ಸೋಮವಾರ, ಸೆಪ್ಟೆಂಬರ್ 23, 2019
28 °C
ಹಾರಾಟ ನಡೆಸಲಿರುವ ‘17ನೇ ಸ್ಕ್ವಾಡ್ರನ್‌’ನ ಪುನರುತ್ಥಾನ

ಅ. 8ರಂದು ಸೇನೆಗೆ ‘ರಫೇಲ್‌’

Published:
Updated:
Prajavani

ನವದೆಹಲಿ: ಭಾರತೀಯ ವಾಯುಪಡೆಯು ತನ್ನ 17ನೇ ಸ್ಕ್ವಾಡ್ರನ್‌ ಅನ್ನು ಪುನರುತ್ಥಾನಗೊಳಿಸಿದ್ದು, ಶೀಘ್ರದಲ್ಲೇ ಈ ಸ್ಕ್ವಾಡ್ರನ್‌ ಅತ್ಯಾಧುನಿಕ ಯುದ್ಧ ವಿಮಾನಗಳಾದ ರಫೇಲ್‌ನ ಹಾರಾಟ ನಡೆಸಲಿವೆ.

ರಫೇಲ್‌ ಯುದ್ಧ ವಿಮಾನ ತಯಾರಿಸುವ ಫ್ರಾನ್ಸ್‌ನ ಡಾಸೋ ಸಂಸ್ಥೆಯು ಬರುವ ಅಕ್ಟೋಬರ್‌ 8ರಂದು ಮೊದಲ ವಿಮಾನವನ್ನು ಭಾರತಕ್ಕೆ ಹಸ್ತಾಂತರಿಸಲಿದೆ. ಕಾಕತಾಳೀಯವೆಂದರೆ, ಅಂದು ದಸರಾ ಹಬ್ಬ ಮಾತ್ರವಲ್ಲ ಭಾರತೀಯ ವಾಯುಪಡೆಯ ಸಂಸ್ಥಾಪನಾ ದಿನವೂ ಆಗಿದೆ. ಅಂದು ಹಸ್ತಾಂತರಗೊಳ್ಳಲಿರುವ ವಿಮಾನವನ್ನು ಅಂಬಾಲಾದ ವಾಯುನೆಲೆಯಲ್ಲಿ ಇರಿಸಲಾಗುವುದು. ಆ ಕಾರಣಕ್ಕಾಗಿಯೇ ಈಚೆಗೆ ಅಲ್ಲಿ 17ನೇ ಸ್ವ್ಕಾಡ್ರನ್‌ನ ಪುನರುತ್ಥಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.

1999ರಲ್ಲಿ ಅಂದಿನ ವಿಂಗ್‌ ಕಮಾಂಡರ್‌ ಬಿ.ಎಸ್‌. ಧನೋಆ ಅವರ ನೇತೃತ್ವದಲ್ಲಿ 17ನೇ ಸ್ವ್ಕಾಡ್ರನ್‌ನ ಯೋಧರು ‘ಆಪರೇಷನ್‌ ಸಫೇದ್‌ ಸಾಗರ್‌’ ಮೂಲಕ ಕಾರ್ಗಿಲ್‌ನಲ್ಲಿ ವಾಯುದಾಳಿ ನಡೆಸಿದ್ದರು. ಧನೋಆ ಅವರು ಈಗ ವಾಯುಪಡೆಯ ಮುಖ್ಯಸ್ಥರಾಗಿದ್ದಾರೆ.

ವಾಯುಪಡೆಯ 17ನೇ ಸ್ವ್ಕಾಡ್ರನ್‌ ಹಿಂದೆ ಮಿಗ್‌–21 ಯುದ್ಧ ವಿಮಾನಗಳನ್ನು ಬಳಸುತ್ತಿತ್ತು. ಸೇನೆಯಿಂದ ಆ ವಿಮಾನಗಳನ್ನು ಕೈಬಿಟ್ಟ ನಂತರ 17ನೇ ಸ್ಕ್ವಾಡ್ರನ್‌ ಅನ್ನೂ ವಿಸರ್ಜಿಸಲಾಗಿತ್ತು.

ಅಕ್ಟೋಬರ್‌ ತಿಂಗಳಲ್ಲಿ ಫ್ರಾನ್ಸ್‌ನಲ್ಲಿ ನಡೆಯಲಿರುವ ರಫೇಲ್‌ ಹಸ್ತಾಂತರ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ. ಆದರೆ ಇದನ್ನು ಸಚಿವಾಲಯ ಖಚಿತಪಡಿಸಿಲ್ಲ.

Post Comments (+)