ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲಿಂಗಾಯತ ಹಿಂದೂ ಧರ್ಮದ ಭಾಗವಲ್ಲ’

ನ್ಯಾ. ನಾಗಮೋಹನ ದಾಸ್ ನೇತೃತ್ವದ ತಜ್ಞರ ಸಮಿತಿ ಅಭಿಮತ
Last Updated 15 ಮಾರ್ಚ್ 2018, 19:51 IST
ಅಕ್ಷರ ಗಾತ್ರ

ಬೆಂಗಳೂರು: ‘ಲಿಂಗಾಯತ ಹಿಂದೂ ಧರ್ಮದ ಭಾಗವಲ್ಲ. ಹಿಂದೂ ಎಂದು ಈಗ ಕರೆದುಕೊಳ್ಳುತ್ತಿರುವ ವೈದಿಕ ಅಥವಾ ಮನುಧರ್ಮ ಪ್ರಣೀತ ವರ್ಣ ವ್ಯವಸ್ಥೆಯ ವಿರುದ್ಧ ಹೋರಾಟ ನಡೆಸಿ ಜೀವ ತಳೆದ ಹೊಸ ಕ್ರಾಂತಿಕಾರಿ ಧರ್ಮ’ ಎಂದು ವೀರಶೈವ– ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುವ ಸಂಬಂಧ ಅಧ್ಯಯನ ನಡೆಸಲು ರಾಜ್ಯ ಸರ್ಕಾರ ರಚಿಸಿದ್ದ ತಜ್ಞರ ಸಮಿತಿ ಪ್ರತಿಪಾದಿಸಿದೆ.

‘ಲಿಂಗಾಯತ, ಲಿಂಗವಂತ ಅಥವಾ ಲಿಂಗಾಯತ ಧರ್ಮ’ ಎಂಬ ಅಧ್ಯಾಯದಲ್ಲಿ ಮೇಲು– ಕೀಳಿನ ಶ್ರೇಣೀಕರಣ ವ್ಯವಸ್ಥೆಯನ್ನು ಪಾಲಿಸುತ್ತಿದ್ದ ವೈದಿಕ ಅಥವಾ ಬ್ರಾಹ್ಮಣ ಧರ್ಮಕ್ಕೆ ವಿರುದ್ಧವಾಗಿ ಕಾಯಕ ಜೀವಿಗಳ ಚಳವಳಿ ಹೇಗೆ ರೂಪುಗೊಂಡಿತು ಎಂದು ತಜ್ಞರ ಸಮಿತಿ ಸರ್ಕಾರಕ್ಕೆ ಕೊಟ್ಟಿರುವ 210 ಪುಟಗಳ ವರದಿಯಲ್ಲಿ ವಿವರಿಸಲಾಗಿದೆ.

‘ಲಿಂಗಾಯತಕ್ಕೆ ಸ್ಪಷ್ಟ ಇತಿಹಾಸವಿದೆ. ಪುರಾಣ ಕಲ್ಪಿತ ಪರಂಪರೆಯಲ್ಲ. ಹನ್ನೆರಡನೆ ಶತಮಾನದಲ್ಲಿ ಜರುಗಿರುವ ಹೋರಾಟದ ಇತಿಹಾಸ, ಕನ್ನಡದ ನೆಲದಲ್ಲಿ ಕನ್ನಡ ಭಾಷೆಯನ್ನು ಧರ್ಮದ ಪರಿಭಾಷೆಯಾಗಿ ಬಳಸಿದ, ಬೆಳೆಸಿದ ಚಳವಳಿ, ಸಂಸ್ಕೃತಕ್ಕೆ ಪರ್ಯಾಯವಾಗಿ ಇಲ್ಲಿನ ನೆಲದ ಭಾಷೆಯಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ಅರ್ಥೈಸಿದ ಧರ್ಮ’ ಎಂದು ತಜ್ಞರ ವರದಿ ಸ್ಪಷ್ಟವಾಗಿ ಹೇಳಿದೆ.

ಲಿಂಗಾಯತ ‘ಧರ್ಮ ತತ್ವ’: ಲಿಂಗಾಯತವು ಒಂದು ಧರ್ಮ ಎಂಬುದನ್ನು ಪ್ರತಿಪಾದಿಸಲು ಅದಕ್ಕೆ ಇರುವ ವೈಶಿಷ್ಟ್ಯಗಳೇನು ಎಂಬುದನ್ನು ವರದಿ ವಿಶ್ಲೇಷಿಸಿದೆ.

ವಚನ ಚಳವಳಿಯ ಬಹುದೊಡ್ಡ ಶಕ್ತಿಯೆಂದರೆ ಧರ್ಮವನ್ನು ಪ್ರಜಾಪ್ರಭುತ್ವ ಮಾದರಿಯಲ್ಲಿ ನಿರ್ವಚಿಸಿರುವುದು. ಏಕಾಭಿಪ್ರಾಯಕ್ಕಿಂತ ಬಹುತ್ವದ ಅಭಿಪ್ರಾಯಗಳನ್ನು ಗೌರವಿಸಿದ್ದು ವಚನ ಧರ್ಮದ ವಿಶೇಷ. ‘ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ’ ಎಂಬ ವಚನವೇ ಎಲ್ಲರನ್ನೂ ಒಳಗೊಳ್ಳುವ, ಯಾರನ್ನೂ ದ್ವೇಷಿಸದ, ನಿರ್ಬಂಧಿಸದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಧ್ವನಿಸುತ್ತದೆ ಎಂದು ವರದಿ ಉಲ್ಲೇಖಿಸಿದೆ.

ಪ್ರತಿಯೊಂದು ಧರ್ಮಕ್ಕೂ ಅದರದ್ದೇ ಆದ ತಾತ್ವಿಕ ಆಚಾರ ವಿಚಾರಗಳನ್ನು ಸಾರುವ ಪಠ್ಯ ಇರುತ್ತದೆ. ವೈದಿಕ ಧರ್ಮಕ್ಕೆ ವೇದಾಗಮ, ಶಾಸ್ತ್ರ ಪುರಾಣಗಳು ಇದ್ದಂತೆ, ಮುಸ್ಲಿಮರಿಗೆ ಕುರಾನ್‌, ಕ್ರೈಸ್ತರಿಗೆ ಬೈಬಲ್ ಇದ್ದಂತೆ ಲಿಂಗಾಯತರಿಗೆ ವಚನಗಳೇ ಧಾರ್ಮಿಕ ಪಠ್ಯಗಳಾಗಿವೆ. ಹಿಂದೂಗಳು ಎಂದು ಕರೆದುಕೊಳ್ಳುವವರು ಸಂಸ್ಕೃತದ ಮಂತ್ರಗಳನ್ನೇ ನೆಚ್ಚಿಕೊಂಡರೆ, ಲಿಂಗಾಯತರ ಮನೆಯಲ್ಲಿನ ಧಾರ್ಮಿಕ ಕಾರ್ಯಕ್ರಮಗಳು ವಚನಮಯವಾಗಿರುತ್ತವೆ. ವಚನಗಳೇ ಸ್ತುತಿ, ಸ್ಥಿತಿ ಹಾಗೂ ಪರಮಗಂತವ್ಯ. ಇದು ಲಿಂಗಾಯತರ ಧಾರ್ಮಿಕ ವಿಧಿವಿಧಾನ ಎಂದು ವರದಿ ಹೇಳಿದೆ.

ಧರ್ಮವೆಂದ ಮೇಲೆ ಧರ್ಮಗುರು ಇರುವುದು ಸಹಜ. ಈ ಚಳವಳಿಯ ನೇತೃತ್ವ ವಹಿಸಿದ್ದು ಬಸವಣ್ಣ.

ವರ್ಣ ವ್ಯವಸ್ಥೆಯಲ್ಲಿ ಅಸ್ಪೃಶ್ಯರು, ‍ಪಂಚಮರು, ಚಂಡಾಲರು, ಶ್ವಪಚರು, ಹೊಲೆಯರು, ಮಾದಿಗರನ್ನು ಕೀಳಾಗಿ ಕಾಣಲಾಗುತ್ತಿತ್ತು. ಅಂತಹ ಜನರ ಜತೆಗೆ ಗುರುತಿಸಿಕೊಂಡ ಬಸವಣ್ಣ ಅಪವರ್ಣೀಕರಣಗೊಂಡು, ವೈದಿಕರ ‍‍ಪವಿತ್ರೀಕರಣಕ್ಕೆ ವಿರುದ್ಧವಾಗಿ ಹೋರಾಟ ನಡೆಸಿದವರು. ಅವರದ್ದು ಬ್ರಾಹ್ಮಣ್ಯದ ವಿರೋಧದ ಉಗ್ರಮಾರ್ಗ. ಹೀಗಾಗಿಯೇ ಲಿಂಗಾಯತ ಎನ್ನುವುದು ಹಿಂದೂ ಧರ್ಮ ಅರ್ಥಾತ್‌ ವೈದಿಕಕ್ಕಿಂತ ಭಿನ್ನ ಎಂದು ವರದಿ ಹೇಳಿದೆ.

ಬಸವಣ್ಣನವರು ಪ್ರತಿಪಾದಿಸಿದ ಕಾಯಕ–ದಾಸೋಹ, ಅಷ್ಟಾವರಣ, ಷಟ್ ಸ್ಥಲಗಳೇ ಧರ್ಮಮಾರ್ಗಗಳು. ಇದು ವೈದಿಕ ಧರ್ಮಕ್ಕೆ ಪರ್ಯಾಯವಾಗಿ ಹೊಸೆದ ಜೀವನ ಮಾರ್ಗ. ಲಿಂಗಾಯತ ಧರ್ಮ ಬಸವಣ್ಣನ ಧರ್ಮ. ಅವರು ವೈದಿಕಕ್ಕೆ ವಿರುದ್ಧವಾಗಿ ಬೆಳೆಸಿದ ಪರ್ಯಾಯ ಧರ್ಮ.

ಲಿಂಗಾಯತರು ಬಲಾಢ್ಯರು, ಶ್ರೀಮಂತರು ಎಂಬುದು ಸತ್ಯವಲ್ಲ. ಅವರಲ್ಲಿ ಸುಮಾರು 99 ಜಾತಿಗಳಿವೆ. ಈ ಜಾತಿಗಳಲ್ಲಿ ಬಹುತೇಕರು ದಲಿತ ವರ್ಗಗಳಿಂದ, ಮಧ್ಯಮ ವರ್ಗಗಳಿಂದ ಬಂದವರು. ಆರ್ಥಿಕ ಮಾನದಂಡದಿಂದ ಇಂದಿಗೂ ಬಡವರಾಗಿದ್ದು, ಹಿಂದುಳಿದವರಾಗಿದ್ದಾರೆ ಎಂದೂ ವರದಿ ಹೇಳಿದೆ.

2011ರ ಜನಗಣತಿ ಪ್ರಕಾರ ಲಿಂಗಾಯತರ ಜನಸಂಖ್ಯೆ ಶೇ 12.3ರಷ್ಟಿದೆ. ಇವರು ಮುಸ್ಲಿಮರಿಗಿಂತ ಕೇವಲ ಶೇ 3ರಷ್ಟು ಹೆಚ್ಚಿದ್ದಾರೆ. ಪರಿಶಿಷ್ಟ ಜಾತಿ ಜನಸಂಖ್ಯೆ ಶೇ 15ರಷ್ಟಿದೆ. ಈ ಹಿನ್ನೆಲೆಯಲ್ಲಿ ಸಂಖ್ಯಾತ್ಮಕವಾಗಿ ಲಿಂಗಾಯತರು ಒಂದು  ಅಲ್ಪಸಂಖ್ಯಾತ ಸಮುದಾಯವರೇ ಆಗಿದ್ದಾರೆ ಎಂದು ಪ್ರಸ್ತಾಪಿಸಿರುವ ವರದಿಯು, ಇದಕ್ಕಾಗಿ ಹಿಂದುಳಿದ ವರ್ಗಗಳ ಸ್ಥಿತಿಗತಿ ಅಧ್ಯಯನಕ್ಕಾಗಿ ರಾಜ್ಯ ಸರ್ಕಾರ ರಚಿಸಿದ್ದ ಆಯೋಗ, ಸಮಿತಿಯ ವರದಿಯ ಅಂಕಿಅಂಶಗಳನ್ನು ನೀಡಿದೆ.
***
ವೈದಿಕ, ಲಿಂಗಾಯತ ಧರ್ಮದ ‍ಭಿನ್ನ ಭೇದ

* ವೈದಿಕ ಧರ್ಮ ಪ್ರತಿಪಾದಿಸುವ ವೇದ ಪ್ರಮಾಣ ಹಾಗೂ ವೇದಾಗಮ ಶಾಸ್ತ್ರ ಪುರಾಣಗಳನ್ನು ತಿರಸ್ಕರಿಸಿರುವುದು. ಅದಕ್ಕೆ ಪರ್ಯಾಯವಾಗಿ ವಚನಗಳೇ ಪ್ರಮಾಣ ಎನ್ನುವುದು
* ವೈದಿಕ ಧರ್ಮ ನಂಬುವ ಮೂಢನಂಬಿಕೆ, ವಾಸ್ತು, ಜ್ಯೋತಿಷ್ಯ, ಪಂಚಾಂಗ, ವಾರ, ನಕ್ಷತ್ರ, ತಿಥಿಗಳನ್ನು ವಿರೋಧಿಸುವುದು. ಕಂದಾಚಾರಗಳನ್ನು ನಿರಾಕರಿಸುವುದು
ವೈದಿಕ ಧರ್ಮದಲ್ಲಿ ಬಹುದೇವತಾ ಉಪಾಸನೆ ಇದ್ದರೆ, ಲಿಂಗಾಯತದಲ್ಲಿ ಏಕದೇವೋಪಾಸನೆ ಇದೆ. ನಿರಾಕಾರನಾದ ಪರಮಾತ್ಮನನ್ನು ಇಷ್ಟಲಿಂಗ ರೂಪದಲ್ಲಿ ಪೂಜಿಸುವುದು ಲಿಂಗಾಯತರ ಮಾರ್ಗ
* ವೈದಿಕ ಧರ್ಮದಲ್ಲಿ ಜಾತಿ ಮತ್ತು ಲಿಂಗ ಭೇದಗಳು ಇವೆ. ಆದರೆ ಶುದ್ಧ ಲಿಂಗಾಯತದಲ್ಲಿ ಜಾತಿ ಮತ್ತು ಲಿಂಗ ಭೇದಕ್ಕೆ ಅವಕಾಶವೇ ಇಲ್ಲ
* ವೈದಿಕ ಧರ್ಮದಲ್ಲಿ ಶೂದ್ರರು, ಮಹಿಳೆಯರಿಗೆ ಮೋಕ್ಷ ಸಿಗುವುದಿಲ್ಲ, ವೇದ ಓದುವಂತಿಲ್ಲ. ಯಜ್ಞ ಮಾಡುವಂತಿಲ್ಲ. ಸಂಸ್ಕಾರ ಯೋಗ್ಯರೂ ಅಲ್ಲ. ಆದರೆ, ಲಿಂಗಾಯತದಲ್ಲಿ ಇಷ್ಟಲಿಂಗ ದೀಕ್ಷೆಗೆ ಎಲ್ಲರೂ ಬಾಧ್ಯರು. ವರ್ಣ, ಲಿಂಗ ತಾರತಮ್ಯ ಇಲ್ಲ

***
ಆಯೋಗ, ಸಮಿತಿಗಳ ವರದಿ ಪ್ರಕಾರ ಲಿಂಗಾಯತರ ಜನಸಂಖ್ಯೆ

ವರ್ಷ,      ಆಯೋಗ,               ಜನಸಂಖ್ಯೆ  (ಶೇ)
1919,  ಮಿಲ್ಲರ್ ಕಮಿಟಿ,             12

1960, ನಾಗನಗೌಡ ಕಮಿಟಿ, 15.57–16

1975, ಹಾವನೂರು ಆಯೋಗ, 14.64

1986, ವೆಂಕಟಸ್ವಾಮಿ ಆಯೋಗ, 16.92

1990, ಚಿನ್ನಪ್ಪ ರೆಡ್ಡಿ ಆಯೋಗ, 18.42

2015, ಹಿಂದುಳಿದ ವರ್ಗಗಳ ಆಯೋಗ, 8–9 (ಅಂದಾಜು)*

(*2015ರಲ್ಲಿ ಕರ್ನಾಟಕ ಸರ್ಕಾರ ನಡೆಸಿದ ಸಾಮಾಜಿಕ ಆರ್ಥಿಕ ಗಣತಿಯಲ್ಲಿ ಲಿಂಗಾಯತರ ಪ್ರಮಾಣ ಶೇ 8ರಿಂದ 9ರಷ್ಟು ಇದೆ ಎಂದು ಅನಧಿಕೃತವಾಗಿ ತಿಳಿದುಬಂದಿದೆ. ಇದಕ್ಕೆ ಕಾರಣವೆಂದರೆ ಲಿಂಗಾಯತರೆಂದು ಗುರುತಿಸಿಕಂಡಿದ್ದ ಜಾತಿಗಳು ಸರ್ಕಾರದಿಂದ ನೀಡಲಾಗುವ ವಿವಿಧ ಸವಲತ್ತುಗಳನ್ನು ಪಡೆಯಲು ತಮ್ಮನ್ನು ಲಿಂಗಾಯತದ ಬದಲು ಹಿಂದೂಗಳು ಎಂದು ಬರೆಸಿಕೊಂಡಿವೆ. ಹೀಗಾಗಿ, ಲಿಂಗಾಯತರ ಜನಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ವರದಿ ಹೇಳಿದೆ.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT