ಭಾನುವಾರ, ಏಪ್ರಿಲ್ 18, 2021
31 °C
ಕಮ್ಯೂನಿಸ್ಟ್‌ ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಏರಿದ ಮೊದಲ ದಲಿತ

ಸಿಪಿಐ ಅತ್ಯುನ್ನತ ಹುದ್ದೆಗೆ ಡಿ.ರಾಜಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ : ರಾಜ್ಯ ಸಭಾ ಸಂಸದ ಡಿ.ರಾಜಾ ಅವರನ್ನು ಭಾರತೀಯ ಕಮ್ಯೂನಿಸ್ಟ್‌ ಪಕ್ಷದ (ಸಿಪಿಐ) ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ.

ಇದುವರೆಗೆ ಎಸ್‌. ಸುಧಾಕರ್‌ರೆಡ್ಡಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಅನಾರೋಗ್ಯದ ಕಾರಣ ರೆಡ್ಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮೂರು ದಿನಗಳ ಕಾಲ ನಡೆದ ಸಿಪಿಐ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಡಿ. ರಾಜಾ (70) ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡುವ ನಿರ್ಣಯಕ್ಕೆ ಅನುಮೋದನೆ ನೀಡಲಾಯಿತು. ಡಿ. ರಾಜಾ ಕಮ್ಯೂನಿಸ್ಟ್‌ ಪಕ್ಷದ ಉನ್ನತ ಸ್ಥಾನಕ್ಕೇರಿದ ಮೊದಲ ದಲಿತ ನಾಯಕರಾಗಿದ್ದಾರೆ. ಇವರ ರಾಜ್ಯಸಭಾ ಅವಧಿ ಬುಧವಾರ ಮುಕ್ತಾಯಗೊಳ್ಳಲಿದೆ.

ತಮಿಳುನಾಡಿನ ಡಿ.ರಾಜಾ ಎರಡು ಬಾರಿ ರಾಜ್ಯ ಸಭಾ ಸದಸ್ಯರಾಗಿದ್ದರು. ವಿದ್ಯಾರ್ಥಿದೆಸೆಯಿಂದಲೇ ನಾಯಕರಾಗಿ ಬೆಳೆದ ರಾಜಾ 1990ರಲ್ಲಿ ದೆಹಲಿಗೆ ಸ್ಥಳಾಂತರಗೊಂಡರು. 1994ರಲ್ಲಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನೇಮಕಗೊಂಡರು.

 ಈ ಸಂದರ್ಭದಲ್ಲಿ ಮಾತನಾಡಿದ ಡಿ. ರಾಜಾ, ‘ಲೋಕಸಭೆ ಚುನಾವಣೆಯಲ್ಲಿ ಎಡಪಕ್ಷಗಳು ಸೋಲು ಅನುಭವಿಸಿರಬಹುದು. ನಮ್ಮ ಸ್ಥಾನಗಳು ಕಡಿಮೆಯಾಗಿವೆ. ಆದರೆ, ನಮ್ಮ ಶಕ್ತಿ ಕುಂದಿಲ್ಲ. ನಮ್ಮ ಸಿದ್ಧಾಂತ ಮತ್ತು ರಾಜಕೀಯ ಪ್ರಭಾವ ಕಡಿಮೆಯಾಗಿಲ್ಲ. ಜನರ ಆಶೋತ್ತರಗಳಿಗೆ ಸ್ಪಂದಿಸಿ ಕಾರ್ಯ
ನಿರ್ವಹಿಸುತ್ತೇವೆ’ ಎಂದು ಹೇಳಿದರು.

‘ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಎಡಪಕ್ಷಗಳು ಹೋರಾಟ ಮುಂದುವರಿಸುತ್ತವೆ. ಬಿಜೆಪಿ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಜಯಗಳಿಸಿದೆ. ಆದರೆ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಅದು ಸೋತಿದೆ. ಕಮ್ಯೂನಿಸ್ಟ್‌ ಪಕ್ಷಗಳು ಒಗ್ಗಟ್ಟಾಗಿ ಕಾರ್ಯತಂತ್ರ ರೂಪಿಸಬೇಕಾಗಿದೆ’ ಎಂದರು.

ಲೋಕಸಭೆ ಚುನಾವಣೆ ಫಲಿತಾಂಶದ ವಿಶ್ಲೇಷಿಸಿದ ರಾಷ್ಟ್ರೀಯ ಮಂಡಳಿ, ‘ಬಿಜೆಪಿ ಸೋಲಿಸಲು ಎಲ್ಲ ಜಾತ್ಯತೀತ ಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನ ನಡೆಸಿದರೂ ಕೆಲ ನಾಯಕರ ಸಂಕುಚಿತ, ಸಣ್ಣತನದ ಹಿತಾಸಕ್ತಿಯಿಂದ ಆಗಲಿಲ್ಲ’ ಎಂದು ಅಭಿಪ್ರಾಯಪಟ್ಟಿದೆ.

ಕನ್ಹಯ್ಯಾ ಕುಮಾರ್‌ ನೇಮಕ

ಪಕ್ಷದಲ್ಲಿ ಯುವಕರಿಗೆ ನಾಯಕತ್ವ ಒದಗಿಸುವ ನಿಟ್ಟಿನಲ್ಲಿ ಕನ್ಹಯ್ಯಾ ಕುಮಾರ್‌ ಅವರನ್ನು ರಾಷ್ಟ್ರೀಯ ಕಾರ್ಯಕಾರಿಣಿಗೆ ಸೇರಿಸಿಕೊಳ್ಳಲಾಗಿದೆ.

ಅಖಿಲ ಭಾರತ ಆದಿವಾಸಿ ಮಹಾಸಭಾದ ನಾಯಕರಾದ ರಾಮಕೃಷ್ಣ ಪಂಡಾ (ಒಡಿಶಾ) ಮತ್ತು ಮನಿಷ್‌ ಕುಂಜಮ್‌ (ಛತ್ತೀಸಗಡ) ಅವರನ್ನು ರಾಷ್ಟ್ರೀಯ ಕಾರ್ಯಕಾರಿಣಿಗೆ ಆಹ್ವಾನಿತರನ್ನಾಗಿ ನೇಮಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು