ಕೊಲಿಜಿಯಂ ನಿರ್ಧಾರ ಬದಲಿಸಿದ ಕಾರಣ ಬಹಿರಂಗವಾಗದ್ದಕ್ಕೆ ಲೋಕೂರ್‌ ಬೇಸರ

7
ಮೆನನ್‌, ನಂದರ್‌ಜೋಗ್‌ ಬದಲು ಮಾಹೇಶ್ವರಿ, ಖನ್ನಾ ಅವರಿಗೆ ಸುಪ್ರೀಂ ಕೋರ್ಟ್‌ಗೆ ಬಡ್ತಿ

ಕೊಲಿಜಿಯಂ ನಿರ್ಧಾರ ಬದಲಿಸಿದ ಕಾರಣ ಬಹಿರಂಗವಾಗದ್ದಕ್ಕೆ ಲೋಕೂರ್‌ ಬೇಸರ

Published:
Updated:
Prajavani

ನವದೆಹಲಿ: ದೆಹಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಾಜೇಂದ್ರ ಮೆನನ್‌ ಮತ್ತು ರಾಜಸ್ಥಾನ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಪ್ರದೀಪ್‌ ನಂದರ್‌ಜೋಗ್‌ ಅವರಿಗೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ಬಡ್ತಿ ನೀಡುವುದಕ್ಕೆ ಸಂಬಂಧಿಸಿ ಕೈಗೊಂಡ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ನ ವೆಬ್‌ಸೈಟ್‌ನಲ್ಲಿ ಪ್ರಕಟಿಸದಿರುವುದು ನಿರಾಶೆ ತಂದಿದೆ ಎಂದು ನಿವೃತ್ತ ನ್ಯಾಯಮೂರ್ತಿ ಮದನ್‌ ಬಿ. ಲೋಕೂರ್‌ ಹೇಳಿದ್ದಾರೆ.

ಲೋಕೂರ್‌ ಅವರು ಕಳೆದ ಡಿಸೆಂಬರ್‌ 30ರಂದು ನಿವೃತ್ತರಾದ ಬಳಿಕ ಕೊಲಿಜಿಯಂ ನಿರ್ಧಾರ ಬದಲಿಸಿದೆ. ಮೇಲಿನ ಇಬ್ಬರ ಬದಲಿಗೆ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಾಹೇಶ್ವರಿ ಮತ್ತು ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರಿಗೆ ಬಡ್ತಿ ನೀಡಲು ಶಿಫಾರಸು ಮಾಡಲಾಯಿತು. ನಂತರ ದೊರೆತ ‘ಹೆಚ್ಚುವರಿ ದಾಖಲೆ’ಗಳ ಆಧಾರದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. 

ಕೊಲಿಜಿಯಂ ಮೂಲಕ ನ್ಯಾಯಮೂರ್ತಿಗಳ ನೇಮಕ ವ್ಯವಸ್ಥೆಯಲ್ಲಿ ಬದಲಾವಣೆ ಅಗತ್ಯ ಇದೆ ಎಂದು ಲೋಕೂರ್‌ ಹೇಳಿದ್ದಾರೆ. ತಮ್ಮ ನಿವೃತ್ತಿಯ ಬಳಿಕ ಏನಾಗಿದೆ ಎಂಬುದು ತಿಳಿದಿಲ್ಲ. ಹೈಕೋರ್ಟ್‌ನ ಎಲ್ಲ ಮುಖ್ಯ ನ್ಯಾಯಮೂರ್ತಿಗಳೂ ಸುಪ್ರೀಂ ಕೋರ್ಟ್‌ನ ಉತ್ತಮ ನ್ಯಾಯಮೂರ್ತಿಗಳಾಗುತ್ತಾರೆ ಎಂದು ಹೇಳುವಂತಿಲ್ಲ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ. 

ನಿರ್ಧಾರವನ್ನು ಬದಲಾಯಿಸಲು ಕಾರಣವಾದ ದಾಖಲೆಗಳನ್ನು ಬಹಿರಂಗಪಡಿಸಬಹುದೇ ಎಂಬ ಬಗ್ಗೆಯೂ ತಮಗೆ ಖಚಿತತೆ ಇಲ್ಲ. ಹೊಸ ‘ದಾಖಲೆಗಳು ಮಾನಹಾನಿಕರ ಸ್ವರೂಪದ್ದಾಗಿರಬಹುದು’ ಎಂದು ಅವರು ಹೇಳಿದ್ದಾರೆ. 

‘ಕೊಲಿಜಿಯಂಗೆ ಸಿಕ್ಕ ದಾಖಲೆಗಳು ಮಾನಹಾನಿಕರ ಸ್ವರೂಪದ್ದಾಗಿದ್ದರೆ ಆಗಲೂ ಅವನ್ನು ಬಹಿರಂಗಪಡಿಸಬೇಕೇ’ ಎಂದು ಅವರು ಪ್ರಶ್ನಿಸಿದ್ದಾರೆ. 

ರಾಜಕೀಯ ವ್ಯಕ್ತಿಗಳ ಜತೆಗೆ ನ್ಯಾಯಮೂರ್ತಿಗಳು ಒಡನಾಡಬೇಕೇ ಅಥವಾ ಅಂತರ ಕಾಯ್ದುಕೊಳ್ಳಬೇಕೇ ಎಂಬ ಪ್ರಶ್ನೆಗೆ, ‘ನ್ಯಾಯಮೂರ್ತಿಗಳು ದಂತಗೋಪುರದಲ್ಲಿ ಇರುವುದು ಸರಿ ಎಂದು ಅನಿಸುವುದಿಲ್ಲ. ದಂತಗೋಪುರದಲ್ಲಿ ಇದ್ದರೆ ಹೊರಗೆ ಏನಾಗುತ್ತದೆ ಎಂಬುದು ತಿಳಿಯದು. ನ್ಯಾಯಮೂರ್ತಿಯು ಏಕಾಂತವಾಸಿ ಆಗಬಾರದು’ ಎಂದರು.

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !