ಪಾದಮುಟ್ಟಿ ನಮಸ್ಕರಿಸುವ ಪದ್ಧತಿಗೆ ಡಿಎಂಕೆ ತಿಲಾಂಜಲಿ: ಶಾಲು ಬದಲು ಪುಸ್ತಕ ಕಾಣಿಕೆ

7

ಪಾದಮುಟ್ಟಿ ನಮಸ್ಕರಿಸುವ ಪದ್ಧತಿಗೆ ಡಿಎಂಕೆ ತಿಲಾಂಜಲಿ: ಶಾಲು ಬದಲು ಪುಸ್ತಕ ಕಾಣಿಕೆ

Published:
Updated:

ಚೆನ್ನೈ : ಪಕ್ಷದ ಮುಖಂಡರ ಪಾದ ಮುಟ್ಟಿ ನಮಸ್ಕರಿಸುವ, ಹಾರ, ತುರಾಯಿ ಮತ್ತು ದುಬಾರಿ ಕಾಣಿಕೆ ನೀಡುವ ಸಂಪ್ರದಾಯಕ್ಕೆ ಡಿಎಂಕೆ ತಿಲಾಂಜಲಿ ನೀಡಲು ಪಣ ತೊಟ್ಟಿದೆ.

ಡಿಎಂಕೆ ನೂತನ ಅಧ್ಯಕ್ಷ ಎಂ.ಕೆ. ಸ್ಟಾಲಿನ್‌ ಮತ್ತು ಇತರ ನಾಯಕರ ಪಾದಮುಟ್ಟಿ ನಮಸ್ಕರಿಸದಂತೆ ಕಾರ್ಯಕರ್ತರಿಗೆ ಪಕ್ಷ ಕಟ್ಟುನಿಟ್ಟಿನ ತಾಕೀತು ಮಾಡಿದೆ.

ನಾಯಕರ ಕಾಲಿಗೆರಗುವುದು, ವ್ಯಕ್ತಿಪೂಜೆ ಮುಂತಾದವು ಪಕ್ಷದ ದ್ರಾವಿಡ ಸಿದ್ಧಾಂತ ಮತ್ತು ಆತ್ಮಗೌರವದಲ್ಲಿಟ್ಟಿರುವ ನಂಬುಗೆಗಳಿಗೆ ವಿರುದ್ಧವಾದ ಸಂಪ್ರದಾಯಗಳಾಗಿವೆ. ಕಾರ್ಯಕರ್ತರು ಪಕ್ಷದ ನಾಯಕರಿಗೆ ಪ್ರೀತಿಯಿಂದ ಕೈ ಜೋಡಿಸಿ ವಂದಿಸಿದರೆ ಸಾಕು ಎಂದು ಡಿಎಂಕೆ ಹೇಳಿದೆ.

‘ಸಾರ್ವಜನಿಕವಾಗಿ ಎಲ್ಲರ ಗಮನೆ ಸೆಳೆಯಲು ಕಾಲಿಗೆರಗುವ ಗುಲಾಮಿ ಅಥವಾ ದಾಸ್ಯ ಪದ್ಧತಿಯಿಂದ ಪಕ್ಷದ ಅಧ್ಯಕ್ಷರು ಮುಜುಗುರ ಅನುಭವಿಸುತ್ತಿದ್ದಾರೆ.ಪ್ರೀತಿಯಿಂದ ಕೈಮುಗಿಯುವ ಮೂಲಕ ಆತ್ಮಗೌರವ ರಕ್ಷಿಸುವ ಹೊಸ ಸಂಪ್ರದಾಯ ಹುಟ್ಟು ಹಾಕೋಣ’ ಎಂದು ಡಿಎಂಕೆ ಶನಿವಾರ ಹೊರಡಿಸಿದ ಪ್ರಕಟಣೆ ಹೇಳಿದೆ.

ಕಳೆದ ಜನವರಿಯಲ್ಲಿ ಪಕ್ಷದ ಕಾರ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಸ್ಟಾಲಿನ್‌, ಕಾಲು ಮುಟ್ಟಿ ನಮಸ್ಕರಿಸುವ ಪದ್ಧತಿಯನ್ನು ಕೈಬಿಡುವಂತೆ ಕಾರ್ಯಕರ್ತರಿಗೆ ಕಿವಿಮಾತು ಹೇಳಿದ್ದರು.

ಪಾದಮುಟ್ಟಿ ನಮಸ್ಕರಿಸುವುದು ಎಐಎಡಿಎಂಕೆ ಅನುಸರಿಸಿಕೊಂಡು ಬಂದಿರುವ ದಾಸ್ಯ ಸಂಪ್ರದಾಯದ ಪ್ರತೀಕ ಎಂದು ಅವರು ಲೇವಡಿ ಮಾಡಿದ್ದರು.

ಎಐಎಡಿಎಂಕೆ ಕಾರ್ಯಕರ್ತರು ಮತ್ತು ಮುಖಂಡರು ಪಕ್ಷದ ನಾಯಕಿ ಜೆ. ಜಯಲಲಿತಾ ಅವರ ಪಾದಮುಟ್ಟಿ ನಮಸ್ಕರಿಸುವ ಸಂಪ್ರದಾಯವನ್ನು ಅವರು ಪರೋಕ್ಷವಾಗಿ ಟೀಕಿಸಿದ್ದರು.

ಪುಸ್ತಕ ಕಾಣಿಕೆ ಸಂಪ್ರದಾಯ
ಪಕ್ಷದ ಅಧ್ಯಕ್ಷ ಸ್ಟಾಲಿನ್‌ ಅವರಿಗೆ ಶಾಲು, ದುಬಾರಿ ಕಾಣಿಕೆ ಮತ್ತು ಹಾರ, ತುರಾಯಿಗಳ ಬದಲು ಉತ್ತಮ ಪುಸ್ತಕಗಳನ್ನು ಕಾಣಿಕೆಯಾಗಿ ನೀಡುವಂತೆ ಪಕ್ಷ ಸೂಚಿಸಿದೆ.

ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಜ್ಞಾನಾರ್ಜನೆಗೆ ಪೂರಕವಾದ ಕಾಣಿಕೆಯ ಪುಸ್ತಕಗಳನ್ನು ರಾಜ್ಯದ ಎಲ್ಲ ಸಾರ್ವಜನಿಕ ಗ್ರಂಥಾಲಯಗಳಿಗೆ ವಿತರಿಸಲಾಗುವುದು ಎಂದು ಡಿಎಂಕೆ ಹೇಳಿದೆ.

ಸಭೆ, ಸಮಾರಂಭಗಳಿಗಾಗಿ ಅದ್ಧೂರಿ ಪ್ಲೆಕ್ಸ್‌, ಬ್ಯಾನರ್‌, ಪ್ರಚಾರ ಸಾಮಗ್ರಿಗಳಿಗೆ ದುಂದು ವೆಚ್ಚ ಮಾಡದಂತೆ ಮತ್ತು ಉತ್ತಮ ಕಾರ್ಯಗಳಿಗಾಗಿ ಈ ಹಣವನ್ನು ವಿನಿಯೋಗಿಸುವಂತೆ ಕಿವಿಮಾತು ಹೇಳಿದೆ.

ಪಕ್ಷದ ಸಭೆ, ಸಮಾರಂಭಗಳ ಸಂದರ್ಭದಲ್ಲಿ ಸಾರ್ವಜನಿಕರ ಓಡಾಟ ಮತ್ತು ಸಂಚಾರಕ್ಕೆ ತೊಂದರೆಯಾಗದಂತೆ ಎಚ್ಚರವಹಿಸುವಂತೆ ಸೂಚಿಸಲಾಗಿದೆ.

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !