ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್‌ ಪ್ರಧಾನಿ ಅಭ್ಯರ್ಥಿ ಘೋಷಣೆ ಡಿಎಂಕೆಯ ಚಾಣಾಕ್ಷ ನಡೆ

Last Updated 18 ಡಿಸೆಂಬರ್ 2018, 10:50 IST
ಅಕ್ಷರ ಗಾತ್ರ

ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರ ಕಂಚಿನ ಪ್ರತಿಮೆ ಉದ್ಘಾಟನೆ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ರಾಹುಲ್‌ ಗಾಂಧಿಯ ಹೆಸರುಇರಲಿಲ್ಲ. ಇದಕ್ಕೆ ಕಿಂಚಿತ್ತೂ ಬೇಸರ ಮಾಡಿಕೊಳ್ಳದ ಕಾಂಗ್ರೆಸ್‌ ಅಧ್ಯಕ್ಷ, ಪ್ರಮುಖ ಮೈತ್ರಿ ಪಕ್ಷ ಡಿಎಂಕೆ ನಾಯಕರ ನಂಬಿಕೆ ಗಳಿಸಲು ತಾಯಿ ಸೋನಿಯಾ ಜೊತೆ ಸಮಾರಂಭದಲ್ಲಿಹಾಜರಾಗಿಯೇ ಬಿಟ್ಟರು.

ತಮ್ಮನ್ನು ಕರೆದಿಲ್ಲ ಎಂದು ಯಾವುದೇ ಹಿಂಜರಿಕೆ ಮಾಡಿಕೊಳ್ಳದೆ ವೇದಿಕೆ ಏರಿದ್ದ ರಾಹುಲ್‌ಗೆ ದೊಡ್ಡ ಉಡುಗೊರೆಯೇ ಸಿಕ್ಕಿತು. ’ಮೋದಿ ವಿರುದ್ಧ ಪ್ರಬಲ ಸ್ಪರ್ಧೆ ನೀಡಲು ರಾಹುಲ್‌ ಸಮರ್ಥರು. ಅವರನ್ನು ಮಹಾ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಬೇಕು‘ ಎಂದು ಸ್ಟಾಲಿನ್‌ ಹೇಳಿದ್ದರು. ಇದೇ ಡಿಎಂಕೆ ಪಕ್ಷದ ಸಹಾಯದಿಂದಲೇ 15 ವರ್ಷಗಳ ಹಿಂದೆ ಕಾಂಗ್ರೆಸ್‌ ನೇತೃತ್ವದ ಯುಪಿಎ ಅಧಿಕಾರಕ್ಕೆ ಏರಿತ್ತು.

ಇದು ಕೇವಲ ರಾಹುಲ್‌ ಗಾಂಧಿಗಷ್ಟೇ ಅಲ್ಲ, ಡಿಎಂಕೆಗೂ ಲಾಭ ಎನ್ನುವುದನ್ನು ಮರೆಯುವ ಹಾಗಿಲ್ಲ. ತಮ್ಮರಾಜ್ಯದಲ್ಲಿ ಬಿಜೆಪಿಯನ್ನು ಹೊಡೆದುರುಳಿಸುವ ಆತ್ಮಬಲ ಅವರ ಮಾತುಗಳಿತ್ತು. ಅಲ್ಲದೆ, ಮತ್ತೆ ಡಿಎಂಕೆ ಪಕ್ಷ ರಾಷ್ಟ್ರ ರಾಜಕಾರಣದಲ್ಲಿ ಸದ್ದು ಮಾಡಲಿದೆ ಎಂಬುದನ್ನುಅವರ ಈನಡೆ ಬಿಂಬಿಸಿತು.

1989ರಲ್ಲಿ ನ್ಯಾಷನಲ್‌ ಫ್ರಂಟ್‌, 1996ರಲ್ಲಿ ಯುನೈಟೆಡ್‌ ಫ್ರಂಟ್‌, 1999ರಲ್ಲಿ ಎನ್‌ಡಿಎ ಮತ್ತು 2004ರಲ್ಲಿ ಯುಪಿಎ ಸರ್ಕಾರಗಳು ಅಧಿಕಾರಕ್ಕೆ ಬರಲು ಪ್ರಾದೇಶಿಕ ಪಕ್ಷಗಳು ಬಹುದೊಡ್ಡ ಪಾತ್ರ ನಿರ್ವಹಿಸಿದ್ದವು.ಮೂರು ದಶಕಗಳ ಕಾಲ ಕೇಂದ್ರದಲ್ಲಿ ಮೈತ್ರಿಕೂಟ ಸರ್ಕಾರಗಳದ್ದೇ ಕಾರುಬಾರಾಗಿತ್ತು.

2014ರ ಲೋಕಸಭೆ ಚುನಾವಣೆಯಲ್ಲಿ ಮೈತ್ರಿಕೂಟದಿಂದಕಾಂಗ್ರೆಸ್‌ ಪಕ್ಷವನ್ನು ಹೊರಗಿಟ್ಟು ಚುನಾವಣೆ ಎದುರಿಸಿದ್ದರ ಪರಿಣಾಮವನ್ನು ಸ್ಟಾಲಿನ್‌ ಮನಗಂಡಿದ್ದಾರೆ. ಇದೀಗ ಅವರಿಗೆಲೋಕಸಭೆಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷವೊಂದರ ಮಹತ್ವ ಹಾಗೂ ಅದರೊಂದಿಗೆ ಮೈತ್ರಿ ಮಾಡಿಕೊಳ್ಳುವುದರಿಂದ ತಮಗೆ ಆಗುವ ಲಾಭದ ಬಗ್ಗೆ ಸ್ಪಷ್ಟ ಅರಿವಿದೆ.

ರಾಹುಲ್‌ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಬೇಕು ಎಂದು ಹೇಳುವ ಮೂಲಕ ಡಿಎಂಕೆ ಚಾಣಾಕ್ಷ ಹೆಜ್ಜೆಇಟ್ಟಿದೆ. ಅವರ ಈ ಹೇಳಿಕೆ ಕಾಂಗ್ರೆಸ್‌ನೊಂದಿಗಿನ ಮೈತ್ರಿಯನ್ನು ಗಟ್ಟಿಗೊಳಿಸಲು ನೆರವಾಗಿದೆ. ಜೊತೆಗೆ ತಂದೆ ಕರುಣಾನಿಧಿ ರೀತಿಯಲ್ಲಿ ಕೇಂದ್ರದಲ್ಲಿ ಸರ್ಕಾರ ರಚನೆ ವೇಳೆ ಮಹತ್ವದ ಪಾತ್ರ ವಹಿಸಬೇಕು ಎನ್ನುವಸ್ಟಾಲಿನ್‌ ನಿಲುವನ್ನು ಸಹ ಅದು ಸೂಚಿಸುತ್ತದೆ.

‘ಇಂಥ ಹೇಳಿಕೆ ನೀಡುವ ಮೂಲಕಸ್ಟಾಲಿನ್‌ ಡಿಎಂಕೆ ಮತ್ತು ಕಾಂಗ್ರೆಸ್‌ ನಡುವಿನ ಸಂಬಂಧವನ್ನು ಗಟ್ಟಿ ಮಾಡಿಕೊಂಡರು.ಮುಂದಿನ ದಿನಗಳಲ್ಲಿ ಎದುರಾಗಬಹುದಿದ್ದಸೀಟು ಹಂಚಿಕೆ ಸಮಸ್ಯೆ ನಿವಾರಣೆಗೂದಾರಿ ಕಂಡುಕೊಂಡರು’ ಎಂದು ಅಭಿಪ್ರಾಯಪಡುತ್ತಾರೆ ರಾಜಕೀಯ ವಿಶ್ಲೇಷಕ ಸುಮಂತ್‌ ಸಿ ರಮಣ್‌.

2016ರಲ್ಲಿ ಜಯಲಲಿತಾ ಮೃತಪಟ್ಟ ನಂತರ ತಮಿಳುನಾಡಿನಲ್ಲಿ ನೆಲೆಯೂರಲು ಬಿಜೆಪಿ ಸತತ ಪ್ರಯತ್ನ ನಡೆಸಿತು. ಆದರೆ ಈ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿಲ್ಲ. ತಮಿಳುನಾಡಿನಲ್ಲಿ ಬಿಜೆಪಿಯ ಬಲ ವೃದ್ಧಿಸುತ್ತಿಲ್ಲ. ಇದನ್ನು ಅರ್ಥ ಮಾಡಿಕೊಂಡಿರುವ ಡಿಎಂಕೆ, ರಾಹುಲ್‌ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸುವುದರಿಂದ ರಾಷ್ಟ್ರಕಾರಣದ ಮುಂದಿನ ನಡೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ತನ್ನ ಇಚ್ಛೆಯನ್ನುಬಿಂಬಿಸಿದೆ.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಜೊತೆಗಿನ ಮೈತ್ರಿಯಿಂದ ದ್ರಾವಿಡ ಪಕ್ಷಗಳಿಗೆ ಪ್ರಯೋಜನವೇ ಆಗಿದೆ. ಈ ಬಾರಿಯ ಚುನಾವಣೆಯಲ್ಲಿ ಕರುಣಾನಿಧಿ ಸಾವಿನ ಅನುಕಂಪವೂ ಡಿಎಂಕೆಗೆ ವರವಾಗುವ ಸಾಧ್ಯತೆಯಿದೆ.

ರಾಜಕೀಯ ದೃಷ್ಟಿಕೋನದಲ್ಲಿ ಕರುಣಾನಿಧಿಗಿಂತ ಭಿನ್ನ ಎಂದು ಗುರುತಿಸಿಕೊಂಡಿದ್ದ ಸ್ಟಾಲಿನ್‌ ಈಗ ರಾಹುಲ್‌ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುವ ಮೂಲಕ ತಂದೆಯ ಶೈಲಿಯಲ್ಲೇ ರಾಜಕೀಯ ದಾಳಹಾಕಿದ್ದಾರೆ.ನೆಹರು ಕುಟುಂಬದ ಕುಡಿಯನ್ನು ಪ್ರಧಾನಿಯಾಗಿ ಬಿಂಬಿಸುವುದರಿಂದ ತಮಿಳುನಾಡಿನಲ್ಲಿರುವ ಬಿಜೆಪಿ ಮತ್ತು ಮೋದಿ ವಿರೋಧಿ ಅಲೆಯನ್ನು ಬಳಸಿಕೊಳ್ಳಲುಡಿಎಂಕೆ ಯತ್ನಿಸುತ್ತಿದೆ. ಆಡಳಿತವಿರೋಧಿ ಅಲೆ ಎದುರಿಸುತ್ತಿರುವಎಐಎಡಿಎಂಕೆ ಸರ್ಕಾರವನ್ನು ಮಣಿಸಲೂ ಕಾಂಗ್ರೆಸ್‌ ಮೈತ್ರಿ ಲಾಭದಾದಯಕ ಎನ್ನುವುದು ಡಿಎಂಕೆ ಲೆಕ್ಕಾಚಾರ.

1977ರಲ್ಲಿ ತುರ್ತು ಪರಿಸ್ಥಿತಿ ನಂತರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಸೋಲನುಭವಿಸಿತ್ತು.1980ರಲ್ಲಿ ಇಂದಿರಾಗಾಂಧಿಗೆ ಸರ್ಕಾರ ರಚಿಸಲು ಕರುಣಾನಿಧಿ ನೆರವು ನೀಡಿದರು. 2004ರಚುನಾವಣೆ ವೇಳೆ ಸೋನಿಯಾ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ರಾಜಕೀಯವಾಗಿ ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡುವ ಸ್ಟಾಲಿನ್‌, ತಮಿಳುನಾಡಿನಲ್ಲಿ ಅಸ್ತಿತ್ವದಲ್ಲಿಯೇ ಇಲ್ಲದ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಡಿಎಂಕೆ ಅಧ್ಯಕ್ಷರಾಗಿ ನೇಮಕವಾದ ತಕ್ಷಣಅವರು ಮಾಡಿದ ಮೊದಲ ಕೆಲಸವೆಂದರೆ ಕಾಂಗ್ರೆಸ್‌ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಘೋಷಣೆ ಮೊಳಗಿಸಿದ್ದು. ಅವರ ಭಾಷಣಗಳಲ್ಲಿಬಿಜೆಪಿ ಮತ್ತು ಪ್ರಧಾನಿನರೇಂದ್ರ ಮೋದಿ ಕುರಿತ ಟೀಕೆಯೂ ಅವ್ಯಾಹತವಾಗಿ ಸಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT