ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಪ್ರದೇಶ ಅಭಿವೃದ್ಧಿ ಕಾರ್ಯ | ಯೋಗಿಗೆ ಸಿ.ಎಂ ಹುದ್ದೆ: ಅಮಿತ್‌ ಶಾ ಸಮರ್ಥನೆ

Last Updated 28 ಜುಲೈ 2019, 20:02 IST
ಅಕ್ಷರ ಗಾತ್ರ

ಲಖನೌ: ಉತ್ತರಪ್ರದೇಶದಲ್ಲಿ ಜಾರಿಯಾಗಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಕೇಂದ್ರದ ಗೃಹ ಸಚಿವ ಅಮಿತ್‌ ಶಾ ಅವರು, ‘ಯೋಗಿ ಆದಿತ್ಯನಾಥ ಅವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದ ನಮ್ಮ ತೀರ್ಮಾನ ಸರಿಯಾಗಿದೆ ಎಂಬುದು ಈಗ ಸಾಬೀತಾಗಿದೆ’ ಎಂದರು.

ರಾಜ್ಯದಲ್ಲಿ ₹65,000 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಭಾನುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ‘ಯೋಗಿ ಅವರಿಗೆ ಒಂದು ನಗರಸಭೆಯನ್ನು ಮುನ್ನಡೆಸಿದ ಅನುಭವವೂ ಇಲ್ಲ. ಹೀಗಿರುವಾಗ ಇಷ್ಟು ದೊಡ್ಡ ರಾಜ್ಯದ ಜವಾಬ್ದಾರಿಯನ್ನು ಅವರಿಗೆ ನೀಡುವುದು ಎಷ್ಟು ಸರಿ ಎಂದು ಅನೇಕರು ನಮ್ಮನ್ನು ಪ್ರಶ್ನಿಸಿದ್ದರು. ಕಳೆದ ಒಂದು ವರ್ಷದಲ್ಲಿ ಉತ್ತರಪ್ರದೇಶದಲ್ಲಿ ಹೂಡಿಕೆಯ ಪ್ರಮಾಣ ಹೆಚ್ಚಾಗಿದೆ. ಈ ರಾಜ್ಯವು ನನ್ನಲ್ಲಿ ಅಚ್ಚರಿ ಮೂಡಿಸಿದೆ. ಆದಿತ್ಯನಾಥ ಅವರನ್ನು ಮುಖ್ಯಮಂತ್ರಿಯಾಗಿಸಿದ ನಮ್ಮ ನಿರ್ಧಾರ ಸರಿಯಾಗಿದೆ ಎಂದು ಈಗ ನಾವು ಧೈರ್ಯವಾಗಿ ಹೇಳಬಹುದಾಗಿದೆ’ ಎಂದರು.

ಸೋನ್‌ಭದ್ರ ಜಿಲ್ಲೆಯಲ್ಲಿ ಬುಡಕಟ್ಟು ಜನರ ಮೇಲೆ ನಡೆದ ದಾಳಿ ಮತ್ತು ಹತ್ತು ಜನರ ಹತ್ಯೆಗೆ ಸಂಬಂಧಿಸಿದಂತೆ ವಿರೋಧಪಕ್ಷಗಳೆಲ್ಲ ಮುಖ್ಯಮಂತ್ರಿ ವಿರುದ್ಧ ಮುಗಿಬಿದ್ದಿರುವ ಸಂದರ್ಭದಲ್ಲೇ ಶಾ ಅವರು ಮುಖ್ಯಮಂತ್ರಿಯ ಪರವಾಗಿ ಈ ಮಾತುಗಳನ್ನಾಡಿದ್ದಾರೆ.

ಭಾರತವನ್ನು ₹ 350 ಲಕ್ಷ ಕೋಟಿಯ ಆರ್ಥಿಕತೆಯಾಗಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರು ಇಟ್ಟಿರುವ ಹೆಜ್ಜೆಗಳನ್ನು ನೆನಪಿಸಿದ ಶಾ, ‘ಮುಂದಿನ ಐದು ವರ್ಷಗಳಲ್ಲಿ ಭಾರತವು ವಿಶ್ವದ ಮೂರನೇ ಅತಿ ದೊಡ್ಡ ಅರ್ಥವ್ಯವಸ್ಥೆ ಎನಿಸಲಿದೆ’ ಎಂದರು.

ಮುಖ್ಯಮಂತ್ರಿ ಆದಿತ್ಯನಾಥ ಅವರು ಮಾತನಾಡಿ, ‘ರಾಜ್ಯದ ಬಗ್ಗೆ ಇದ್ದ ನಕಾರಾತ್ಮಕ ಗ್ರಹಿಕೆಗಳನ್ನು ದೂರ ಮಾಡುವಲ್ಲಿ ನಮ್ಮ ಸರ್ಕಾರ ಯಶಸ್ವಿಯಾಗಿದೆ. ಈಗ ರಾಜ್ಯದಲ್ಲಿ ಹೂಡಿಕೆಗೆ ಉತ್ತಮ ಅವಕಾಶಗಳಿರುವುದನ್ನು ಗಮನಿಸಿ ಉದ್ಯಮಿಗಳು ರಾಜ್ಯಕ್ಕೆ ಬರುತ್ತಿದ್ದಾರೆ’ ಎಂದು ಹೇಳಿದರು.

ದೇಶದ ಅನೇಕ ಉದ್ಯಮಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದು, ರಾಜ್ಯದ ಬೇರೆಬೇರೆ ಕಡೆಗಳಲ್ಲಿ ಹೂಡಿಕೆಯ ಭರವಸೆಗಳನ್ನು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT