ಸೋಮವಾರ, ಸೆಪ್ಟೆಂಬರ್ 16, 2019
27 °C
ತನಿಖೆಗೆ ಆದೇಶಿಸಿದ ಪಂಜಾಬ್ ಮುಖ್ಯಮಂತ್ರಿ

ಪಂಜಾಬ್‌: ಪಟಾಕಿ ಕಾರ್ಖಾನೆ ಸ್ಫೋಟ -23 ಮಂದಿ ಸಾವು

Published:
Updated:
Prajavani

ಬಟಾಲಾ(ಪಿಟಿಐ/ಎಎಫ್‌ಪಿ): ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ 23 ಮಂದಿ ಸಾವಿಗೀಡಾಗಿರುವ ಘಟನೆ ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ಬಟಾಲಾದಲ್ಲಿ ಬುಧವಾರ ನಡೆದಿದೆ.

ಸ್ಫೋಟ ಸಂಭವಿಸಿದ ಜಾಗದಲ್ಲಿ ಇನ್ನೂ ಹಲವು ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಾಳುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಕಾರ್ಯಾಚರಣೆ ಭರದಿಂದ ಸಾಗಿದೆ. 

‘ವಸತಿ ಪ್ರದೇಶದ ಬಳಿಯೇ ಇದ್ದ ಕಾರ್ಖಾನೆಯಲ್ಲಿ ಸಂಜೆ 4 ಗಂಟೆಗೆ ಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ 27 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. 23 ಮೃತದೇಹಗಳನ್ನು ಕಾರ್ಖಾನೆಯಿಂದ ಹೊರಗೆ ತೆಗೆಯಲಾಗಿದೆ’ ಎಂದು ಇನ್‌ಸ್ಪೆಕ್ಟರ್‌ ಜನರಲ್‌ ಪರ್ಮಾರ್‌ ತಿಳಿಸಿದ್ದಾರೆ. 

‘ಸ್ಫೋಟದ ತೀವ್ರತೆಯಿಂದಾಗಿ ಹತ್ತಿರದ ಇತರ ಕಟ್ಟಡಗಳಿಗೆ ಮತ್ತು ವಾಹನಗಳಿಗೆ ಹಾನಿಯಾಗಿದೆ. ಸ್ಫೋಟ ಸಂಭವಿಸಿದ ವೇಳೆ ಕಾರ್ಖಾನೆಯಲ್ಲಿ ಎಷ್ಟು ಮಂದಿ ಇದ್ದರು ಎನ್ನುವುದು ಖಚಿತವಾಗಿಲ್ಲ. ಘಟನೆಗೆ ಖಚಿತವಾದ ಕಾರಣವೂ ತಿಳಿದು ಬಂದಿಲ್ಲ’ ಎಂದಿದ್ದಾರೆ.

‘ಇದೇ ಕಾರ್ಖಾನೆಯಲ್ಲಿ 2017ರಲ್ಲೂ ಸ್ಫೋಟ ಸಂಭವಿಸಿತ್ತು. ಕಾರ್ಖಾನೆ ಮುಚ್ಚುವಂತೆ ಈ ಹಿಂದೆ ಜಿಲ್ಲಾಡಳಿತಕ್ಕೆ ಹಲವು ಬಾರಿ ದೂರು ಸಲ್ಲಿಕೆಯಾಗಿದೆ’ ಎಂದು ಸ್ಥಳೀಯರು ತಿಳಿಸಿದ್ದಾರೆ.

Post Comments (+)