ಸೋಮವಾರ, ಮಾರ್ಚ್ 30, 2020
19 °C

ಮುರಿದ ಮೇಜು, ಸುಟ್ಟ ಪುಸ್ತಕ, ಒಡೆದ ಗೋಡೆ..ಕರಾಳ ಕಥೆ ಹೇಳುತ್ತಿವೆ ದೆಹಲಿ ಶಾಲೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುರಿದ ಮೇಜು, ಸುಟ್ಟ ಪುಸ್ತಕ, ಅರೆ ಬೆಂದ ಸ್ಥಿತಿಯಲ್ಲಿರುವ ಬೋರ್ಡು, ಧ್ವಂಸಗೊಂಡ ಗೋಡೆ...  ಇದು ಕಾಣಸಿಗುವುದು ಈಶಾನ್ಯ ದೆಹಲಿಯ ಶಾಲೆಗಳಲ್ಲಿ. ಜನಾಂಗೀಯ ದ್ವೇಷ ದಳ್ಳುರಿಗೆ ಸಿಕ್ಕು ನಲುತ್ತಿರುವ ದೆಹಲಿಯ ಕರಾಳ ಕಥೆಗಳಿಗೀಗ ಅನಾವರಣಗೊಳ್ಳುವ ಸಮಯ.

‘ವೆಲ್‌ಕಮ್‌ ಟು ವೆರಿ ಹ್ಯಾಪಿ ಸ್ಕೂಲ್‌’ ಎಂಬ ಬರಹ ಹೊಂದಿರುವ ಈಶಾನ್ಯ ದೆಹಲಿಯ ಬ್ರಿಜ್‌ಪುರಿ ಪ್ರದೇಶದ ಖಾಸಗಿ ಶಾಲೆಯ ಫಲಕವು ಅರ್ಧ ಸುಟ್ಟು ಹೋಗಿದೆ. ಹಿಂಸಾಚಾರದ ಉನ್ಮಾದದಲ್ಲಿ ಧ್ವಂಸಗೊಂಡ ಶಾಲೆಯ ಕಟ್ಟಡವೀಗ ಛಿದ್ರಗೊಂಡ ಸ್ಥಿತಿಯಲ್ಲಿದೆ. ಸುಟ್ಟ ವಾಸನೆ ಸೂಸುವ ಶಾಲೆಯ ಒಳಾಂಗಣವು ಮುರಿದ ಮೇಜು ಹಾಗೂ ಸುಟ್ಟ ಪುಸ್ತಕಗಳ ನೆಲೆಯಾಗಿ ಮಾರ್ಪಟ್ಟಿದೆ.

37 ವರ್ಷ ಹಳೆಯದಾದ ಅರುಣ್‌ ಮಾಡರ್ನ್‌ ಸೀನಿಯರ್ ಸೆಕೆಂಡರಿ ಶಾಲೆಯು ಅಕ್ಷರಶಃ ಸ್ಮಶಾನದಂತೆ ಭಾಸವಾಗುತ್ತಿದೆ. ಶಾಲೆಯಲ್ಲಿನ ಸುಮಾರು ಎಪ್ಪತ್ತು ಲಕ್ಷ ರುಪಾಯಿಗೂ ಅಧಿಕ ಪಿಠೋಪಕರಣಗಳು ನಾಶವಾಗಿವೆ. 

ಈ ಬಗ್ಗೆ ನೋವು ಹಂಚಿಕೊಂಡಿರುವ ಶಾಲೆಯ ಪ್ರಧಾನ ಶಿಕ್ಷಕಿ ಜ್ಯೋತಿ ರಾಣಿ ಅವರು, ‘ನನ್ನ ಶಾಲೆಯಲ್ಲಿ ನಡೆದ ಕರಾಳ ಘಟನೆಯ ಆಘಾತದಿಂದ ನಾನಿನ್ನೂ ಹೊರಬರಲು ಸಾಧ್ಯವಾಗುತ್ತಿಲ್ಲ. ಘಟನೆ ನಡೆದ ಸಂದರ್ಭ ಮಕ್ಕಳು ಶಾಲೆಯಲ್ಲಿ ಇರಲಿಲ್ಲ ಎಂಬುದೇ ದೊಡ್ಡ ಸಮಾಧಾನದ ಸಂಗತಿ. ಗಲಭೆಕೋರರು ದಾಳಿಯಿಟ್ಟ ಸಮಯದಲ್ಲಿ ಮಕ್ಕಳು ಶಾಲೆಯಲ್ಲಿ ಇದ್ದಿದ್ದರೆ ಏನಾಗುತ್ತಿತ್ತು ಎಂಬುದು ಕಲ್ಪನೆಗೂ ನಿಲುಕುತ್ತಿಲ್ಲ’ ಎಂದು ಹೇಳಿದ್ದಾರೆ.

‘ದೊಂಬಿಕೋರರು ಮಂಗಳವಾರ ಸಂಜೆ ಶಾಲೆಗೆ ನುಗ್ಗಿದ ಸಂದರ್ಭದಲ್ಲಿ ಅಲ್ಲಿದ್ದ ಭದ್ರತಾ ಸಿಬ್ಬಂದಿ ತಮ್ಮ ಪ್ರಾಣ ಉಳಿಸಿಕೊಳ್ಳಲು ಹೊರ ಓಡಿದ್ದಾರೆ. ಘಟನೆ ನಡೆದ ಎರಡು ದಿನಗಳ ಬಳಿಕ ನಾವು ಶಾಲೆಗೆ ತೆರಳುವ ದೈರ್ಯ ಮಾಡಬೇಕಾಯಿತು. ಈಗ ಶಾಲೆಯಲ್ಲಿ ಮುರಿದ ಮೇಜುಗಳು, ಗ್ರಂಥಾಲಯದಲ್ಲಿ ಸುಟ್ಟ ಪುಸ್ತಕಗಳನ್ನು ಕಾಣಬಹುದು. ಶಾಲೆಯೀಗ ಸ್ಮಶಾನದಂತೆ ಭಾಸವಾಗುತ್ತಿದೆ’ ಎಂದು ಜ್ಯೋತಿ ರಾಣಿ ಖೇದ ವ್ಯಕ್ತಪಡಿಸಿದ್ದಾರೆ. 

ಘಟನೆಯ ಬಗ್ಗೆ ಅಳಲು ತೋಡಿಕೊಂಡಿರುವ ಶಾಹೀನ್ (ಇದೇ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿರುವ ವಿದ್ಯಾರ್ಥಿ) ಪೋಷಕರು, ‘ಮಕ್ಕಳಿಗೆ ಶಿಕ್ಷಣ ನೀಡುವ ಶಾಲೆಯನ್ನೇಕೆ ಗಲಭೆಕೋರರು ಸುಟ್ಟಹಾಕಬೇಕು? ಅವರು ಎಲ್ಲವನ್ನು ಸುಟ್ಟು ಹಾಕುತ್ತಿದ್ದಾರೆ. ಕನಿಷ್ಟ ಪಕ್ಷ ಶಾಲೆಯನ್ನಾದರೂ ಉಳಿಸಬೇಕಿತ್ತು’ ಎಂದಿದ್ದಾರೆ. 

ಇಂತಹುದೇ ಕರಾಳ ಘಟನೆ ಶಿವ ವಿಹಾರದಲ್ಲಿರುವ ರಾಜಧಾನಿ ಪಬ್ಲಿಕ್‌ ಶಾಲೆಯಲ್ಲಿ ನಡೆದಿದೆ. ಕಿಂಡರ್‌ಗಾರ್ಟನ್‌ ವಿದ್ಯಾರ್ಥಿಗಳ ಬ್ಯಾಗು, ವಸ್ತು ಪ್ರದರ್ಶನಕ್ಕೆ ತಯಾರಿಸಲಾಗಿದ್ದ ಮಾದರಿಗಳು ಮತ್ತು ಗ್ರಂಥಾಲಯಲ್ಲಿದ್ದ ಪುಸ್ತಕಗಳನ್ನು ಸುಟ್ಟು ಹಾಕಲಾಗಿದೆ.

ಇದೇ ಪ್ರದೇಶದಲ್ಲಿರುವ ಡಿಪಿಆರ್ ಶಾಲೆಯಲ್ಲಿ ಇಂತಹುದೇ ಹೃದಯ ಕದಡುವ ದೃಶ್ಯಗಳನ್ನು ಕಾಣಬಹುದಾಗಿದೆ. ಶಾಲೆಯ ಮುಖ್ಯ ದ್ವಾರವನ್ನು ಮುರಿದು ಹಾಕಿರುವ ದಾಳಿಕೋರರು, ಒಳಗಿದ್ದ ಪಿರೋಪಕರಣಗಳನ್ನು ದ್ವಂಸ ಮಾಡಿದ್ದಾರೆ.

ಜಫ್ರಾಬಾದ್‌, ಮೌಜ್‌ಪುರ, ಬಾಬರ್‌ಪುರ್‌, ಯಮುನಾ ವಿವಾರ, ಭಜನ್‌ಪುರ, ಚಾಂದ್‌ ಬಾಗ್‌ ಮತ್ತು ಶಿವ ವಿಹಾರ ಪ್ರದೇಶಗಳಲ್ಲಿರುವ ಇನ್ನೂ ಹಲವು ಶಾಲೆಗಳನ್ನು ಗುರಿಯಾಗಿಸಿಕೊಂಡು ಗಲಭೆಕೋರರು ದಾಳಿ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು