ಭಾನುವಾರ, ಡಿಸೆಂಬರ್ 8, 2019
20 °C

ಚಾಲನಾ ಪರವಾನಗಿ: ಕನಿಷ್ಠ ಶಿಕ್ಷಣ ಕಡ್ಡಾಯವಲ್ಲ

ಅಜಿತ್ ಅತ್ರಾಡಿ Updated:

ಅಕ್ಷರ ಗಾತ್ರ : | |

ನವದೆಹಲಿ: ವಾಹನ ಚಾಲನಾ ಪರವಾನಗಿ ಪಡೆಯಲು ಇರುವ ಕನಿಷ್ಠ ವಿದ್ಯಾರ್ಹತೆ ನಿಯಮವನ್ನು ತೆಗೆದುಹಾಕುವ ಮೂಲಕ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಮುಂದಾಗಿದೆ. 

‘ಕೇಂದ್ರೀಯ ಮೋಟಾರು ವಾಹನ ನಿಯಮಗಳು–1989’ರ ನಿಯಮ 8ರ ಪ್ರಕಾರ, ಸಾರಿಗೆ ವಾಹನಗಳನ್ನು ಚಲಾಯಿಸುವ ವ್ಯಕ್ತಿ 8ನೇ ತರಗತಿ ಉತ್ತೀರ್ಣನಾಗಿರುವುದು ಕಡ್ಡಾಯ.  ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತರಲು ಸಚಿವಾಲಯ ಈಗಾಗಲೇ ಮುಂದಾಗಿದ್ದು, ಕರಡು ಅಧಿಸೂಚನೆ ಸದ್ಯದಲ್ಲೇ ಹೊರಬೀಳಲಿದೆ. 

ನಿಯಮ ತಿದ್ದುಪಡಿಯಿಂದ ಹೆಚ್ಚಿನ ಸಂಖ್ಯೆಯ ಯುವಕರಿಗೆ ಉದ್ಯೋಗದ ಬಾಗಿಲು ತೆರೆಯಲಿದೆ. ಸಾರಿಗೆ ಮತ್ತು ಸಾಗಾಣಿಕೆ ವಲಯದಲ್ಲಿ 22 ಲಕ್ಷ ಚಾಲಕರ ಕೊರತೆಯಿದೆ. ಇದು ನೇರವಾಗಿ ಅಭಿವೃದ್ಧಿ ಮೇಲೆ ಪರಿಣಾಮ ಬೀರುತ್ತಿದೆ ಎಂದು ಸಚಿವಾಲಯ ಹೇಳಿದೆ.  ಕನಿಷ್ಠ ವಿದ್ಯಾರ್ಹತೆ ರದ್ದುಪಡಿಸಲು ಮುಂದಾಗಿ ದ್ದರೂ, ಚಾಲಕರು ಕಡ್ಡಾಯವಾಗಿ ತರಬೇತಿ ಹಾಗೂ ಕೌಶಲ ಪರೀಕ್ಷೆಗಳಿಗೆ ಒಳಪಡಬೇಕು ಎಂಬುದಕ್ಕೆ ಸಚಿವಾಲಯ ಒತ್ತು ನೀಡಿದೆ. ಸುರಕ್ಷತೆಗೇ ಮೊದಲ ಆದ್ಯತೆ ಎಂದು ಸ್ಪಷ್ಟಪಡಿಸಿದೆ.

ರಸ್ತೆಯ ಸೂಚನಾಫಲಕಗಳನ್ನು ಓದುವಷ್ಟು ಸಾಮರ್ಥ್ಯ ಚಾಲಕರಿಗೆ ಇರಲೇಬೇಕು ಎಂಬುದು ಶೈಕ್ಷಣಿಕ ಕಾಯ್ದೆಯದ ಹಿಂದಿನ ಉದ್ದೇಶವಾಗಿದ್ದರೂ, ಅವಿದ್ಯಾವಂತ ಚಾಲಕರಿಂದಲೇ ಅಪಘಾತಗಳು ಸಂಭವಿಸುತ್ತವೆ ಎಂಬುದಕ್ಕೆ ಯಾವುದೇ ದಾಖಲೆಗಳು ಇಲ್ಲ. 2016ರಲ್ಲಿ ದೇಶದಲ್ಲಿ ನಡೆದ 4.8 ಲಕ್ಷ ಅಪಘಾತಗಳ ಪೈಕಿ 3.35 ಲಕ್ಷ ಅಪಘಾತಗಳನ್ನು ಮಾಡಿರುವವರು 8ನೇ ತರಗತಿ ಹಾಗೂ ಅದಕ್ಕೂ ಹೆಚ್ಚಿನ ವಿದ್ಯಾರ್ಹತೆ ಹೊಂದಿರುವವರೇ ಆಗಿದ್ದಾರೆ.  ಕನಿಷ್ಠ ವಿದ್ಯಾರ್ಹತೆ ನಿಯಮವನ್ನು ರದ್ದುಪಡಿಸುವಂತೆ ಹರಿಯಾಣ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಈ ಹಿಂದೆ ಮನವಿ ಸಲ್ಲಿಸಿತ್ತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು