ಶನಿವಾರ, ಆಗಸ್ಟ್ 17, 2019
24 °C
ದೇಶದ ಯಾವ ಮೂಲೆಯಲ್ಲಿದ್ದರೂ ಗುರುತಿಸಿ ಕ್ರಮ: ಲೋಕಸಭೆಯಲ್ಲಿ ಅಮಿತ್‌ ಶಾ

ಅಕ್ರಮ ವಲಸಿಗರ ಗಡಿಪಾರು ಖಚಿತ

Published:
Updated:
Prajavani

ನವದೆಹಲಿ: ದೇಶದ ಯಾವುದೇ ಮೂಲೆಯಲ್ಲಿ ಅಕ್ರಮ ವಲಸಿಗರು ಇದ್ದರೂ ಅವರನ್ನು ಗುರುತಿಸಿ, ಹೊರಗೆ ಹಾಕಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಅಸ್ಸಾಂನಲ್ಲಿ ಕೈಗೊಳ್ಳಲಾಗಿರುವ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು (ಎನ್‌ಆರ್‌ಸಿ) ದೇಶದಾದ್ಯಂತ ವಿಸ್ತರಿಸಲಾಗುವುದು ಎಂಬ ಬಿಜೆಪಿಯ ಪ್ರಣಾಳಿಕೆಯ ಅಂಶವನ್ನು ಜಾರಿಗೊಳಿಸಲಾಗುವುದು ಎಂಬ ಸೂಚನೆಯನ್ನು ಈ ಮೂಲಕ ಅವರು ನೀಡಿದ್ದಾರೆ. 

ಎನ್‌ಆರ್‌ಸಿಯನ್ನು ದೇಶದಾದ್ಯಂತ ವಿಸ್ತರಿಸುವ ಯೋಜನೆ ಸರ್ಕಾರಕ್ಕೆ ಇದೆಯೇ ಎಂದು ಎಸ್‌ಪಿ ಸದಸ್ಯ ಜಾವೇದ್‌ ಅಲಿ ಖಾನ್‌ ಕೇಳಿದ ಪ್ರಶ್ನೆಗೆ ಶಾ ಅವರು ಹೀಗೆ ಉತ್ತರಿಸಿದ್ದಾರೆ.

‘ಇದು ಅತ್ಯಂತ ಉತ್ತಮ ಪ್ರಶ್ನೆ. ಎನ್‌ಆರ್‌ಸಿ ಅಸ್ಸಾಂ ಒಪ್ಪಂದದ ಭಾಗ. ಜತೆಗೆ ಅದು ಬಿಜೆಪಿಯ ಪ್ರಣಾಳಿಕೆಯಲ್ಲಿಯೂ ಇತ್ತು. ಅದರ ಆಧಾರದಲ್ಲಿಯೇ ಬಿಜೆಪಿ ಅಧಿಕಾರಕ್ಕೆ ಬಂದಿದೆ. ದೇಶದ ಯಾವುದೇ ಭಾಗದಲ್ಲಿ ಅಕ್ರಮ ವಲಸಿಗರು ಇದ್ದರೂ ಅವರನ್ನು ಗುರುತಿಸಿ ಅಂತರರಾಷ್ಟ್ರೀಯ ಕಾನೂನು ಪ್ರಕಾರ ಗಡಿಪಾರು ಮಾಡಲಾಗುವುದು’ ಎಂದು ಶಾ ಹೇಳಿದರು. 

ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಅಸ್ಸಾಂನಲ್ಲಿ ಮಾತ್ರ ಈಗ ಎನ್‌ಆರ್‌ಸಿಯನ್ನು ಪರಿಷ್ಕರಿಸಲಾಗುತ್ತಿದೆ. ಇದಕ್ಕೆ ಜುಲೈ 31 ಗಡುವು. ಆದರೆ, ಈ ಪ್ರಕ್ರಿಯೆಗೆ ಅಸ್ಸಾಂನಲ್ಲಿ ಭಾರಿ ಟೀಕೆ ವ್ಯಕ್ತವಾಗಿದೆ.   

ಅಸ್ಸಾಂನಲ್ಲಿ ಎನ್‌ಆರ್‌ಸಿ ಗಡುವು ವಿಸ್ತರಿಸಲು ಹಲವು ಮನವಿಗಳು ಬಂದಿವೆ. ಲೋಪಗಳನ್ನು ಸರಿಪಡಿಸಲು ಗಡುವು ವಿಸ್ತರಿಸಲೇಬೇಕು ಎಂದು ಕೋರಿ 25 ಲಕ್ಷ ಜನರು ಸಹಿ ಮಾಡಿರುವ ಮನವಿ ಕೇಂದ್ರ ಸರ್ಕಾರ ಮತ್ತು ರಾಷ್ಟ್ರಪತಿಗೆ ಸಲ್ಲಿಕೆಯಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ರಾಜ್ಯ ಸಚಿವ ನಿತ್ಯಾನಂದ ರಾಯ್‌ ಹೇಳಿದರು. 

ಹಲವು ಪೌರರ ಹೆಸರುಗಳು ಬಿಟ್ಟು ಹೋಗಿವೆ  ಮತ್ತು ಹಲವು ಅಕ್ರಮ ವಲಸಿಗರ ಹೆಸರು ಎನ್‌ಆರ್‌ಸಿಯಲ್ಲಿ ಸೇರಿವೆ. ಹಾಗಾಗಿ ಎನ್‌ಆರ್‌ಸಿ ಪರಿಷ್ಕರಣೆಯ ಗಡುವು ವಿಸ್ತರಿಸುವಂತೆ ಸುಪ್ರೀಂ ಕೋರ್ಟ್‌ ಅನ್ನು ಕೇಂದ್ರವು ಕೋರಿದೆ ಎಂದು ಅವರು ತಿಳಿಸಿದರು. 

ಯಾವುದೇ ಲೋಪ ಇಲ್ಲದೆ ಎನ್‌ಆರ್‌ಸಿ ಜಾರಿ ಆಗಲಿದೆ, ಆದರೆ ಸ್ವಲ್ಪ ವಿಳಂಬ ಆಗಬಹುದು. ನಿಜವಾದ ಪೌರರ ಹೆಸರು ಬಿಟ್ಟು ಹೋಗದಂತೆ ಎಲ್ಲ ಎಚ್ಚರಿಕೆ ವಹಿಸಲಾಗುವುದು ಎಂದು ರಾಯ್‌ ಹೇಳಿದರು. 

ಬಿಜೆಪಿ ಪ್ರಣಾಳಿಕೆ ಹೇಳಿದ್ದೇನು?

ಅಕ್ರಮ ವಲಸೆಯಿಂದಾಗಿ ಹಲವು ಪ್ರದೇಶಗಳ ಸಾಂಸ್ಕೃತಿಕ ಮತ್ತು ಭಾಷಿಕ ಲಕ್ಷಣಗಳಲ್ಲಿ ಭಾರಿ ಬದಲಾವಣೆ ಆಗಿದೆ. ಇದು ಸ್ಥಳೀಯ ಜನರ ಜೀವನೋಪಾಯ ಮತ್ತು ಉದ್ಯೋಗದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಹಾಗಾಗಿ, ಆದ್ಯತೆಯ ಮೇಲೆ ಎನ್‌ಆರ್‌ಸಿ ಪ್ರಕ್ರಿಯೆಯನ್ನು ತ್ವರಿತವಾಗಿ ಜಾರಿಗೆ ತರಲಾಗುವುದು. ಮುಂದಿನ ದಿನಗಳಲ್ಲಿ, ಎನ್‌ಆರ್‌ಸಿಯನ್ನು ಹಂತ ಹಂತವಾಗಿ ದೇಶದ ಇತರ ಭಾಗಗಳಲ್ಲಿಯೂ ಅನುಷ್ಠಾನ ಮಾಡಲಾಗುವುದು.

Post Comments (+)