ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣದ ಭದ್ರಾಚಲಂನಲ್ಲಿ ಮುಖ್ಯಮಂತ್ರಿ ಬಗ್ಗೆ ಅಷ್ಟೇಕೆ ಸಿಟ್ಟು

Last Updated 3 ಡಿಸೆಂಬರ್ 2018, 10:34 IST
ಅಕ್ಷರ ಗಾತ್ರ

ಭದ್ರಾಚಲಂ: ರಾಷ್ಟ್ರರಾಜಕಾರಣದಲ್ಲಿ ಅಯೋಧ್ಯೆಯ ರಾಮ ಮಂದಿರ ಮತ್ತೆ ಚರ್ಚೆಯ ವಸ್ತುವಾಗಿದೆ. ಆದರೆ ತೆಲಂಗಾಣದಲ್ಲಿರುವ ದಕ್ಷಿಣ ಭಾರತದ ಅಯೋಧ್ಯೆ ಎಂದೇ ಖ್ಯಾತವಾಗಿರುವ ಭದ್ರಾಚಲಂ ಪಟ್ಟಣದಲ್ಲಿ ಮಾತ್ರ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ವಿರುದ್ಧ ಆಕ್ರೋಶ ಮಡುಗಟ್ಟಿದೆ. ಪಟ್ಟಣವನ್ನು ಅಭಿವೃದ್ಧಿಪಡಿಸಲು ಟಿಆರ್‌ಎಸ್ ಏನೂ ಮಾಡಿಲ್ಲ, ಮಾಡುವ ಉದ್ದೇಶವೂ ಇದ್ದಂತಿಲ್ಲ ಎಂಬ ಅಭಿಪ್ರಾಯ ಜನರ ಮನದಲ್ಲಿ ಆಳವಾಗಿ ಬೇರೂರಿದೆ.

ದೇಗುಲಗಳ ಪಟ್ಟಣದಿಂದ ಕೇವಲ 32 ಕಿ.ಮೀ. ದೂರದಲ್ಲಿ ‘ಪರ್ಣಶಾಲಾ’ ಹೆಸರಿನ ಪ್ರವಾಸಿ ತಾಣವಿದೆ. ರಾಮ ವನವಾಸದ ಕೆಲ ದಿನಗಳನ್ನು ಇಲ್ಲಿ ಕಳೆದಿದ್ದ. ರಾವಣ ಸೀತೆಯನ್ನು ಹೊತ್ತೊಯ್ದಿದ್ದು ಇಲ್ಲಿಂದಲೇ ಎಂದು ಸ್ಥಳೀಯರು ಕಥೆಗಳನ್ನು ಹೇಳುತ್ತಾರೆ. ದೇಶದೆಲ್ಲೆಡೆಯಿಂದ ಪ್ರವಾಸಿಗರುವ ಈ ಸ್ಥಳದಲ್ಲಿ ಕಸ ಎಲ್ಲೆಲ್ಲೂ ರಾರಾಜಿಸುತ್ತದೆ. ‘ಸರಿಯಾಗಿ ನಿರ್ವಹಿಸಿದ್ದರೆ ಇದು ತೆಲಂಗಾಣದ ಹೆಮ್ಮೆ ಎನಿಸಬೇಕಿತ್ತು. ಆದರೆ ಈಗ ನೋಡಿ ನಮ್ಮ ಊರು ಹೇಗಿದೆ? ಸರಿಯಾಗಿ ಕಸ ಹಾಕಲು ಸ್ಥಳವಿಲ್ಲ. ಎಲ್ಲರೂ ಕಸ ತಂದು ಗೋದಾವರಿ ನದಿಯಲ್ಲಿ ಸುರಿಯುತ್ತಾರೆ’ ಎಂದು ದೇಗುಲ ಸಂಕೀರ್ಣದ ಬಳಿಯೇ ವಾಸವಿರುವ ಆದಿಲಕ್ಷ್ಮಿ ಬೇಸರ ತೋಡಿಕೊಂಡರು.

‘ರಾಜ್ಯ ಸರ್ಕಾರದ ವರ್ತನೆಯಿಂದ ನಾವೆಲ್ಲಾ ರೋಸಿ ಹೋಗಿದ್ದೇವೆ. ಪಟ್ಟಣದ ಅಭಿವೃದ್ಧಿಗಾಗಿ ₹100 ಕೋಟೆ ವೆಚ್ಚದ ಯೋಜನೆ ರೂಪಿಸಲಾಗಿತ್ತು. ಆದರೆ ಈವರೆಗೆ ಹಣ ಬಿಡುಗಡೆ ಮಾಡಲಿಲ್ಲ. ಚಿನ್ನ ಜೀಯರ್ ಸ್ವಾಮಿ ಮಠವನ್ನು ಕೆಡವ ಬೇಕಾಗುತ್ತೆ ಎನ್ನುವ ಒಂದೇ ಕಾರಣಕ್ಕೆ ಸರ್ಕಾರ ಅಭಿವೃದ್ಧಿ ಕಾಮಗಾರಿಗಳನ್ನು ಆರಂಭಿಸಲಿಲ್ಲ ಎಂದೇ ಎಲ್ಲರೂ ನಂಬಿದ್ದಾರೆ’ ಎಂದು ಸೀತಾರಾಮಚಂದ್ರಸ್ವಾಮಿ ದೇಗುಲದಲ್ಲಿ ದರ್ಶನಕ್ಕಾಗಿ ಪಾಳಿಯಲ್ಲಿ ನಿಂತಿದ್ದ ಸ್ಥಳೀಯರಾದ ರಾಮ್‌ಪ್ರಸಾದ್‌ ಸಿಟ್ಟಿನಿಂದಲೇ ಮಾತನಾಡಿದರು.

ಟಿಆರ್‌ಎಸ್‌ನ ಮುಖ್ಯಸ್ಥ ಮತ್ತು ತೆಲಂಗಾಣದ ಉಸ್ತುವಾರಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ (ಕೆಸಿಆರ್) ‘ಚಿನ್ನ ಜೀಯರ್’ ಅನುಯಾಯಿಯೂ ಹೌದು. ‘ಚುನಾವಣೆಗೂ ಮೊದಲೇ ಕೆಸಿಆರ್ ಭದ್ರಾಚಲಂ ಬಿಟ್ಟುಕೊಟ್ಟಿದ್ದಾರೆ’ ಎಂದೇ ಸ್ಥಳೀಯರು ಮತ್ತು ಪ್ರತಿಪಕ್ಷ ನಾಯಕರು ಹೇಳುತ್ತಾರೆ. ಈ ಆರೋಪಗಳಿಗೆ ಇಂಬುಕೊಡುವಂತೆ ಅಕ್ಕಪಕ್ಕದ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದರೂ ಟಿಆರ್‌ಎಸ್ ನಾಯಕರು ಭದ್ರಾಚಲಂನತ್ತ ಸುಳಿಯುತ್ತಿಲ್ಲ.

‘ರಾಜ್ಯ ವಿಭಜನೆಯಾದಾಗ ದೇಗುಲಕ್ಕೆ ಸೇರಿದ್ದ ಆಸ್ತಿ ಮತ್ತು ಭೂಮಿ ಆಂಧ್ರ ಪ್ರದೇಶದಲ್ಲಿ ಉಳಿದುಕೊಂಡಿತು. ಹೀಗಾಗಿ ಇಲ್ಲೀಗ ಯಾವುದೇ ಕೆಲಸ ಮಾಡಲು ಮುಂದಾದರೂ ಭೂಮಿಯ ಕೊರತೆ ಕಾಡುತ್ತದೆ. ಭದ್ರಾಚಲಂ (ಕೊತ್ತಗುಡಂ) ಜಿಲ್ಲೆಗೆ ಸೇರಿದ್ದ ಎಂಟು ತಾಲ್ಲೂಕುಗಳ ಪೈಕಿ ನಾಲ್ಕು ಆಂಧ್ರಕ್ಕೆ ಸೇರಿವೆ. ಅವನ್ನು ಮತ್ತೆ ತೆಲಂಗಾಣಕ್ಕೆ ಸೇರಿಸುವ ಭರವಸೆಯನ್ನು ಟಿಆರ್‌ಎಸ್ ಸರ್ಕಾರ ಕೊಟ್ಟಿತ್ತು. ಆದರೆ ಈ ವಿಚಾರದಲ್ಲಿ ಏನೂ ಮಾಡಲಿಲ್ಲ’ ಎಂದು ಕಾಂಗ್ರೆಸ್ ಅಭ್ಯರ್ಥಿ ಪೊದೆಂ ವೀರಯ್ಯ ಪ್ರತಿಕ್ರಿಯಿಸಿದರು.

‘ಇದು ಮೀಸಲು ಕ್ಷೇತ್ರ. ಗಿರಿಜನ ಮತದಾರರ ಸಂಖ್ಯೆ ರಾಜ್ಯದಲ್ಲಿಯೇ ಹೆಚ್ಚು. ‘ಭೂಮಿ ಇಲ್ಲದ ಕಾರಣ ಕ್ಷೇತ್ರಕ್ಕೆ ಮಂಜೂರಾಗಿದ್ದ ಅಭಿವೃದ್ಧಿ ಯೋಜನೆಗಳನ್ನು ಬೇರೆ ಕ್ಷೇತ್ರಗಳಿಗೆ ವರ್ಗಾಯಿಸಲಾಗಿದೆ. ನವೋದಯ ಶಾಲೆ ನಿರ್ಮಾಣ, ಆಸ್ಪತ್ರೆಗಳು ಅಷ್ಟೇಕೆ ಗಿರಿಜನರ ಸಮಗ್ರ ಅಭಿವೃದ್ಧಿ ಪ್ರಾಧಿಕಾರದ ಕಚೇರಿಯನ್ನೂ ಬೇರೆ ಕ್ಷೇತ್ರಕ್ಕೆ ವರ್ಗಾಯಿಸಲಾಯಿತು’ ಎನ್ನುತ್ತಾರೆ 2014ರ ವಿಧಾನಸಭೆ ಚುನಾವಣೆಯಲ್ಲಿ ಸಿಪಿಎಂ ಎದುರು ಸೋಲನುಭವಿಸಿದ ಟಿಡಿಪಿ ನಾಯಕಿ ಕೊಮಾರಂ ಪರಮೇಶ್ವರಿ.

‘ನಾವು ಏನು ತಪ್ಪು ಮಾಡಿದ್ದೇವೋ ಗೊತ್ತಿಲ್ಲ. ಕೆಸಿಆರ್‌ ನಮ್ಮೂರಿಗೆ ಬರುವುದೇ ಇಲ್ಲ. ಕಳೆದ ಎರಡು ವರ್ಷಗಳಿಂದ ರಾಮನವಮಿಗೂ ಕೆಸಿಆರ್ ಬರಲಿಲ್ಲ. ಮುಖ್ಯಮಂತ್ರಿಯೇ ಸ್ವತಃ ಉಪಸ್ಥಿತರಿದ್ದರು ರಾಮನವಮಿ ಉತ್ಸವ ನಡೆಸುವುದು ಭದ್ರಾಚಲಂನಲ್ಲಿ ಹಲವು ವರ್ಷಗಳಿಂದ ನಡೆದು ಬಂದಿರುವ ಸಂಪ್ರದಾಯ. ಆದರೆ ಕೆಸಿಆರ್ ಮಾತ್ರ ತಮ್ಮ ಮೊಮ್ಮಗನನ್ನು ಉತ್ಸವಕ್ಕೆ ಕಳುಹಿಸಿ, ನಮ್ಮ ಭಾವನೆಗಳನ್ನು ಘಾಸಿಗೊಳಿಸಿದರು’ ಎಂದು ಹೋಟೆಲ್ ವ್ಯವಸ್ಥಾಪಕ ಬಾಲಕೃಷ್ಣ ಅಳಲು ತೋಡಿಕೊಂಡರು.

ಈಗ ಇಡೀ ದೇಶ ಉತ್ತರ ಪ್ರದೇಶದಲ್ಲಿರುವ ಅಯೋಧ್ಯೆಯ ಬಗ್ಗೆ ಮಾತನಾಡುತ್ತಿದೆ. ಅನೇಕ ಶತಮಾನಗಳಿಂದ ದಕ್ಷಿಣ ಭಾರತದ ಅಯೋಧ್ಯೆಯೆಂದೇ ಜನಜನಿತವಾಗಿರುವ ಭದ್ರಾಚಲಂ ಪಟ್ಟಣವನ್ನು ಅಯೋಧ್ಯೆಗೆ ಸರಿಸಾಟಿಯಾಗಿ ಅಭಿವೃದ್ಧಿಪಡಿಸುವ ವಿಚಾರದಲ್ಲಿ ಕೆಸಿಆರ್‌ ಸೋತುಹೋಗಿದ್ದಾರೆ ಎಂದು ಸ್ಥಳೀಯರು ಒಕ್ಕೊರಲಿನಿಂದ ಹೇಳುತ್ತಾರೆ.

ಈ ಬಾರಿ ಸಿಪಿಎಂನಿಂದ ಮಿಡಿಯಂ ಬಾಬು ರಾವ್, ಬಿಜೆಪಿಯಿಂದ ಕುಂಜ ಸತ್ಯವತಿ, ಟಿಆರ್‌ಎಸ್‌ನಿಂದ ಟೆಲ್ಲಂ ವೆಂಕಟರಾವ್ ಮತ್ತು ಬಿಎಸ್‌ಪಿಯಿಂದ ಗುಂಡು ಶರತ್ ಬಾಬು ಸ್ಪರ್ಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT