ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಸರ್ಕಾರ ಜನರಿಂದ ಸುಲಿಗೆ ಮಾಡುತ್ತಿದೆ ಎಂದ ಸೋನಿಯಾ ವಿರುದ್ಧ ಪ್ರಧಾನ್ ಕಿಡಿ

Last Updated 29 ಜೂನ್ 2020, 13:09 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರವು ‘ಜನರಿಂದ ಹಣವನ್ನು ಸುಲಿಗೆ ಮಾಡುತ್ತಿದೆ’ ಎಂದು ಆರೋಪಿಸಿ, ಇಂಧನ ದರ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಕಿಡಿ ಕಾರಿದ್ದಾರೆ.

‘ಕೇಂದ್ರ ಸರ್ಕಾರವು ತನ್ನ ಬೊಕ್ಕಸ ತುಂಬಿಸಿಕೊಳ್ಳುತ್ತಿದೆ ಎಂದು ಸೋನಿಯಾ ಗಾಂಧಿ ಇತ್ತೀಚೆಗೆ ಹೇಳಿದ್ದರು. ಕಾಂಗ್ರೆಸ್‌ ಆಳ್ವಿಕೆ ಇರುವ ರಾಜಸ್ಥಾನ, ಪಂಜಾಬ್‌, ಮಹಾರಾಷ್ಟ್ರ, ಜಾರ್ಖಂಡ್‌ ಮತ್ತು ಪುದುಚೇರಿ ಸಹ ಇಂಧನದ ಮೇಲೆ ₹ 5 ತೆರಿಗೆ ಹೆಚ್ಚಿಸುವ ಮೂಲಕ ಸಾರ್ವಜನಿಕರಿಗೆ ಹೊರೆಯಾಗಿವೆ ಎಂಬುದನ್ನು ಬಹುಶಃ ಅವರು ಮರೆಯುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ.

‘ನಮ್ಮ ದೇಶದಲ್ಲಿ ಅಭಿವೃದ್ಧಿ, ಆರೋಗ್ಯಕ್ಕಾಗಿ ಸಂಪನ್ಮೂಲ ಬೇಕಾದಾಗ ಸರ್ಕಾರಗಳು ಈ ರೀತಿ (ತೆರಿಗೆ ಹೆಚ್ಚಳ) ಮಾಡುತ್ತವೆ. ಈ ಮಾರ್ಗವಾಗಿ ಕೇಂದ್ರ ಸಂಗ್ರಹಿಸುವ ಹಣವನ್ನು ರಾಜ್ಯ ಸರ್ಕಾರಗಳಿಗೆ ಕಳುಹಿಸಲಾಗುತ್ತದೆ. ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಯೋಜನೆ ಆರಂಭಿಸಲಾಗಿದೆ. ಆಗತ್ಯ ಉಳ್ಳವರಿಗೆ ಆಹಾರಧ್ಯಾನಗಳನ್ನು ನೀಡಲಾಗುತ್ತಿದೆ. ರೈತರ ಖಾತೆಗಳಿಗೆ ಹಣ ಹಾಕಲಾಗಿದೆ. ಹಣವನ್ನು ಯಾವುದೇ ಬೊಕ್ಕಸ ತುಂಬಿಸಿಕೊಳ್ಳಲು ಬಳಸಿಲ್ಲ ಎಂಬುದು ಇದರರ್ಥ. ಬೊಕ್ಕಸ ತುಂಬಿಸುವುದು ಮೋದಿ ಅವರ ಯೋಜನೆಯಲ್ಲ. ಬದಲಾಗಿ ಹಣವನ್ನು ವಿತರಿಸುವುದಾಗಿದೆ’ ಎಂದು ತಿರುಗೇಟು ನೀಡಿದ್ದಾರೆ.

ಪೆಟ್ರೋಲಿಯಂ ಸಚಿವ, ಕೋವಿಡ್–19 ಲಾಕ್‌ಡೌನ್‌ ಅವಧಿಯಲ್ಲಿ (ಜೂನ್‌ 20ರ ವರೆಗೆ) 42 ಕೋಟಿ ಜನರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ₹ 65,454 ಕೋಟಿ ಹಾಕಲಾಗಿದೆ ಎಂದಿದ್ದಾರೆ.

‘ಮೋದಿ ಅವರು ಬಡವರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಿದ್ದಾರೆ.ಆದರೆ ನೀವು (ಸೋನಿಯಾ ಗಾಂಧಿ) ರಾಜೀವ್ ಗಾಂಧಿ ಫೌಂಡೇಶನ್‌ನಲ್ಲಿರುವ ನಿಮ್ಮ ಅಳಿಯನ ಖಾತೆಗೆ ಹಣ ಹಾಕಿದ್ದಿರಿ. ಖಜಾನೆಯನ್ನು ದೋಚುವುದು ನಿಮ್ಮ ಸಂಸ್ಕೃತಿ. ಬಡವರು, ಮಧ್ಯಮ ವರ್ಗದವರು ಮತ್ತು ಅಗತ್ಯ ಇರುವವರಿಗೆ ಹಣ ಹಂಚುವುದು ಮೋದಿ ಯೋಜನೆ. ನಾವು ಏನನ್ನೂ ಮರೆಮಾಚಬೇಕಾಗಿಲ್ಲ. ಕೊರೊನಾ ಬಿಕ್ಕಟ್ಟಿನ ಕಾಲದಲ್ಲಿ ಹಣವನ್ನು ಎಚ್ಚರಿಕೆಯಿಂದ ಬಳಸುತ್ತಿದ್ದೇವೆ. ಕೊರೊನಾ ಬಿಕ್ಕಟ್ಟನ್ನು ಭಾರತ ನಿರ್ವಹಿಸುತ್ತಿರುವುದು ಮೆಚ್ಚುಗೆಗೆ ಪಾತ್ರವಾಗಿದೆ’ ಎಂದು ಪ್ರಧಾನ್‌ ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಇಂಧನ ದರದಲ್ಲಿ ಸ್ಥಿರತೆ ಕಾಯ್ದುಕೊಳ್ಳಲಾಗುವುದು ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT