ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಧಕ್ಕೂ ಹೆಚ್ಚು ಪಕ್ಷಾಂತರಿಗಳಿಗೆ ಸೋಲು

Last Updated 14 ನವೆಂಬರ್ 2019, 2:10 IST
ಅಕ್ಷರ ಗಾತ್ರ

ಬೆಂಗಳೂರು: ಈಚೆಗೆ ಅಧಿಕಾರಕ್ಕಾಗಿ ಪಕ್ಷಾಂತರ ಮಾಡಿದ ರಾಜಕೀಯ ನಾಯಕರು ಉಪಚುನಾವಣೆಯಲ್ಲಿ ಸೋತ ಉದಾಹರಣೆಯೇ ಹೆಚ್ಚು. 2019ರಲ್ಲಿ ನಡೆದ ಹಲವು ರಾಜ್ಯಗಳ ವಿಧಾನಸಭಾ ಚುನಾವಣೆ ಮತ್ತು ಉಪ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಪಕ್ಷಾಂತರಿಗಳಲ್ಲಿ ಅರ್ಧಕ್ಕೂ ಹೆಚ್ಚು ಜನರು ಸೋತಿದ್ದಾರೆ.

ಹೀಗೆ ಪಕ್ಷ ಬದಲಿಸಿದವರಲ್ಲಿ ಬಹುತೇಕ ನಾಯಕರು ಕಾಂಗ್ರೆಸ್‌ ಇಲ್ಲವೇ, ಆಯಾ ರಾಜ್ಯಗಳ ಪ್ರಾದೇಶಿಕ ಪಕ್ಷದವರಾಗಿದ್ದರು. ಇವರಲ್ಲಿ ಬಹುತೇಕರು ತಮ್ಮ ಪಕ್ಷ ಬಿಟ್ಟು ಬಿಜೆಪಿ ಸೇರಿದ್ದರು. ಕೆಲವರಷ್ಟೇ ಬಿಜೆಪಿ ತೊರೆದು, ಕಾಂಗ್ರೆಸ್‌ ಸೇರಿದ್ದರು.

ದೇಶದ ಪ್ರತಿ ರಾಜಕೀಯ ಪಕ್ಷಗಳೂ ತನ್ನದೇ ಆದ ರಾಜಕೀಯ ಸಿದ್ಧಾಂತವನ್ನು ಹೊಂದಿದೆ. ಆಯಾ ಪಕ್ಷದಿಂದ ವಿಧಾನಸಭೆ–ಲೋಕಸಭೆಗೆ ಆಯ್ಕೆಯಾಗಿ, ಬೇರೊಂದು ಪಕ್ಷ ಸೇರುವುದು ರಾಜಕೀಯ ಸಿದ್ಧಾಂತಕ್ಕೆ ಬಗೆದ ದ್ರೋಹವಾಗುತ್ತದೆ. ಪಕ್ಷಗಳ ಸಿದ್ದಾಂತವನ್ನು ನೋಡಿಯೇ ಜನರು ತಮ್ಮ ಪ್ರತಿನಿಧಿಯನ್ನು ಚುನಾಯಿಸಿರುತ್ತಾರೆ. ಅದನ್ನು ಕಡೆಗಣಿಸಿ ಬೇರೆ ಪಕ್ಷ ಸೇರುವುದು ಸರಿಯಲ್ಲ ಎಂದು ವಿಶ್ಲೇಷಿಸಲಾಗಿದೆ.

ಪಕ್ಷಾಂತರಿ ನಾಯಕರು ಚುನಾವಣೆ–ಉಪಚುನಾವಣೆಗಳಲ್ಲಿ ಸೋತರೂ, ಅವರನ್ನು ಸೇರಿಸಿಕೊಂಡ ಪಕ್ಷಕ್ಕೆ ಲಾಭವೇ ಆಗಿದೆ. ಆದರೆ, ಪಕ್ಷಾಂತರಿಗಳು ಶಾಸಕ ಸ್ಥಾನವನ್ನೂ ಕಳೆದುಕೊಂಡಿದ್ದಾರೆ. ಹೀಗಾಗಿ ಇದನ್ನು, ‘ಪಕ್ಷಾಂತರಿಗಳಿಗೆ ಜನರು ಕಲಿಸಿದ ಪಾಠ’ ಎಂದೇ ಹೇಳಲಾಗುತ್ತಿದೆ.

ಅಧಿಕಾರಕ್ಕಾಗಿ ಪಕ್ಷಾಂತರ ಮಾಡುವುದನ್ನು ಜನರು ಸಹಿಸುವುದಿಲ್ಲ ಎಂಬುದನ್ನು ಮತದಾರರು ಈ ಚುನಾವಣೆಗಳಲ್ಲಿ ಸಾಬೀತು ಮಾಡಿದ್ದಾರೆ. ಗುಜರಾತ್‌ನಲ್ಲಿ ಅಲ್ಪೆಶ್ ಠಾಕೂರ್ ಮತ್ತು ಧವಳಸಿಂಹ ಜಾಲಾ ಹಾಗೂ ಮಹಾರಾಷ್ಟ್ರದ ಉದಯನ್‌ರಾಜೇ ಬೋಸ್ಲೆ ಅವರ ರಾಜಕೀಯ ಜೀವನದಲ್ಲಿ ಆಗಿದ್ದೂ ಇದೆ. ‘ನಮ್ಮ ಸಮುದಾಯದ ಜನರು ಮತ್ತು ನಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿ ಸೇರುತ್ತಿದ್ದೇವೆ’ ಎಂದಿದ್ದ,ಈ ಮೂವರು ನಾಯಕರೂ ಈಗ ಯಾವುದೇ ಅಧಿಕಾರವಿಲ್ಲದೇ ಕುಳಿತಿದ್ದಾರೆ.

*
ಬಿಜೆಪಿ ಸೇರಿದ್ದ ಪಾಂಡಾ
2019ರ ಲೋಕಸಭಾ ಚುನಾವಣೆಯಲ್ಲಿ ಒಡಿಶಾದ ಕೇಂದ್ರಪಾಡಾ ಕ್ಷೇತ್ರದಲ್ಲಿಬಿಜೆಪಿಯಿಂದ ಸ್ಪರ್ಧೆಗೆ ಇಳಿದಿದ್ದ ವೈಜಯಂತ್‌ ಜಯ್ ಪಾಂಡಾ ಸೋತಿದ್ದರು. ಬಿಜು ಜನತಾ ದಳ (ಬಿಜೆಡಿ) ಸ್ಥಾಪನೆಯಾದ ದಿನದಿಂದಲೂ ಪಕ್ಷದಲ್ಲಿದ್ದ ಅವರು, ಚುನಾವಣೆಗೂ ಕೆಲವು ತಿಂಗಳು ಮುನ್ನ ಬಿಜೆಪಿ ಸೇರಿದ್ದರು. ಬಿಜೆಪಿಯು ಪಾಂಡಾ ಅವರಿಗೆ, ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷನ ಹುದ್ದೆ ನೀಡಿತ್ತು.

‘ಬಿಜೆಡಿಯ 20 ವರ್ಷಗಳ ಆಡಳಿತ ರಾಜ್ಯವನ್ನು ಅಧೋಗತಿಗೆ ತಂದಿದೆ. ರಾಜ್ಯ ಅಭಿವೃದ್ಧಿಪಡಿಸುವುದು ಬಿಜೆಪಿಯಿಂದ ಮಾತ್ರ ಸಾಧ್ಯ. ಹೀಗಾಗಿ ಬಿಜೆಪಿ ಸೇರುತ್ತಿದ್ದೇನೆ’ ಎಂದು ಅವರು ಹೇಳಿದ್ದರು. ಚುನಾವಣಾ ಪ್ರಚಾರದಲ್ಲೂ ಇದೇ ಮಾತು ಹೇಳುತ್ತಿದ್ದರು. ಆದರೆ ಚುನಾವಣೆಯಲ್ಲಿ ಅವರು, ಬಿಜೆಡಿ ಅಭ್ಯರ್ಥಿ ಎದುರು 1.52 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಸೋತಿದ್ದರು.

*


ಕಾಂಗ್ರೆಸ್‌ನಲ್ಲಿ ಗೆದ್ದು, ಬಿಜೆಪಿ ಸೇರಿದ್ದರು...
ಗುಜರಾತ್‌ನ ಆರು ವಿಧಾನಸಭಾ ಕ್ಷೇತ್ರಗಳಿಗೆ 2019ರ ಅಕ್ಟೋಬರ್‌ನಲ್ಲಿ ಉಪಚುನಾವಣೆ ನಡೆದಿತ್ತು. ಕಾಂಗ್ರೆಸ್‌ನಿಂದ ಬಿಜೆಪಿಗೆ ಹೋಗಿದ್ದ ಅಲ್ಪೆಶ್‌ ಠಾಕೂರ್ ಮತ್ತು ಧವಳಸಿಂಹ ಜಾಲಾ ಈ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಬಿಜೆಪಿ ಟಿಕೆಟ್‌ನಿಂದ ಕಣಕ್ಕೆ ಇಳಿದಿದ್ದ ಈ ಇಬ್ಬರು ಪಕ್ಷಾಂತರಿಗಳೂ, ಕಾಂಗ್ರೆಸ್‌ನ ಅಭ್ಯರ್ಥಿಗಳ ಎದುರು ಸೋತಿದ್ದರು.

ಇದನ್ನು, ‘ಪಕ್ಷಾಂತರಿಗಳಿಗೆ ಮತದಾರರು ಪಾಠ ಕಲಿಸಿದ್ದಾರೆ’ ಎಂದು ಕಾಂಗ್ರೆಸ್‌ ಬಣ್ಣಿಸಿತ್ತು. ಈ ಇಬ್ಬರು ನಾಯಕರೂ ಕಾಂಗ್ರೆಸ್‌ನಿಂದ ರಾಜಕೀಯ ಜೀವನ ಆರಂಭಿಸಿದ್ದರು. ಗುಜರಾತ್‌ನಲ್ಲಿ ಆಡಳಿತದಲ್ಲಿದ್ದ ಬಿಜೆಪಿ ವಿರುದ್ಧ ಹೋರಾಡುವ ಮೂಲಕ ರಾಜಕೀಯಕ್ಕೆ ಬಂದಿದ್ದರು. ಇವರ ಹೋರಾಟಕ್ಕೆ ಕಾಂಗ್ರೆಸ್‌ ಬೆಂಬಲ ನೀಡಿತ್ತು. 2017ರ ವಿಧಾನಸಭಾ ಚುನಾವಣೆಯಲ್ಲಿ ಇಬ್ಬರಿಗೂ ಟಿಕೆಟ್ ನೀಡಿತ್ತು. ಇಬ್ಬರೂ ಜಯಗಳಿಸಿದ್ದರು. ನಂತರದ ದಿನಗಳಲ್ಲಿ, ‘ಕಾಂಗ್ರೆಸ್‌ ಜತೆ ಹೊಂದಾಣಿಕೆ ಸಾಧ್ಯವಾಗುತ್ತಿಲ್ಲ’ ಎಂದು ಹೇಳಿ ಬಿಜೆಪಿ ಸೇರಿದ್ದರು.

**


ಮಹಾರಾಷ್ಟ್ರದಲ್ಲೂ ಸೋಲಿನ ರುಚಿ
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೂ ಮುನ್ನ ಎನ್‌ಸಿಪಿ ಮತ್ತು ಕಾಂಗ್ರೆಸ್‌ನ 23 ನಾಯಕರು ಬಿಜೆಪಿ ಸೇರಿದ್ದರು. ಸಾತಾರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಎನ್‌ಸಿಪಿ ಸಂಸದ ಉದಯನ್‌ರಾಜೇ ಬೋಸ್ಲೆ ಸಹ ಇದರಲ್ಲಿ ಒಬ್ಬರು.

ಬಿಜೆಪಿ ಸೇರಿದವರಲ್ಲಿ 22 ಜನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಇವರಲ್ಲಿ 10 ಜನ ಸೋತಿದ್ದರು.

ಸಾತಾರಾ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಉದಯನ್‌ರಾಜೇ ಅವರು, ಎನ್‌ಸಿಪಿಯ ಶ್ರೀನಿವಾಸ ಪಾಟಿಲ್ ವಿರುದ್ಧ ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಸೋತರು.

‘ಪಕ್ಷಾಂತರ ಮಾಡುವುದು ತಮಗೆ ಮಾಡಿದ ದ್ರೋಹ ಎಂಬುದು ಮತದಾರರಿಗೆ ಗೊತ್ತಾಗಿದೆ. ಚುನಾವಣೆಯಲ್ಲಿ ಸೋಲಿಸುವ ಮೂಲಕ, ಪಕ್ಷಾಂತರಿಗಳಿಗೆ ಮತದಾರರು ಪಾಠ ಕಲಿಸಿದ್ದಾರೆ’ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್ ಹೇಳಿದ್ದರು.

‘ಶತ್ರು’ವಿನ ಪರಾಜಯ
ಬಿಜೆಪಿ ಸಂಸದರಾಗಿದ್ದ ನಟ–ರಾಜಕಾರಣಿ ಶತ್ರುಘ್ನ ಸಿನ್ಹಾ ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಿಗ್ಗಾಮುಗ್ಗಾ ಟೀಕಿಸುತ್ತಿದ್ದರು. ಸಿನ್ಹಾ ಪ್ರತಿನಿಧಿಸುತ್ತಿದ್ದ ಬಿಹಾರದ ಪಟ್ನಾ ಸಾಹಿಬ್ ಕ್ಷೇತ್ರದಿಂದ2019ರ ಚುನಾವಣೆಯಲ್ಲಿ ಬಿಜೆಪಿಯು ರವಿಶಂಕರ್ ಪ್ರಸಾದ್ ಅವರನ್ನು ಕಣಕ್ಕೆ ಇಳಿಸಿತ್ತು. ಸಿನ್ಹಾ ಅವರು ಕಾಂಗ್ರೆಸ್‌ ಸೇರಿ, ಕಣಕ್ಕೆ ಇಳಿದಿದ್ದರು. ಆದರೆ, ಲೋಕಸಭಾ ಚುನಾವಣೆಯಲ್ಲಿ ಅವರು ಸೋಲು ಕಂಡಿದ್ದರು. ಇದಕ್ಕೂ ಮುನ್ನ 2009 ಮತ್ತು 2014ರಲ್ಲಿ ಸಿನ್ಹಾ ಅವರು ಇದೇ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೆಲವು ದಾಖಲಿಸಿದ್ದರು.

*
ಹರಿಯಾಣ
ಹರಿಯಾಣದಲ್ಲೂ ಅರ್ಧದಷ್ಟು ಪಕ್ಷಾಂತರಿಗಳು ಸೋಲು ಕಂಡಿದ್ದಾರೆ. ವಿಧಾನಸಭಾ ಚುನಾವಣೆಗೂ ಮುನ್ನ ರಾಜ್ಯ ಕಾಂಗ್ರೆಸ್‌ನ 9 ನಾಯಕರು ಬಿಜೆಪಿ ಮತ್ತು ಜೆಜೆಪಿ ಸೇರಿದ್ದರು. ಇವರಲ್ಲಿ ಐವರು ಸೋತಿದ್ದಾರೆ. ಭಾರತೀಯ ರಾಷ್ಟ್ರೀಯ ಲೋಕ ದಳದ 13 ಮಂದಿ ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಜೆಪಿ ಸೇರಿದ್ದರು. ಇವರಲ್ಲಿ ಒಂಬತ್ತು ಮಂದಿ ಚುನಾವಣೆಯಲ್ಲಿ ಸೋತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT