ಸರ್ಕಾರದ ವಿರುದ್ಧ ಟೀಕೆ ಬೇಡ: ಕೇಂದ್ರ ಸರ್ಕಾರ

7
ಸುಪ್ರೀಂಕೋರ್ಟ್‌ಗೆ ಅಟಾರ್ನಿ ಜನರಲ್‌ ವೇಣುಗೋಪಾಲ ಹೇಳಿಕೆ

ಸರ್ಕಾರದ ವಿರುದ್ಧ ಟೀಕೆ ಬೇಡ: ಕೇಂದ್ರ ಸರ್ಕಾರ

Published:
Updated:

ನವದೆಹಲಿ (ಪಿಟಿಐ): ‘ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ಹಾನಿಕಾರಕ ಹೇಳಿಕೆಗಳನ್ನು ನೀಡಬಾರದು’ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಬುಧವಾರ ಹೇಳಿದೆ.

‘ಸರ್ಕಾರದ ವಿರುದ್ಧ ಕಠೋರ ಪದಗಳಿಂದ ಮಾಡುವ ಟೀಕೆಗಳು ದೇಶವನ್ನು ಈಗಾಗಲೇ ಕಾಡುತ್ತಿರುವ ಹಲವಾರು ಸಮಸ್ಯೆಗಳ ಮೇಲೆ ಪರಿಣಾಮ ಬೀರುತ್ತವೆ’ ಎಂದು ಅಟಾರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ ಅವರು ನ್ಯಾಯಮೂರ್ತಿಗಳಾದ ಮದನ್‌ ಬಿ.ಲೋಕೂರ್‌, ಎಸ್‌.ಅಬ್ದುಲ್‌ ನಜೀರ್‌ ಹಾಗೂ ದೀಪಕ್‌ ಗುಪ್ತಾ ಅವರನ್ನು ಒಳಗೊಂಡ ಪೀಠಕ್ಕೆ ಹೇಳಿದರು.

ದೇಶದಲ್ಲಿರುವ 1,382 ಕಾರಾಗೃಹಗಳ ಸ್ಥಿತಿಗತಿ ಕುರಿತ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂಕೋರ್ಟ್‌ಗೇ ತಾಕೀತು ಮಾಡುವಂತಿದ್ದ ಧಾಟಿಯಲ್ಲಿ ಅಟಾರ್ನಿ ಜನರಲ್‌ ಈ ಮಾತುಗಳನ್ನು ಹೇಳಿದರು.

‘ನಾನು ಕೋರ್ಟ್ಅನ್ನು ಟೀಕಿಸುತ್ತಿಲ್ಲ. ದೇಶ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಹಿಂದೆ ಕೋರ್ಟ್‌ ನೀಡಿರುವ ತೀರ್ಪುಗಳಿಂದ ಜನರು ತಮ್ಮ ಉದ್ಯೋಗವನ್ನೇ ಕಳೆದುಕೊಂಡಿದ್ದಾರೆ’ ಎಂದೂ ಹೇಳಿದರು.

‘2 ಜಿ ತರಂಗಾಂತರ ಹಂಚಿಕೆ ಪ್ರಕರಣ, ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಯಲ್ಲಿ 500 ಮೀ. ಅಂತರದಲ್ಲಿ ಮದ್ಯ ಮಾರಾಟ ನಿಷೇಧಿಸಿ ನೀಡಿದ ತೀರ್ಪುಗಳಿಂದ ಉದ್ಯೋಗ ನಷ್ಟ ಉಂಟಾಯಿತು. ಈ ತೀರ್ಪುಗಳು ವಿದೇಶಿ ಹೂಡಿಕೆ ಮೇಲೆ ಸಹ ಪರಿಣಾಮ ಬೀರಿತು’ ಎಂದು ಅಟಾರ್ನಿ ಜನರಲ್‌ ಕೋರ್ಟ್‌ ಗಮನಕ್ಕೆ ತಂದರು.

‘ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳತ್ತಲೂ ಕೋರ್ಟ್‌ ಗಮನ ನೀಡಬೇಕು’ ಎಂದರು.

ಈ ಮಾತಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಮದನ್‌ ಬಿ.ಲೋಕೂರ್‌, ‘ನ್ಯಾಯಾಧೀಶರು ಸಹ ಈ ದೇಶದ ಪ್ರಜೆಗಳು. ಅವರಿಗೂ ದೇಶ ಎದುರಿಸುತ್ತಿರುವ ಸಮಸ್ಯೆಗಳ ಅರಿವಿದೆ. ನಾವು ಪ್ರತಿಯೊಂದು ವಿಷಯಕ್ಕೂ ಸರ್ಕಾರವನ್ನು ಟೀಕೆ ಮಾಡುತ್ತಿಲ್ಲ. ಆದರೆ, ಈ ನೆಲದ ಕಾನೂನನ್ನು ಸರ್ಕಾರ ಪಾಲಿಸಬೇಕಷ್ಟೆ’ ಎಂದರು.

 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !