ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನೆ ಪ್ರಚಾರದ ಸರಕಲ್ಲ

Last Updated 16 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ರಕ್ಷಣಾ ಪಡೆಗಳನ್ನು ರಾಜಕೀಯ ಉದ್ದೇಶ ಮತ್ತು ಚುನಾವಣಾ ಲಾಭಕ್ಕೆದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿ ಭಾರತೀಯ ಸೇನೆಯ ಎಂಟು ನಿವೃತ್ತ ಮುಖ್ಯಸ್ಥರೂ ಸೇರಿ 156 ನಿವೃತ್ತ ಸೇನಾಧಿಕಾರಿಗಳು ರಾಷ್ಟ್ರಪತಿ ಮತ್ತುಚುನಾವಣಾ ಆಯೋಗಕ್ಕೆ ಬರೆದ ಪತ್ರ ಭಾರಿ ಚರ್ಚೆಗೆ ಕಾರಣವಾಗಿದೆ.

ಚುನಾವಣೆ ಸಮಯದಲ್ಲಿ ಪ್ರತಿ ವಿಷಯ ರಾಜಕೀಯ ತಿರುವು ಪಡೆದುಕೊಳ್ಳುವುದು ಸಹಜ.ಯೋಧರು ಈ ವಿವಾದವನ್ನು ಹೇಗೆ ನೋಡಬಹುದು ಎಂಬ ಸಹಜ ಕುತೂಹಲದೊಂದಿಗೆ ‘ಮೆಟ್ರೊ’ ಹಲವು ಮಾಜಿ ಸೇನಾಧಿಕಾರಿಗಳನ್ನು ಮಾತನಾಡಿಸಿದೆ.ಪಾಕಿಸ್ತಾನ ಜತೆ ಯುದ್ಧ ಮಾಡಿದ ಮತ್ತು ಕಾಶ್ಮೀರ ಗಡಿಯಲ್ಲಿ ಸೇವೆ ಸಲ್ಲಿಸಿ ಬೆಂಗಳೂರಿನಲ್ಲಿ ವಿಶ್ರಾಂತ ಜೀವನ ಸಾಗಿಸುತ್ತಿರುವ ಹಲವು ಸೇನಾಧಿಕಾರಿಗಳು ನಿಷ್ಪಕ್ಷಪಾತ ಮತ್ತು ಮುಕ್ತವಾಗಿ ಅನಿಸಿಕೆ ಹಂಚಿಕೊಂಡಿದ್ದಾರೆ.

ಚುನಾವಣೆ ಎಂದ ಮೇಲೆ ಇದೆಲ್ಲ ಮಾಮೂಲಿ ಎಂದು ಕೆಲವರು ಅಭಿಪ್ರಾಯಪಟ್ಟರೆ, ಇನ್ನೂ ಕೆಲವರು ಇದು ಸರಿಯಲ್ಲ ಎಂದು ನಿರ್ದಾಕ್ಷಿಣ್ಯವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಸರ್ಕಾರವು ಸೇನಾ ಕಾರ್ಯಾಚರಣೆ ಯಶಸ್ಸು ಪಡೆಯುವುದು ತಪ್ಪಲ್ಲ, ಅದನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವುದು ಅಪರಾಧ ಎಂದು ಆಕ್ಷೇಪ ಎತ್ತಿದ್ದಾರೆ.

ರಾಜಕೀಯ ಪಕ್ಷಗಳ ಅಪ್ರಬುದ್ಧತೆ

ನಿವೃತ್ತ ಸೇನಾಧಿಕಾರಿಗಳು ರಾಷ್ಟ್ರಪತಿ ಮತ್ತು ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವುದು ಸರಿಯಾಗಿದೆ. ಇದು ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳ ಅಪಕ್ವತೆ, ಅಪ್ರಬುದ್ಧತೆ ಮತ್ತು ಅವಕಾಶವಾದಿತನತೋರಿಸುತ್ತದೆ. ಸೇನಾ ಕಾರ್ಯಾಚರಣೆಯಂತಹ ಮಹತ್ವದ ನಿರ್ಧಾರಗಳನ್ನು ಸರ್ಕಾರ ತೆಗೆದುಕೊಳ್ಳುತ್ತದೆ. ಹಾಗಾಗಿ ಸೇನೆಯ ಒಳ್ಳೆಯ ಕೆಲಸದ ಶ್ರೇಯ ಆಡಳಿತಾರೂಢ ಸರ್ಕಾರ ಪಡೆದುಕೊಳ್ಳುವುದು ಸಹಜ. ಅದನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವುದು ಮತ್ತು ಅದರಿಂದ ಪ್ರಚಾರ ಪಡೆಯುವುದು ಸರಿಯಲ್ಲ. ಈ ಹಿಂದೆ ಯಾವ ಚುನಾವಣೆಗಳಲ್ಲೂ ಸೇನೆಯ ಹೆಸರು ಬಳಸಿಕೊಂಡ ನಿದರ್ಶನಗಳಿಲ್ಲ. ಇದು ರಾಜಕೀಯ ಪಕ್ಷಗಳ ಕೀಳರಿಮೆ ತೋರಿಸುತ್ತದೆ. ಪುಲ್ವಾಮಾ ಘಟನೆಗೆ ಗುಪ್ತಚರ ಮತ್ತು ಸೇನಾ ರಣತಂತ್ರದ ವೈಫಲ್ಯ ಕಾರಣ. ಬಾಲಾಕೋಟ್‌ ಮೇಲೆ ವೈಮಾನಿಕ ದಾಳಿ ಬಗ್ಗೆ ವಿರೋಧ ಪಕ್ಷಗಳು ಪುರಾವೆ ಕೇಳುವುದು ಕೂಡ ತಪ್ಪು. ಇದು ನಮ್ಮ ಸೈನಿಕರ ಆತ್ಮವಿಶ್ವಾಸ ಕುಗ್ಗಿಸುತ್ತದೆ.ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಎರಡು–ಮೂರು ದಿನದಲ್ಲಿ ಬಿಡುಗಡೆ ಮಾಡುವ ಮೂಲಕ ಪಾಕಿಸ್ತಾನ ಸರ್ಕಾರ ಮತ್ತು ಪ್ರಧಾನಿಇಮ್ರಾನ್‌ ಖಾನ್‌ ಒಳ್ಳೆಯ ನಿರ್ಧಾರ ಕೈಗೊಂಡರು. ಅಂತರರಾಷ್ಟ್ರೀಯ ಕಾನೂನು ಪಾಲಿಸಿದ್ದಾರೆ. ಅದು ನಿಜಕ್ಕೂ ಅಭಿನಂದನಾರ್ಹ.

– ಎಂ.ಸಿ. ನಂಜಪ್ಪ, ನಿವೃತ್ತ ಮೇಜರ್‌ ಜನರಲ್‌, ಭೂಸೇನೆ

***

ಒಳ್ಳೆಯ ಅಭಿರುಚಿ ಅಲ್ಲ

ಯಾವುದೇ ಪಕ್ಷದ ಸರ್ಕಾರ ಅಧಿಕಾರದಲ್ಲಿರಲಿ ಅದು ಸೇನೆಗೆ ಸಂಬಂಧಿಸದ ವಿಷಯ. ಸರ್ಕಾರ ತೆಗೆದುಕೊಂಡ ನಿರ್ಧಾರವನ್ನು ಕಾರ್ಯಗತಗೊಳಿಸುವ ಹೊಣೆ ರಕ್ಷಣಾ ಪಡೆಗಳದ್ದಾಗಿರುತ್ತದೆ. ಯಾವುದೇ ಪ್ರಚಾರ ಬಯಸದೆ ಸೇನೆ ತನ್ನ ಕೆಲಸವನ್ನು ತಾನು ಮಾಡುತ್ತದೆ. ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳು ಸೇನಾ ಕಾರ್ಯಾಚರಣೆಯ ಯಶಸ್ಸನ್ನು ರಾಜಕೀಯಕ್ಕೆ ಬಳಸುವ ಸಂಪ್ರದಾಯ ಹುಟ್ಟು ಹಾಕಿರುವುದು ಒಳ್ಳೆಯ ಅಭಿರುಚಿಯಲ್ಲ. ಸೇನೆಯ ವಿಷಯದಲ್ಲಿ ರಾಜಕಾರಣ ಮಾಡಬಾರದು. ಇದು ಸೇನೆಯ ಮೇಲೆ ಪರಿಣಾಮ ಬೀರುತ್ತದೆ.

ಅಕ್ಷಯ್‌ ಪಿ., ನಿವೃತ್ತ ಸಿನಿಯರ್‌ ಸೇಲರ್‌, ನೌಕಾದಳ

***

ಯಶಸ್ಸು ಪಡೆಯುವುದರಲ್ಲಿ ತಪ್ಪೇನಿದೆ?

ನಿವೃತ್ತ ಸೇನಾಧಿಕಾರಿಗಳುರಾಷ್ಟ್ರಪತಿಗೆ ದೂರು ಸಲ್ಲಿಸಿರುವುದರ ಹಿಂದೆಕೆಲವು ಸ್ಥಾಪಿತ ಹಿತಾಸಕ್ತಿಗಳ ಕೈವಾಡವಿದೆ. ಆಡಳಿತಾರೂಢ ಸರ್ಕಾರ ಮತ್ತು ರಾಜಕೀಯ ಪಕ್ಷವು ರಕ್ಷಣಾ ಪಡೆಗಳ ಯಶಸ್ಸನ್ನು ಹೇಳಿಕೊಳ್ಳುವುದರಲ್ಲಿ ತಪ್ಪೇನಿದೆ. ಅದು ಅತ್ಯಂತ ಸಹಜ ಪ್ರತಿಕ್ರಿಯೆ. ಸರ್ಕಾರದ ಈ ನಡೆ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಚುನಾವಣಾ ನೀತಿ, ಸಂಹಿತೆಯ ಉಲ್ಲಂಘನೆಯಾಗುವುದಿಲ್ಲ. ಬಿಜೆಪಿ ಮಾತ್ರವಲ್ಲ ಕಾಂಗ್ರೆಸ್‌ ಸರ್ಕಾರವಿದ್ದರು ಕೂಡ ಅದನ್ನೇ ಮಾಡುತಿತ್ತು. ಪಾಕಿಸ್ತಾನದ ಮೇಲೆ ವೈಮಾನಿಕ ದಾಳಿ ರಕ್ಷಣಾ ಪಡೆಗಳ ನಿರ್ಧಾರವಲ್ಲ. ಸಂಪೂರ್ಣವಾಗಿ ಸರ್ಕಾರದ ನಿರ್ಧಾರ. ಹೀಗಾಗಿ ಅದರ ಶ್ರೇಯ ಸರ್ಕಾರಕ್ಕೆ ಸಲ್ಲಬೇಕು.

ತಾನಾಗಿಯೇ ದಂಡೆತ್ತಿ ಹೋಗುವುದಿಲ್ಲ. ಯಾರಾದರೂ ಕೆಣಕಿದರೆ ಸುಮ್ಮನೆ ಕೈಕಟ್ಟಿ ಕೂಡುವುದಿಲ್ಲ. ತಕ್ಕ ಪ್ರತ್ಯುತ್ತರ ನೀಡದೆ ಬಿಡುವುದಿಲ್ಲ ಎಂಬ ಸಂದೇಶವನ್ನು ಭಾರತವು ಅಂತರರಾಷ್ಟ್ರೀಯ ಸಮುದಾಯಕ್ಕೆ ರವಾನಿಸುವಲ್ಲಿ ಯಶಸ್ವಿಯಾಗಿದೆ. ಪುಲ್ವಾಮಾ ದಾಳಿಗೆ ಸರ್ಕಾರದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ. ಅಮೆರಿಕ, ಫ್ರಾನ್ಸ್‌, ಯುರೋಪ್‌ಗಳಲ್ಲಿ ಇಂತಹ ದಾಳಿ ನಡೆದಿಲ್ಲವೇ?

– ಇ.ಆರ್. ರಾಜಪ್ಪನ್‌, ನಿವೃತ್ತ ಗ್ರುಪ್‌ ಕ್ಯಾಪ್ಟನ್‌, ವಾಯುಸೇನೆ

***

ರಾಷ್ಟ್ರೀಯ ಭದ್ರತೆ ಮುಖ್ಯ

ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಎಲ್ಲವೂ ರಾಜಕೀಯ ಬಣ್ಣ, ಆಯಾಮ ಪಡೆದುಕೊಳ್ಳುತ್ತಿರುವುದು ವಿಪರ್ಯಾಸ. ರಾಜಕಾರಣದಲ್ಲಿ ರಕ್ಷಣಾ ಪಡೆಗಳ ಹೆಸರು ಎಳೆದು ತರುವುದು ತಪ್ಪು. ಸೇನೆಯ ಬಗ್ಗೆ ರಾಜಕಾರಣಿಗಳು ಹಗುರವಾಗಿ ಮಾತನಾಡಬಾರದು. ಒಂದು ರಾಜಕೀಯ ಪಕ್ಷವು ಸೇನಾ ಕಾರ್ಯಾಚರಣೆಯ ಯಶಸ್ಸನ್ನು ತನ್ನದೆಂದು ಬಿಂಬಿಸಿಕೊಂಡರೆ, ಮತ್ತೊಂದು ಪಕ್ಷ ಪುರಾವೆ ಕೇಳುತ್ತಿದೆ. ಹಿಂದಿನ ಎರಡು ಸರ್ಕಾರಗಳು ಪರಮಾಣು ಸ್ಫೋಟದ ಲಾಭ ಪಡೆದಿರಲಿಲ್ಲವೇ? ಯಾವುದೇ ಪಕ್ಷ ಮತ್ತು ಸರ್ಕಾರಗಳು ರಾಷ್ಟ್ರೀಯ ಭದ್ರತೆಯೊಂದಿಗೆ ಚೆಲ್ಲಾಟವಾಡಬಾರದು. ರಾಜಕೀಯ ಮತ್ತು ಸೇನೆಗಿಂತ ರಾಷ್ಟ್ರೀಯ ಭದ್ರತೆ ಮುಖ್ಯ. ಅದರೊಂದಿಗೆ ಯಾರೂ ರಾಜಿಯಾಗಬಾರದು.

ಅರ್ಜುನ್‌ ಮುತ್ತಣ್ಣ, ನಿವೃತ್ತ ಮೇಜರ್‌ ಜನರಲ್‌, ಭೂಸೇನೆ

***

ಸೇನೆ ಯಾರ ಕೈಗೊಂಬೆಯೂ ಅಲ್ಲ

ಸ್ವಾತಂತ್ರ್ಯ ದೊರೆತ ದಿನದಿಂದ ಸೇನೆಯ ಹೆಸರನ್ನು ರಾಜಕಾರಣಕ್ಕೆ ಎಳೆದು ತರಬಾರದು ಎಂದು ಹೇಳುತ್ತ ಬರಲಾಗಿದೆ. ಯಾವ ರಾಜಕೀಯ ಪಕ್ಷಗಳೂ ಅದನ್ನು ಪಾಲಿಸುತ್ತಿಲ್ಲ.ಭಾರತೀಯ ಸೇನೆ ತಟಸ್ಥ ನಿಲುವು ಹೊಂದಿದೆ. ಸೇನೆಯ ನಿಜವಾದ ದಂಡನಾಯಕ ರಾಷ್ಟ್ರಪತಿ. ಬಾಂಗ್ಲಾ ದೇಶದ ಯುದ್ಧದ ಯಶಸ್ಸನ್ನು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಪಡೆದಿದ್ದರು. ಸೇನೆಯ ಕಾರ್ಯಾಚರಣೆಯ ಯಶಸ್ಸನ್ನು ಸರ್ಕಾರ ಪಡೆಯುವುದು ನಡೆದಕೊಂಡ ಬಂದ ಲೋಕರೂಢಿ ಮತ್ತು ಅದು ಸಹಜ ಕೂಡ. ಹಾಗಂತ ರಾಜಕೀಯ ಉದ್ದೇಶ ಮತ್ತು ಲಾಭಗಳಿಗೆಸೇನೆಯ ಹೆಸರನ್ನು ದುರ್ಬಳಕೆ ಮಾಡಿಕೊಳ್ಳಬಾರದು ಎಂಬುವುದು ನಮ್ಮೆಲ್ಲರ ಕಳಕಳಿ.

ಸೇನೆ ಯಾರ ಕೈಗೊಂಬೆಯೂ ಅಲ್ಲ. ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಸೇನೆಯ ರಹಸ್ಯ ವಿಷಯಗಳು ಸಾರ್ವಜನಿಕ ಚರ್ಚೆ, ಪ್ರಚಾರದ ಸರಕಾಗಬಾರದು. ರಕ್ಷಣಾ ಪಡೆಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾತನಾಡುವಾಗ ರಾಜಕಾರಣಿಗಳು ಜಾಗೂರಕರಾಗಿರಬೇಕು. ಹಿಂದಿನ ರಾಜಕೀಯ ಮೌಲ್ಯಗಳು, ನೀತಿ, ಸಿದ್ಧಾಂತಗಳು ಈಗ ಕಾಣುತ್ತಿಲ್ಲ. ರಾಜಕೀಯ ಮೌಲ್ಯಗಳು ಕುಸಿಯುತ್ತಿವೆ.

ಕರ್ನಲ್‌ ಸಿ.ಎಂ. ಉತ್ತಯ್ಯ, ಭೂಸೇನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT