ಮೀರಿದೆ.

ಶಿಕ್ಷಣ

5–12ನೇ ತರಗತಿ ವರೆಗಿನ ಓದಿಕೊಂಡಿರುವ ಶಾಸಕರ ಸಂಖ್ಯೆ 44.69 ಶಾಸಕರು ಪದವಿ ಮತ್ತು ಉನ್ನತ ಶಿಕ್ಷಣ ಹೊಂದಿದ್ದಾರೆ. ಒಬ್ಬ ಶಾಸಕ ಆಯೋಗಕ್ಕೆ ಸಲ್ಲಿಸಿರುವ ವಿವರಗಳಲ್ಲಿ ಸಾಕ್ಷರ ಎಂದಷ್ಟೇ ಘೋಷಿಸಿಕೊಂಡಿದ್ದಾರೆ.

ರಾಜಸ್ಥಾನ: ಇದು ಸ್ವಲ್ಪ ಪರವಾಗಿಲ್ಲ

199 ಸದಸ್ಯ ಬಲದ ರಾಜಸ್ಥಾನ ವಿಧಾನಸಭೆಯಲ್ಲಿ 99 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಕಾಂಗ್ರೆಸ್‌ ಇತರರ ಬೆಂಬಲದೊಂದಿಗೆ ಸರ್ಕಾರ ರಚಿಸಲಿದೆ. ಬಿಜೆಪಿ 73 ಸ್ಥಾನಗಳಿಸಿ ಎರಡನೇ ಸ್ಥಾನಕ್ಕೆ ಕುಸಿದಿರುವ ಬಿಜೆಪಿಗೆ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಲಿದೆ. ಬಹುಜನ ಸಮಾಜವಾದಿ ಪಕ್ಷ 6, ಉಳಿದ ಸ್ಥಾನಗಳು ಇತರರ ಪಾಲಾಗಿವೆ.

ಅಪರಾಧ ಹಿನ್ನಲೆ

46 ಶಾಸಕರ ವಿರುದ್ಧ ವಿವಿಧ ಅಪರಾಧ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 28 ಶಾಸಕರು ಗಂಭೀರ ಸ್ವರೂಪದ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿದ್ದಾರೆ. 2013ರ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಒಟ್ಟು 36 ಶಾಸಕರು ಅಪರಾಧ ಪ್ರಕರಣಗಳಲ್ಲಿ ಸಂಬಂಧ ಹೊಂದಿದ್ದರು. ಕಾಂಗ್ರೆಸ್‌ನ 25, ಬಿಜೆಪಿಯ 12, ಬಿಎಸ್‌ಪಿ ಪಕ್ಷದ ಇಬ್ಬರು ಹಾಗೂ ಉಳಿದ 7 ಶಾಸಕರು ಅಪರಾಧ ಹಿನ್ನೆಲೆಯುಳ್ಳವರಾಗಿದ್ದಾರೆ.

ಕೋಟ್ಯಧಿಪತಿಗಳು

ಈ ಬಾರಿ ಆಯ್ಕೆಯಾಗಿರುವ ಒಟ್ಟು 158 ಅಭ್ಯರ್ಥಿಗಳು ಕೋಟ್ಯಧಿಪತಿಗಳು. ಕಾಂಗ್ರೆಸ್‌ನ 99 ಶಾಸಕರ ಪೈಕಿ 82 ಶಾಸಕರು ಕೋಟಿ ಒಡೆಯರು. ಬಿಜೆಪಿಯ 58, ಬಿಎಸ್‌ಪಿಯ 5, ಹಾಗೂ 13 ಜನ ಇತರ ಶಾಸಕರು ಕೋಟಿ ಸಂಪತ್ತು ಹೊಂದಿದ್ದಾರೆ. 2013ರಲ್ಲಿ ಆಯ್ಕೆಯಾಗಿದ್ದ ಎಲ್ಲ ಶಾಸಕರ ಸರಾಸರಿ ಆಸ್ತಿ ಮೌಲ್ಯಕ್ಕೆ ₹ 5 ಕೋಟಿಯಷ್ಟಿತ್ತು. ಆ ಪ್ರಮಾಣ ಈ ಬಾರಿ ₹ 7.39 ಕೋಟಿ ತಲುಪಿದೆ.

ಶಿಕ್ಷಣ

59 ಶಾಸಕರು 5–12ನೇ ತರಗತಿ ವರೆಗಿನ ವಿದ್ಯಾಭ್ಯಾಸ ಮಾಡಿರುವುದಾಗ ಘೋಷಿಸಿಕೊಂಡಿದ್ದಾರೆ. ಪದವಿ ಮತ್ತು ಉನ್ನತ ಶಿಕ್ಷಣ ಪಡೆದಿರುವವರ ಸಂಖ್ಯೆ 129. ಏಳು ಮಂದಿ ಶಾಸಕರು ಸಾಕ್ಷರ ಎಂದಷ್ಟೇ ಮಾಹಿತಿ ನೀಡಿದ್ದಾರೆ.‌

ಛತ್ತೀಸಗಡ: 68 ಶಾಸಕರು ಕೋಟ್ಯಧಿಪತಿಗಳು

ಛತ್ತೀಸಗಡ ವಿಧಾನಸಭೆಯ ಸದಸ್ಯರ ಸಂಖ್ಯೆ 90. ಇದರಲ್ಲಿ 68 ಸ್ಥಾನಗಳು ಕಾಂಗ್ರೆಸ್‌ ಪಾಲಾಗಿವೆ. ಬಿಜೆಪಿಯು 15,ಛತ್ತೀಸಗಡ ಜನತಾ ಕಾಂಗ್ರೆಸ್‌ 5 ಹಾಗೂ ಬಿಎಸ್‌ಪಿ ಎರಡು ಸ್ಥಾನಗಳನ್ನು ಗೆದ್ದುಕೊಂಡಿವೆ.‌

ಅಪರಾಧ ಹಿನ್ನಲೆ

ಒಟ್ಟು 24 ಶಾಸಕರು ತಮ್ಮ ವಿರುದ್ಧದ ಇರುವ ಅಪರಾಧ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಅದರಲ್ಲಿ 13 ಶಾಸಕರು ಗಂಭೀರ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. 2013ರ ಚುನಾವಣೆ ವೇಳೆ ಅಪರಾಧ ಪ್ರಕರಣಗಳಲ್ಲಿ ದಾಖಲಾಗಿರುವ ಆರೋಪ ಎದುರಿಸುತ್ತಿರುವುದಾಗಿ ಘೋಷಿಸಿಕೊಂಡವರ ಸಂಖ್ಯೆ 15 ಮಾತ್ರ.

ಕೋಟ್ಯಧಿಪತಿಗಳು

ವಿಧಾನಸಭೆಯಲ್ಲಿ ಒಟ್ಟು 68 ಕೋಟ್ಯಧಿಪತಿ ಸದಸ್ಯರಿದ್ದಾರೆ. ಕಾಂಗ್ರೆಸ್ ಪಕ್ಷದ 48, ಬಿಜೆಪಿಯ 14, ಬಿಎಸ್‌ಪಿಯ ಒಬ್ಬರು ಮತ್ತು ಜನತಾ ಕಾಂಗ್ರೆಸ್‌ನ ಎಲ್ಲ ಶಾಸಕರು ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆಸ್ತಿ ಹೊಂದಿದ್ದಾರೆ. 90 ಶಾಸಕರ ಸರಾಸರಿ ಆಸ್ತಿ ಮೌಲ್ಯ ಬರೋಬ್ಬರಿ ₹11 ಕೋಟಿ. ಇದು ಕಳೆದ ಚುನಾವಣೆ ವೇಳೆ ₹8 ಕೋಟಿಯ ಆಸುಪಾಸಿನಲ್ಲಿತ್ತು.

ಶಿಕ್ಷಣ

27 ಶಾಸಕರು 5–12ನೇ ತರಗತಿ ವರೆಗೆ ವಿದ್ಯಾಭ್ಯಾಸ ಮಾಡಿರುವುದಾಗಿ ಘೋಷಿಸಿಕೊಂಡಿದ್ದಾರೆ. ಪದವಿ ಮತ್ತು ಉನ್ನತ ಶಿಕ್ಷಣ ಪಡೆದಿರುವವರ ಸಂಖ್ಯೆ 32. ಒಬ್ಬರು ಮಾತ್ರ ಸಾಕ್ಷರ ಎಂದಷ್ಟೇ ತಿಳಿಸಿದ್ದಾರೆ.

ಮಿಜೋರಾಂ: ಬಹುತೇಕ ಶಾಸಕರು ಕೋಟಿ ಒಡೆಯರು

ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌ ಹಾಗೂ ಬಿಜೆಪಿ ಈ ಬಾರಿ ಈಶಾನ್ಯ ರಾಜ್ಯ ಮಿಜೋರಾಂನಲ್ಲಿ ಅಧಿಕಾರಕ್ಕೇರುವ ಸಲುವಾಗಿಭಾರಿ ಕಸರತ್ತು ನಡೆಸಿದ್ದವು. ಆದರೆ ಪ್ರಾದೇಶಿಕ ಪಕ್ಷ ಮಿಜೋ ನ್ಯಾಷನಲ್‌ ಫ್ರಂಟ್‌(ಎಂಎನ್‌ಎಫ್‌) 26 ಸ್ಥಾನಗಳನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಯಿತು. ಉಳಿದ 14ರಲ್ಲಿ ಎಂಟು ಸ್ವತಂತ್ರ ಅಭ್ಯರ್ಥಿಗಳ ಪಾಲಾದರೆ, ಐದರಲ್ಲಿ ಕಾಂಗ್ರೆಸ್‌ ಹಾಗೂ ಒಂದು ಕಡೆ ಬಿಜೆಪಿ ಗೆದ್ದಿದೆ.

ಅಪರಾಧ ಹಿನ್ನಲೆ

ಕೇವಲ ಇಬ್ಬರು ಮಾತ್ರ ತಮ್ಮ ವಿರುದ್ಧ ದಾಖಲಾಗಿರುವ ಅಪರಾಧ ಪ್ರಕರಣಗಳ ಬಗ್ಗೆ ಘೋಷಿಸಿಕೊಂಡಿದ್ದಾರೆ. ಇದರಲ್ಲಿ ಒಬ್ಬರ ವಿರುದ್ಧ ಪ್ರಕರಣ ಗಂಭೀರ ಸ್ವರೂಪದ್ದು. 2013ರಲ್ಲಿ ಒಬ್ಬ ಅಭ್ಯರ್ಥಿಯೂ ಅಪರಾಧ ಪ್ರಕರಣಗಳ ಬಗ್ಗೆ ಘೋಷಿಸಿಕೊಂಡಿರಲಿಲ್ಲ.

ಕೋಟ್ಯಧಿಪತಿಗಳು

ಇಲ್ಲಿರುವ ಒಟ್ಟು 40 ಶಾಸಕರ ಪೈಕಿ 36 ಮಂದಿಯ ಆಸ್ತಿ ಮೌಲ್ಯ ₹1 ಕೋಟಿಗೂ ಹೆಚ್ಚು. ಎಂಎನ್‌ಎಫ್‌ನ 22, ಕಾಂಗ್ರೆಸ್‌ನ 5, ಬಿಜೆಪಿಯ ಒಬ್ಬರು ಹಾಗೂ ಸ್ವತಂತ್ರವಾಗಿ ಗೆದ್ದಿರುವ ಎಂಟು ಶಾಸಕರುಕೋಟ್ಯಧಿಪತಿಗಳು. 40 ಶಾಸಕರ ಸರಾಸರಿ ಆಸ್ತಿ ಮೌಲ್ಯ ₹4.8 ಕೋಟಿ. 2013ರ ಚುನಾವಣೆ ವೇಳೆ ಈ ಮೌಲ್ಯ ₹3.1 ಕೋಟಿಯಾಗಿತ್ತು.

ಶಿಕ್ಷಣ

10 ಶಾಸಕರು 5–12ನೇ ತರಗತಿ ವರೆಗಿನ ವಿದ್ಯಾಭ್ಯಾಸ ಮಾಡಿರುವುದಾಗಿ ಘೋಷಿಸಿಕೊಂಡಿದ್ದಾರೆ. ಪದವಿ ಮತ್ತು ಉನ್ನತ ಶಿಕ್ಷಣ ಪಡೆದಿರುವವರ ಸಂಖ್ಯೆ 29.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT