ಶುಕ್ರವಾರ, ನವೆಂಬರ್ 22, 2019
23 °C

ಡಿಕೆಶಿ ಪುತ್ರಿಗೂ ಇ.ಡಿ. ಸಮನ್ಸ್‌: ಸೆ.12ರಂದು ವಿಚಾರಣೆಗೆ ಹಾಜರಾಗಲು ಸೂಚನೆ

Published:
Updated:

ನವದೆಹಲಿ: ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿ ಕಾಂಗ್ರೆಸ್‌ ಶಾಸಕ ಡಿ.ಕೆ. ಶಿವಕುಮಾರ್ ಅವರನ್ನು ಬಂಧಿಸಿ ವಿಚಾರಣೆ ಮುಂದುವರಿಸಿರುವ ಜಾರಿ ನಿರ್ದೇಶನಾಲಯ (ಇ.ಡಿ), ಅವರ ಪುತ್ರಿ ಐಶ್ವರ್ಯಾ ಅವರಿಗೂ ಮಂಗಳವಾರ ಸಮನ್ಸ್‌ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

ಐಶ್ವರ್ಯಾ ಅವರು ಕೋಟ್ಯಂತರ ರೂಪಾಯಿ ವ್ಯವಹಾರ ನಡೆಸಿರುವುದು ಬ್ಯಾಂಕ್‌ ಖಾತೆಯ ವಿವರಗಳಿಂದ ತಿಳಿದಿರುವುದಾಗಿ ಹೇಳಿರುವ ಇ.ಡಿ. ಅಧಿಕಾರಿಗಳು, ಸೆಪ್ಟೆಂಬರ್‌ 12ರಂದು ಬೆಳಿಗ್ಗೆ 11ಕ್ಕೆ ಇಲ್ಲಿನ ಲೋಕನಾಯಕ ಭವನದಲ್ಲಿರುವ ಪ್ರಧಾನ ಕಚೇರಿಗೆ ಹಾಜರಾಗಿ ಈ ಸಂಬಂಧ ಹೇಳಿಕೆ ದಾಖಲಿಸುವಂತೆ ಸೂಚಿಸಿದೆ.

ಮುಂದುವರಿದ ವಿಚಾರಣೆ: ವಾರದ ಹಿಂದೆ (ಸೆ.3) ಬಂಧನಕ್ಕೆ ಒಳಗಾಗಿರುವ ಶಿವಕುಮಾರ್‌ ಅವರನ್ನು ತನ್ನ ವಶದಲ್ಲಿ ಇರಿಸಿಕೊಂಡಿರುವ ಇ.ಡಿ. ಮಂಗಳವಾರವೂ ಅವರನ್ನು ವಿಚಾರಣೆಗೆ ಒಳಪಡಿಸಿತು.

ಬೆಳಿಗ್ಗೆ 11ಕ್ಕೇ ಇ.ಡಿ. ಕಚೇರಿಗೆ ಬಂದ ಶಿವಕುಮಾರ್‌ ಅವರನ್ನು ರಾತ್ರಿಯವರೆಗೆ ವಿಚಾರಣೆ ನಡೆಸಲಾಯಿತು. ಸೋದರ ಡಿ.ಕೆ. ಸುರೇಶ, ರಾಜ್ಯಸಭೆ ಸದಸ್ಯ ಜೆ.ಸಿ. ಚಂದ್ರಶೇಖರ್‌, ಕುಣಿಗಲ್‌ ಶಾಸಕ ಡಾ.ರಂಗನಾಥ್‌ ಅವರು ಸಂಜೆ ಶಿವಕುಮಾರ್‌ ಅವರನ್ನು ಭೇಟಿ ಮಾಡಿದರು.

ಇದೇ ಪ್ರಕರಣದಲ್ಲಿ ಭಾಗಿಯಾಗಿರುವ ಕರ್ನಾಟಕ ಭವನದ ನೌಕರ ಆಂಜನೇಯ ಹಾಗೂ ಉದ್ಯಮಿ ಸುನಿಲ್‌ ಶರ್ಮಾ ಅವರೂ ವಿಚಾರಣೆ ಎದುರಿಸಿದ್ದು, ಸಚಿನ್‌ ನಾರಾಯಣ್‌ ಸೋಮವಾರ ಸಂಜೆ ಇ.ಡಿ. ಕಚೇರಿಯಲ್ಲಿ ಹೇಳಿಕೆ ನೀಡಿದರು.

ಸೋನಿಯಾ ಭೇಟಿ

ಡಿ.ಕೆ. ಶಿವಕುಮಾರ್‌ ಅವರ ಸೋದರ, ಕಾಂಗ್ರೆಸ್‌ ಸಂಸದ ಡಿ.ಕೆ. ಸುರೇಶ ಅವರು ಮಂಗಳವಾರ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ 40 ನಿಮಿಷಗಳ ಕಾಲ ಮಾತುಕತೆ ನಡೆಸಿದರು.

ಮಧ್ಯಾಹ್ನ ಸೋನಿಯಾ ಗಾಂಧಿ ಅವರ ನಿವಾಸಕ್ಕೆ ತೆರಳಿದ್ದ ಸುರೇಶ್‌, ಸೋದರನ ಬಂಧನದ ನಂತರದ ಬೆಳವಣಿಗೆಗಳ ಕುರಿತು ಚರ್ಚಿಸಿದ್ದಾಗಿ ಸುದ್ದಿಗಾರರಿಗೆ ತಿಳಿಸಿದರು.

ಸೋದರನ ಆರೋಗ್ಯದ ಕುರಿತು ಮಾಹಿತಿ ಪಡೆದ ಸೋನಿಯಾ, ‘ಇದು ರಾಜಕೀಯ ಪ್ರೇರಿತ ಪ್ರಕರಣ. ಪಕ್ಷವು ಅವರ ಬೆಂಬಲಕ್ಕೆ ಇದೆ ಎಂಬುದಾಗಿ ಅಭಯ ನೀಡಿದ್ದಾರೆ’ ಎಂದು ಅವರು ಹೇಳಿದರು.

ಪ್ರತಿಕ್ರಿಯಿಸಿ (+)