ಸಾಕ್ಷಿಗಳ ರಕ್ಷಣೆ ಯೋಜನೆಗೆ ‘ಸುಪ್ರೀಂ’ ಸಮ್ಮತಿ

7
ಕೇಂದ್ರ ಸಿದ್ಧಪಡಿಸಿದ ನಿಯಮಗಳ ಅನುಷ್ಠಾನಕ್ಕೆ ಎಲ್ಲ ರಾಜ್ಯಗಳಿಗೆ ಸೂಚನೆ

ಸಾಕ್ಷಿಗಳ ರಕ್ಷಣೆ ಯೋಜನೆಗೆ ‘ಸುಪ್ರೀಂ’ ಸಮ್ಮತಿ

Published:
Updated:

ನವದೆಹಲಿ: ಸಾಕ್ಷಿಗಳ ರಕ್ಷಣೆಗೆ ಕೇಂದ್ರ ಸರ್ಕಾರ ರೂಪಿಸಿದ ಕರಡು ಯೋಜನೆಗೆ ಸುಪ್ರೀಂ ಕೋರ್ಟ್ ಬುಧವಾರ ಸಮ್ಮತಿ ಸೂಚಿಸಿದೆ.

ಸಾಕ್ಷಿಗಳ ರಕ್ಷಣೆ ಕರಡು ಮಸೂದೆಗೆ ಸಂಸತ್‌ ಅಂಗೀಕಾರ ದೊರೆತು ಹೊಸ ಕಾನೂನು ಜಾರಿಗೆ ಬರುವವರೆಗೂ ಕರಡು ಯೋಜನೆಯನ್ನು ಜಾರಿಗೊಳಿಸುವಂತೆ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೋರ್ಟ್‌ ಸೂಚನೆ ನೀಡಿದೆ.

ಕೇಂದ್ರ ಸರ್ಕಾರದ ಕರಡು ಯೋಜನೆಯಲ್ಲಿ ಕೋರ್ಟ್‌ ಕೆಲವೊಂದು ಬದಲಾವಣೆ ಮಾಡಿದೆ ಎಂದು ನ್ಯಾಯಮೂರ್ತಿ ಎ.ಕೆ. ಸಿಕ್ರಿ ನೇತೃತ್ವದ ನ್ಯಾಯಪೀಠ ಹೇಳಿದೆ.

ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ವಿರುದ್ಧದ ಅತ್ಯಾಚಾರ ಪ್ರಕರಣದ ಸಾಕ್ಷಿಗಳಿಗೆ ಜೀವ ಬೆದರಿಕೆ ಇದ್ದು ಸೂಕ್ತ ರಕ್ಷಣೆ ಒದಗಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.

ಅರ್ಜಿಯ ವಿಚಾರಣೆ ವೇಳೆ ಸರ್ಕಾರದ ಪರ ವಾದ ಮಂಡಿಸಿದ್ದ ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಅವರು ಸಾಕ್ಷಿಗಳ ಜೀವರಕ್ಷಣೆಗೆ ಕರಡು ಯೋಜನೆ ರೂಪಿಸುವ ಬಗ್ಗೆ ಕೋರ್ಟ್‌ಗೆ ಮಾಹಿತಿ ನೀಡಿದ್ದರು. ಆ ಯೋಜನೆ ಈಗ ಪೂರ್ಣಗೊಂಡಿದೆ.

ಯೋಜನೆ ರೂಪಿಸುವಾಗ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಜತೆ ಸಮಾಲೋಚನೆ ನಡೆಸಿ ಅಭಿಪ್ರಾಯ ಪಡೆಯಲಾಗಿದೆ ಎಂದು ಕೇಂದ್ರ ಸರ್ಕಾರದ ಅಮಿಕಸ್‌ ಕ್ಯೂರಿ (ನ್ಯಾಯಾಲಯದ ಸಹಾಯಕ) ಗೌರವ್‌ ಅಗರವಾಲ್‌ ತಿಳಿಸಿದರು.

‘ಕ್ರಿಮಿನಲ್‌ ನ್ಯಾಯಾಂಗ ವ್ಯವಸ್ಥೆ’ಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ವಿ.ಎಸ್. ಮಳಿಮಠ ನೇತೃತ್ವದ ಸಮಿತಿ 2003ರಲ್ಲಿ ಸಲ್ಲಿಸಿದ್ದ ವರದಿಯಲ್ಲಿ ಸಾಕ್ಷಿಗಳ ರಕ್ಷಣೆಗೆ ಪ್ರತ್ಯೇಕ ಕಾನೂನು ರೂಪಿಸುವಂತೆ ಶಿಫಾರಸು ಮಾಡಿತ್ತು. 2006ರಲ್ಲಿ ಕಾನೂನು ಆಯೋಗ ಸಲ್ಲಿಸಿದ 198ನೇ ವರದಿಯಲ್ಲಿ ಸಾಕ್ಷಿಗಳ ರಕ್ಷಣಾ ಕಾನೂನು ಕರಡು ಸಲ್ಲಿಸಿತ್ತು.

**

ಕರಡು ಯೋಜನೆಯ ತಿರುಳು

* ಸಾಕ್ಷಿಗಳ ರಕ್ಷಣೆಗೆ ಕರಡು ಯೋಜನೆ ರೂಪಿಸಲು ಕೇಂದ್ರ ಗೃಹ ಸಚಿವಾಲಯಕ್ಕೆ ಸೂಚಿಸಿದ್ದ ಸುಪ್ರೀಂ ಕೋರ್ಟ್‌

* ಕರಡು ಯೋಜನೆ ರೂಪಿಸುವ ಬಗ್ಗೆ ಏಪ್ರಿಲ್‌ನಲ್ಲಿ ಕೋರ್ಟ್‌ಗೆ ಕೇಂದ್ರ ಸರ್ಕಾರದ ಮಾಹಿತಿ

* ಕರಡು ರಚನೆಗೆ ರಾಷ್ಟ್ರೀಯ ಕಾನೂನು ಸೇವೆ ಪ್ರಾಧಿಕಾರ (ಎನ್‌ಎಎಲ್‌ಎಸ್‌ಎ) ಮತ್ತು ಪೊಲೀಸ್‌ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯುರೊ (ಬಿಪಿಆರ್‌ಡಿ) ಜತೆ ಸಮಾಲೋಚನೆ

* ಜೀವ ಬೆದರಿಕೆ ಆಧಾರದಲ್ಲಿ ಮೂರು ವಿಭಾಗಗಳಲ್ಲಿ ಸಾಕ್ಷಿಗಳ ವಿಂಗಡನೆ. ಬೆದರಿಕೆಗೆ ಅನುಗುಣವಾಗಿ ಸಾಕ್ಷಿಗಳಿಗೆ ರಕ್ಷಣಾ ವ್ಯವಸ್ಥೆ

* ತನಿಖೆ ಮತ್ತು ವಿಚಾರಣೆ ವೇಳೆ ಆರೋಪಿಗಳು ಮತ್ತು ಸಾಕ್ಷಿಗಳ ಮುಖಾಮುಖಿ ಭೇಟಿಯಾಗದಂತೆ ಎಚ್ಚರಿಕೆ

* ಸಾಕ್ಷಿಗಳ ಹೆಸರು, ವಿಳಾಸ ಸೇರಿದಂತೆ ಎಲ್ಲ ಮಾಹಿತಿಗಳ ಗೌಪ್ಯತೆ ಕಾಪಾಡಲು ಸಲಹೆ

* ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 195ಎ ಸಾಕ್ಷಿಗಳಿಗೆ ಜೀವ ರಕ್ಷಣೆಗೆ ಸಂಬಂಧಪಟ್ಟಿದೆ

* ಅಮೆರಿಕ, ಬ್ರಿಟನ್‌, ಚೀನಾ, ಇಟಲಿ, ಕೆನಡಾ, ಹಾಂಕಾಂಗ್‌ ಮತ್ತು ಐರ್ಲೆಂಡ್‌ನಲ್ಲಿ ಸಾಕ್ಷಿಗಳ ರಕ್ಷಣಾ ಯೋಜನೆ ಜಾರಿಯಲ್ಲಿದೆ

**

ಸಾಕ್ಷಿಗಳು ನ್ಯಾಯದ ಕಣ್ಣು ಮತ್ತು ಕಿವಿಗಳಿದ್ದಂತೆ. ಅಪರಾಧಿಗಳಿಗೆ ಶಿಕ್ಷೆ ವಿಧಿಸಲು ಮತ್ತು ನ್ಯಾಯಾಂಗ ವ್ಯವಸ್ಥೆ ಬಲಪಡಿಸುವಲ್ಲಿ ಸಾಕ್ಷಿಗಳ ಪಾತ್ರ ನಿರ್ಣಾಯಕ
–ಸಾಕ್ಷಿಗಳ ರಕ್ಷಣೆ ಯೋಜನೆ ಕರಡು–2018

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !