ಮೋದಿ ಸೋಲಿಸುವುದು ಭ್ರಮೆ: ಅಮಿತ್‌ ಶಾ

7
ಮಹಾಘಟಬಂಧನ್‌ ಪ್ರಧಾನಿ ಆಕಾಂಕ್ಷಿಗಳ ಹಿಂಡು

ಮೋದಿ ಸೋಲಿಸುವುದು ಭ್ರಮೆ: ಅಮಿತ್‌ ಶಾ

Published:
Updated:
Prajavani

ಮಾಲ್ಡಾ/ಪಶ್ಚಿಮ ಬಂಗಾಳ: ವೇದಿಕೆಯಲ್ಲಿ ಪರಸ್ಪರ ಕೈಜೋಡಿಸಲು ಹಿಂಜರಿಯುವ ಮಹಾಘಟಬಂಧನ್‌ (ಮಹಾಮೈತ್ರಿ) ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಲಿಸುವ ಹಗಲುಗನಸು ಕಾಣುತ್ತಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಲೇವಡಿ ಮಾಡಿದ್ದಾರೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್‌ ನಾಯಕಿ ಮಮತಾ ಬ್ಯಾನರ್ಜಿ ಅವರು ವೇದಿಕೆಯಲ್ಲಿ 20–25 ನಾಯಕರನ್ನು ಸೇರಿಸಿದಾಕ್ಷಣ ಮೋದಿ ಅವರನ್ನು ಪ್ರಧಾನಿಯಾಗದಂತೆ ತಡೆಯಬಹುದು ಎಂಬ ಭ್ರಮೆಯಲ್ಲಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.

ನೂರು ಕೋಟಿ ಭಾರತೀಯರು ಮೋದಿ ಅವರ ಬೆನ್ನಿಗೆ ಇರುವಾಗ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗದಂತೆ ತಡೆಯುವುದು ಮಹಾಘಟಬಂಧನ್‌ ನಾಯಕರಿಂದ ಸಾಧ್ಯವಿಲ್ಲ ಎಂದು ಶಾ ಸವಾಲು ಹಾಕಿದರು.

ಮಾಲ್ಡಾದ ಹಬೀಬ್‌ಪುರದಲ್ಲಿ ಮಂಗಳವಾರ ಬಿಜೆಪಿ ಆಯೋಜಿಸಿದ್ದ ‘ಬಂಗಾಳ ರಕ್ಷಿಸಿ, ಪ್ರಜಾತಂತ್ರ ಉಳಿಸಿ’ ಯಾತ್ರೆಯಲ್ಲಿ ಅವರು ಮಾತನಾಡಿದರು.

ಮಮತಾ ಬ್ಯಾನರ್ಜಿ ಕೋಲ್ಕತ್ತದಲ್ಲಿ ಈಚೆಗೆ ಆಯೋಜಿಸಿದ್ದ ರ‍್ಯಾಲಿಯಲ್ಲಿ ಭಾಗವಹಿಸಿದ್ದ ಮಹಾಘಟಬಂಧನ್‌ ನಾಯಕರಲ್ಲಿ 9 ಮಂದಿ ಪ್ರಧಾನಿ ಹುದ್ದೆಯ ಆಕಾಂಕ್ಷಿಗಳು ಎಂದು ಅವರು ವ್ಯಂಗ್ಯವಾಡಿದರು. ಆದರೆ, ಯಾರೊಬ್ಬರ ಹೆಸರನ್ನು ಹೇಳಲಿಲ್ಲ.

ಬಿಜೆಪಿ ವಿರುದ್ಧ ವಿರೋಧ ಪಕ್ಷಗಳು ರಚಿಸಿಕೊಂಡಿರುವ ಮಹಾಘಟಬಂಧನ್‌ ‘ಅಧಿಕಾರಲಾಲಸೆ ಮತ್ತು ವೈಯಕ್ತಿಕ ಹಿತಾಸಕ್ತಿಗಳ ಕೂಟ’ ಎಂದು ಬಣ್ಣಿಸಿದರು.

ಮತ್ತೆ ಜ್ವರ: ದೆಹಲಿಗೆ ವಾಪಸ್‌

ಎಚ್‌1ಎನ್‌1ನಿಂದ ಗುಣಮುಖರಾಗಿದ್ದ ಅಮಿತ್‌ ಶಾ ಅವರಿಗೆ ಮತ್ತೆ ಜ್ವರ ಕಾಣಿಸಿಕೊಂಡಿದೆ. ವೈದ್ಯರ ಸಲಹೆ ಮೇರೆಗೆ ಅವರು ದೆಹಲಿಗೆ ಮರಳಿದ್ದಾರೆ ಝಾರ್‌ಗ್ರಾಮದಲ್ಲಿ ಬುಧವಾರ ರ‍್ಯಾಲಿಯಲ್ಲಿ ಪಾಲ್ಗೊಳ್ಳುವುದು ಅನುಮಾನ.

ಹೆಲಿಕಾಪ್ಟರ್‌ ವಿವಾದ

ಸುರಕ್ಷತೆ ದೃಷ್ಟಿಯಿಂದ ಮಾಲ್ಡಾದಲ್ಲಿ ಶಾ ಹೆಲಿಕಾಪ್ಟರ್‌ ಇಳಿಯಲು ಜಿಲ್ಲಾಡಳಿತ ಅನುಮತಿ ನಿರಾಕರಿಸಿತ್ತು. ಇದು ಬಿಜೆಪಿ ಮತ್ತು ಟಿಎಂಸಿ ವಾಕ್ಸಮರಕ್ಕೆ ಕಾರಣವಾಯಿತು.

ಹೆಲಿಪ್ಯಾಡ್‌ ದುರಸ್ತಿ ನಡೆಯುತ್ತಿರುವ ಕಾರಣ ಸುರಕ್ಷತೆ ದೃಷ್ಟಿಯಿಂದ ಅನುಮತಿ ನೀಡುವುದಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿತ್ತು. ಹೆಲಿಪ್ಯಾಡ್‌ ಸರಿಯಾಗಿದೆ. ಕೆಲವು ದಿನಗಳ ಹಿಂದೆ ಮಮತಾ ಬ್ಯಾನರ್ಜಿ ಹೆಲಿಕಾಪ್ಟರ್‌ ಇದೇ ಹೆಲಿಪ್ಯಾಡ್‌ನಲ್ಲಿ ಇಳಿದಿತ್ತು ಎಂದು ಬಿಜೆಪಿ ಹೇಳಿದೆ.

ಪ್ರಜಾತಂತ್ರದಲ್ಲಿ ನಂಬಿಕೆ ಇಟ್ಟಿರುವ ಸರ್ಕಾರ ಶಾ ಅವರ ರ‍್ಯಾಲಿ ಮತ್ತು ಹೆಲಿಪ್ಯಾಡ್‌ ಬಳಸಲು ಅನುಮತಿ ನೀಡಿದೆ. ಆದರೆ, ಪ್ರತಿಯೊಂದರಲ್ಲೂ ವಿವಾದ ಸೃಷ್ಟಿಸಲು ಹವಣಿಸುವ ಬಿಜೆಪಿ ಜನರ ದಾರಿ ತಪ್ಪಿಸುತ್ತಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಪಷ್ಟಪಡಿಸಿದ್ದಾರೆ.

***

ನಾವು ಬಡತನ ಮತ್ತು ಭ್ರಷ್ಟಾಚಾರ ನಿರ್ಮೂಲನೆಗೆ ಮುಂದಾದರೆ, ಮಹಾಘಟಬಂಧನ್‌ ನಾಯಕರು ಪ್ರಧಾನಿ ಮೋದಿ ಅವರನ್ನು ತೆಗೆಯಲು ಹೊರಟಿದ್ದಾರೆ

-ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 1

  Frustrated
 • 5

  Angry

Comments:

0 comments

Write the first review for this !