ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಯನತಾರಾ ವಿರುದ್ಧ ಅಸಭ್ಯ ಕಾಮೆಂಟ್, ಡಿಎಂಕೆ ನಾಯಕ ಅಮಾನತು

Last Updated 26 ಮಾರ್ಚ್ 2019, 5:08 IST
ಅಕ್ಷರ ಗಾತ್ರ

ಚೆನ್ನೈ : ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ ಅವರನ್ನು ಕೀಳು ಭಾಷೆಯಲ್ಲಿ ಟೀಕಿಸಿರುವ ನಟ ಹಾಗೂ ಹಿರಿಯ ನಾಯಕ ರಾಧಾರವಿ ಅವರನ್ನು ಪಕ್ಷದಿಂದ ಅಮಾನತು ಮಾಡಿ ಡಿಎಂಕೆ ಸೋಮವಾರ ಆದೇಶ ಹೊರಡಿಸಿದೆ.

‘ಶಿಸ್ತು ಉಲ್ಲಂಘನೆ ಹಾಗೂ ಪಕ್ಷಕ್ಕೆ ಕೆಟ್ಟ ಹೆಸರು ತರುವ ನಿಟ್ಟಿನಲ್ಲಿ ಹೇಳಿಕೆ ನೀಡಿದ್ದರಿಂದ ರಾಧಾರವಿ ಅವರನ್ನು ಪ್ರಾಥಮಿಕ ಸದಸ್ಯತ್ವದಿಂದಲೂ ಅಮಾನತು ಮಾಡಲಾಗಿದೆ’ ಎಂದು ಡಿಎಂಕೆ ಪ್ರಧಾನ ಕಾರ್ಯದರ್ಶಿ ಹೇಳಿದ್ದಾರೆ.

ನಯನತಾರಾ ವಿರುದ್ಧ ರಾಧಾರವಿ ಅವರು ಮಾಡಿರುವ ಟೀಕೆಯ ವಿಡಿಯೊ ವೈರಲ್‌ ಆಗಿದೆ. ರಾಧಾರವಿ ಅವರ ಹೇಳಿಕೆ ಕೋಲಾಹಲ ಸೃಷ್ಟಿಸಿದೆ. ರಾಧಾರವಿ ಹೇಳಿಕೆಗೆ ಮಕ್ಕಳ್‌ ನೀದಿ ಮೈಯಂ (ಎಂಎನ್‌ಎಂ) ಪಕ್ಷದ ಸ್ಥಾಪಕ ಹಾಗೂ ನಟ ಕಮಲ್‌ ಹಾಸನ್‌, ನಟಿ ತಾಪ್ಸಿ ಪನ್ನು ಮತ್ತು ನಿರ್ದೇಶಕ ವಿಘ್ನೇಶ್‌ ಶಿವನ್‌ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮ್ಮ ಟೀಕೆಗೆ ವಿಷಾದ ವ್ಯಕ್ತಪಡಿಸಿರುವ ರಾಧಾರವಿಗೆ ತಿರುಗೇಟು ನೀಡಿರುವ ನಯನತಾರಾ ಅವರು, ಇಂತಹ ಕೀಳುಮಟ್ಟದ ಹೇಳಿಕೆಯಿಂದ ಪ್ರಚಾರ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದ್ದಾರೆ.

ರಾಧಾರವಿ ಅವರನ್ನು ಪಕ್ಷದಿಂದ ಅಮಾನತು ಮಾಡಿರುವುದಕ್ಕೆ ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್‌ ಅವರಿಗೆ ನಯನತಾರಾ ಕೃತಜ್ಞತೆ ಸಲ್ಲಿಸಿದ್ದಾರೆ.

ದಕ್ಷಿಣ ಭಾರತ ಕಲಾವಿದರ ಸಂಘ (ಎಸ್‌ಐಎಎ) ಸಹ ರಾಧಾರವಿ ಹೇಳಿಕೆಯನ್ನು ಖಂಡಿಸಿದ್ದು, ಅವರು ಇಂಥ ಹೇಳಿಕೆ ನೀಡುತ್ತಿರುವುದು ಇದೇ ಮೊದಲೇನಲ್ಲ ಎಂದು ಹೇಳಿದೆ.ಸುಪ್ರೀಂ ಕೋರ್ಟ್‌ ಆದೇಶದಂತೆ ಆಂತರಿಕ ದೂರುಗಳ ಸಮಿತಿ ರಚನೆ ಮಾಡಿ ವಿಚಾರಣೆ ನಡೆಸಬೇಕು ಎಂದು ಎಸ್‌ಐಎಎ ಅನ್ನು ನಯನತಾರಾ ಒತ್ತಾಯಿಸಿದ್ದಾರೆ.

ರಾಧಾರವಿ ಹೇಳಿದ್ದೇನು?

‘ನಯನತಾರಾ ದೆವ್ವದ ಪಾತ್ರದಲ್ಲಿ ನಟಿಸುತ್ತಾರೆ. ಹಾಗೆಯೇ ಸೀತೆಯ ಪಾತ್ರದಲ್ಲೂ ನಟಿಸಿದ್ದಾರೆ. ಮೊದಲು ದೇವರ ಪಾತ್ರಎಂದರೆ ಕೆ.ಆರ್‌.ವಿಜಯಾ ಅವರು ಪ್ರಖ್ಯಾತಿಯಾಗಿದ್ದರು. ಅವರನ್ನು ಮಾತ್ರ ಅಂತಹ ಪಾತ್ರಗಳಿಗೆಆಯ್ಕೆ ಮಾಡಿಕೊಳ್ಳುತ್ತಿದ್ದರು. ಆದರೆ ಇಂದು ಯಾರನ್ನು ಬೇಕಾದರೂ ದೇವತೆಯ ಪಾತ್ರಕ್ಕೆ ಆರಿಸಬಹುದು. ಅವರನ್ನು ನೋಡಿದಾಗ ನಿಮಗೆ ಪ್ರಾರ್ಥಿಸಬೇಕು ಎಂದು ಬೇಕಾದರೂ ಅನ್ನಿಸಬಹುದು ಅಥವಾ ನಿಮ್ಮ ಕಡೆ ಕರೆಯಬೇಕೆಂದುಕೂಡ ಅನ್ನಿಸಬಹುದು’

***

ಮಹಿಳೆಯರ ಬಗ್ಗೆ ಕೀಳಾಗಿ ಮಾತನಾಡಿರುವ ರಾಧಾರವಿಗೆ ಸಹ ಮಹಿಳೆಯೇ ಜನ್ಮ ನೀಡಿದವರು ಎಂದು ಮರೆಯಬಾರದು. ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಿದ್ದಕ್ಕೆ ಧನ್ಯವಾದ

–ನಯನತಾರಾ, ನಟಿ

ನನ್ನು ಟೀಕೆಯನ್ನು ತಪ್ಪಾಗಿ ಅರ್ಥೈಸಿ ಮಾಧ್ಯಮಗಳಲ್ಲಿ ಹರಿಬಿಡಲಾಗಿದೆ. ಇದು ಖಂಡನೀಯ. ಇದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ

–ರಾಧಾರವಿ, ನಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT