ದೇವರಸನಕೋಟೆಯ ದುರ್ಗ

7
ಒನ್ ಡೇ ಟ್ರಿಪ್‌

ದೇವರಸನಕೋಟೆಯ ದುರ್ಗ

Published:
Updated:
Prajavani

ಸುತ್ತಲೂ ಹಸಿರು ಹೊದ್ದುಕೊಂಡಿರುವ ಬೆಟ್ಟಗಳು. ನಡುವೆ ಇರುವುದೇ ನಾರಾಯಣ ದುರ್ಗ ಬೆಟ್ಟ. ಇದು ಮಂಡ್ಯಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನಲ್ಲಿದೆ. ಕೆ.ಆರ್.ಪೇಟೆಯಿಂದ 10 ಕಿ.ಮೀ ದೂರದಲ್ಲಿರುವ ಈ ತಾಣ, ಇತಿಹಾಸ ಪ್ರಿಯರಿಗೆ ಅಧ್ಯಯನ ಯೋಗ್ಯ ಪ್ರದೇಶ. ಸಾಹಸ ಪ್ರಿಯರಿಗೆ ಚಾರಣ ಮಾಡುವ ಸ್ಥಳ. ಪ್ರವಾಸಿಗರಿಗೆ ನಯನ ಮನೋಹರ ತಾಣ.

ನಾರಾಯಣದುರ್ಗದ ಸುತ್ತ ಮಾದಗಿತ್ತಿ ಬೆಟ್ಟ, ಮುದಿಬೆಟ್ಟ, ಹಂದಿಬೆಟ್ಟಗಳಿವೆ. ಜತೆಗೆ ವಿಶಾಲವಾದ ಅರಣ್ಯವಿದೆ. ಈ ಕಾಡನ್ನು ತೋಳಗಳ ಅಭಯಾರಣ್ಯ ಎಂದು ಘೋಷಿಸಲಾಗಿದೆ. ಇಲ್ಲಿ ತೋಳದ ಜತೆಗೆ ಚಿರತೆ, ನವಿಲು, ಜಿಂಕೆಗಳೂ ಇವೆ. ಬೆಟ್ಟದ ತಪ್ಪಲಲ್ಲಿ ನೂರಾರು ಬಗೆಯ ಸಸ್ಯ ಸಂಕುಲವಿದೆ.

ಬೆಟ್ಟವನ್ನು ಏರುವುದು ತ್ರಾಸದಾಯಕ. ಆದರೆ ಹತ್ತಿದ ನಂತರ ಸಿಗುವ ಆನಂದ ವರ್ಣಿಸಲು ಅಸದಳ. ಚಳಿಗಾಲದ ಮುಂಜಾವಿನಲ್ಲಿ ಬೆಟ್ಟ ಏರಲು ಸೂಕ್ತ ಸಮಯ. ಈ ಬೆಟ್ಟದ ತುದಿಯಿಂದ ಮೇಲುಕೋಟೆ, ಚಾಮುಂಡಿ ಬೆಟ್ಟ, ಕನ್ನಂಬಾಡಿ ಜಲಾಶಯ ಆದಿಚುಂಚನಗಿರಿ ಬೆಟ್ಟ, ಶಿವಗಂಗೆ ಬೆಟ್ಟಗಳನ್ನು ನೋಡಬಹುದು. ಬೆಟ್ಟದ ಕೆಳಗೆ ಕಾಣುವ ಹೊಲ, ಗದ್ದೆ, ತೋಟ, ಕೆರೆಗಳ ದೃಶ್ಯ ನಯನ ಮನೋಹರ. 

ಇತಿಹಾಸದ ದಾಖಲೆಗಳ ಪ್ರಕಾರ, ಈ ಬೆಟ್ಟದ ಶ್ರೇಣಿಯಲ್ಲಿ ಒಂದು ಕಾಲದಲ್ಲಿ ಸಿದ್ದರ ಆವಾಸ ತಾಣವಾಗಿತ್ತು. ಬೆಟ್ಟದ ಬುಡದಿಂದ ಮೇಲಿನವರೆವಿಗೂ ಸುರಂಗವಿದ್ದು, ಸಿದ್ದರು ಇದರ ಮೂಲಕವೇ ಬೆಟ್ಟ ಏರಲು ಬಳಸುತ್ತಿದ್ದರಂತೆ. ಈಗಲೂ ಅಂಥ ದಾರಿಗಳಿವೆ. ಆದರೆ, ಅವುಗಳನ್ನು ಮುಚ್ಚಲಾಗಿದೆ. ಮುದಿಬೆಟ್ಟದಲ್ಲಿ ಹಲವು ಗುಹೆಗಳಿವೆ. ಅವು ಶಿಲಾಯುಗದ ಮಾಹಿತಿಗಳನ್ನು ತೆರೆದಿಡುತ್ತವೆ ಎನ್ನುತ್ತಾರೆ ಶಿಕ್ಷಕ ರಂಗಸ್ವಾಮಿ.

ಐತಿಹಾಸಿಕ ಕೋಟೆ

ನಾರಾಯಣ ದುರ್ಗವು ವಿಜಯನಗರ ಕಾಲದಲ್ಲಿ ಪ್ರವರ್ಧಮಾನದಲ್ಲಿತ್ತು. ಹೊಳೆನರಸೀಪುರವನ್ನು ಕೇಂದ್ರವನ್ನಾಗಿಸಿಕೊಂಡು ಆಳುತಿದ್ದ ದೇವರಸ ಇಲ್ಲಿನ ಕೋಟೆ ನಿರ್ಮಿಸಿದ. ಬೆಟ್ಟದ ಬುಡದಿಂದ ಆರು ಸುತ್ತು ಕೋಟೆ ಕಟ್ಟಿರುವುದು ವೈಶಿಷ್ಟ್ಯವಾಗಿದ್ದು, ಕೋಟೆಯ ಬಾಗಿಲುಗಳು ಒಂದಕ್ಕಿಂತ ಒಂದು ವಿಭಿನ್ನವಾಗಿವೆ, ಕಲಾತ್ಮಕವಾಗಿವೆ. ಏಳನೇ ಕೋಟೆ ಬೆಟ್ಟದ ಮೇಲ್ಭಾಗದಲ್ಲಿದೆ. ಕೋಟೆಯು ಅಂಕುಡೊಂಕಾಗಿದೆ. ಕಾರಣ, ಶತ್ರುಗಳು ಬೆಟ್ಟದ ಮೇಲೆ ಬಾರದಂತೆ ತಡೆಗಟ್ಟುವ ಉದ್ದೇಶದಿಂದ ಹೀಗೆ ನಿರ್ಮಿಸಲಾಗಿದೆ ಎನ್ನುತ್ತಾರೆ ಇತಿಹಾಸಕಾರರು.

ಶತ್ರುಗಳು ಕೋಟೆ ನುಸುಳದಂತೆ, ನುಸುಳಿದರೂ, ತಪ್ಪಿಸಿಕೊಂಡು ಹೋಗಲು ಸಾಧ್ಯವಾದಂತೆ ವಿನ್ಯಾಸ ಮಾಡಲಾಗಿತ್ತಂತೆ. ಅದರ ವಿನ್ಯಾಸದ ಅವಶೇಷಗಳು ಅಲ್ಲಲ್ಲಿ ಕಾಣುತ್ತವೆ.

ಪಾಳೆಗಾರ ದೇವರಸನ ಕಾಲದಲ್ಲಿ ಇಲ್ಲಿನ ಕೋಟೆ, ಮದ್ದಿನ ಮನೆ, ದೇವಸ್ಥಾನಗಳು ನಿರ್ಮಾಣವಾದವು. ಈಗಲೂ ಅದರ ಕುರುಹುಗಳನ್ನು ಇಲ್ಲಿ ಕಾಣಬಹುದು. ಬೆಟ್ಟದ ತುದಿಯಲ್ಲಿ ಕೊನೆಯ ಕೋಟೆ ಇದ್ದು ಜತೆಗೆ ಮದ್ದಿನ ಮನೆಯೂ ಇದೆ. ಇಲ್ಲಿ ಲಿಂಗಸ್ವರೂಪಿ ಕೈವಲ್ಯೇಶ್ವರನ ವಿಗ್ರಹವಿದೆ. ದ್ರಾವಿಡ ವಾಸ್ತುಶಿಲ್ಪದ ದೇವಾಲಯವಿದ್ದು, ಶಿಥಿಲಾವಸ್ಥೆಯಲ್ಲಿದೆ. ಇದನ್ನು ವಿಜಯನಗರ ಕಾಲದ್ದೆಂದು ಹೇಳಲಾಗುತ್ತದೆ.

ದೇವಾಲಯದ ಸಮೀಪ ಸದಾ ನೀರಿರುವ ಒಂದು ಹೊಂಡವಿದೆ. ಅದರಲ್ಲಿರುವ ನೀರು ಸಿಹಿಯಾಗಿದೆ. ಇದನ್ನು ಭೀಮ ತಿರುವಿದ ಹೊಂಡ ಎನ್ನುತ್ತಾರೆ. ‘ಪಾಂಡವರು ವನವಾಸಕ್ಕೆ ಬಂದಿದ್ದಾಗ ಇಲ್ಲಿ ತಂಗಿದ್ದರು. ಭೀಮ ತನ್ನ ತೊಡೆಯನ್ನು ತಿರುವಿ, ಇಲ್ಲಿ ನೀರು ಬರುವಂತೆ ಮಾಡಿದನಂತೆ ಎಂಬ ನಂಬಿಕೆಯೂ ಇದೆ’ ಎನ್ನುತ್ತಾರೆ ಉಪನ್ಯಾಸಕ ಆರ್.ಬಿ. ಪದ್ಮನಾಭ್.

ವಕ್ಕರಿಸಿದ ಕಲ್ಲೆಂದೆರೆ ನಡುಕ

ದೇವಸ್ಥಾನದ ಹಿಂಬಾಗದಲ್ಲಿ ವಕ್ಕರಿಸಿದ ಕಲ್ಲು ಇದ್ದು ಇದು ಭೂಮಿಗೆ ಚಾಚಿಕೊಂಡಿದೆ. ಒಂದು ರೀತಿ ಭಯ ಹುಟ್ಟಿಸುವಂತಿದೆ. ಹಿಂದಿನ ಕಾಲದಲ್ಲಿ ತಪ್ಪು ಮಾಡಿದವರನ್ನು ಇಲ್ಲಿಂದ ತಳ್ಳಿ ಮರಣದಂಡನೆಗೆ ಒಳಪಡಿಸಲಾಗುತಿತ್ತಂತೆ. ಹಾಗಾಗಿ ಇದನ್ನು ವಕ್ಕರಿಸಿದ ಕಲ್ಲು ಎನ್ನತ್ತಾರೆ. ಇದನ್ನು ನೆನೆಸಿಕೊಂಡರೆ ಇಂದಿಗೂ ಜನ ನಡುಗುತ್ತಾರೆ ಎನ್ನುತ್ತಾರೆ ಇತಿಹಾಸ ಉಪನ್ಯಾಸಕ ಉದಯಕುಮಾರ್.

ಹೋಗುವುದು ಹೇಗೆ ?

* ಮಂಡ್ಯದಿಂದ ಮೇಲುಕೋಟೆ ಮಾರ್ಗವಾಗಿ ನಾರಾಯಣದುರ್ಗ ತಲುಪಬಹುದು. ಈ ದಾರಿಯಲ್ಲಿ ಬರುವವರು ರಾಯಸಮುದ್ರ ಗೇಟ್ ಬಳಿ ಇಳಿಯಬೇಕು. ಇಲ್ಲಿಂದ ನಾಲ್ಕು ಕಿಲೋಮೀಟರ್ ನಡೆದರೆ ಕೋಟೆ ಸಿಗುತ್ತದೆ.

* ಮೈಸೂರು-ಬೆಂಗಳೂರು ಕಡೆಯಿಂದ ಬರುವವರು ಕೆ.ಆರ್.ಪೇಟೆಗೆ ಬಂದು ಮೇಲುಕೋಟೆ ರಸ್ತೆಯಲ್ಲಿ 10 ಕಿ.ಮೀಟರ್ ಸಾಗಿದರೆ ಮುಖ್ಯರಸ್ಥೆ ಸಿಗುತ್ತದೆ. ಅಲ್ಲಿಂದ ನಾಲ್ಕು ಕಿ.ಮೀ ನಡೆದರೆ, ಬೆಟ್ಟದ ತಪ್ಪಲು ತಲುಪುಬಹುದು.

* ಮುಖ್ಯರಸ್ತೆಗೆ ಖಾಸಗಿ, ಸಾರಿಗೆ ಬಸ್‌ಗಳು ಇವೆ. ಖಾಸಗಿ ವಾಹನಗಳು, ಬೈಕ್‌ಗಳಲ್ಲಿ ಹೋಗುವವರು ಬೆಟ್ಟದ ಸಮೀಪಕ್ಕೆ ಹೋಗಿ, ಕೋಟೆ ಏರಬಹುದು.

* ‌ಬೆಟ್ಟ ಏರುವುದಕ್ಕೆ ದೂವರೆಗಂಟೆ ಸಮಯ ಹಿಡಿಯುತ್ತದೆ. ಕೆಳಗಿಳಿದು ಬಂದ ನಂತರ ವಿರಮಿಸಿಕೊಳ್ಳಲು ಕೆಳಭಾಗದಲ್ಲಿ ದೇವಾಲಯವಿದೆ. ಆದರೆ ಅಂಗಡಿ, ಹೋಟೆಲ್‌ಗಳಿಲ್ಲ. ಎಲ್ಲ ವ್ಯವಸ್ಥೆ ಮಾಡಿಕೊಂಡೇ ಹೋಗಬೇಕು.

* ಕೋಟೆ ಏರುವುದಕ್ಕೆ ಮುಂಜಾನೆ ಸೂಕ್ತ ಸಮಯ.

* ಒಂದು ದಿನದ ಪ್ರವಾಸಕ್ಕೆ ಹೇಳಿ ಮಾಡಿಸಿರುವ ತಾಣಕ್ಕೆ ಬರುವವರು ಮೇಲುಕೋಟೆ, ಶ್ರವಣಬೆಳಗೊಳ, ಸಿಂಧಘಟ್ಟ, ಹೊಸಹೊಳಲು, ಕಿಕ್ಕೇರಿ, ಗೋವಿಂದನಹಳ್ಳಿಯ ಪ್ರಸಿದ್ದ ದೇವಾಲಯಗಳಿಗೂ ಭೇಟಿ ನೀಡಬಹುದು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !