ಗುರುವಾರ , ಜೂನ್ 24, 2021
27 °C
ಸಿಎಎ ವಿರುದ್ಧದ ಪ್ರತಿಭಟನೆಗೆ ಪ್ರಚೋದನೆ; ಆತ್ಮಾಹುತಿ ದಾಳಿಗೆ ಸಂಚು

ಐಎಸ್‌ ನಂಟು: ದಂಪತಿ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ದೆಹಲಿಯಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧದ ಪ್ರತಿಭಟನೆಗೆ ಪ್ರಚೋದನೆ ನೀಡಿದ ಆರೋಪದಡಿ ಇಸ್ಲಾಮಿಕ್‌ ಸ್ಟೇಟ್‌(ಐಎಸ್‌) ಸಂಪರ್ಕವಿದ್ದ ಕಾಶ್ಮೀರ ಮೂಲದ ದಂಪತಿಯನ್ನು ದಕ್ಷಿಣ ದೆಹಲಿಯ ಜಾಮಿಯಾ ನಗರದಲ್ಲಿ ಪೊಲೀಸರು ಬಂಧಿಸಿದ್ದಾರೆ. 

ದಂಪತಿ, ದೆಹಲಿಯಲ್ಲಿ ಆತ್ಮಾಹುತಿ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದರು ಹಾಗೂ ಭಯೋತ್ಪಾದನಾ ದಾಳಿ ನಡೆಸಲು ಮುಸ್ಲಿಂ ಯುವಕರಿಗೆ ಪ್ರೇರೇಪಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಸಿಎಎ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳ ಹಿಂದೆ ಐಎಸ್‌ ಕೈವಾಡವಿದೆ ಎಂದು ಮೂಲಗಳು ಮಾಹಿತಿ ನೀಡಿವೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.  

‘ಬಂಧಿತರನ್ನು ಜಹಾನ್‌ಜೇಬ್‌ ಸಮಿ ಹಾಗೂ ಆತನ ಪತ್ನಿ ಹಿನಾ ಬಾಶಿರ್‌ ಬೇಗ್‌ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಸಿಎಎ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಗೆ ಪ್ರಚೋದನೆ ನೀಡುತ್ತಿದ್ದರು’ ಎಂದು ಡಿಸಿಪಿ ಪ್ರಮೋದ್‌ ಸಿಂಗ್‌ ಕುಶ್ವಾ ತಿಳಿಸಿದರು. 

‘ಅಫ್ಗಾನಿಸ್ತಾನದಲ್ಲಿರುವ ಐಸ್‌ ಉಗ್ರ ಸಂಘಟನೆಯ ಪ್ರಮುಖ ನಾಯಕರ ಜೊತೆ ದಂಪತಿ ಸಂಪರ್ಕದಲ್ಲಿದ್ದರು. ದೇಶದಾದ್ಯಂತ ಸಿಎಎ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯನ್ನು ದಾಳವಾಗಿ ಬಳಸಿಕೊಂಡು, ಭಯೋತ್ಪಾದನಾ ದಾಳಿ ನಡೆಸಲು ಮುಸ್ಲಿಂ ಯುವಕರಿಗೆ ಪ್ರಚೋದಿಸುತ್ತಿದ್ದರು’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಸಮಿ ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ದಂಪತಿ ಸಾಮಾಜಿಕ ಜಾಲತಾಣದಲ್ಲಿ ‘ಇಂಡಿಯನ್‌ ಮುಸ್ಲಿಂ ಯುನೈಟ್‌’ ಹೆಸರಿನ ಖಾತೆ ಹೊಂದಿದ್ದರು. ಇದರ ಮೂಲಕ ಸಿಎಎ ವಿರುದ್ಧದದ ಪ್ರತಿಭಟನೆಗೆ ಜನರನ್ನು ಒಗ್ಗೂಡಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು