ಮೇಘಾಲಯ ಸರ್ಕಾರದ ವಿರುದ್ಧ ‘ಸುಪ್ರೀಂ’ ಅಸಮಾಧಾನ

7
ಕಲ್ಲಿದ್ದಲು ಗಣಿಯಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣೆ

ಮೇಘಾಲಯ ಸರ್ಕಾರದ ವಿರುದ್ಧ ‘ಸುಪ್ರೀಂ’ ಅಸಮಾಧಾನ

Published:
Updated:

ನವದೆಹಲಿ: ಜೈಂತಿಯಾ ಜಿಲ್ಲೆಯಲ್ಲಿ ಕಲ್ಲಿದ್ದಲು ಗಣಿಯಲ್ಲಿ ಸಿಕ್ಕಿಹಾಕಿಕೊಂಡಿರುವ 15 ಜನ ಕಾರ್ಮಿಕರ ರಕ್ಷಣೆಗೆ ಮೇಘಾಲಯ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಸುಪ್ರೀಂಕೋರ್ಟ್‌ ಗುರುವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

‘ಗಣಿಯಲ್ಲಿ ಸಿಕ್ಕಿಹಾಕಿಕೊಂಡಿರುವವರಿಗೆ ಪ್ರತಿ ಕ್ಷಣವೂ ಮುಖ್ಯ. ಈ ಘಟನೆ ನಡೆದು ಮೂರು ವಾರಗಳೇ ಗತಿಸಿವೆ. ಹೀಗಾಗಿ ಅವರ ರಕ್ಷಣೆಗೆ ಸಮರ್ಪಕ, ಕ್ಷಿಪ್ರ ಹಾಗೂ ಪರಿಣಾಮಕಾರಿಯಾದ ಕಾರ್ಯಾಚರಣೆಯ ಅಗತ್ಯ ಇದೆ’ ಎಂದು ನ್ಯಾಯಮೂರ್ತಿಗಳಾದ ಎ.ಕೆ.ಸಿಕ್ರಿ ಹಾಗೂ ಎಸ್‌.ಅಬ್ದುಲ್‌ ನಜೀರ್‌ ಅವರಿದ್ದ ಪೀಠ ಸೂಚನೆ ನೀಡಿತು.

‘ಸೈನ್ಯದ ನೆರವನ್ನು ಪಡೆದು ರಕ್ಷಣಾ ಕಾರ್ಯಕ್ಕೆ ಚುರುಕು ನೀಡಿ. ಕಾರ್ಮಿಕ ರಕ್ಷಣೆಗೆ ಸಂಬಂಧಿಸಿದಂತೆ ಕೈಗೊಂಡ ಕ್ರಮಗಳ ಬಗ್ಗೆ ಶುಕ್ರವಾರದ (ಜ. 4) ಒಳಗಾಗಿ ಮಾಹಿತಿ ಸಲ್ಲಿಸಬೇಕು’ ಎಂದು ಸಾಲಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರಿಗೆ ಪೀಠ ಸೂಚಿಸಿತು.

ಕಾರ್ಮಿಕರ ರಕ್ಷಣೆಗೆ ಕೈಗೊಂಡ ಕ್ರಮಗಳ ಬಗ್ಗೆ ವಿವರಣೆ ನೀಡಿದ ತುಷಾರ್‌ ಮೆಹ್ತಾ, ‘ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿ ಸ್ಥಳದಲ್ಲಿದ್ದು, ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಗಣಿಯೇ ನೀರಿನಲ್ಲಿ ಮುಳುಗಿರುವ ಕಾರಣ ಸೈನ್ಯದ ಬದಲಾಗಿ ನೌಕಾಪಡೆಯ ಸಿಬ್ಬಂದಿಯ ನೆರವನ್ನು ಪಡೆಯಲಾಗಿದೆ’ ಎಂದು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !