‘ಸಂತ್ರಸ್ತೆಯ ಲೈಂಗಿಕ ಅನುಭವ ಕೇಳಬೇಡಿ’

7
ಅತ್ಯಾಚಾರ: ಪರೀಕ್ಷೆಗೆ ಹೊಸ ಮಾರ್ಗದರ್ಶಿ ಸೂತ್ರ ಪ್ರಕಟ

‘ಸಂತ್ರಸ್ತೆಯ ಲೈಂಗಿಕ ಅನುಭವ ಕೇಳಬೇಡಿ’

Published:
Updated:

ನವದೆಹಲಿ: ಅತ್ಯಾಚಾರ ಸಂತ್ರಸ್ತರಲ್ಲಿ ಅವರ ಹಿಂದಿನ ಲೈಂಗಿಕ ಸಂಬಂಧದ ಅನುಭವಗಳನ್ನು ಕೇಳಿ ವರದಿಯಲ್ಲಿ ಸೇರಿಸುವುದನ್ನು ನಿಷೇಧಿಸಲಾಗಿದೆ. ಹೊಸ ಮಾರ್ಗದರ್ಶಿ ಸೂತ್ರವನ್ನು ಸರ್ಕಾರ ಪ್ರಕಟಿಸಿದೆ. ಸಂತ್ರಸ್ತರ ಪರೀಕ್ಷೆಯ ಸಂದರ್ಭದಲ್ಲಿ ಏನು ಮಾಡಬೇಕು, ಏನು ಮಾಡಬಾರದು ಎಂಬುದು ಇದರಲ್ಲಿ ಸೇರಿದೆ.

ಅತ್ಯಾಚಾರಕ್ಕೆ ಒಳಗಾದ ಮಹಿಳೆಯರು ಅಥವಾ ಬಾಲಕಿಯರಿಗೆ ‘ಎರಡು ಬೆರಳು ಪರೀಕ್ಷೆ’ ಎಂದೇ ಹೇಳಲಾಗುವ ಜನನಾಂಗ ಪರೀಕ್ಷೆ ನಡೆಸಲೇಬಾರದು. ಸಂತ್ರಸ್ತರ ಲೈಂಗಿಕ ಸಂಪರ್ಕದ ಹಿಂದಿನ ಅನುಭವಗಳನ್ನು ವರದಿಯಲ್ಲಿ ಉಲ್ಲೇಖಿಸಬಾರದು. ಜನನಾಂಗ ದ್ವಾರದ ಗಾತ್ರ, ಯೋನಿ ಅಥವಾ ಯೋನಿ ಪೊರೆಯ ಹಿಗ್ಗುವಿಕೆ ಸಾಮರ್ಥ್ಯ, ಲೈಂಗಿಕ ಸಂಪರ್ಕದ ಅಭ್ಯಾಸಗಳು ಇತ್ಯಾದಿಗೂ ಅತ್ಯಾಚಾರಕ್ಕೂ ಯಾವುದೇ ಸಂಬಂಧ ಇಲ್ಲ. ಹಾಗಾಗಿ ಈ ವಿಚಾರಗಳನ್ನು ಸಂತ್ರಸ್ತರಲ್ಲಿ  ಕೇಳುವಂತಿಲ್ಲ ಎಂದು ಮಾರ್ಗದರ್ಶಿಯು ಸ್ಪಷ್ಟಪಡಿಸಿದೆ. 

‘ವೈದ್ಯಕೀಯ ವರದಿಯಲ್ಲಿರುವ ಅಂಶಗಳನ್ನು ಬಳಸಿಕೊಂಡು ಆರೋಪಿಯು ಸಂತ್ರಸ್ತೆಯನ್ನು ಕೆಟ್ಟದಾಗಿ ಚಿತ್ರಿಸಿದ ಉದಾಹರಣೆಗಳು ಇವೆ. ಇದು ಸಂತ್ರಸ್ತೆಯ ನೋವನ್ನು
ಇನ್ನಷ್ಟು ಹೆಚ್ಚಿಸಬಹುದು. ಅತ್ಯಾಚಾರ ಎಂಬುದು ಅತ್ಯಾಚಾರ ಅಷ್ಟೇ. ಸಂತ್ರಸ್ತೆಯು ಹಿಂದೆ ಲೈಂಗಿಕ ಸಂಪರ್ಕ ಹೊಂದಿದ್ದರೇ ಎಂಬುದು ಅಪ್ರಸ್ತುತ. ಈ ವಿಚಾರಗಳನ್ನು ವರದಿಯಲ್ಲಿ ಉಲ್ಲೇಖಿಸುವುದ ರಿಂದ ಪ್ರಕರಣಕ್ಕೆ ಯಾವುದೇ ಅನುಕೂಲ ಆಗುವುದಿಲ್ಲ’ ಎಂದು ಹಿರಿಯ ತನಿಖಾಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯವು (ಸಿಎಫ್‌ಎಸ್‌ಎಲ್‌) ಈ ಮಾರ್ಗದರ್ಶಿಯನ್ನು ಸಿದ್ಧಪಡಿಸಿದೆ. 

ಅತ್ಯಾಚಾರ ನಡೆದಿದೆ ಎಂಬುದನ್ನು ಸಾಬೀತು ಮಾಡುವ ವಿಧಿವಿಜ್ಞಾನ ಸಾಕ್ಷ್ಯಗಳನ್ನು ಸಂಗ್ರಹಿಸುವುದು ವೈದ್ಯಕೀಯ ಪರೀಕ್ಷೆಯ ಗುರಿ ಎಂಬುದನ್ನು ವೈದ್ಯರು ಅರ್ಥ ಮಾಡಿಕೊಳ್ಳಬೇಕು. ಹಾಗಾಗಿ ಇದಕ್ಕೆ  ಯಾವ ‍ಪುರಾವೆಗಳು ಬೇಕೋ ಅವುಗಳನ್ನಷ್ಟೇ ಸಂಗ್ರಹಿಸಬೇಕು. ಅತ್ಯಾಚಾರ ವರದಿಯಾದ ತಕ್ಷಣವೇ ಮಾದರಿಗಳನ್ನು ಸಂಗ್ರಹಿಸಬೇಕು. ಇಲ್ಲವಾದರೆ ಜೈವಿಕ ಮಾದರಿಗಳು ನಷ್ಟವಾಗುವ ಸಾಧ್ಯತೆ ಇದೆ ಎಂದು ಮಾರ್ಗದರ್ಶಿಯಲ್ಲಿ ಸೂಚಿಸಲಾಗಿದೆ. 

ಡಿಎನ್‌ಎ ಹೋಲಿಕೆಗೆ ಸಂಬಂಧಿಸಿ ಜೈವಿಕ ಸಾಕ್ಷ್ಯಗಳ ಸರಿಯಾದ ನಿರ್ವಹಣೆ ಬಹಳ ಮುಖ್ಯ. ಡಿಎನ್‌ಎ ಹೋಲಿಕೆಯ ಅಂತಿಮ ಫಲಿತಾಂಶವು ಇದನ್ನೇ ಆಧರಿಸಿರುತ್ತದೆ. ಹಾಗಾಗಿ, ಸಂತ್ರಸ್ತೆಯ ಪರೀಕ್ಷೆಗೆ ಮಹತ್ವ ನೀಡಬೇಕು. ಹಾಗೆಯೇ, ಜೈವಿಕ ಪುರಾವೆಗಳ ಆಯ್ಕೆ, ಸಂಗ್ರಹ, ಶೇಖರಣೆ, ಸಂರಕ್ಷಣೆ, ಸಾಗಾಟ ಮತ್ತು ನಿರ್ವಹಣೆ ಬಹಳ ಮುಖ್ಯ ಎಂದು ಮಾರ್ಗದರ್ಶಿಯಲ್ಲಿ ಹೇಳಲಾಗಿದೆ. 

ಪುರುಷರು, ಬಾಲಕರು ಮತ್ತು ಲೈಂಗಿಕ ಅಲ್ಪಸಂಖ್ಯಾತರ ಮೇಲೆಯೂ ಲೈಂಗಿಕ ದೌರ್ಜನ್ಯ ನಡೆಯುತ್ತದೆ ಎಂಬುದನ್ನು ಗಮನದಲ್ಲಿ ಇರಿಸಿಕೊಳ್ಳಬೇಕು ಎಂಬುದು ಮಾರ್ಗದರ್ಶಿಯಲ್ಲಿ ಇದೆ.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !