ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಆರ್‌ಪಿಎಫ್ ಯೋಧರ ಪಾಲಿಗೆ ರಜೆ ಎಂಬ ಐಷಾರಾಮಿ ಕನಸು

Last Updated 30 ಡಿಸೆಂಬರ್ 2019, 7:56 IST
ಅಕ್ಷರ ಗಾತ್ರ

ಅಸ್ಸಾಂನಿಂದ ಕೇರಳ, ಕೇರಳದಿಂದ ಕಾಶ್ಮೀರ, ಕಾಶ್ಮೀರದಿಂದ ಮಧ್ಯಪ್ರದೇಶ... ಹೀಗೆ ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯಲ್ಲಿ (ಸಿಆರ್‌ಪಿಎಫ್) ಸಿಬ್ಬಂದಿಯೊಬ್ಬ ಹಲವು ರಾಜ್ಯಗಳಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಳ್ಳುತ್ತಲೇ ಇರುತ್ತಾನೆ. ಪ್ರತಿ ರಾಜ್ಯವೂ ಬೇರೆ, ಕೆಲಸದ ರೀತಿಯೂ ಭಿನ್ನ, ಅಷ್ಟೇಕೆ ತನ್ನ ಅಕ್ಕಪಕ್ಕದಲ್ಲಿರುವ ಸಹೋದ್ಯೋಗಿಗಳು, ತನಗೆ ಆದೇಶ ನೀಡುವ ಕಮಾಂಡರ್‌ ಸಹ ಬೇರೆಬೇರೆ.

ಇತರ ಸಶಸ್ತ್ರ ಪಡೆಗಳು ಮತ್ತು ರಾಜ್ಯ ಪೊಲೀಸ್ ಇಲಾಖೆಗೆ ಹೋಲಿಸಿದರೆ ‘ಸಿಆರ್‌ಪಿಎಫ್‌’ ಸಿಬ್ಬಂದಿ ಎದುರಿಸುವ ಒತ್ತಡಅತ್ಯಂತ ವಿಭಿನ್ನ ಮತ್ತು ಅಸಹನೀಯ. ಇದೇ ಕಾರಣಕ್ಕೆ ಇರಬಹುದು, ಕರ್ತವ್ಯಕ್ಕೆ ನಿಯೋಜನೆಗೊಂಡವರ ಆತ್ಯಹತ್ಯೆ ಪ್ರಕರಣಗಳೂ ಸಿಆರ್‌ಪಿಎಫ್‌ನಲ್ಲಿ ಅತಿಹೆಚ್ಚು. ಕಳೆದ ವರ್ಷ ರಾಜ್ಯಸಭೆಗೆ ಮಾಹಿತಿ ನೀಡಿದ ಗೃಹ ಇಲಾಖೆ ವ್ಯವಹಾರಗಳನ್ನು ಗಮನಿಸುವ ಸಂಸದೀಯ ಸಮಿತಿಯು, ‘2011ರಿಂದ 2017ರ ಅವಧಿಯಲ್ಲಿ ಒಟ್ಟು 228 ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಹೇಳಿತ್ತು.

ಕರ್ತವ್ಯ ಸ್ಥಳದಲ್ಲಿ ನಡೆಯುವ ಅನಪೇಕ್ಷಿತ ಬೆಳವಣಿಗೆಗಳಲ್ಲಿ ಹುತಾತ್ಮರಾಗುವ ಸಂಖ್ಯೆಗಿಂತಲೂ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳ ಸಂಖ್ಯೆಯೇ ಹೆಚ್ಚಾಗಿರುವುದನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರ್ಕಾರ ಪ್ರತಿದಿನ ಯೋಗ ಮಾಡುವಂತೆ ನಿರ್ದೇಶನ ಹೊರಡಿಸಿತು. ಆದರೆ ವಾಸ್ತವವಾಗಿ ಆಗಬೇಕಾದ್ದು ಬೇಕಾದಷ್ಟಿದೆ. ಅದಿನ್ನೂ ಆಗಿಲ್ಲ ಎಂಬುದು ಈಚೆಗೆ (ಡಿ.9) ಜಾರ್ಖಂಡ್‌ನಲ್ಲಿ ಮೂವರು ಸಹೋದ್ಯೋಗಿಗಳನ್ನು ಗುಂಡು ಹಾರಿಸಿ ಕೊಂದ ಸಿಆರ್‌ಪಿಎಫ್ ಯೋಧ, ತಾನೂ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸಾರಿ ಹೇಳುತ್ತದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ರೈಲ್ವೆ ಹಳಿ ಮೇಲೆ ಗಸ್ತು ತಿರುಗುತ್ತಿರುವ ಸಿಆರ್‌ಪಿಎಫ್ ಸಿಬ್ಬಂದಿ.
ಜಮ್ಮು ಮತ್ತು ಕಾಶ್ಮೀರದಲ್ಲಿ ರೈಲ್ವೆ ಹಳಿ ಮೇಲೆ ಗಸ್ತು ತಿರುಗುತ್ತಿರುವ ಸಿಆರ್‌ಪಿಎಫ್ ಸಿಬ್ಬಂದಿ.

ಅಸಹನೀಯ ಒತ್ತಡ

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದತಿ, ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳು ರೂಪುಗೊಂಡ ಬಗೆ ನಿಮಗೆ ನೆನಪಿರಬಹುದು. ಇದಾದ ಕೆಲವೇ ದಿನಗಳಲ್ಲಿ ಅಸ್ಸಾಂನಲ್ಲಿಅಸ್ಸಾಂನಲ್ಲಿ ‘ರಾಷ್ಟ್ರೀಯ ನಾಗರಿಕ ನೋಂದಣಿ’ (ಎನ್‌ಆರ್‌ಸಿ) ಪಟ್ಟಿ ಬಿಡುಗಡೆಯಾಯಿತು. ಈ ಎರಡೂ ಸಂದರ್ಭಗಳಲ್ಲಿ ಭದ್ರತೆಯನ್ನು ಹೆಚ್ಚಿಸಬೇಕಾದಾಗ ಅಹೋರಾತ್ರಿ ಬಹುದೊಡ್ಡ ಪ್ರಮಾಣದಲ್ಲಿ ಸಿಆರ್‌ಪಿಎಫ್ ತುಕಡಿಗಳನ್ನು ನಿಯೋಜಿಸಲಾಯಿತು. ಈಗ ಪೌರತ್ವ ತಿದ್ದುಪಡಿ ಕಾಯ್ದೆಯ ವಿರೋಧಿಸುವ ಹೋರಾಟಗಳು ಸುದ್ದಿ ಮಾಡುತ್ತಿವೆ. ಮತ್ತೊಮ್ಮೆ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸಿಆರ್‌ಪಿಎಫ್‌ ತುಕಡಿಗಳು ಸಂಚಾರ ಆರಂಭವಾಗಿದೆ. ಈಗಾಗಲೇ ಅಪಾರ ಒತ್ತಡ ಅನುಭವಿಸುತ್ತಿರುವ239 ಬೆಟಾಲಿಯನ್‌ಗಳಲ್ಲಿರುವ ಸುಮಾರು 3.3 ಲಕ್ಷ ಸಿಆರ್‌ಪಿಎಫ್ ಸಿಬ್ಬಂದಿ ಮೇಲೆ ಈ ಬೆಳವಣಿಗೆಗಳು ಇನ್ನಷ್ಟು ಭಾರ ಹೇರಿವೆ.

ಜಾರ್ಖಂಡ್‌ನಲ್ಲಿ ನಡೆದ ಗುಂಡು ಹಾರಾಟ ಮತ್ತು ಆತ್ಮಹತ್ಯೆ ಪ್ರಕರಣವನ್ನು ಸಿಆರ್‌ಪಿಎಫ್‌ ಹಿರಿಯ ಅಧಿಕಾರಿಗಳು ‘ಕುಡಿತ ಕಾರಣ’ ಎಂದು ತಳ್ಳಿಹಾಕಿದರು. ಮಾತ್ರವಲ್ಲ, ‘ಚುನಾವಣಾ ಕರ್ತವ್ಯದ ಮೇಲಿರುವ ಸಿಬ್ಬಂದಿ ಮದ್ಯ ಸೇವನೆ ಮಾಡುವಂತಿಲ್ಲ’ ಎಂದು ನಿರ್ದೇಶನ ಹೊರಡಿಸಿದರು. ‘ಮದ್ಯವ್ಯಸನಿಗಳು ಮತ್ತು ಮಾನಸಿಕ ಸಮಸ್ಯೆ ಇರುವವರನ್ನು ಕರ್ತವ್ಯದಿಂದ ವಾಪಸ್ ಕರೆಸಿಕೊಳ್ಳಬೇಕು. ಇನ್ನು ಮುಂದೆ ಆಂಥ ಕೆಲಸಗಳಿಗೆ ನಿಯೋಜಿಸಬಾರದು‘ ಎಂದು ಕಮಾಂಡರ್‌ಗಳಿಗೆ ಪತ್ರ ಬರೆದರು.

ಸಶಸ್ತ್ರ ಪಡೆಗಳಲ್ಲಿ ಕರ್ತವ್ಯದ ಮೇಲೆ ನಿಯೋಜಿತರಾಗಿರುವ ಸಿಬ್ಬಂದಿ ಸ್ವತಃ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದು ಮತ್ತು ಜೊತೆಯವರನ್ನೇ ಕೊಲ್ಲುವ ಪ್ರಕರಣಗಳಿಗೆ ಕೇವಲ ‘ಕುಡಿತ’ ಕಾರಣವಲ್ಲ. ತುಸು ಆಳವಾಗಿ ಬೆದಕಿದರೆ ರಜೆ ಸಿಗದ ಸತತ ಒತ್ತಡ ಮತ್ತು ಅರ್ಥವಿಲ್ಲದ ನಿಯಮಗಳು ಆರೋಪಿ ಸ್ಥಾನದಲ್ಲಿ ನಿಲ್ಲುತ್ತವೆ.

ಜಮ್ಮು–ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಮೇಲೆ ಸಿಆರ್‌ಪಿಎಫ್ ಯೋಧರ ನಿಗಾ
ಜಮ್ಮು–ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಮೇಲೆ ಸಿಆರ್‌ಪಿಎಫ್ ಯೋಧರ ನಿಗಾ

ಗೊಂದಲದ ಗೂಡು

‘ಸಿಆರ್‌ಪಿಎಫ್‌ನಲ್ಲಿ ಕರ್ತವ್ಯಕ್ಕೆ ನಿಯೋಜಿಸುವ ವ್ಯವಸ್ಥೆಯೇ ಗೊಂದಲದ ಗೂಡಾಗಿದೆ’ ಎನ್ನುತ್ತಾರೆ ಡಿಫೆನ್ಸ್‌ ಅಂಡ್ ಸೆಕ್ಯುರಿಟಿ ಅಲರ್ಟ್‌ ನಿಯತಕಾಲಿಕೆಯ ಸಂಪಾದಕ ಮನ್ವೇಂದ್ರ ಸಿಂಗ್‌. ‘ಸೇನೆಯಲ್ಲಿ ಸಿಬ್ಬಂದಿ ಸದಾ ಒಂದು ತುಕಡಿಯಾಗಿ ಕರ್ತವ್ಯಕ್ಕೆ ನಿಯೋಜನೆಗೊಳ್ಳುತ್ತಾರೆ. ಆದರೆ ಸಿಆರ್‌ಪಿಎಫ್‌ನಲ್ಲಿ ಮೂರು ವರ್ಷಕ್ಕೊಮ್ಮೆ ಸಿಬ್ಬಂದಿಯ ನಿಯೋಜನೆ ಬದಲಾಗುತ್ತದೆ.ಪ್ರತಿ ಸಲ ಹೊಸ ವಾತಾವರಣ, ಹೊಸ ಸಹೋದ್ಯೋಗಿಗಳೊಡನೆ ಹೊಂದಿಕೊಳ್ಳುವುದೇ ಅವರಿಗೆ ದೊಡ್ಡ ಸವಾಲಾಗುತ್ತೆ. ಎಲ್ಲವನ್ನೂ ಅರ್ಥ ಮಾಡಿಕೊಂಡೆವು, ಇನ್ನೇನು ಸರಿಹೋಯಿತು ಎಂದುಕೊಳ್ಳುವ ಹೊತ್ತಿಗೆ ಅವರ ನಿಯೋಜನೆ ಬದಲಾಗುತ್ತೆ. ಮತ್ತವೆ ಗೊಂದಲಗಳು ಮತ್ತು ಮಾನಸಿಕ ಒತ್ತಡಕ್ಕೆ ಇದು ಕಾರಣವಾಗುತ್ತೆ’ ಎನ್ನುತ್ತಾರೆ ಅವರು.

ಸಿಆರ್‌ಪಿಎಫ್ ಆಡಳಿತ ವ್ಯವಸ್ಥೆಯಲ್ಲಿ ಮುಖ್ಯ ಕಚೇರಿಯ ನಿರ್ದೇಶನಗಳ ಪಾಲನೆಯನ್ನು ಖಾತ್ರಿಪಡಿಸಬೇಕಾದ್ದು ಕಂಪನಿ ಕಮಾಂಡರ್‌ಗಳ ಜವಾಬ್ದಾರಿ. ಪ್ರತಿ ಕಂಪನಿಯಲ್ಲಿ 100ರಿಂದ 250 ಸಿಬ್ಬಂದಿ ಇರುತ್ತಾರೆ. ಕಂಪನಿ ಕಮಾಂಡರ್‌ಗಳನ್ನು ಪದೆಪದೆ ಬದಲಿಸುವ ಪದ್ಧತಿ ಸಿಆರ್‌ಪಿಎಫ್‌ನಲ್ಲಿದೆ. ಸಿಆರ್‌ಪಿಎಫ್‌ ಯಾವುದೇ ನಿರ್ದಿಷ್ಟ ಕಾರ್ಯಾಚರಣೆಯ ಮಿತಿ ಇಲ್ಲ. ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಹೋರಾಡಿದರೆ, ಚುನಾವಣೆಗಳಲ್ಲಿ ಭದ್ರತೆಗೆ ನಿಯೋಜಿಸಲಾಗುತ್ತದೆ. ಇಂಥ ವೈವಿಧ್ಯಮಯ ಕರ್ತವ್ಯ ನಿರ್ವಹಿಸುವ ಹೊಣೆ ಹೊತ್ತ ಸಿಬ್ಬಂದಿಯನ್ನು ಮುನ್ನಡೆಸುವ ನಾಯಕನಿಗೆ ತನ್ನ ಪಡೆಯಲ್ಲಿರುವ ಎಲ್ಲರ ವ್ಯಕ್ತಿತ್ವಗಳ ಪರಿಚಯ ಇರಬೇಕಾದ್ದು ಅತ್ಯಗತ್ಯ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಇದು ಅಸಾಧ್ಯ ಎಂಬಂತೆ ಆಗಿದೆ ಎನ್ನುತ್ತಾರೆ ಮನ್ವೆಂದ್ರ ಸಿಂಗ್.

ಸಿಆರ್‌ಪಿಎಫ್‌ನ ಒಟ್ಟು ಸಿಬ್ಬಂದಿಯ ಪೈಕಿ ಕೇವಲ ಶೇ 20.7ರಷ್ಟು ಮಂದಿಗೆ ಮಾತ್ರ ಅಂದರೆ 100ರಲ್ಲಿ 27 ಜನರನ್ನು ಮಾತ್ರ ಸಂಘರ್ಷವಿಲ್ಲದ ಪ್ರದೇಶಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗುತ್ತದೆ. ಅಂದರೆ ಒಬ್ಬ ಸಿಆರ್‌ಪಿಎಫ್‌ ಯೋಧ ತನ್ನ ಕರ್ತವ್ಯ ನಿರ್ವಹಣೆಯ ಹಲವು ವರ್ಷಗಳನ್ನು ಸಂಘರ್ಷಪೀಡಿತ ಪ್ರದೇಶದಲ್ಲಿಯೇ ಕಳೆಯುತ್ತಾನೆ. ಇಂಥ ಪ್ರದೇಶಗಳಲ್ಲಿ ಆಹಾರ, ವಿಶ್ರಾಂತಿಯನ್ನು ಯಾರು ತಾನೆ ಖಾತ್ರಿಪಡಿಸಬಲ್ಲರು? ಎಲ್ಲಕ್ಕಿಂತ ಮಿಗಿಲಾಗಿ ರಜೆ ಎನ್ನುವುದು ಅವರ ಪಾಲಿಗೆ ಅಪರೂಪಕ್ಕೆ ಸಿಗುವ ಉಡುಗೊರೆ.

(ಕೃಪೆ: ಸುಧಾ, ಜನವರಿ 2ರ ಸಂಚಿಕೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT