ಮಾರಣಾಂತಿಕ ಹಲ್ಲೆ ಮಾಡಿ, ಬಲವಂತವಾಗಿ ಮೂತ್ರ ಕುಡಿಸಲಾಗಿದ್ದ ದಲಿತ ಕಾರ್ಮಿಕ ಸಾವು

ಅಮೃತ್ಸರ್: ನವೆಂಬರ್ 9ರಂದು ಪಂಜಾಬ್ನ ಸಂಗ್ರೂರ್ ಜಿಲ್ಲೆಯ ಚಂಗಲಿವಾಲಾ ಎಂಬ ಹಳ್ಳಿಯಲ್ಲಿ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿದ್ದ ದಲಿತ ಕಾರ್ಮಿಕ ಜಗ್ಮಲ್ ಸಿಂಗ್(37) ರವಿವಾರ ಸಾವನ್ನಪ್ಪಿದ್ದಾರೆ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಜಗ್ಮಲ್ ಸಿಂಗ್ ಮೇಲೆ ಹಲ್ಲೆ ನಡೆಸಿ, ಅವರಿಗೆ ಮೂತ್ರ ಕುಡಿಸಿದ ಘಟನೆ ನ.7 ರಂದು ನಡೆದಿತ್ತು. ಹಲ್ಲೆ ನಡೆದ 9 ದಿನಗಳ ಬಳಿಕ ಜಗ್ಮಲ್ ಸಿಂಗ್ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ.
ಜಗ್ಮಲ್ ಅವರ ಮೇಲೆ ಹಲ್ಲೆ ನಡೆಸಿದ್ದ ಜಾಟ್ ಸಮುದಾಯದ ಅಮರ್ಜೀತ್ ಸಿಂಗ್, ಪುತ್ರ ರಿಂಕು ಮತ್ತು ಸ್ನೇಹಿತರಾದ ಲಕ್ಕಿ ಹಾಗೂ ಬಿಂದರ್ ಅವರನ್ನು ಪೊಲೀಸರು ಈಗಾಗಲೇ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
‘ಅಮರ್ಜೀತ್, ರಿಂಕು ಮತ್ತು ಲಕ್ಕಿಯನ್ನು ನ.14 ರಂದು ಬಂಧಿಸಲಾಯಿತು. ಬಿಂದರ್ನನ್ನು ನ.15 ರಂದು ಸೆರೆಹಿಡಿಯಲಾಯಿತು. ಆರೋಪಿಗಳನ್ನು ಪ್ರಶ್ನಿಸಿದಾಗ, ದಲಿತ ಕಾರ್ಮಿಕ ಜಗ್ಮಲ್ ಸಿಂಗ್ ತಮ್ಮನ್ನು ನಿಂದಿಸಿದ್ದ,’ ಎಂದು ಸಂಗ್ರೂರ್ ಜಿಲ್ಲಾ ಪೊಲೀಸ್ ಅಧಿಕಾರಿ ಸಂದೀಪ್ ಗಾರ್ಗ್ ತಿಳಿಸಿದ್ದಾರೆ. ನಾಲ್ವರು ಆರೋಪಿಗಳ ವಿರುದ್ಧ ಕೊಲೆ ಮತ್ತು ದಲಿತರ ಮೇಲಿನ ದೌರ್ಜನ್ಯ ಪ್ರಕರಣ ದಾಖಲಿಸಲಾಗಿದೆ.
ಸಾವಿಗೀಡಾದ ಜಗ್ಮಲ್ ಸಿಂಗ್ ಪೊಲೀಸರಿಗೆ ನೀಡಿರುವ ಹೇಳಿಕೆ ಪ್ರಕಾರ, ’ನ.07 ರಂದು ರಿಂಕುವಿನ ಮನೆಗೆ ತನ್ನನ್ನು ಕರೆದೊಯ್ದು ದೈಹಿಕವಾಗಿ ಹಲ್ಲೆ ಮಾಡಲಾಯಿತು. ಸುಮಾರು ಎರಡರಿಂದ ಮೂರು ಗಂಟೆಗಳ ಕಾಲ ತನ್ನನ್ನು ಕಂಬಕ್ಕೆ ಕಟ್ಟಲಾಗಿತ್ತು. ಬಿಂದರ್ ಕೈಯಲ್ಲಿ ದೊನ್ನೆ ಇತ್ತು. ರಿಂಕು ನನ್ನ ತೋಳುಗಳನ್ನು ಹಿಡಿದಿದ್ದ. ರಿಂಕುವಿನ ತಂದೆ ಅಮರ್ಜೀತ್ ಕೈಯಲ್ಲಿ ಸಣ್ಣದೊಂದು ಕಬ್ಬಿಣದ ಸಲಾಕೆಯಿತ್ತು. ಅವರು ನನ್ನನ್ನು ನಿರ್ದಯವಾಗಿ ಹೊಡೆದರು. ಆಗ ನನಗೆ ಬಾಯಾರಿಕೆಯಾಗಿ ನೀರು ಕೇಳಿದೆ. ಸ್ನಾನದ ಕೋಣೆಗೆ ಹೋದ ರಿಂಕು ತನ್ನ ಮೂತ್ರವನ್ನು ತೆಗೆದುಕೊಂಡು ಬಂದು ನನಗೆ ಬಲವಂತವಾಗಿ ಕುಡಿಸಿದ,’ ಎಂದು ದಲಿತ ಕಾರ್ಮಿಕ ತಮ್ಮ ಹೇಳಿಕೆ ದಾಖಲಿಸಿದ್ದರು.