ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸುಪ್ರೀಂ’ ಕದ ತಟ್ಟಲು ಎಐಎಡಿಎಂಕೆಯ ಅನರ್ಹ ಶಾಸಕರ ನಿರ್ಧಾರ

Last Updated 26 ಅಕ್ಟೋಬರ್ 2018, 18:08 IST
ಅಕ್ಷರ ಗಾತ್ರ

ಮದುರೆ: ಸದಸ್ಯತ್ವ ಅನರ್ಹತೆ ಎತ್ತಿ ಹಿಡಿದ ಮದ್ರಾಸ್‌ ಹೈಕೋರ್ಟ್ ತೀರ್ಪಿನ ವಿರುದ್ಧ ಕಾನೂನು ಹೋರಾಟ ಮುಂದುವರಿಸಲು ಎಐಎಡಿಎಂಕೆಯ 18 ಬಂಡಾಯ ಶಾಸಕರು ಒಮ್ಮತದ ತೀರ್ಮಾನ ತೆಗೆದುಕೊಂಡಿದ್ದಾರೆ.

ಮದ್ರಾಸ್‌ ಹೈಕೋರ್ಟ್ ತೀರ್ಪಿನ ನಂತರ ಉದ್ಭವಿಸಿದ ರಾಜಕೀಯ ಪರಿಸ್ಥಿತಿ ಮತ್ತು ಮುಂದಿನ ಹೋರಾಟದ ರೂಪುರೇಷೆ ಕುರಿತು ಅನರ್ಹ ಶಾಸಕರು ಶುಕ್ರವಾರ ತಮ್ಮ ನಾಯಕ ಟಿ.ಟಿ.ವಿ. ದಿನಕರನ್ ಜತೆ ಚರ್ಚಿಸಿದರು.

ದಿನಕರನ್‌ ಜತೆ ಚರ್ಚಿಸಿದ ಬಳಿಕ ಸುಪ್ರೀಂ ಕೋರ್ಟ್‌ ಮೊರೆ ಹೋಗುವ ನಿರ್ಧಾರಕ್ಕೆ ಬಂದಿರುವುದಾಗಿ ಅವರು ತಿಳಿಸಿದ್ದಾರೆ.

‘ಉಪ ಚುನಾವಣೆ ಅಥವಾ ಕಾನೂನು ಹೋರಾಟ ಈ ಎರಡು ಆಯ್ಕೆ ನಮ್ಮ ಮುಂದಿದ್ದವು. ಸ್ಪೀಕರ್‌ ನಿರ್ಧಾರ ತಪ್ಪು ಎಂದು ತೋರಿಸಬೇಕಾಗಿದೆ. ಹೀಗಾಗಿ ಎಲ್ಲರೂ ಏಕಪಕ್ಷೀಯವಾಗಿ ಸುಪ್ರೀಂ ಕೋರ್ಟ್‌ ಮೊರೆ ಹೋಗುವ ನಿರ್ಧಾರ ತೆಗೆದುಕೊಂಡಿದ್ದೇವೆ’ ಎಂದು ಅನರ್ಹ ಶಾಸಕ ತಂಗಾ ತಮಿಳುಸೆಲ್ವನ್‌ ತಿಳಿಸಿದ್ದಾರೆ.

ದಿನಕರನ್ ಜತೆ ಗುರುತಿಸಿಕೊಂಡ 18 ಶಾಸಕರನ್ನು ತಮಿಳುನಾಡು ವಿಧಾನಸಭೆಯ ಸ್ಪೀಕರ್‌ ಪಿ.ಧನಪಾಲ್‌ ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಕಳೆದ ವರ್ಷ ಅನರ್ಹಗೊಳಿಸಿದ್ದರು. ಆ ಆದೇಶವನ್ನು ಮದ್ರಾಸ್‌ ಹೈಕೋರ್ಟ್ ಗುರುವಾರ ಎತ್ತಿ ಹಿಡಿದಿತ್ತು.‌ಬಹುಮತ ಕಳೆದುಕೊಳ್ಳುವ ಆತಂಕದಲ್ಲಿದ್ದ ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಸರ್ಕಾರ ಈ ತೀರ್ಪು ಹೊರಬಿದ್ದ ಬಳಿಕ ನಿರಾಳವಾಗಿದೆ.

ಉಪ ಚುನಾವಣೆ ನಡೆಸಲು ಆರು ತಿಂಗಳ ಕಾಲಾವಕಾಶ ಇದೆ. ಲೋಕಸಭಾ ಚುನಾವಣೆಗೂ ಮೊದಲೇ ಉಪ ಚುನಾವಣೆ ನಡೆಸುವ ಸಾಧ್ಯತೆ ಇದೆ ಎಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಸತ್ಯವ್ರತ ಸಾಹೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT