ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ವಾಯುದಾಳಿಯಿಂದ ಸಾರ್ವಭೌಮತೆಗೆ ಧಕ್ಕೆ: ಪಾಕ್‌ ಆಕ್ರೋಶ

Last Updated 27 ಫೆಬ್ರುವರಿ 2019, 3:16 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಭಾರತವು ಪಾಕಿಸ್ತಾನದ ವಾಯುಗಡಿ ಉಲ್ಲಂಘಿಸಿ ದಾಳಿ ನಡೆಸಿದ್ದು, ದೇಶದ ಸಾರ್ವಭೌಮತೆಗೆ ಧಕ್ಕೆ ತಂದಿದೆ ಎಂದು ಪಾಕ್‌ ವಿದೇಶಾಂಗ ವ್ಯವಹಾರಗಳ ಸಚಿವ ಶಾ ಮಹಮ್ಮೂದ್‌ ಖುರೇಷಿ ಆರೋಪಿಸಿದ್ದಾರೆ.

ಸ್ವರಕ್ಷಣೆ ಮತ್ತು ಪ್ರತ್ಯುತ್ತರ ನೀಡುವ ಹಕ್ಕು ಪಾಕಿಸ್ತಾನಕ್ಕಿದೆ. ಗಡಿ ನಿಯಂತ್ರಣ ರೇಖೆಯನ್ನು ಉಲ್ಲಂಘಿಸಿರುವ ಭಾರತಕ್ಕೆ ತಕ್ಕ ಪ್ರತ್ಯುತ್ತರ ನೀಡಲಿದ್ದೇವೆ ಎಂದು ಜಿಯೊ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಎಚ್ಚರಿಕೆ ನೀಡಿದ್ದಾರೆ.

‘ನಮ್ಮ ಶಕ್ತಿ, ಸಾಮರ್ಥ್ಯಗಳ ಬಗ್ಗೆ ಶಂಕೆ ಬೇಡ. ಯಾವಾಗ ಪ್ರತಿದಾಳಿ ನಡೆಸಬೇಕು ಎಂಬುವುದು ನಮಗೆ ಗೊತ್ತು. ಪಾಕಿಸ್ತಾನದ ಜನರಿಗೆ ನಿರಾಶೆ ಮಾಡುವುದಿಲ್ಲ’ ಎಂದು ಖುರೇಷಿ ಹೇಳಿದ್ದಾರೆ.

ಮುಂಬರುವ ಸಾರ್ವತ್ರಿಕ ಚುನಾವಣೆಯನ್ನು ಗೆಲ್ಲಲು ಭಾರತದ ಆಡಳಿತಾರೂಢ ಪಕ್ಷ ಈ ದಾಳಿಯ ಸಂಚು ರೂಪಿಸಿದೆ ಎಂದು ಅವರು ದೂರಿದ್ದಾರೆ. ಭಾರತದ ಒಂದು ವರ್ಗ ತನ್ನ ರಾಜಕೀಯ ಮಹತ್ವಾಕಾಂಕ್ಷೆ ಈಡೇರಿಸಿಕೊಳ್ಳಲು ಪ್ರಾದೇಶಿಕ ಸ್ಥಿರತೆ ಮತ್ತು ಶಾಂತಿಗೆ ಧಕ್ಕೆ ತರಲು ಯತ್ನಿಸುತ್ತಿದೆ ಎಂದು ಟೀಕಿಸಿದ್ದಾರೆ.

ಪಾಕ್ ನಿರ್ಣಯಗಳು

* ಭಾರತ ಗಡಿನಿಯಂತ್ರಣ ರೇಖೆ ಉಲ್ಲಂಘನೆಯನ್ನು ಶೀಘ್ರದಲ್ಲಿಯೇ ನಡೆಯಲಿರುವ ಇಸ್ಲಾಮಿಕ್‌ ಸಹಕಾರ ಸಂಘಟನೆ (ಒಐಸಿ) ಶೃಂಗಸಭೆಯಲ್ಲಿ ಪ್ರಸ್ತಾಪಿಸಲು ತೀರ್ಮಾನ

* ಸಂಸತ್‌ ವಿಶ್ವಾಸಕ್ಕೆ ತೆಗೆದುಕೊಳ್ಳುವ ಉದ್ದೇಶದಿಂದ ಶೀಘ್ರ ಜಂಟಿ ಅಧಿವೇಶನ ಕರೆಯಲು ನಿರ್ಧಾರ

* ವಿಶ್ವಸಂಸ್ಥೆ ಮತ್ತು ಮಿತ್ರ ರಾಷ್ಟ್ರಗಳಿಗೆ ದೂರು ನೀಡಲು ವಿದೇಶಾಂಗ ವ್ಯವಹಾರಗಳ ಸಚಿವ ಶಾ ಮಹಮ್ಮೂದ್‌ ಖುರೇಷಿ ಅವರಿಗೆ ಜವಾಬ್ದಾರಿ

ಭಾರತದ ಕಟ್ಟು ಕಥೆ: ಪಾಕ್‌ ಪ್ರತಿಕ್ರಿಯೆ

ಬಾಲಾಕೋಟ್‌ ಬಳಿ ಭಯೋತ್ಪಾದಕರ ನೆಲೆಗಳನ್ನು ಧ್ವಂಸ ಮಾಡಿರುವ ಮತ್ತು ಅಪಾರ ಸಂಖ್ಯೆಯಲ್ಲಿ ಉಗ್ರರನ್ನು ಕೊಂದಿರುವ ಕುರಿತು ಭಾರತ ನೀಡಿರುವ ಹೇಳಿಕೆ ಸಂಪೂರ್ಣ ಸುಳ್ಳು ಎಂದು ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ. ಭಾರತ ಪುನಃ ತಾನೇ ಸೃಷ್ಟಿಸಿರುವ ಕಾಲ್ಪನಿಕ ಕಥೆಯನ್ನು ಹರಿಬಿಟ್ಟಿದೆ. ಬಾಲಾಕೋಟ್‌ ಬಳಿ ಉಗ್ರರ ನೆಲೆಗಳು ಇರಲಿಲ್ಲ ಎಂದು ಹೇಳಿದೆ.

‘ಭಾರತದ ದುಸ್ಸಾಹಸಗಳಿಗೆ ಪಾಠ ಕಲಿಸಲು ಪಾಕಿಸ್ತಾನ ಸಂಪೂರ್ಣ ಸಜ್ಜಾಗಿದೆ. ಪಾಕಿಸ್ತಾನಕ್ಕೆ ಸವಾಲು ಹಾಕದಂತೆ ವಿದೇಶಾಂಗ ಸಚಿವ ಖುರೇಷಿ ಅವರು ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ’ ಎಂದು ಇಮ್ರಾನ್‌ ಖಾನ್‌ ನೇತೃತ್ವದ ಪಕ್ಷ ಪಾಕ್‌–ತಹ್ರಿಕ್‌–ಇನ್ಸಾಫ್‌ ಟ್ವೀಟ್‌ ಮಾಡಿದೆ.

ಚೀನಾದಲ್ಲಿ ಸಭೆ: ಪುಲ್ವಾಮಾ ಪ್ರಸ್ತಾಪ

ರಷ್ಯಾ, ಭಾರತ ಮತ್ತು ಚೀನಾ ವಿದೇಶಾಂಗ ವ್ಯವಹಾರಗಳ ಸಚಿವರ ಸಭೆ ಬುಧವಾರ ಚೀನಾದಲ್ಲಿ ನಡೆಯಲಿದೆ. ಈ ಸಭೆಯಲ್ಲಿ ಭಾಗವಹಿಸಲಿರುವ ಸುಷ್ಮಾ ಸ್ವರಾಜ್‌ ಅವರು ಪುಲ್ವಾಮಾ ದಾಳಿಯನ್ನು ಪ್ರಸ್ತಾಪಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಂಯಮ ಕಾಯ್ದುಕೊಳ್ಳಲು ಸಲಹೆ

ಸಂಯಮ ಕಾಯ್ದುಕೊಳ್ಳುವಂತೆ ಜಾಗತಿಕ ಸಮುದಾಯ ಭಾರತ ಮತ್ತು ಪಾಕಿಸ್ತಾನಕ್ಕೆ ಕಿವಿಮಾತು ಹೇಳಿದೆ.

ಸೌಹಾರ್ದಯುತ ದ್ವಿಪಕ್ಷೀಯ ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಪರಿಹಾರ ಕಂಡುಕೊಳ್ಳುವಂತೆ ಆಸ್ಟ್ರೇಲಿಯಾ ಮತ್ತು ಬ್ರಿಟನ್‌ ಸೇರಿದಂತೆ ಹಲವು ರಾಷ್ಟ್ರಗಳು ಸಲಹೆ ಮಾಡಿವೆ.

ಜಾಗತಿಕ ಸಮುದಾಯದ ಸಹಕಾರದೊಂದಿಗೆ ಭಯೋತ್ಪಾದನೆಯ ವಿರುದ್ಧ ಹೋರಾಟ ನಡೆಸುವಂತೆ ಚೀನಾ ಮಂಗಳವಾರ ಭಾರತಕ್ಕೆ ಸಲಹೆ ನೀಡಿದೆ. ಭಾರತ ಮತ್ತು ಪಾಕಿಸ್ತಾನ ದಕ್ಷಿಣ ಏಷ್ಯಾದ ಪ್ರಮುಖ ರಾಷ್ಟ್ರಗಳು. ದುಡುಕಿನ ನಿರ್ಧಾರದಿಂದ ದಕ್ಷಿಣ ಏಷ್ಯಾದ ಸ್ಥಿರತೆ ಮತ್ತು ಶಾಂತಿಗೆ ಧಕ್ಕೆಯಾಗಲಿದೆ. ಎರಡೂ ರಾಷ್ಟ್ರಗಳು ಸಂಯಮದಿಂದ ಹೆಜ್ಜೆ ಇಡುವುದು ಉತ್ತಮ ಎಂದು ಉಭಯ ರಾಷ್ಟ್ರಗಳಿಗೆ ಚೀನಾ ಸಲಹೆ ಮಾಡಿದೆ.

ಇನ್ನಷ್ಟು ಓದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT