ವಾಜಪೇಯಿ ನಿಧನ: ಮೌನಕ್ಕೆ ಜಾರಿದ ಏಮ್ಸ್‌ ಆವರಣ

7
ಮನೆಯೆದುರು ಜಮಾಯಿಸಿದ ಅಭಿಮಾನಿಗಳು...

ವಾಜಪೇಯಿ ನಿಧನ: ಮೌನಕ್ಕೆ ಜಾರಿದ ಏಮ್ಸ್‌ ಆವರಣ

Published:
Updated:
Deccan Herald

ನವದೆಹಲಿ: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಕಳೆದ ಜೂನ್ 11ರಂದು ದಾಖಲಾಗಿದ್ದ ಇಲ್ಲಿನ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್‌) ಆಸ್ಪತ್ರೆ ಎದುರು ಗುರುವಾರವಿಡೀ ಜನಜಂಗುಳಿ ನೆರೆದಿತ್ತು. ಸಂಜೆ ಅವರ ನಿಧನದ ಸುದ್ದಿ ಪ್ರಕಟವಾಗುತ್ತಿದ್ದಂತೆಯೇ ಆಸ್ಪತ್ರೆ ಎದುರು ಜಮಾಯಿಸಿದ್ದ ಜನ ಮತ್ತು ಪೊಲೀಸ್‌ ಸಿಬ್ಬಂದಿ ಮೌನಕ್ಕೆ ಶರಣಾದರು.

ಗುರುವಾರ ಬೆಳಿಗ್ಗೆಯಿಂದಲೇ ಅವರ ಸಹಸ್ರಾರು ಅಭಿಮಾನಿಗಳ ದಂಡು ಆಸ್ಪತ್ರೆಯೆದುರು ಆತಂಕದಿಂದಲೇ ನೆರೆದಿತ್ತು. ಮಾಧ್ಯಮಗಳ ತಂಡವೂ ಆಸ್ಪತ್ರೆ ಎದುರು ಬೀಡುಬಿಟ್ಟಿತ್ತು.

ಮಧ್ಯಾಹ್ನದ ಭಾರಿ ಬಿಸಿಲು ಮತ್ತು ಸೆಖೆಯನ್ನು ಲೆಕ್ಕಿಸದೆ ಆಸ್ಪತ್ರೆಗೆ ದೌಡಾಯಿಸಿದ್ದ ಅನೇಕ ಅಭಿಮಾನಿಗಳು ವಾಜಪೇಯಿ ಅವರ ಸ್ಥಿತಿಗತಿ ಕುರಿತು ಮಾಧ್ಯಮದರು ಮತ್ತು ಭದ್ರತಾ ಸಿಬ್ಬಂದಿಯನ್ನು ಕೇಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

2004ರಲ್ಲಿ ಪ್ರಧಾನಿ ಪಟ್ಟದಿಂದ ಕೆಳಗೆ ಇಳಿದಂದಿನಿಂದ ವಾಜಪೇಯಿ ಅವರು ವಾಸ್ತವ್ಯ ಹೂಡಿದ್ದ ಇಲ್ಲಿನ ಕೃಷ್ಣ ಮೆನನ್‌ ಮಾರ್ಗದಲ್ಲಿರುವ ನಿವಾಸದ ಎದುರೂ ಭಾರಿ ಭದ್ರತಾ ವ್ಯವಸ್ಥೆ ಏರ್ಪಡಿಸಲಾಗಿದ್ದು, ಮಧ್ಯಾಹ್ನದಿಂದಲೇ ಮಾಧ್ಯಮದವರು ಮತ್ತು ಅಭಿಮಾನಿಗಳು ಅಲ್ಲಿಯೂ ಬೀಡುಬಿಟ್ಟಿದ್ದರು.

ಅವರ ನಿಧನದ ಸುದ್ದಿ ಪ್ರಕಟವಾಗುತ್ತಿದ್ದಂತೆಯೇ ಪಾರ್ಥಿವ ಶರೀರವನ್ನು ಕರೆತರಬಹುದು ಎಂಬ ನಿರೀಕ್ಷೆಯಲ್ಲಿ ಅನೇಕ ಅಭಿಮಾನಿಗಳು ಅವರ ನಿವಾಸಕ್ಕೆ ಧಾವಿಸಿದರು. ಪೊಲಿಸರು ಬ್ಯಾರಿಕೇಡ್‌ ಅಳವಡಿಸಿ ಪ್ರತಿಯೊಬ್ಬರನ್ನೂ ತಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಸಂಜೆ ಮಳೆ ಸುರಿಯುತ್ತಿದ್ದರೂ ಜನರು ಸಾಲುಸಾಲಾಗಿ ಕೃಷ್ಣ ಮೆನನ್‌ ರಸ್ತೆಯ ಬದಿಯಲ್ಲೇ ನಿಂತು ಮೌನವಹಿಸಿ ಕಾಯುತ್ತಿರುವುದು ಕಂಡುಬಂತು.ಪೇಜಾವರ ಶ್ರೀಗಳ ಪರ್ಯಾಯ ಮಹೋತ್ಸವದಲ್ಲಿ ಭಾಗವಹಿಸಲು ಬಂದಿದ್ದ ಮಾಜಿಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಪೇಜಾವರ ಶ್ರೀಗಳು ಸನ್ಮಾನಿಸುತ್ತಿರುವುದು

ಇಲ್ಲಿನ ದೀನ್‌ದಯಾಳ್‌ ಉಪಾಧ್ಯಾಯ ರಸ್ತೆಯಲ್ಲಿರುವ ಬಿಜೆಪಿಯ ನೂತನ ಕಚೇರಿ ಎದುರೂ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಸಂಜೆಯ ವೇಳೆ ಜಮಾಯಿಸಿದ್ದರು. ವಾಜಪೇಯಿ ಅವರ ಪಾರ್ಥಿವ ಶರೀರವನ್ನು ಪಕ್ಷದ ಕಚೇರಿಗೆ ತರಬಹುದು ಎಂದು ಅವರು ನಿರೀಕ್ಷಿಸಿದ್ದರು.

ಸ್ವಾತಂತ್ರ್ಯೋತ್ಸವದ ದಿನವಾದ ಬುಧವಾರ ಸಂಜೆ ವಾಜಪೇಯಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಪ್ರಧಾನಿ ನರೇಂದ್ರ ಮೋದಿ ಅವರೇ ಆಸ್ಪತ್ರೆಗೆ ಖುದ್ದಾಗಿ ಭೇಟಿ ನೀಡಿಬಂದಿದ್ದರು.

ಗುರುವಾರ ಬೆಳಿಗ್ಗೆಯಿಂದಲೇ ಕೇಂದ್ರದ ಸಚಿವರು, ಬಿಜೆಪಿ ಮುಖಂಡರು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಏಮ್ಸ್‌ ಆಸ್ಪತ್ರೆಗೆ ಭೇಟಿ ನೀಡಿ ವಾಜಪೇಯಿ ಅವರ ಆರೋಗ್ಯ ಸ್ಥಿತಿ ವಿಚಾರಿಸುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ರಾಜನಾಥ ಸಿಂಗ್‌, ಲೋಕಸಭೆಯ ಸ್ಪೀಕರ್‌ ಸುಮಿತ್ರಾ ಮಹಾಜನ್‌, ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಕೇಂದ್ರದ ಆರೋಗ್ಯ ಸಚಿವ ಜೆ.ಪಿ. ನಡ್ಡಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮತ್ತಿತರ ಗಣ್ಯರು ಆಸ್ಪತ್ರೆಗೆ ಒಬ್ಬರಾದ ಒಬ್ಬರಂತೆ ದಿನವಿಡೀ ಭೇಟಿ ನೀಡಿದ್ದರಿಂದ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿತ್ತು. ಇದರಿಂದಾಗಿ ಏಮ್ಸ್‌ಗೆ ಸಂಪರ್ಕ ಕಲ್ಪಿಸುವ ಎಲ್ಲ ಮಾರ್ಗಗಳಲ್ಲೂ ಸಂಚಾರ ದಟ್ಟಣೆ ಮಿತಿಮೀರಿತ್ತು.


ಕಾಂಗ್ರೆಸ್‌ನಿಂದ ಭಾರತ ರಕ್ಷಿಸಿ ರ‍್ಯಾಲಿಯಲ್ಲಿ ವಿ.ಪಿ. ಸಿಂಗ್ ಹಾಗೂ ಅಜಿತ್ ಸಿಂಗ್ ಜೊತೆ ವಾಜಪೇಯಿ

ಸಾಮಾನ್ಯ ಹೊರ ರೋಗಿಗಳಿಗೆ, ಈಗಾಗಲೇ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಂಬಂಧಿಗಳಿಗೆ ಸಮಸ್ಯೆ ಎದುರಾಗದಿರಲಿ ಎಂಬ ಕಾರಣದಿಂದ ಭದ್ರತಾ ಸಿಬ್ಬಂದಿಯು ತೀವ್ರ ನಿಗಾ ವಹಿಸಿದ್ದರು. ಆಸ್ಪತ್ರೆ ಎದುರು ಸಂಚಾರ ದಟ್ಟಣೆಯಿಂದಾಗಿ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿದ್ದರಿಂದ ಜನಸಾಮಾನ್ಯರಿಗೆ ಸ್ವಲ್ಪ ತೊಂದರೆ ಎದುರಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !