ಸೋಮವಾರ, ಏಪ್ರಿಲ್ 6, 2020
19 °C

ಮೋದಿಜೀ, ನಿಮ್ಮ ಅಭಿಯಾನದಲ್ಲಿ ನಾನು ಭಾಗಿಯಾಗಲಾರೆ ಎಂದ ಬಾಲಕಿ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಪ್ರಧಾನಿ ಮೋದಿ ಅವರೇ ನೀವು ಆರಂಭಿಸಿರುವ #SheInspiresUs ಅಭಿಯಾನದಲ್ಲಿ ನಾನು ಭಾಗಿಯಾಗಲಾರೆ,’ ಎಂದು ಪರಿಸರ 8 ವರ್ಷ ಪ್ರಾಯದ ಪರಿಸರ ಹೋರಾಟಗಾರ್ತಿ ಲಿಸಿಪ್ರಿಯಾ ಕಂಗುಜಮ್‌’ ಹೇಳಿದ್ದಾರೆ. 

ಇದನ್ನೂ ಓದಿ: ಪರಿಸರ ಜಾಗೃತಿ: ಬಾಲಕಿಗೆ ಪ್ರಶಸ್ತಿಯ ಗರಿ

ಈ ಕುರಿತು ಶುಕ್ರವಾರ ಟ್ವೀಟ್‌ ಮಾಡಿರುವ ಲಿಸಿಪ್ರಿಯಾ ಕಂಗುಜಮ್‌, ‘ನರೇಂದ್ರ ಮೋದಿ ಅವರೇ, ನನ್ನ ಕೂಗನ್ನು ಕೇಳಿಸಿಕೊಳ್ಳದ ಹೊರತು ನೀವು ನನ್ನ ಕೆಲಸಗಳನ್ನು ಸಂಭ್ರಮಿಸಬೇಡಿ. ನಿಮ್ಮ ಕರೆಯ ಮೇರೆಗೆ ಆರಂಭವಾದ #SheInspiresUs ಅಭಿಯಾನದಲ್ಲಿ ನನ್ನನ್ನೂ ಪರಿಗಣಿಸಿದಕ್ಕೆ ಧನ್ಯವಾದಗಳು. ತುಂಬಾ ಯೋಚಿಸಿದ ನಂತರ ನಾನು ಈ ಗೌರವವನ್ನು ನಿರಾಕರಿಸಲು ನಾನು ನಿರ್ಧರಿಸಿದ್ದೇನೆ,’ ಎಂದು ಅವರು ಟ್ವೀಟ್‌ ಮಾಡಿದ್ದಾರೆ. 

ಇದನ್ನೂ ಓದಿ: ಭೂಮಿ, ಮಕ್ಕಳ ರಕ್ಷಣೆಗೆ ಕೈ ಜೋಡಿಸಿ ಎಂದು ಮನವಿ ಮಾಡಿದ ಲಿಸಿಪ್ರಿಯಾ

ಸಾಮಾಜಿಕ ಜಾಲತಾಣವನ್ನು ತೊರೆಯುವುದಾಗಿ ಇತ್ತೀಚೆಗೆ ಟ್ವೀಟ್‌ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಮರುದಿನ ಬೆಳಗ್ಗೆ ಮತ್ತೊಂದು ಟ್ವೀಟ್‌ ಮಾಡಿದ್ದರು. ಈ ಬಾರಿಯ ಮಹಿಳಾ ದಿನಾಚರಣೆಯಂದು ತಮ್ಮ ಸಾಮಾಜಿಕ ತಾಣದ ನಿರ್ವಹಣೆಯನ್ನು ಸಾಧಕ ಮಹಿಳೆಯೊಬ್ಬರಿಗೆ ಬಿಟ್ಟುಕೊಡುವುದಾಗಿ ಹೇಳಿದ್ದರು.  ಸಾಧಕ ಮಹಿಳೆಯನ್ನು ಗುರುತಿಸಲು #SheInspiresUs ಅಭಿಯಾನ ಆರಂಭಿಸಿದ್ದ ಮೋದಿ, ಅಂಥವರ ಬಗ್ಗೆ ನಮಗೆ ಮಾಹಿತಿ ನೀಡಿ ಎಂದು ನಾಗರಿಕರಿಗೆ ಮನವಿ ಮಾಡಿದ್ದರು. 

ಇದಾದ ನಂತರ ಭಾರತ ಸರ್ಕಾರದ ಅಧಿಕೃತ ಟ್ವಿಟರ್‌ ಖಾತೆ @mygovindia #SheInspiresUs ಅಭಿಯಾನದ ಅಡಿಯಲ್ಲಿ ಹಲವು ಸಾಧಕ ಮಹಿಳೆಯರ ವಿವರವನ್ನು ಪೋಸ್ಟ್‌ ಮಾಡಿದೆ. ಈ ಪೈಕಿ ಲಿಸಿಪ್ರಿಯಾ ಕಂಗುಜಮ್‌ ಅವರೂ ಒಬ್ಬರು. ಮಾರ್ಚ್‌ 5ರಂದು ಲಿಸಿಪ್ರಿಯಾ ಕಂಗುಜಮ್‌  ಕುರಿತು ಟ್ವೀಟ್‌ ಮಾಡಿದ್ದ @mygovindia ’ ಲಿಸಿಪ್ರಿಯಾ ಎಂಬ ಮಗು ಮಣಿಪುರ ಮೂಲದ ಪರಿಸರ ಹೋರಾಟಗಾರ್ತಿ. 2019ರಲ್ಲಿ ಈಕೆಗೆ ಎಪಿಜೆ ಅಬ್ದುಲ್‌ ಕಲಾಮ್‌ ಪ್ರಶಸ್ತಿ ಸಿಕ್ಕಿದೆ. ಜಾಗತಿಕ ಮಕ್ಕಳ ಶಾಂತಿ ಪ್ರಶಸ್ತಿ ಸಿಕ್ಕಿದೆ. ಇದರ ಜೊತೆಗೆ ಭಾರತೀಯ ಶಾಂತಿ ಪ್ರಶಸ್ತಿಯೂ ಪ್ರಾಪ್ತವಾಗಿದೆ. ಈಕೆ ನಮಗೆ ಸ್ಫೂರ್ತಿಯಾಗಳೇ? ಎಂದು ಟ್ವೀಟ್‌ ಮಾಡಿತ್ತು. ‌

ಆದರೆ, ಇದಕ್ಕೆ ಆಕ್ಷೇಪವ ವ್ಯಕ್ತಪಡಿಸಿರುವ ಪರಿಸರ ಹೋರಾಟಗಾರ್ತಿ ಲಿಸಿಪ್ರಿಯಾ, ತನ್ನ ಕೂಗನ್ನು ಕೇಳಿಸಿಕೊಳ್ಳದ ಹೊರತು ಈ ಅಭಿಯಾನದಲ್ಲಿ ಭಾಗಿಯಾಗಲಾರೆ ಎಂದು ಹೇಳಿದ್ದಾರೆ. 

ಪರಿಸರ ಸಂರಕ್ಷಣೆ, ಹವಾಮಾನ ಬದಲಾವಣೆ ಕುರಿತು ಲಿಸಿಪ್ರಿಯಾ ಅವರು 2018ರಿಂದಲೂ ಹೋರಾಟಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಲಿಸಿಪ್ರಿಯಾ ಟವರ ಪರಿಸರ ಹೋರಾಟಗಳ ಹಿನ್ನೆಲೆಯಲ್ಲಿ ಅವರನ್ನು ಭಾರತದ ಗ್ರೇಟಾ ಥನ್ಬರ್ಗ್‌ ಎಂದು ಮಾಧ್ಯಮಗಳು ಬಣ್ಣಿಸಿವೆ. ಆದರೆ, ಇಂಥ ವರದಿಗಳಿಗೆ ಆಕ್ಷೇಪ ವ್ಯಕ್ತಪಡಿಸಿರುವ ಲಿಸಿಪ್ರಿಯಾ, ತನ್ನನ್ನು ಗ್ರೇಟಾಳೊಂದಿಗೆ ಹೋಲಿಸದಂತೆ ಆಗ್ರಹಿಸಿದ್ದಾರೆ. ಅಲ್ಲದೆ, ತನ್ನ ಹೋರಾಟ ಗ್ರೇಟಾಳಿಗಿಂತಲೂ ಹಳೆಯದ್ದು ಎಂದು ಹೇಳಿಕೊಂಡಿದ್ದಾರೆ. 

ಮೋದಿ ಏನೆಂದು ಟ್ವೀಟ್‌ ಮಾಡಿದ್ದರು? 

ಈ ಮಹಿಳಾ ದಿನದಂದು, ತಮ್ಮ ಬದುಕು ಮತ್ತು ಕೆಲಸದ ಮೂಲಕ ನಮ್ಮ ಬದುಕಿಗೆ ಸ್ಫೂರ್ತಿ ನೀಡುವ ಮಹಿಳೆಯರಿಗೆ ನನ್ನ ಸಾಮಾಜಿಕ ಜಾಲತಾಣಗಳನ್ನು ಬಿಟ್ಟುಕೊಡುತ್ತೇನೆ. ಲಕ್ಷಾಂತರ ಮಂದಿಯಲ್ಲಿ ಸ್ಫೂರ್ತಿಯ ಕಿಡಿಹೊತ್ತಿಸಲು ಇದು ನೆರವಾಗುತ್ತದೆ. ನೀವು ಅಂತಹ ಮಹಿಳೆಯಾ ಅಥವಾ ನಿಮಗೆ ಅಂತಹ ಮಹಿಳೆಯ ಬಗ್ಗೆ ಗೊತ್ತಿದೆಯಾ? ಅಂತಹ ಕಥೆಗಳನ್ನು #SheInspiresUs ಹ್ಯಾಷ್‌ಟ್ಯಾಗ್‌ನಲ್ಲಿ ಹಂಚಿಕೊಳ್ಳಿ’ ಎಂದು ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು