ಗುರುವಾರ , ನವೆಂಬರ್ 21, 2019
20 °C
3 ತಿಂಗಳಲ್ಲಿ ಕೆಲಸ ಕಳೆದುಕೊಂಡವರು 40 ಸಾವಿರ ಮಂದಿ

ಸೂರತ್ | ವಜ್ರೋದ್ಯಮ ಕುಸಿತ: 3 ತಿಂಗಳಲ್ಲಿ 15 ಕಾರ್ಮಿಕರ ಆತ್ಮಹತ್ಯೆ

Published:
Updated:
Prajavani

ಅಹಮದಾಬಾದ್‌: ವಜ್ರಕ್ಕೆ ಹೊಳಪು ಕೊಡುವ ಸೂರತ್‌ನ ಉದ್ಯಮ ಎದುರಿಸುತ್ತಿರುವ ದುಃಸ್ಥಿತಿ ಕಾರ್ಮಿಕರ ಆತ್ಮಹತ್ಯೆಗಳ ಮೂಲಕ ಬೆಳಕಿಗೆ ಬರುತ್ತಿದೆ. ಮೂರು ತಿಂಗಳ ಹಿಂದೆ ಕೆಲಸ ಕಳೆದುಕೊಂಡ ಕಾರ್ಮಿಕರೊಬ್ಬರು ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂರು ತಿಂಗಳಲ್ಲಿ 15 ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಗಳು ಹೇಳುತ್ತಿವೆ.

ವಜ್ರಕ್ಕೆ ಹೊಳಪು ನೀಡುವ 30 ಸಾವಿರದಿಂದ 40 ಸಾವಿರ ಕಾರ್ಮಿಕರು ಕಳೆದ ಆರು ತಿಂಗಳಲ್ಲಿ ಕೆಲಸ ಕಳೆದುಕೊಂಡಿದ್ದಾರೆ ಅಥವಾ ಅವರ ವೇತನದಲ್ಲಿ ಭಾರಿ ಕಡಿತವಾಗಿದೆ. ಉದ್ಯಮವು ತೀವ್ರವಾದ ಆರ್ಥಿಕ ಅಸ್ಥಿರತೆ ಎದುರಿಸುತ್ತಿದೆ. ಹಾಗಾಗಿ, ದೀಪಾವಳಿ ರಜಾ ಅವಧಿಯು ಸುದೀರ್ಘವಾಗಬಹುದು ಎಂದು ಉದ್ಯಮದ ಒಳಗಿನ ವ್ಯಕ್ತಿಗಳು ಹೇಳುತ್ತಿದ್ದಾರೆ.

ಇದನ್ನೂ ಓದಿ: ಆಭರಣ ಉದ್ಯಮಕ್ಕೆ ವಜ್ರಾಘಾತ

ಕಳೆದ ವಾರ ಒಂದು ಘಟಕ ಬಾಗಿಲು ಮುಚ್ಚಿದೆ. ಇಲ್ಲಿದ್ದ 200 ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಈ ಘಟಕವನ್ನು ಮುಚ್ಚಲು ಅದರ ಮಾಲೀಕರು ಎರಡು ತಿಂಗಳಿನಿಂದ ಪ್ರಯತ್ನಿಸುತ್ತಿದ್ದರು. ಕಾರ್ಮಿಕರ ಒತ್ತಡದಿಂದಾಗಿ ಇದು ಸಾಧ್ಯವಾಗಿರಲಿಲ್ಲ. ನಡೆಸುವುದಕ್ಕೆ ಸಾಧ್ಯವೇ ಇಲ್ಲದ ಪರಿಸ್ಥಿತಿಯ ಕಾರಣ ಕಳೆದ ವಾರ ಈ ಘಟಕ ಮುಚ್ಚಿದೆ.

‘ಘಟಕಗಳು ಬಾಗಿಲು ಮುಚ್ಚುತ್ತಿವೆ. ಈಗಿನ ಹಿನ್ನಡೆಯ ಹಂತ ಮುಗಿಯಲಿ ಎಂದು ಕಾಯುವುದಲ್ಲದೆ ನಾವು ಬೇರೆ ಏನನ್ನೂ ಮಾಡುವ ಸ್ಥಿತಿಯಲ್ಲಿ ಇಲ್ಲ’ ಎಂದು ಸೂರತ್‌ ಡೈಮಂಡ್‌ ಅಸೋಸಿಯೇಷನ್‌ ಅಧ್ಯಕ್ಷ ಬಾಬುಭಾಯಿ ಕಥಿರಿಯ ಹೇಳುತ್ತಾರೆ.

‘ಎಂಟರಿಂದ ಹತ್ತು ಲಕ್ಷ ಜನರು ಈ ಉದ್ಯಮದ ಮೇಲೆ ಅವಲಂಬಿತರಾಗಿದ್ದಾರೆ. ಈ ಕಾರ್ಮಿಕರಿಗೆ ಈ ಬಾರಿ ದೀಪಾವಳಿಯ ಬೋನಸ್‌ನ ನಿರೀಕ್ಷೆಯೇ ಇಲ್ಲ. ಬೋನಸ್‌ ಬಿಡಿ, ಕಾರ್ಮಿಕರನ್ನು ಕೆಲಸದಲ್ಲಿ ಉಳಿಸಿಕೊಳ್ಳಲು ನಾವು ಯತ್ನಿಸುತ್ತಿದ್ದೇವೆ’ ಎಂದು ವಜ್ರಕ್ಕೆ ಹೊಳಪು ನೀಡುವ ಘಟಕದ ಮಾಲೀಕರೊಬ್ಬರು ಹೇಳಿದ್ದಾರೆ.

ರಫ್ತು ಪ್ರಮಾಣದಲ್ಲಿಯೂ ಕುಸಿತ

‘ವಜ್ರೋದ್ಯಮವು ಬಹಳ ಕೆಟ್ಟ ಸ್ಥಿತಿಯಲ್ಲಿದೆ.  2018ರ ಏಪ್ರಿಲ್‌ನಿಂದ ಸೆಪ್ಟೆಂಬರ್‌ ಅವಧಿಗೆ ಹೋಲಿಸಿದರೆ ಈ ವರ್ಷದ ಇದೇ ಅವಧಿಯಲ್ಲಿ ರಫ್ತು ಪ್ರಮಾಣ ಶೇ 12ರಷ್ಟು ಕುಸಿತವಾಗಿದೆ. ಕೆಲವು ವಿಚಾರಗಳನ್ನು ಸರಿಪಡಿಸದೇ ಇದ್ದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ’ ಎಂದು ಹರಳು ಮತ್ತು ಆಭರಣ ರಫ್ತು ಉತ್ತೇಜನ ಮಂಡಳಿಯ ಪ್ರಾದೇಶಿಕ ಅಧ್ಯಕ್ಷ ದಿನೇಶ್‌ ನವಾಡಿಯ ಹೇಳಿದ್ದಾರೆ. 

ಕೆಲವರು ಬ್ಯಾಂಕುಗಳಿಗೆ ಸಾಲ ಮರುಪಾವತಿಸದ ಕಾರಣ ಈಗ ಈ ಉದ್ಯಮಕ್ಕೆ ಬ್ಯಾಂಕುಗಳ ಸಾಲ ಸಿಗುವುದು ಕಷ್ಟವಾಗಿದೆ. ಸಣ್ಣ ಘಟಕಗಳು ಜಿಎಸ್‌ಟಿಯಿಂದಾಗಿ ಮುರಿದು ಬಿದ್ದಿವೆ. ಚೀನಾ ಮತ್ತು ಅಮೆರಿಕದ ನಡುವಣ ವ್ಯಾಪಾರ ಸಂಘರ್ಷ, ಹಾಂಗ್‌ಕಾಂಗ್‌ನಲ್ಲಿನ ಪ್ರತಿಭಟನೆ ಕೂಡ ಉದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ ಎಂದು ಅವರು ತಿಳಿಸಿದ್ದಾರೆ.

ಮೂರು ವರ್ಷಗಳಿಂದಲೇ ಉದ್ಯಮ ಹಿಂಜರಿತ ಅನುಭವಿಸುತ್ತಿದೆ. ವಜ್ರಕ್ಕೆ ಹೊಳಪು ನೀಡುವ ಘಟಕಗಳು ಮತ್ತು ಅದರ ಕಾರ್ಮಿಕರಿಗೆ ದೀಪಾವಳಿ ಹಬ್ಬ ಕೂಡ ಸಂತಸದ ಸುದ್ದಿ ತರುತ್ತಿಲ್ಲ ಎನ್ನುತ್ತಾರೆ ಸೂರತ್ ಡೈಮಂಡ್ ಅಸೋಸಿಯೇಷನ್‌ ಅಧ್ಯಕ್ಷ ಬಾಬುಭಾಯ್ ಕಥಿರಿಯ.

ಇದನ್ನೂ ಓದಿ: ನಕಲಿ ವಜ್ರವನ್ನು ಪತ್ತೆ ಹಚ್ಚುವುದು ಹೇಗೆ

ಪ್ರತಿಕ್ರಿಯಿಸಿ (+)