ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರಿ ‘ಜೆಟ್ಟಿ’ ಇಂದು ನೌಕಾಪಡೆಗೆ ಸೇರ್ಪಡೆ

Last Updated 27 ಸೆಪ್ಟೆಂಬರ್ 2019, 20:02 IST
ಅಕ್ಷರ ಗಾತ್ರ

ಮುಂಬೈ: ಭಾರತೀಯ ನೌಕಾಪಡೆಯ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ, ಬೃಹತ್‌ ಗಾತ್ರದ ನೌಕಾ ಜೆಟ್ಟಿ (ಡ್ರೈ ಡಾಕ್‌) ಸಂಪೂರ್ಣವಾಗಿ ಸಿದ್ಧವಾಗಿದೆ. ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಇದನ್ನು ಶನಿವಾರ ಉದ್ಘಾಟಿಸಲಿದ್ದಾರೆ.

ಮೂರೂ ಕಡೆಗಳಿಂದ ಸಮುದ್ರದಿಂದ ಆವೃತವಾಗಿರುವ ದೇಶದ ಏಕೈಕ ಜೆಟ್ಟಿ ಇದಾಗಿದೆ. ಒಂದು ದಶಕದ ಅವಧಿಯೊಳಗೇ ಇದರ ನಿರ್ಮಾಣ ಪೂರ್ಣಗೊಂಡಿದೆ. ಭಾರತೀಯ ನೌಕಾಪಡೆಯ ದಾಳಿ ಘಟಕವಾದ ಪಶ್ಚಿಮ ನೌಕಾ ಕಮಾಂಡ್‌ಗೆ ಇಂಥ ಜೆಟ್ಟಿಯೊಂದರ ಅಗತ್ಯ ಬಹುಕಾಲದಿಂದ ಇತ್ತು.

ಸಾಮರ್ಥ್ಯ
ಯುದ್ಧ ವಿಮಾನಗಳನ್ನು ಹೊತ್ತು ಸಾಗಿಸಬಲ್ಲ, ರಷ್ಯಾ ನಿರ್ಮಿತ ಐಎನ್‌ಎಸ್‌ ವಿಕ್ರಮಾದಿತ್ಯ ಹಡಗು ಹಾಗೂ ಸ್ವದೇಶಿ ನಿರ್ಮಾಣದ (ಕೊಚ್ಚಿಯಲ್ಲಿ ನಿರ್ಮಾಣ ಹಂತದಲ್ಲಿರುವ) ವಿಕ್ರಾಂತ್ ಹಡಗನ್ನು ಏಕಕಾಲದಲ್ಲಿ ಇಲ್ಲಿ ನಿಲ್ಲಿಸಬಹುದಾಗಿದೆ

ಜೆಟ್ಟಿಯೊಳಗಿನ ನೀರನ್ನು ಖಾಲಿಮಾಡಲು ಅಳವಡಿಸಿರುವ ಪಂಪ್‌ಗಳು ಮೂರು ಸೆಕೆಂಡ್‌ಗೆ 10,000 ಘನ ಮೀಟರ್‌ ನೀರನ್ನು ಹೊರಹಾಕಬಲ್ಲವು. ಇಂಥ ಎಂಟು ಪಂಪ್‌ಗಳು ಸುಮಾರು ಎರಡೂವರೆ ಗಂಟೆಗಳಲ್ಲಿ ಜೆಟ್ಟಿಯ ನೀರನ್ನೆಲ್ಲ ಖಾಲಿ ಮಾಡಬಲ್ಲವು

‘ಬಾಂಬೆ ಡಾಕ್‌ಯಾರ್ಡ್‌’ ಇತಿಹಾಸ
1732ರಲ್ಲಿ ಸ್ಥಾಪನೆಗೊಂಡ ಬಾಂಬೆ ಡಾಕ್‌ಯಾರ್ಡ್‌, 18 ಮತ್ತು 19ನೇ ಶತಮಾನಗಳಲ್ಲಿ ವಿಶ್ವದಲ್ಲೇ ಅತ್ಯುತ್ತಮ ಗುಣಮಟ್ಟದ ಹಡಗುಗಳನ್ನು ನಿರ್ಮಾಣ ಮಾಡುವುದಕ್ಕೆ ಹೆಸರಾಗಿತ್ತು. ವಿಶ್ವದ ಯಾವ ಭಾಗದಲ್ಲಿ ನಿರ್ಮಾಣವಾದ ಹಡಗೂ ಗುಣಮಟ್ಟದಲ್ಲಿ ಇಲ್ಲಿ ನಿರ್ಮಾಣವಾಗುವ ಹಡಗಿನ ಸನಿಹಕ್ಕೂ ಬರುತ್ತಿರಲಿಲ್ಲ. ಸಣ್ಣ ಹಡಗುಗಳ ನಿರ್ಮಾಣದ ಮೂಲಕ ಕೆಲಸ ಆರಂಭಿಸಿದ ಬಾಂಬೆ ಡಾಕ್‌ ಯಾರ್ಡ್‌ ತನ್ನ ಸಾಮರ್ಥ್ಯ ಹೆಚ್ಚಿಸುತ್ತಾ ಸುಧಾರಿತ ಯುದ್ಧ ಹಡಗುಗಳ ನಿರ್ಮಾಣದಲ್ಲೂ ಹೆಸರು ಮಾಡಿತು.

1750–65ರಲ್ಲಿ ಬಾಂಬೆ ಒಣ ಜಟ್ಟಿಯನ್ನು (ಡ್ರೈ ಡಾಕ್‌) ಹಾಗೂ 1807–10ರ ಅವಧಿಯಲ್ಲಿ ಡಂಕನ್‌ ಒಣ ಜಟ್ಟಿ ನಿರ್ಮಾಣ ಮಾಡಲಾಯಿತು.

1830ರಿಂದ 46ರ ಅವಧಿಯಲ್ಲಿ ಈ ಡಾಕ್‌ಗಳಲ್ಲಿ ಇನ್ನಷ್ಟು ಸೌಲಭ್ಯಗಳನ್ನು ಒದಗಿಸಲಾಯಿತು. 1906ರಲ್ಲಿ ಇಲ್ಲಿ ಅಲೆ ಪ್ರತಿರೋಧಕ ವ್ಯವಸ್ಥೆ ಹಾಗೂ ವಿದ್ಯುತ್‌ ಸೌಲಭ್ಯಗಳನ್ನು ಒದಗಿಸಲಾಯಿತು.

ಉನ್ನತೀಕರಣದ ಹಾದಿ
ನೌಕಾಪಡೆಯ ಹಾಲಿ ಮತ್ತು ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ಒಣ ಜಟ್ಟಿ (ಡ್ರೈ ಡಾಕ್‌) ನಿರ್ಮಾಣ ಸೇರಿದಂತೆ ಡಾಕ್‌ ಯಾರ್ಡ್‌ ಅನ್ನು ಉನ್ನತೀಕರಣಗೊಳಿಸಲು ರಾಷ್ಟ್ರೀಯ ಕೈಗಾರಿಕಾ ಅಭಿವೃದ್ಧಿ ನಿಗಮವು (ಎನ್‌ಐಡಿಸಿ) ಸಮಗ್ರ ಯೋಜನೆಯೊಂದನ್ನು ಸಿದ್ಧಪಡಿಸಿತು.

1975ರಲ್ಲಿ ‘ಮಾಡ್ರನೈಜೇಶನ್‌ ಆಫ್‌ ನೇವಲ್‌ ಡಾಕ್‌ಯಾರ್ಡ್‌, ಬಾಂಬೆ’ ಎಂಬ ಯೋಜನಾ ತಂಡವೊಂದನ್ನು ರಚನೆ ಮಾಡಲಾಯಿತು. 1978ರಲ್ಲಿ ಈ ತಂಡವನ್ನು ‘ನೌಕಾ ಡಾಕ್‌ಯಾರ್ಡ್‌ ವಿಸ್ತರಣಾ ಯೋಜನೆ’ಯಲ್ಲಿ ವಿಲೀನಗೊಳಿಸಿ ‘ಡೈರೆಕ್ಟರ್‌ ಜನರಲ್‌ ನೇವಲ್‌ ಪ್ರಾಜೆಕ್ಟ್ಸ್‌ (ಬಾಂಬೆ)’ ಎಂಬ ಹೊಸ ಸಂಸ್ಥೆ ರಚಿಸಲಾಯಿತು. ಇದಾದ ನಂತರ ನೌಕಾ ಜಟ್ಟಿಯಲ್ಲಿ ಕೊಸ ಕಾರ್ಯಾಗಾರಗಳ ನಿರ್ಮಾಣ ಕಾರ್ಯ ಚುರುಕುಗೊಂಡಿತು. ನಂತರದ ದಿನಗಳಲ್ಲಿ ಹೊಸ ಸೌಲಭ್ಯಗಳನ್ನು ಒದಗಿಸಲು ಇಲ್ಲಿ ಸಾಧ್ಯವಾಯಿತು.

ನೂತನ ಜೆಟ್ಟಿ ವಿನ್ಯಾಸ. ಮೂರೂ ಕಡೆ ಸಮುದ್ರದ ನೀರಿನಿಂದ ಆವೃತವಾದ ದೇಶದ ದೊಡ್ಡ ಜೆಟ್ಟಿ ಇದಾಗಿದೆ.
ನೂತನ ಜೆಟ್ಟಿ ವಿನ್ಯಾಸ. ಮೂರೂ ಕಡೆ ಸಮುದ್ರದ ನೀರಿನಿಂದ ಆವೃತವಾದ ದೇಶದ ದೊಡ್ಡ ಜೆಟ್ಟಿ ಇದಾಗಿದೆ.

* ಮುಂಬೈಯ ಬಾಂದ್ರಾ–ವರ್ಲಿ ಸೀಲಿಂಕ್‌ (ಸಮುದ್ರದಲ್ಲಿ ನಿರ್ಮಿಸಿರುವ, 5,600 ಮೀ. ಉದ್ದದ ಸೇತುವೆ) ನಿರ್ಮಾಣಕ್ಕೆ ಬಳಸಿದ ಸಿಮೆಂಟ್‌ಗಿಂತ ಮೂರು ಪಟ್ಟು ಹೆಚ್ಚು ಸಿಮೆಂಟ್‌ ಅನ್ನು ಬಾಂಬೆ ಜೆಟ್ಟಿ ನಿರ್ಮಾಣಕ್ಕೆ ಬಳಸಲಾಗಿದೆ

* ಈ ಯೋಜನೆಗೆ ಬಳಕೆಯಾದಷ್ಟು ಉಕ್ಕಿನಿಂದ ಎರಡು ‘ಐಫೆಲ್‌ ಟವರ್‌’ಗಳನ್ನು ನಿರ್ಮಿಸಬಹುದು

* ಒಲಿಂಪಿಕ್‌ ಗಾತ್ರದ 20 ಈಜುಕೊಳಗಳಲ್ಲಿ ಹಿಡಿಸಬಹದಾದಷ್ಟು ನೀರನ್ನು ಈ ಜೆಟ್ಟಿಯಲ್ಲಿ ಸಂಗ್ರಹಿಸಬಹುದು

* ಜೆಟ್ಟಿಯನ್ನು ಒಣ ಮತ್ತು ನೀರಿರುವ ಜೆಟ್ಟಿ ಎಂದು ಎರಡು ಭಾಗಗಳಾಗಿ ವಿಭಾಗಿಸಬಹುದು. ಏಕಕಾಲಕ್ಕೆ ಎರಡು ಹಡಗುಗಳನ್ನು ನಿಲ್ಲಿಸಬಹುದು

* ಹಿಂದೂಸ್ತಾನ್‌ ಕನ್‌ಸ್ಟ್ರಕ್ಷನ್‌ ಕಂಪನಿ (ಎಚ್‌ಸಿಸಿ) ಈ ಜೆಟ್ಟಿಯನ್ನು ನಿರ್ಮಿಸಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT