ಬುಧವಾರ, ನವೆಂಬರ್ 13, 2019
22 °C

ಡಿಕೆಶಿ ಕಸ್ಟಡಿ ಅವಧಿ ವಿಸ್ತರಣೆ: ಸೆ.17ರಂದು ಜಾಮೀನು ಅರ್ಜಿ ವಿಚಾರಣೆ

Published:
Updated:

ನವದೆಹಲಿ: ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿ ಬಂಧನಕ್ಕೆ ಒಳಗಾಗಿರುವ ಕಾಂಗ್ರೆಸ್‌ ಶಾಸಕ ಡಿ.ಕೆ. ಶಿವಕುಮಾರ್‌ ಅವರನ್ನು ಮುಂದಿನ ಮಂಗಳವಾರ (ಸೆ.17)ದವರಗೆ ಜಾರಿ ನಿರ್ದೇಶನಾಲಯ (ಇ.ಡಿ)ದ ಕಸ್ಟಡಿಗೆ ಒಪ್ಪಿಸಿ ಇಲ್ಲಿನ ವಿಶೇಷ ನ್ಯಾಯಾಲಯವು ಶುಕ್ರವಾರ ಆದೇಶ ಹೊರಡಿಸಿತು.

‘ಸತತ 9ದಿನಗಳ ಕಾಲ ವಿಚಾರಣೆ ನಡೆಸಿದರೂ ಸಮರ್ಪಕ ಮಾಹಿತಿ ಕಲೆ ಹಾಕಲು ಸಾಧ್ಯವಾಗಿಲ್ಲ.ಹಾಗಾಗಿ ಇನ್ನೂ ಐದು ದಿನಗಳು ಕಸ್ಟಡಿಗೆ ನೀಡಬೇಕು’ ಎಂದು ಇ.ಡಿ ಪರ ವಕೀಲರು ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅಜಯ್‌ಕುಮಾರ್‌ ಕುಹಾರ್‌ ಅವರನ್ನು ಕೋರಿದರು.

ಸಂಜೆ 4ರಿಂದ 5.15ರವರೆಗೆ ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠವು, ಶಿವಕುಮಾರ್‌ ಆರೋಗ್ಯಕ್ಕೆ ಆದ್ಯತೆ ನೀಡಿ ವಿಚಾರಣೆ ಮುಂದುವರಿಸಬೇಕು. ನಿತ್ಯವೂ ಅವರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಬೇಕು ಎಂದು ಸೂಚಿಸಿತು. ಶಿವಕುಮಾರ್‌ ಅವರ ಜಾಮೀನು ಅರ್ಜಿ ಕುರಿತ ಆಕ್ಷೇಪಣೆಯನ್ನು ಸೋಮವಾರದೊಳಗೆ ಸಲ್ಲಿಸಬೇಕು ಎಂದು ಇ.ಡಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.

ದೊರೆಯದ ಸಹಕಾರ

‘ಇದುವರೆಗೆ ನಡೆದಿರುವ ವಿಚಾರಣೆ ವೇಳೆ ಆರೋಪಿಯಿಂದ ಸೂಕ್ತ ಸಹಕಾರ ದೊರೆತಿಲ್ಲ. ಆಯಾಸವಾಗಿದೆ ಎಂಬ ನೆಪ ಮುಂದಿರಿಸಿ ವಿಚಾರಣೆಯ ನಡುವೆ ವಿರಾಮಕ್ಕೆ ತೆರಳುತ್ತಿದ್ದಾರೆ. ಸಂಬಂಧವಿಲ್ಲದ ಉತ್ತರ ನೀಡುತ್ತ ಕಾಲಹರಣ ಮಾಡುತ್ತಿದ್ದಾರೆ. ಹಣ ಅಕ್ರಮ ವರ್ಗಾವಣೆ ಕುರಿತು ಮಹತ್ವದ ಹೇಳಿಕೆ ಪಡೆಯುವುದು ಬಾಕಿ ಇರುವುದರಿಂದ ಇನ್ನೂ ಐದು ದಿನ ವಶಕ್ಕೆ ನೀಡಬೇಕು’ ಎಂದು ಇ.ಡಿ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ.ಎಂ. ನಟರಾಜ್‌ ವಿಚಾರಣೆಯ ಆರಂಭದಲ್ಲೇ ನ್ಯಾಯಪೀಠವನ್ನು ಕೋರಿದರು.

ಆರೋಪಿ ಸಮರ್ಪಕ ಉತ್ತರ ನೀಡದೆ ನುಣುಚಿಕೊಳ್ಳುತ್ತಿದ್ದಾರೆ. ಬೇನಾಮಿ ಆಸ್ತಿ ಹಾಗೂ ಹಣ ಅಕ್ರಮ ವರ್ಗಾವಣೆ ಸಂಬಂಧ ಇತರರ ಹೇಳಿಕೆಯನ್ನೂ ಪಡೆಯಬೇಕಿದೆ. ಅಕ್ರಮ ಹಣವನ್ನು ವಿವಿಧೆಡೆ ಹೂಡಿಕೆ ಮಾಡಿರುವ ಕುರಿತೂ ವಸ್ತುಸ್ಥಿತಿ ಅರಿಯಬೇಕಿದೆ ಎಂದು ಅವರು ಹೇಳಿದರು.

ಆರೋಪಿ ಸೇರಿದಂತೆ ಅವರ ಕುಟುಂಬ ಸದಸ್ಯರ ಹೆಸರಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ 317 ಖಾತೆಗಳಿವೆ. ಕೇವಲ 23 ವರ್ಷ ವಯಸ್ಸಿನ ಇವರ ಪುತ್ರಿಯ ಹೆಸರಲ್ಲಿ 100 ಕೋಟಿಗೂ ಅಧಿಕ ಆಸ್ತಿ ಇದೆ. ₹ 800 ಕೋಟಿಗೂ ಅಧಿಕ ಆಸ್ತಿ ಹೊಂದಿರುವ ಇವರ ಅಕ್ರಮ ವ್ಯವಹಾರದ ಜಾಲ ಎಲ್ಲೆಡೆ ಚಾಚಿಕೊಂಡಿದೆ. ಇದರ ಪತ್ತೆಗಾಗಿ ಮತ್ತಷ್ಟು ತನಿಖೆ ಅಗತ್ಯವಿದೆ ಎಂದು ಅವರು ವಿವರಿಸಿದರು.

‘ಹಣ ಎಲ್ಲಿಂದ ಬಂತು, ಯಾರನ್ನು ತಲುಪಿತು, ಹೂಡಿಕೆ ಮಾಡಿದವರು ಯಾರು ಎಂಬುದನ್ನು ಮಾತ್ರ ನೀವು ಪತ್ತೆ ಮಾಡಿ’ ಎಂದು ವಿಚಾರಣೆಯ ವೇಳೆ ನ್ಯಾಯಾಧೀಶರು ಸೂಚಿಸಿದರು.

‘ನಾವು ಕಾಯ್ದೆ ಅಡಿ ತನಿಖೆ ನಡೆಸುತ್ತಿದ್ದೇವೆ. ಕಾಯ್ದೆಯ ಸೆಕ್ಸನ್–2 ‘ಯು’ ಅಡಿ ಕ್ರಮ ಕೈಗೊಂಡು ವಿಚಾರಣೆ ನಡಸಲಾಗಿದೆ. ಹಣ ವರ್ಗಾವಣೆ, ಅಕ್ರಮ ಆಸ್ತಿ ಹೊಂದುವುದು ಅಪರಾಧ ಎಂದು ನಟರಾಜ್‌ ತಿಳಿಸಿದರು.

ವಿಚಾರಣೆಯ ಹೆಸರಲ್ಲಿ ಆರೋಪಿಯ ಆರೋಗ್ಯವನ್ನೂ ಕಡೆಗಣಿಸಲಾಗಿದೆ. ಬಂಧನದ ನಂತರ ಹಾಗೂ ಅದಕ್ಕೂ ಮೊದಲೇ ಆರಂಭವಾಗಿರುವ ವಿಚಾರಣೆ ಸತತ 120 ಗಂಟೆಗೂ ಅಧಿಕ ಅವಧಿಗೆ ನಡೆದಿದೆ. ತೀವ್ರ ಕಿರುಕುಳ ನೀಡುತ್ತಿರುವ ಇ.ಡಿ. ಅಧಿಕಾರಿಗಳು ತಮ್ಮ ಅನುಕೂಲಕ್ಕೆ ತಕ್ಕ ಹೇಳಿಕೆಯನ್ನು ಬಯಸುತ್ತಿದ್ದಾರೆ ಎಂದು ಡಿ.ಕೆ. ಶಿವಕುಮಾರ್‌ ಪರ ವಕೀಲ ಅಭಿಷೇಕ್‌ ಮನು ಸಿಂಘ್ವಿ ದೂರಿದರು.

ಇ.ಡಿ. ಪರ ಎಸ್‌ಜಿ ನಟರಾಜ್‌ ವಾದ

* ಆರೋಪಿ ಪ್ರಭಾವಿಯಾಗಿದ್ದು, ತನಿಖೆಗೆ ಸಹಕಾರ ನೀಡುತ್ತಿಲ್ಲ
* ವಿಚಾರಣೆಯ ವೇಳೆ ಉತ್ತರ ನೀಡದೆ ನಿದ್ದೆ ಬರುತ್ತಿದೆ ಎಂಬ ನೆಪ
* ಎಲ್ಲ ಅವ್ಯವಹಾರಗಳ ಅರಿವಿದ್ದರೂ ಆರೋಪಿ ಬಾಯಿ ಬಿಡುತ್ತಿಲ್ಲ
* ಸಂಬಂಧವಿಲ್ಲದ ಯಾವುದೇ ವಿಚಾರಗಳ ಬಗ್ಗೆ ಪ್ರಶ್ನಿಸುತ್ತಿಲ್ಲ
* ಯಾವ ರೀತಿ ತನಿಖೆ ನಡೆಸಬೇಕು ಎಂಬುದು ಇ.ಡಿ.ಗೆ ಬಿಟ್ಟ ವಿಚಾರ
* ಯಾವ ಪ್ರಶ್ನೆ ಕೇಳಬೇಕು ಎಂಬುದನ್ನೂ ಇ.ಡಿ. ನಿರ್ಧರಿಸುತ್ತದೆ
* ಆರೋಪಿ ಅನುಕೂಲಕ್ಕೆ ತಕ್ಕಂತೆ ತನಿಖೆ ನಡೆಸಲಾಗುವುದಿಲ್ಲ
* ತನಿಖಾಧಿಕಾರಿಗಳ ಬಹುತೇಕ ಪ್ರಶ್ನೆಗಳಿಗೆ ಉತ್ತರ ನೀಡಲಾಗಿಲ್ಲ
* ತನಿಖೆಗೆ ಅಡ್ಡಿಪಡಿಸುವ ರೀತಿ ಬೆಂಬಲಿಗರಿಂದ ಪ್ರತಿಭಟನೆ
* ಅವ್ಯವಹಾರಕ್ಕೆ ಸಂಬಂಧಿಸಿದ ತನಿಖೆಯ ಹಾದಿ ತಪ್ಪಿಸಲಾಗುತ್ತಿದೆ

ಡಿಕೆಶಿ ಪರ ವಕೀಲ ಸಿಂಘ್ವಿ ಪ್ರತಿವಾದ

* ಆರೋಗ್ಯ ಸರಿ ಇಲ್ಲದಿದ್ದರೂ ವಿಚಾರಣೆ ನಡೆಸಲಾಗಿದೆ
* ರಕ್ತದ ಒತ್ತಡದಿಂದ ಬಳಲಿದರೂ ಕುಟುಂಬ, ವೈದ್ಯರಿಗೆ ತಿಳಿಸಿಲ್ಲ
* ರಕ್ತದ ತೀವ್ರ ಒತ್ತಡ ಹೃದಯಾಘಾತಕ್ಕೆ ಕಾರಣವಾಗಲಿದೆ
* ವಿಚಾರಣೆ ನಡೆಸುವುದನ್ನೇ ರೂಢಿಸಿಕೊಂಡಿದ್ದು ಸೂಕ್ತವಲ್ಲ
* ಇತರ ಪ್ರಕರಣಗಳ ಬಗ್ಗೆ ಪ್ರಶ್ನಿಸುವುದು ನಿಜಕ್ಕೂ ಕಳವಳಕಾರಿ
* ಆಯಾಸದಿಂದ ಬಳಲಿದಾಗ ಉತ್ತರ ನೀಡುವುದು ಅಸಾಧ್ಯ
* ಸತತ 10 ಗಂಟೆ ಕಾಲ ಪುತ್ರಿಯ ವಿಚಾರಣೆ ನಡೆಸಲಾಗಿದೆ
* ಇ.ಡಿ. ವಿಚಾರಣೆ ವೇಳೆ ಕೆಲವರು ಪ್ರಾಣ ಬಿಟ್ಟ ಉದಾಹರಣೆಗಳಿವೆ
* ಜಾಮೀನು ನೀಡಿ ತೊಂದರೆ ತಪ್ಪಿಸಿ ಮೊದಲು ಆಸ್ಪತ್ರೆಗೆ ದಾಖಲಿಸಿ
* ಅಗೌರವದಿಂದ ನಡೆಸಿಕೊಂಡು ಕಾನೂನು ಉಲ್ಲಂಘಿಸಲಾಗಿದೆ

ರಕ್ತ ಜಿನುಗುತ್ತಿದ್ದರೂ ಕರೆದೊಯ್ದರು: ದುಃಖಿಸಿದ ಡಿಕೆಶಿ

‘ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಆಸ್ಪತ್ರೆಯಲ್ಲಿ ವೈದ್ಯರು ಸೂಜಿ ಚುಚ್ಚಿದರು. ಆಗ ಕೈಯಲ್ಲಿ ರಕ್ತ ಜಿನುಗುತ್ತಿದ್ದರೂ ನನ್ನನ್ನು ಅಲ್ಲೇ ದಾಖಲು ಮಾಡದೆ ಕರೆದೊಯ್ಯಲಾಯಿತು’ ಎಂದು ಕಟಕಟೆಯಲ್ಲಿ ನಿಂತಿದ್ದ ಶಿವಕುಮಾರ್‌ ನ್ಯಾಯಾಧೀಶರಿಗೆ ವಿವರಿಸಿದರು.

‘ವಿಚಾರಣೆಯ ಹೆಸರಲ್ಲಿ ತೀವ್ರ ಕಿರುಕುಳ ನೀಡಲಾಗುತ್ತಿದೆ. ವಿಶ್ರಾಂತಿಗೂ ಅವಕಾಶ ನೀಡುತ್ತಿಲ್ಲ’ ಎಂದು ಅವರು ಒತ್ತಿ ಬಂದ ದುಃಖವನ್ನು ತಡೆದು ಹೇಳಿದರು.

‘ನನ್ನ ಹತ್ರ 317 ಬ್ಯಾಂಕ್‌ ಖಾತೆ ಇವೆ ಅಂತ ಹೇಳ್ತಾರಲ್ಲ. ಅಷ್ಟೆಲ್ಲಾ ಇದ್ರೆ ಎಲ್ಲಾನೂ ಇವರ ಹೆಸರಿಗೇ ಬರೆದುಬಿಡ್ತೀನಿ. ಚುನಾವಣೆಗೆ ನಿಲ್ಲುವಾಗ ಆಸ್ತಿ, ದುಡ್ಡಿನ ವಿವರ ನೀಡಿರುವುದಿಲ್ಲವಾ’ ಎಂದು ತಮ್ಮ ಸುತ್ತ ನಿಂತಿದ್ದ ಇ.ಡಿ. ಅಧಿಕಾರಿಗಳನ್ನು ನೋಡುತ್ತಲೇ ಶಿವಕುಮಾರ್‌ ಅಲ್ಲೇ ಇದ್ದ ಮಾಧ್ಯಮದವರಿಗೆ ಕನ್ನಡದಲ್ಲೇ ಹೇಳಿದರು.

ವಿಚಾರಣೆಯ ನಡುವೆ ಬೆಂಬಲಿಗರಿಂದ ಭಾರಿ ಗದ್ದಲ ಕೇಳಿ ಬಂದಿದ್ದರಿಂದ ಶಾಂತವಾಗಿ ಇರುವಂತೆ ನ್ಯಾಯಾಧೀಶರೇ ಗದರಿದ ಪ್ರಸಂಗವೂ ನಡೆಯಿತು.

ನ್ಯಾಯಾಲಯದ ಸಣ್ಣ ಕೊಠಡಿಯಲ್ಲಿ ಭಾರಿ ಜನಸ್ತೋಮ ನೆರೆದಿದ್ದರಿಂದ ವಿಪರೀತ ಸೆಖೆಯಿಂದ ಬಳಲಿದ ಸಿಂಘ್ವಿ ಅವರ ಸಹಾಯಕ ವಕೀಲೆಯೊಬ್ಬರು ತಲೆ ಸುತ್ತಿ ಕುಸಿದುಬಿದ್ದ ಘಟನೆಯೂ ನಡೆಯಿತು.
 

ಪ್ರತಿಕ್ರಿಯಿಸಿ (+)