ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಫೋನಿ’ ತೀವ್ರ: ನಾಳೆ ಒಡಿಶಾ ಪ್ರವೇಶ, 19 ಜಿಲ್ಲೆಗಳಲ್ಲಿ ಕಟ್ಟೆಚ್ಚರ

ಸಾವಿರಾರು ಮಂದಿ ಸ್ಥಳಾಂತರ: ಪುರಿ ನಗರಕ್ಕೆ ಬಾರದಂತೆ ಪ್ರವಾಸಿಗರಿಗೆ ನಿರ್ಬಂಧ
Last Updated 1 ಮೇ 2019, 20:15 IST
ಅಕ್ಷರ ಗಾತ್ರ

ನವದೆಹಲಿ/ಭುವನೇಶ್ವರ: ದೇಶದ ಪೂರ್ವ ಕರಾವಳಿ ಪ್ರದೇಶದಲ್ಲಿ ವ್ಯಾಪಿಸಿಕೊಂಡಿರುವ ‘ಫೋನಿ’ ಚಂಡಮಾರುತ ಭೀಕರ ಸ್ವರೂಪ ಪಡೆದಿದ್ದು, ಶುಕ್ರವಾರದ ವೇಳೆಗೆ ಒಡಿಶಾ ಪ್ರವೇಶಿಸಲಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಎಚ್ಚರಿಕೆ ನೀಡಿದೆ.

ಒಡಿಶಾ, ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳದ 19 ಜಿಲ್ಲೆಗಳು ಚಂಡಮಾರುತದ ಪ್ರಭಾವಕ್ಕೆ ಸಿಲುಕಲಿವೆ.

ಫೋನಿ ಚಂಡಮಾರುತ ತೀವ್ರಗೊಂಡಿದೆ. ಪ್ರತಿ ಗಂಟೆಗೆ 185ರಿಂದ 205 ಕಿಲೋ ಮೀಟರ್‌ ವೇಗದ ಬಿರುಗಾಳಿಯೊಂದಿಗೆ ಒಡಿಶಾ ಕರಾವಳಿ ಪ್ರದೇಶಕ್ಕೆ ತಲುಪಲಿದೆ. ಅದರಲ್ಲೂ ಪುರಿಯ ದಕ್ಷಿಣ ಭಾಗ ಹೆಚ್ಚು
ಪ್ರಭಾವಕ್ಕೆ ಒಳಗಾಗಲಿದೆ ಎಂದು ಅದು ತಿಳಿಸಿದೆ.

ಕರಾವಳಿ ಪ್ರದೇಶದಲ್ಲಿನ ಸಾವಿರಾರು ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯ ಭರದಿಂದ ನಡೆಯುತ್ತಿದೆ. ಕರಾವಳಿ ತೀರದಲ್ಲಿರುವ ಪ್ರಮುಖ ಪ್ರವಾಸಿ ತಾಣ ಪುರಿ ನಗರದಿಂದ ತಕ್ಷಣವೇ ತೆರಳುವಂತೆ ಪ್ರವಾಸಿಗರಿಗೂ ಸಲಹೆ ನೀಡಲಾಗಿದ್ದು, ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಮೇ 5ರವರೆಗೆ ಹೊಸದಾಗಿ ಕೊಠಡಿಗಳನ್ನು ಕಾಯ್ದಿರಿಸುವುದನ್ನು ಸ್ಥಗಿತಗೊಳಿಸಬೇಕು ಎಂದು ರಾಜ್ಯ ಸರ್ಕಾರ ವಸತಿಗೃಹಗಳಿಗೆ ಸೂಚಿಸಿದೆ. ಈ ಮೂಲಕ ಪುರಿ ನಗರಕ್ಕೆ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಿದಂತಾಗಿದೆ.

‘ಎಲ್ಲ ಹೋಟೆಲ್‌ಗಳು, ವಸತಿ ಗೃಹಗಳು ಸಂಪೂರ್ಣ ಖಾಲಿಯಾಗಿರುವಂತೆ ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ. ಸರ್ಕಾರದ ಆದೇಶವನ್ನು ಪಾಲಿಸದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೀನುಗಾರಿಕೆ ಚಟುವಟಿಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಸೂಚಿಸಲಾಗಿದೆ. ಜತೆಗೆ, ಮೇ 5ರವರೆಗೆ ಎಲ್ಲ ರೀತಿಯ ಬೋಟಿಂಗ್‌ ಚಟುವಟಿಕೆಗಳನ್ನು ಸಹ ಒಡಿಶಾ ಸರ್ಕಾರ ನಿಷೇಧಿಸಿದೆ. ಆದರೆ, ಸಾವಿರಾರು ಮಂದಿಗೆ ಕೇವಲ 850 ಆಶ್ರಯ ತಾಣಗಳನ್ನು ನಿರ್ಮಿಸಲಾಗಿದೆ ಎಂದು ವರದಿಯಾಗಿದೆ. ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲೂ ಕಟ್ಟೆಚ್ಚರವಹಿಸಲಾಗಿದೆ.

‘ಒಡಿಶಾದಲ್ಲಿ 11 ಜಿಲ್ಲೆಗಳು ಚಂಡಮಾರುತದ ಪ್ರಭಾವಕ್ಕೆ ಒಳಗಾಗುವ ಸಾಧ್ಯತೆ ಇದೆ. ಮನೆ ಒಳಗೆ ಇರು
ವಂತೆ ನಾಗರಿಕರಿಗೆ ಸೂಚಿಸಲಾಗಿದೆ’ ಎಂದು ಭುವನೇಶ್ವರದಲ್ಲಿನ ಹವಾಮಾನ ಕೇಂದ್ರದ ನಿರ್ದೇಶಕ ಎಚ್‌.ಆರ್‌. ಬಿಸ್ವಾಸ್‌ ತಿಳಿಸಿದ್ದಾರೆ.

ಆಂಧ್ರಪ್ರದೇಶದ ಕರಾವಳಿ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್‌, ಮಣಿಪುರ, ಮಿಜೋರಾಂ, ತ್ರಿಪುರಾದ, ಜಮ್ಮು ಮತ್ತು ಕಾಶ್ಮೀರ, ಪಶ್ಚಿಮ ಬಂಗಾಳ, ಸಿಕ್ಕಿಂನಲ್ಲಿ ಪ್ರತಿ ಗಂಟೆಗೆ 50 ಕಿಲೋ ಮೀಟರ್‌ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ.

ನೌಕಾ ಪಡೆ ಮತ್ತು ಕರಾವಳಿ ಪಡೆಯ ಹಡಗುಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್‌)‌ 41 ತಂಡಗಳನ್ನು ಅತಿ ಹೆಚ್ಚು ಪ್ರಭಾವಕ್ಕೆ ಒಳಗಾಗುವ ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಒಡಿಶಾದಲ್ಲಿ ನಿಯೋಜಿಸಲಾಗಿದೆ. ಒಂದು ತಂಡದಲ್ಲಿ 45 ಸಿಬ್ಬಂದಿ ಇದ್ದಾರೆ. ಸೇನೆ ಮತ್ತು ವಾಯು ಪಡೆಗೂ ಸಹ ಯಾವುದೇ ಪರಿಸ್ಥಿತಿ ಎದುರಿಸಲು ಸಜ್ಜಾಗಿರುವಂತೆ ಸೂಚಿಸಲಾಗಿದೆ. ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿಯ ನಿರ್ಧಾರದಂತೆ ಕೇಂದ್ರ ಸರ್ಕಾರ ತಮಿಳುನಾಡು, ಆಂಧ್ರಪ್ರದೇಶ, ಒಡಿಶಾ ಮತ್ತು ಪಶ್ಚಿಮ ಬಂಗಾಳಕ್ಕೆ ಮುಂಜಾಗ್ರತಾ ಕ್ರಮ ಮತ್ತು ಪರಿಹಾರಕ್ಕೆ ಕೇಂದ್ರ ಸರ್ಕಾರ ₹1,086 ಕೋಟಿ ಬಿಡುಗಡೆ ಮಾಡಿದೆ.

‘ಚಂಡಮಾರುತ ಪ್ರವಾಸೋದ್ಯಮ’ಕ್ಕೆ ನಿಷೇಧ

ಚಂಡಮಾರುತದ ಅಪಾಯಕಾರಿ ಪರಿಣಾಮಗಳನ್ನು ಸಾಹಸದಿಂದ ನೋಡುವ ಯುವಕರು ಸಹ ಇದ್ದಾರೆ. ಹೀಗಾಗಿ, ಈ ಬಾರಿ ಒಡಿಶಾ ಸರ್ಕಾರ ‘ಚಂಡಮಾರುತ ಪ್ರವಾಸೋದ್ಯಮ’ ನಿಷೇಧಿಸಿದೆ.

ಈ ಹಿಂದೆ ಸಂಭವಿಸಿದ ಫೈಲಿನ್‌, ಹುದ್‌ಹುದ್‌ ಮತ್ತು ತಿತ್ಲಿ ಚಂಡಮಾರುತಗಳು ಸಂಭವಿಸಿದಾಗ ನಗರ ಪ್ರದೇಶದ ಹಲವು ಯುವಕರು ಬೀಚ್‌ಗಳತ್ತ ತೆರಳಿದ್ದರು. ದೊಡ್ಡ ದೊಡ್ಡ ಅಲೆಗಳ ಮೂಲಕ ಚಂಡಮಾರುತವು ಭೂಮಿ ಸ್ಪರ್ಶಿಸುವುದನ್ನು ಅತಿ ಸಮೀಪದಿಂದ ನೋಡುವ ಸಾಹಸವನ್ನು ಯುವಕರು ಕೈಗೊಳ್ಳುತ್ತಿದ್ದರು. ಇದು ಅತ್ಯಂತ ಅಪಾಯಕಾರಿಯಾಗಿತ್ತು. ಜಿಲ್ಲಾಡಳಿತಗಳಿಗೆ ಯುವಕರ ಸಾಹಸ ಪ್ರವೃತ್ತಿ ತಲೆನೋವಾಗಿ ಪರಿಣಮಿಸಿತ್ತು.

‘ಚಂಡಮಾರುತ ಪ್ರವಾಸೋದ್ಯಮಕ್ಕೆ ತೆರಳುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಪುರಿ, ಗಂಜಮ್‌, ಕೇಂದ್ರಪಾಲ, ಜಗತ್‌ಸಿಂಘಪುರ ಮತ್ತು ಬಾಲಸೋರ್‌ ಸೇರಿದಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ’ ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

81 ರೈಲುಗಳ ಸಂಚಾರ ರದ್ದು

‘ಫೋನಿ’ ಚಂಡಮಾರುತದ ಹಿನ್ನೆಲೆಯಲ್ಲಿ 81 ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ.

ಯಶವಂತಪುರ–ಮುಜಫ್ಪರ್‌ಪುರ, ಹೌರಾ–ಚೆನ್ನೈ, ನವದೆಹಲಿ–ಭುವನೇಶ್ವರ ರಾಜಧಾನಿ ಎಕ್ಸ್‌ಪ್ರೆಸ್‌, ಭುವನೇಶ್ವರ–ರಾಮೇಶ್ವರ ಎಕ್ಸ್‌ಪ್ರೆಸ್‌ ರದ್ದುಗೊಂಡ ಪ್ರಮುಖ ರೈಲುಗಳು.

ನೀತಿ ಸಂಹಿತೆಯಿಂದ ವಿನಾಯಿತಿ: ಫೋನಿ ಚಂಡಮಾರುತ ಪ್ರಭಾವಕ್ಕೆ ಒಳಗಾಗುವ ಒಡಿಶಾದ 11 ಕರಾವಳಿ ಜಿಲ್ಲೆಗಳಲ್ಲಿ ಮಾದರಿ ನೀತಿ ಸಂಹಿತಿಯನ್ನು ಚುನಾವಣಾ ಆಯೋಗ ತೆಗೆದು ಹಾಕಿದೆ.

1999ರ ದುರಂತದ ನೆನಪು

ನವದೆಹಲಿ: ಭೀಕರ ಸ್ವರೂಪ ತಳೆಯುತ್ತಿರುವ ‘ಫೋನಿ’ ಚಂಡಮಾರುತ 1999ರಲ್ಲಿ ಒಡಿಶಾದಲ್ಲಿ ಸಂಭವಿಸಿದ ದುರಂತವನ್ನು ನೆನಪಿಸುತ್ತಿದೆ. ಆದರೆ, ಈಗಿನ ‘ಫೋನಿ’ ತೀವ್ರತೆ ಆ ವರ್ಷಕ್ಕಿಂತ ಸ್ವಲ್ಪ ಕಡಿಮೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಒಡಿಶಾದಲ್ಲಿ 1999ರಲ್ಲಿ ಅಪಾರ ಹಾನಿ ಮಾಡಿದ್ದ ಅಂದಿನ ಚಂಡಮಾರುತದಿಂದ ಸುಮಾರು 10,500 ಮಂದಿ ಸಾವಿಗೀಡಾಗಿದ್ದರು.

ಎರಡು ದಶಕಗಳಲ್ಲಿ ಭಾರತದಲ್ಲಿ ಅಪಾರ ಬದಲಾವಣೆಗಳಾಗಿದ್ದು, ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ. ಚಂಡಮಾರುತದ ಮುನ್ಸೂಚನೆ ಪಡೆಯುವ ವ್ಯವಸ್ಥೆಯು ಅಪಾರ ಸುಧಾರಿಸಿದೆ. ಇದರಿಂದ ಜನರನ್ನು ಸ್ಥಳಾಂತರಿಸಲು ಕಾಲಾವಕಾಶ ದೊರೆಯುತ್ತಿದೆ. ಈ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿರುವುದರಿಂದ ಹಾನಿಯ ಪ್ರಮಾಣ ಕುಗ್ಗಲಿದೆ.

ಉದಾಹರಣೆಗೆ, ಐದು ದಿನಗಳ ಹಿಂದೆಯೇ ಹವಾಮಾನ ಇಲಾಖೆಯು ಒಡಿಶಾ ಸರ್ಕಾರಕ್ಕೆ ಚಂಡಮಾರುತದ ಮುನ್ಸೂಚನೆ ನೀಡಿರುವುದರಿಂದ ಅತಿ ಹೆಚ್ಚು ಪ್ರಭಾವಕ್ಕೆ ಒಳಗಾಗಿರುವ ಪ್ರದೇಶದಿಂದ ಜನರನ್ನು ಸ್ಥಳಾಂತರಿಸಲಾಗಿದೆ. ಏಪ್ರಿಲ್‌ ತಿಂಗಳಲ್ಲಿ ಚಂಡಮಾರುತಗಳು ಸಂಭವಿಸುವುದು ಅಪರೂಪ. ಅಕ್ಟೋಬರ್‌–ನವೆಂಬರ್‌ ಅಥವಾ ಮೇ ತಿಂಗಳಲ್ಲಿ ಚಂಡಮಾರುತಗಳು ಸಂಭವಿಸುವುದು ಸಾಮಾನ್ಯ. ಈಗ ಮಾರ್ಚ್‌–ಏಪ‍್ರಿಲ್‌ ತಿಂಗಳಲ್ಲೂ ಸಂಭವಿಸುವುದು ಬದಲಾವಣೆಗೆ ಕಾರಣವಾಗಿದೆ. ಜಾಗತಿಕ ತಾಪಮಾನದಿಂದ ಚಂಡಮಾರುತದ ಸ್ವರೂಪಗಳು ಸಹ ಬದಲಾಗುತ್ತಿವೆ ಎಂದು ಹವಾಮಾನ ಇಲಾಖೆ ವಿಶ್ಲೇಷಣೆ ತಿಳಿಸಿದೆ.

‘1891 ಮತ್ತು 2017ರ ನಡುವೆ ಕೇವಲ 14 ಭೀಕರ ಚಂಡಮಾರುತಗಳು ಬಂಗಾಳ ಕೊಲ್ಲಿಯಲ್ಲಿ ಏಪ್ರಿಲ್‌ ತಿಂಗಳ ಅವಧಿಯಲ್ಲಿ ರೂಪುಗೊಂಡಿದ್ದವು. ಆದರೆ, ಒಂದು ಮಾತ್ರ ಭಾರತವನ್ನು ಪ್ರವೇಶಿಸಿತ್ತು’ ಎಂದು ಭೂವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ. ರಾಜೀವನ್‌ ಟ್ವೀಟ್‌ ಮಾಡಿದ್ದಾರೆ. ‘ಫೋನಿ, ಅತ್ಯಂತ ಭೀಕರ ಚಂಡಮಾರುತವಲ್ಲ. ಅತಿ ಭೀಕರವಾಗಿದ್ದರೆ ಬಿರುಗಾಳಿಯು ಪ್ರತಿ ಗಂಟೆಗೆ 220 ಕಿಲೋ ಮೀಟರ್‌ ವೇಗದಲ್ಲಿ ಬೀಸುತ್ತದೆ’ ಎಂದು ಹವಾಮಾನ ಇಲಾಖೆಯ ನಿರ್ದೇಶಕ ಕೆ.ಜೆ. ರಮೇಶ್‌ ತಿಳಿಸಿದ್ದಾರೆ.

***

ಚಂಡಮಾರುತದ ಪರಿಣಾಮಗಳ ಬಗ್ಗೆ ಜನರಿಗೆ ಮಾಹಿತಿ ನೀಡಲಾಗಿದೆ. ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸುವ ಕಾರ್ಯ ಭರದಿಂದ ನಡೆದಿದೆ.

- ಬಿಷ್ಣುಪದ ಸೇಠಿ, ಒಡಿಶಾದ ವಿಶೇಷ ಪರಿಹಾರ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT