ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಥ ಬದಲಿಸಿದ ವಾಯು: ಗುಜರಾತ್‌ಗೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಕಡಿಮೆ

Last Updated 13 ಜೂನ್ 2019, 17:37 IST
ಅಕ್ಷರ ಗಾತ್ರ

ಅಹಮದಾಬಾದ್‌: ಗುಜರಾತ್‌ ರಾಜ್ಯದ ತೀರ ಪ್ರದೇಶಗಳಿಗೆ ಅಪ್ಪಳಿಸಲಿದೆ ಎನ್ನಲಾಗಿದ್ದ ‘ವಾಯು’ ಚಂಡಮಾರುತ ದಿಕ್ಕು ಬದಲಿಸಿದ್ದು, ಆತಂಕ ಕುಗ್ಗಿದೆ.

ಮುಂಜಾಗ್ರತೆಯಾಗಿ ತೀರ ಭಾಗದ ಜಿಲ್ಲೆಗಳಿಂದ ಮೂರು ಲಕ್ಷಕ್ಕೂ ಅಧಿಕ ಜನರನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗಿದೆ. ವಿಮಾನಗಳ ಸಂಚಾರ, ಒಟ್ಟು 86 ರೈಲುಗಳ ಸಂಚಾರ ರದ್ದುಪಡಿಸಲಾಗಿದೆ.

ತೀರ ಭಾಗದ ಜಿಲ್ಲೆಗಳಲ್ಲಿ ಭಾರಿ ಮಳೆ, ಗಾಳಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಶುಕ್ರವಾರದವರೆಗೂ ಕಟ್ಟೆಚ್ಚರ ವಹಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಇದಕ್ಕೂ ಮುನ್ನ ವಾಯು ಚಂಡಮಾರುತ ಗುಜರಾತ್‌ ತೀರ ಅಪ್ಪಳಿಸುವ ಸಾಧ್ಯತೆಗಳು ಕಡಿಮೆ ಎಂದು ಹವಾಮಾನ ಇಲಾಖೆ ಅಂದಾಜಿಸಿತ್ತು. ಪೋರಬಂದರ್‌, ದೇವ್‌ಭೂಮಿ ದ್ವಾರಕಾ, ಗಿರ್ ಸೋಮನಾಥ್‌ ಒಳಗೊಂಡು ಕರಾವಳಿ ತೀರದ ಜಿಲ್ಲೆಗಳಲ್ಲಿ ಇದರ ಪರಿಣಾಮ ಕಂಡುಬಂದಿದೆ.

ಹವಾಮಾನ ಇಲಾಖೆ ವರದಿಗಳ ಪ್ರಕಾರ, ಚಂಡಮಾರುತ ಉತ್ತರಾಭಿಮುಖವಾಗಿ ಸಾಗುತ್ತಿದೆ. ಸೌರಾಷ್ಟ್ರ ತೀರ ಭಾಗದಲ್ಲಿ ಇದರ ಪರಿಣಾಮವಿದೆ. ಗಿರ್‌ ಸೋಮನಾಥ್, ದಿಯು, ಜುನಾಗರ್, ಪೋರಬಂದರ, ದೇವಭೂಮಿ ದ್ವಾರಕಾ ಜಿಲ್ಲೆಗಳಲ್ಲಿ ಪರಿಣಾಮ ಇರಲಿದೆ.

‘ಚಂಡಮಾರುತದ ವೇಗ ಈ ಭಾಗದಲ್ಲಿ ಗಂಟೆಗೆ 155–165 ಕಿ.ಮೀ ಇದೆ. ಮುಂದಿನ 12 ಗಂಟೆಗಳಲ್ಲಿ ವೇಗ ಇನ್ನಷ್ಟು ಹೆಚ್ಚಬಹುದು. ಗಂಭೀರವಾದ ಪರಿಣಾಮ ಉಂಟಾಗಬಹುದು’ ಹವಾಮಾನ ಇಲಾಖೆಯು ಪ್ರಕಟಣೆಯಲ್ಲಿ ಎಚ್ಚರಿಸಿದೆ.

ಗುಜರಾತ್‌ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಂಕಜ್‌ ಕುಮಾರ್ ಅವರು, ‘ಚಂಡಮಾರುತ ಅಪಾಯಕಾರಿ. ಭೂಕುಸಿತ ಆಗುವುದಿಲ್ಲ ಎಂಬ ನಿರೀಕ್ಷೆಗಳಿವೆ.

ಗುಜರಾತ್‌ನ ವೆರವೆಲ್ ತೀರ ಭಾಗದಲ್ಲಿ ಗುರುವಾರ ಭಾರಿ ಅಲೆಗಳು, ನೀರಿನ ಸೆಳೆದ ಹೆಚ್ಚಾದಂತೆ ಮೀನುಗಾರರು ತಮ್ಮ ದೋಣಿಯನ್ನು ಸುರಕ್ಷಿತ ತಾಣಕ್ಕೆ ಒಯ್ಯಲು ಯತ್ನಿಸುತ್ತಿರುವುದು –ಪಿಟಿಐ ಚಿತ್ರ
ಗುಜರಾತ್‌ನ ವೆರವೆಲ್ ತೀರ ಭಾಗದಲ್ಲಿ ಗುರುವಾರ ಭಾರಿ ಅಲೆಗಳು, ನೀರಿನ ಸೆಳೆದ ಹೆಚ್ಚಾದಂತೆ ಮೀನುಗಾರರು ತಮ್ಮ ದೋಣಿಯನ್ನು ಸುರಕ್ಷಿತ ತಾಣಕ್ಕೆ ಒಯ್ಯಲು ಯತ್ನಿಸುತ್ತಿರುವುದು –ಪಿಟಿಐ ಚಿತ್ರ

ದೊಡ್ಡ ಅಲೆಗಳು ಹಾಗೂ ವೇಗದ ಗಾಳಿಯಿಂದಾಗಿ ತೀರ ಪ್ರದೇಶಗಳಲ್ಲಿ ಪರಿಣಾಮ ಬೀರಬಹುದು’ಎಂದು ಹೇಳಿದರು.

560 ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ: ಗುಜರಾತ್‌ನಲ್ಲಿ ತೀರ ಜಿಲ್ಲೆಗಳ 560 ಗ್ರಾಮಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಿದೆ. ‘ಸೌರಾಷ್ಟ್ರ, ದಕ್ಷಿಣ ಗುಜರಾತ್‌ನಲ್ಲಿ 561 ಫೀಡರ್‌ ಮಾರ್ಗಗಳು ಹಾನಿಗೊಂಡಿವೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಖ್ಯಮಂತ್ರಿ ವಿಜಯ್‌ ರೂಪಾಣಿ ಅವರು, ‘ಪರಿಣಾಮ ಕಂಡುಬಂದಿರುವ 10 ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಶುಕ್ರವಾರ ಮತ್ತೆ ಪರಿಸ್ಥಿತಿಯನ್ನು ಅವಲೋಕಿಸಿ ರಕ್ಷಣಾ ಕ್ರಮ ಚುರುಕುಗೊಳಿಸಲಾಗುವುದು’ ಎಂದು ತಿಳಿಸಿದರು.

ವಿಮಾನ, 86 ರೈಲುಗಳ ಸಂಚಾರ ರದ್ದು

ನವದೆಹಲಿ: ವಾಯು ಚಂಡಮಾರುತದ ಪರಿಣಾಮ ಅಲ್ಪಪ್ರಮಾಣಣದಲ್ಲಿ ಇದೆ. ರಾಜ್ಯದಲ್ಲಿನ ವಿಮಾನ ನಿಲ್ದಾಣ ಮತ್ತು ಅಲ್ಲಿನ ಮೂಲಸೌಕರ್ಯಗಳಿಗೆ ಧಕ್ಕೆಯಾಗಿಲ್ಲ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ಹೇಳಿಕೆ ತಿಳಿಸಿದೆ.

ಮುಂಜಾಗ್ರತೆಯಾಗಿ ಪೋರಬಂದರ್, ದಿಯು, ಭಾವ್‌ನಗರ, ಕಾಂಡ್ಲಾ ವಿಮಾನ ನಿಲ್ದಾಣಗಳಿಂದ ಬುಧವಾರ ಮಧ್ಯರಾತ್ರಿಯಿಂದ 24 ಗಂಟೆ ಅವಧಿಗೆ ವಿಮಾನಯಾನ ರದ್ದುಪಡಿಸಲಾಗಿದೆ’ ಎಂದು ಎಎಐ ತಿಳಿಸಿದೆ. ವಿಮಾನ ನಿಲ್ದಾಣಗಳಲ್ಲಿ ಗಾಳಿ ವೇಗ ಪ್ರಸ್ತುತ ಗಂಟೆಗೆ 30–40 ಕಿ.ಮೀ ಇದೆ. ಪರಿಸ್ಥಿತಿ ಅವಲೋಕಿಸಿ ವಿಮಾನಯಾನ ಆರಂಭಿಸಲಾಗುವು.ದುರೈಲ್ವೆ ಇಲಾಖೆಯು 86 ರೈಲುಗಳ ಸಂಚಾರವನ್ನು ರದ್ದುಪಡಿಸಿದ್ದು, ಇತರೆ 33 ರೈಲುಗಳ ಪ್ರಯಾಣದ ಅಂತರವನ್ನು ಕಡಿತಗೊಳಿಸಿದೆ.

‘ರೈಲು ಪ್ರಯಾಣಿಕರ ಸುರಕ್ಷತೆಗೆ ಕ್ರಮವಹಿಸಲಾಗಿದೆ. ರಾಜಕೋಟ್‌, ಭಾವನಗರ ವಿಭಾಗಗಳ ಪ್ರಯಾಣಿಕರ ಸ್ಥಳಾಂತರಕ್ಕಾಗಿ ತಲಾ ಒಂದು ವಿಶೇಷರೈಲು ಸಂಚರಿಸಲಿದೆ’ ಎಂದು ಹೇಳಿಕೆ ತಿಳಿಸಿದೆ.

ಗುಜರಾತ್‌ಗೆ ಒಡಿಶಾ ‘ಪರಿಣತಿ’ಯ ನೆರವು

ಭುವನೇಶ್ವರ: ‘ವಾಯು’ ಚಂಡಮಾರುತ ಹಿನ್ನೆಲೆಯಲ್ಲಿ ಪರಿಸ್ಥಿತಿ ಎದುರಿಸಲು, ಜನರ ಸುರಕ್ಷತೆಗಾಗಿ ಗುಜರಾತ್‌ಗೆ ತನ್ನ ಪರಿಣತಿ ಮತ್ತು ಅನುಭವದ ನೆರವು ನೀಡಲಾಗುವುದು ಎಂದು ಒಡಿಶಾ ಸರ್ಕಾರ ಗುರುವಾರ ಹೇಳಿದೆ.

ಪರಿಸ್ಥಿತಿ ನಿಭಾಯಿಸಲು ಮುಖ್ಯವಾಗಿ ಜನರನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರ ಕುರಿತು ಗುಜರಾತ್ ಸರ್ಕಾರದ ಮುಖ್ಯ ಕಾರ್ಯದರ್ಶಿ ನನ್ನ ಜೊತೆ ಚರ್ಚಿಸಿದ್ದಾರೆ’ ಎಂದು ಒಡಿಶಾ ರಾಜ್ಯದ ಮುಖ್ಯ ಕಾರ್ಯದರ್ಶಿ ಆದಿತ್ಯ ಪ್ರಸಾದ್‌ ಪಧಿ ಹೇಳಿದರು.

ಕಳೆದ ಬಾರಿ ಫನಿ ಚಂಡಮಾರುತ ಅಪ್ಪಳಿಸಿದಾಗ ಒಡಿಶಾ ಸರ್ಕಾರ ಮುನ್ನೆಚ್ಚರಿಕೆ ಕ್ರಮ ವಹಿಸಿತ್ತು. ಹತ್ತು ಲಕ್ಷಕ್ಕೂ ಅಧಿಕ ಜನರನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಿ, ಜೀವಹಾನಿ ತಡೆಗೆ ಕ್ರಮವಹಿಸಿತ್ತು. ಒಡಿಶಾ ಸರ್ಕಾರದ ಈ ಕ್ರಮಕ್ಕೆ ದೇಶವ್ಯಾಪಿ ಮೆಚ್ಚುಗೆ ವ್ಯಕ್ತವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT