ಪಕ್ಷದ ಹುದ್ದೆಗೂ ನಿಷೇಧ ಹೇರಿ

7
ರಾಜಕಾರಣ ಶುದ್ಧೀಕರಣ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ

ಪಕ್ಷದ ಹುದ್ದೆಗೂ ನಿಷೇಧ ಹೇರಿ

Published:
Updated:
Deccan Herald

ನವದೆಹಲಿ: ಗಂಭೀರ ಸ್ವರೂಪದ ಕ್ರಿಮಿನಲ್‌ ಪ್ರಕರಣ ಎದುರಿಸುತ್ತಿರುವ ಮತ್ತು ಶಿಕ್ಷೆಗೆ ಒಳಗಾದ ರಾಜಕಾರಣಿಗಳು ರಾಜಕೀಯ ಪಕ್ಷ ಸ್ಥಾಪಿಸಲು ಮತ್ತು ಅದರಲ್ಲಿ ಯಾವುದೇ ಹುದ್ದೆ ಹೊಂದಲು ಅವಕಾಶ ನೀಡದಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು.

ಸ್ವಯಂಸೇವಾ ಸಂಸ್ಥೆ ಪಿಐಎಲ್‌ ಫೌಂಡೇಶನ್‌ ಮತ್ತು ಬಿಜೆಪಿ ಮುಖಂಡ, ವಕೀಲ ಅಶ್ವಿನಿ ಕುಮಾರ್‌ ಅವರು ಈ ಅರ್ಜಿಗಳನ್ನು ಸಲ್ಲಿಸಿದ್ದರು. ಅಪರಾಧ ಚಟುವಟಿಕೆಗಳಿಂದ ರಾಜಕೀಯ ವ್ಯವಸ್ಥೆಯನ್ನು ಮುಕ್ತಗೊಳಿಸುವಂತೆ ಅವರು ಮನವಿ ಮಾಡಿದ್ದರು.

ಚುನಾವಣೆ ವ್ಯವಸ್ಥೆ ಸುಧಾರಣೆಗೆ ಪೂರಕವಾಗಿ ಮಾರ್ಗಸೂಚಿ ರೂಪಿಸಲು ಕೇಂದ್ರ ಮತ್ತು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆಯೂ ಅವರು ಕೋರಿದ್ದರು.

ಜನಪ್ರಾತಿನಿಧ್ಯ ಕಾಯಿದೆ 1951ರ ಸೆಕ್ಷನ್‌ 29ಎ (ರಾಜಕೀಯ ಪಕ್ಷಗಳ ನೋಂದಣಿ) ಅಡಿ ಸುಲಭವಾಗಿ ಹೊಸ ರಾಜಕೀಯ ಪಕ್ಷ ಹುಟ್ಟು ಹಾಕಬಹುದು. ಇದಕ್ಕೆ ಕಡಿವಾಣ ಹಾಕುವ ಅಗತ್ಯವಿದೆ ಎಂದು ಅರ್ಜಿದಾರರು ಮನವಿ ಮಾಡಿಕೊಂಡಿದ್ದರು.

ಕ್ರಿಮಿನಲ್‌ ಆರೋಪ ಎದುರಿಸುತ್ತಿರುವ ಮತ್ತು ಶಿಕ್ಷೆಗೆ ಒಳಗಾದ ಅನೇಕ ರಾಜಕಾರಣಿಗಳು ಪಕ್ಷಗಳಲ್ಲಿ ಉನ್ನತ ಸ್ಥಾನ ಹೊಂದಿದ್ದಾರೆ ಎಂದು ಅವರು ಆರೋಪಿಸಿದ್ದರು.

ಆಪಾದಿತ ರಾಜಕಾರಣಿಗಳನ್ನು ಚುನಾವಣೆಗೆ ಸ್ಪರ್ಧಿಸದಂತೆ ತಡೆಯಲು ಕಾನೂನಿನಲ್ಲಿ ಅವಕಾಶ ಇದೆಯೇ ಹೊರತು ಅವರು ರಾಜಕೀಯ ಪಕ್ಷ ಸ್ಥಾಪಿಸದಂತೆ ಮತ್ತು ಪಕ್ಷದಲ್ಲಿ ಹುದ್ದೆ ಹೊಂದುವುದನ್ನು ತಡೆಯಲು ಅವಕಾಶ ಇಲ್ಲ ಎಂದು ಅರ್ಜಿದಾರರು ವಾದಿಸಿದ್ದರು.

**

ಜನರಿಗೆ ನೋವು

ಶಿಕ್ಷೆಗೆ ಒಳಗಾದ ಮತ್ತು ಕ್ರಿಮಿನಲ್‌ ಆರೋಪ ಎದುರಿಸುತ್ತಿರುವ ರಾಜಕಾರಣಿಗಳ ಸಂಖ್ಯೆ ಹೆಚ್ಚಾಗಿದೆ. ಇದು ಸಾಂವಿಧಾನಿಕ ಮೌಲ್ಯಗಳಿಗೆ ಮಾರಕವಾದ ಬೆಳವಣಿಗೆಯಾಗಿದ್ದು, ಪ್ರಜಾಪ್ರಭುತ್ವದ ಬೇರುಗಳು ದುರ್ಬಲಗೊಳ್ಳುತ್ತಿವೆ. ಅಂತಿಮವಾಗಿ ಪ್ರಜೆಗಳು ಇದರ ನೋವನ್ನು ಉಣ್ಣಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

**

‘ಕಾನೂನು ರಚನೆ ಕೋರ್ಟ್‌ ಕೆಲಸವಲ್ಲ’: ಅಟಾರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ್‌ ವಾದ

* ಕಾನೂನು ರೂಪಿಸುವುದು ಶಾಸನಸಭೆಯ ವಿಶೇಷ ಅಧಿಕಾರವೇ ಹೊರತು ನ್ಯಾಯಾಲಯದ ಕೆಲಸವಲ್ಲ

* ದೇಶದ ರಾಜಕೀಯ ವ್ಯವಸ್ಥೆ ಸ್ವಚ್ಛಗೊಳಿಸುವ ಕೋರ್ಟ್‌ನ ಉದ್ದೇಶ ಒಳ್ಳೆಯದು. ಆದರೆ, ಶಾಸನ ರೂಪಿಸುವ ಶಾಸನಸಭೆಯ ಅಧಿಕಾರ ವ್ಯಾಪ್ತಿಯಲ್ಲಿ ಕೋರ್ಟ್‌ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ

* ಜನಪ್ರತಿನಿಧಿಯ ವಿರುದ್ಧದ ಆರೋಪ ಸಾಬೀತಾಗುವವರೆಗೆ ಆತನಿಗೆ ಕೋರ್ಟ್‌ ಷರತ್ತು ವಿಧಿಸುವಂತಿಲ್ಲ. ಮತದಾನದ ಹಕ್ಕಿನಂತೆ ಸ್ಪರ್ಧಿಸುವ ಹಕ್ಕನ್ನೂ ಆತ ಹೊಂದಿರುತ್ತಾನೆ

**

ಹಿನ್ನೆಲೆ ತಿಳಿಯುವ ಹಕ್ಕು ಜನರಿಗಿದೆ: ಸುಪ್ರೀಂ ಕೋರ್ಟ್ ದೃಢ ನುಡಿ

* ಲಕ್ಷ್ಮಣರೇಖೆ ದಾಟಿ ಶಾಸಕಾಂಗದ ವ್ಯಾಪ್ತಿಗೆ ಪ್ರವೇಶಿಸುವ ಇರಾದೆ ಇಲ್ಲ.

* ಯಾರ ಅಧಿಕಾರ ಏನು ಎಂಬ ಪರಿಕಲ್ಪನೆ ನ್ಯಾಯಾಲಯಕ್ಕೆ ಇದೆ. ಹೀಗಾಗಿಯೇ ನ್ಯಾಯಾಲಯವು ಕಾನೂನು ರೂಪಿಸುವಂತೆ ಸಂಸತ್‌ಗೆ ನಿರ್ದೇಶನ ನೀಡುವುದಿಲ್ಲ. ವ್ಯವಸ್ಥೆಯಲ್ಲಿರುವ ಈ ಕೊಳೆಯನ್ನು ತೊಳೆಯಬೇಕಾದರೆ ನಾವು ಏನು ಮಾಡಬೇಕು ಎನ್ನುವ ಪ್ರಶ್ನೆ ಉದ್ಭವಿಸಿದೆ

* ಶಾಸಕಾಂಗದಲ್ಲಿ ಹಸ್ತಕ್ಷೇಪ ಮಾಡಬೇಕೆನ್ನುವ ಉದ್ದೇಶ ಕೋರ್ಟ್‌ಗೆ ಇಲ್ಲ. ಆದರೆ, ಚುನಾವಣೆಗೆ ಸ್ಪರ್ಧಿಸುವ ವ್ಯಕ್ತಿಯ ಪೂರ್ವಾಪರ ತಿಳಿಯುವ ಹಕ್ಕು ಮತದಾರರಿಗೆ ಇದೆ

* ಚುನಾವಣೆಗೂ ಮುನ್ನ ಅಭ್ಯರ್ಥಿಗಳ ಅಪರಾಧ ಹಿನ್ನೆಲೆಯನ್ನು ಬಹಿರಂಗ ಪಡಿಸುವಂತೆ ಚುನಾವಣಾ ಆಯೋಗವು ರಾಜಕೀಯ ಪಕ್ಷಗಳನ್ನು ಕೇಳಬಹುದು. ಇದರಿಂದ ಅಭ್ಯರ್ಥಿಯ ಪೂರ್ವಾಪರ ತಿಳಿಯಲು ಮತದಾರರಿಗೆ ಸಾಧ್ಯವಾಗುತ್ತದೆ 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !