ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್ ದೌರ್ಜನ್ಯದಿಂದ ತಂದೆ–ಮಗನ ಸಾವು: ರಜನಿಕಾಂತ್ ಆಕ್ರೋಶ

Last Updated 1 ಜುಲೈ 2020, 9:40 IST
ಅಕ್ಷರ ಗಾತ್ರ

ಚೆನ್ನೈ: ತಮಿಳುನಾಡಿನಲ್ಲಿ ಪೊಲೀಸರ ದೌರ್ಜನ್ಯದಿಂದ ನಡೆದಿದೆ ಎನ್ನಲಾದ ತಂದೆ, ಮಗನ ಸಾವಿನ ಪ್ರಕರಣವನ್ನು ‘ಕ್ರೂರ ಹತ್ಯೆ’ ಎಂದು ನಟ ರಜನಿಕಾಂತ್‌ ಬಣ್ಣಿಸಿದ್ದಾರೆ. ಅಲ್ಲದೆ, ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶರ ಮುಂದೆ ಪೊಲೀಸರು ಪ್ರದರ್ಶಿಸಿದ ದುರ್ವರ್ತನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘#ಸತ್ಯಮಾ ವಿಡಮೇ ಕೂಡಾದ್’ ಎಂಬ ಹ್ಯಾಷ್‌ಟ್ಯಾಗ್‌ ಮೂಲಕ ತಮಿಳು ಭಾಷೆಯಲ್ಲಿ ಅವರು ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾನು ಸಿಟ್ಟಿನಿಂದ ಕುಳಿತಿರುವ ಚಿತ್ರವನ್ನೂ ಟ್ಯಾಗ್‌ ಮಾಡಿದ್ದಾರೆ. ಸ್ವಲ್ಪ ಸಮಯದಲ್ಲೇ ಈ ಟ್ವೀಟ್‌ ಟ್ರೆಂಡಿಂಗ್‌ ಆಗಿ ಹಲವು ಬಾರಿ ಮರುಟ್ವೀಟ್‌ ಆಗಿದೆ.

‘ತಂದೆ–ಮಗನನ್ನು ಹಿಂಸಿಸಿ ಕ್ರೂರವಾಗಿ ಹತ್ಯೆ ಮಾಡಿರುವುದನ್ನು ಮಾನವ ಸಮುದಾಯವೇ ಖಂಡಿಸುತ್ತಿರುವಾಗಲೂ ಕೆಲವು ಪೊಲೀಸರು, ನ್ಯಾಯಾಧೀಶರ ಮುಂದೆ ನಡೆದುಕೊಂಡ ಮತ್ತು ಮಾತನಾಡಿದ ರೀತಿ ಅಚ್ಚರಿ ಮೂಡಿಸಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರಿಗೂ ಸರಿಯಾದ ಶಿಕ್ಷೆ ನೀಡಬೇಕು. ಇದನ್ನು ಹೀಗೆಯೇ ಬಿಡಬಾರದು’ ಎಂದು ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.

ಲಾಕ್‌ಡೌನ್‌ ನಿಯಮವನ್ನು ಮೀರಿ ತಮ್ಮ ಅಂಗಡಿಯನ್ನು ತೆರೆದು ಇಟ್ಟಿದ್ದ ಕಾರಣಕ್ಕೆ ಪಿ. ಜಯರಾಜ್‌ ಹಾಗೂ ಅವರ ಪುತ್ರ ಬೆನಿಕ್ಸ್‌ ಎಂಬುವರನ್ನು ಪೊಲೀಸರು ಬಂಧಿಸಿದ್ದರು. ಜೂನ್‌ 23ರಂದು ಅವರಿಬ್ಬರೂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಪೊಲೀಸರ ದೌರ್ಜನ್ಯದಿಂದಾಗಿ ಇವರು ಸತ್ತಿದ್ದಾರೆ ಎಂದು ಮೃತರ ಸಂಬಂಧಿಕರು ಆರೋಪಿಸಿದ್ದರು. ಈ ಘಟನೆ ದೇಶದಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು.

ಆರಂಭದಲ್ಲಿ ಈ ಪ್ರಕರಣದ ವಿಚಾರಣೆ ನಡೆಸಿದ್ದ ಜಿಲ್ಲಾ ನ್ಯಾಯಾಧೀಶರು, ‘ಸಾತಂಕುಳಂ ಠಾಣೆಯ ಪೊಲೀಸರು ವಿಚಾರಣೆಗೆ ಸಹಕಾರ ನೀಡಲಿಲ್ಲ. ಒಬ್ಬ ಕಾನ್‌ಸ್ಟೆಬಲ್‌ ನನ್ನ ವಿರುದ್ಧ ಅವಮಾನಕಾರಿ ಹೇಳಿಕೆ ನೀಡಿದ್ದರೆ ಇನ್ನೊಬ್ಬ, ದೇಹಭಾಷೆಯ ಮೂಲಕವೇ ಬೆದರಿಕೆ ಹಾಕಿದ್ದ’ ಎಂದು ಮದ್ರಾಸ್‌‌ ಹೈಕೋರ್ಟ್‌ನ ನ್ಯಾಯಮೂರ್ತಿಗೆ ತಿಳಿಸಿದ್ದರು.

ತಮಿಳುನಾಡು ಸರ್ಕಾರವು ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT