ಮಂಗಳವಾರ, ಸೆಪ್ಟೆಂಬರ್ 22, 2020
22 °C

ಡ್ರೋನ್ ಬಳಕೆಯ ಮೇಲೆ ನಿಯಂತ್ರಣ: ನಿಯಮಾವಳಿ ಜಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ನವದೆಹಲಿ: ಮಾನವ ರಹಿತ ವೈಮಾನಿಕ ವ್ಯವಸ್ಥೆಯಾದ ‘ಡ್ರೋನ್‌’ ಬಳಕೆಯ ಮೇಲೆ ನಿಯಂತ್ರಣ ಹೇರಲು ಕೇಂದ್ರ ಸರ್ಕಾರವು ರೂಪಿಸಿದ್ದ ನಿಯಮಾವಳಿಗಳು ಶನಿವಾರದಿಂದ (ಡಿಸೆಂಬರ್ 1) ಜಾರಿಯಾಗಿದೆ.

ಹೀಗಾಗಿ ಇನ್ನು ಮುಂದೆ ಡ್ರೋನ್ ಹಾರಿಸುವ ಮುನ್ನ ಅವನ್ನು ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ. ಈಗಾಗಲೇ ಇರುವ ಡ್ರೋನ್‌ಗಳ ನೋಂದಣಿಗೆ 30 ದಿನಗಳ ಕಾಲಾವಕಾಶ ನೀಡಲಾಗಿದೆ. ನೋಂದಣಿಯಾದ ಡ್ರೋನ್‌ಗಳು ಜನವರಿ 1ರ ನಂತರ ಕಾರ್ಯಾಚರಣೆ ಆರಂಭಿಸಬಹುದು ಎಂದು ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಜಯಂತ್ ಸಿನ್ಹಾ ಮಾಹಿತಿ ನೀಡಿದ್ದಾರೆ. 

* ರಾಷ್ಟ್ರೀಯ ಮಾನವ ರಹಿತ ವೈಮಾನಿಕ ಹಾರಾಟ ನಿಯಂತ್ರಣ ವ್ಯವಸ್ಥೆ ‘ಡಿಜಿಟಲ್‌ ಸ್ಕೈ’ನಿಂದ ಪೂರ್ವಾನುಮತಿ ಅಗತ್ಯ. ಇಲ್ಲದಿದ್ದರೆ ಹಾರಾಟಕ್ಕೆ ಅವಕಾಶ ಇಲ್ಲ

* ತೂಕದ ಆಧಾರದ ಮೇಲೆ ಐದು ಗುಂಪುಗಳಲ್ಲಿ ಡ್ರೋನ್‌ ವರ್ಗೀಕರಣ

* ನಿಷೇಧಿತವಲ್ಲದ ವಲಯದಲ್ಲಿ 50 ಅಡಿಗಿಂತ ಕಡಿಮೆ ಮಟ್ಟದಲ್ಲಿ ಹಾರಾಡುವ 250 ಗ್ರಾಂಗಳಿಗಿಂತ ಕಡಿಮೆ ತೂಕದ ಪುಟ್ಟ ಡ್ರೋನ್‌ಗಳಿಗೆ ವಿಶೇಷ ಗುರುತಿನ ಸಂಖ್ಯೆ (ಯುಐಎನ್‌) ಅಥವಾ ಮಾನವ ರಹಿತ ವೈಮಾನಿಕ ನಿಯಂತ್ರಣ ಸಂಸ್ಥೆಯ ಅನುಮತಿ ಅಗತ್ಯವಿಲ್ಲ

* 250 ಗ್ರಾಂಗಳಿಗಿಂತ ಹೆಚ್ಚಿನ ತೂಕದ 2 ಕೆ.ಜಿ. ತೂಕದ ಒಳಗಿನ ಡ್ರೋನ್‌ಗಳಿಗೆ ಗುರುತಿನ ಸಂಖ್ಯೆ ಮಾತ್ರ ಅಗತ್ಯ. ಮಾನವ ರಹಿತ ವೈಮಾನಿಕ ನಿಯಂತ್ರಣ ಸಂಸ್ಥೆಯ ಅನುಮತಿ ಬೇಕಿಲ್ಲ. 2 ಕೆ.ಜಿ.ಗಿಂತಲೂ ಹೆಚ್ಚು ತೂಕದ ಡ್ರೋನ್‌ಗಳಿಗೆ ಗುರುತಿನ ಸಂಖ್ಯೆ ಮತ್ತು ಅನುಮತಿ ಎರಡೂ ಅಗತ್ಯ

* ವಿಮಾನ ನಿಲ್ದಾಣ, ನಿಷೇಧಿತ ವಲಯಗಳ ಸುತ್ತ ಹಾರಾಡುವ ಪುಟ್ಟ ಡ್ರೋನ್‌ಗಳಿಗೆ ಯುಐಎನ್‌ ಮತ್ತು ವೈಮಾನಿಕ ನಿಯಂತ್ರಣ ಸಂಸ್ಥೆಯ ಅನುಮತಿ ಕಡ್ಡಾಯ

* ಹಗಲು ಹೊತ್ತಿನಲ್ಲಿ ಅದೂ, ದೃಷ್ಟಿ ವ್ಯಾಪ್ತಿಯಲ್ಲಿ ಮಾತ್ರ ಹಾರಾಟಕ್ಕೆ ಅನುಮತಿ

* 18 ವರ್ಷಕ್ಕಿಂತ ಹೆಚ್ಚು ವಯಸ್ಸಿನ, ಇಂಗ್ಲಿಷ್‌ ಮಾಧ್ಯಮದಲ್ಲಿ 10ನೇ ತರಗತಿ ಪಾಸಾದ ಮತ್ತು ತರಬೇತಿ ಹಾರಾಟ ಪಡೆದ ವ್ಯಕ್ತಿಗಳಿಗೆ ಮಾತ್ರ ಹಾರಾಟ ನಿರ್ವಹಣೆಗೆ ಅನುಮತಿ

* ಕೃಷಿ ಉದ್ದೇಶ ಬಳಕೆಗೆ ಅನುಮತಿ. ಆದರೆ, ಕೀಟನಾಶಕ ಸಿಂಪಡಣೆಗೆ ಬಳಸುವಂತಿಲ್ಲ

* ಸ್ಫೋಟಕ, ಪಶು, ಪಕ್ಷಿಗಳು ಮತ್ತು ಮಾನವ ಸಾಗಾಟ ಸಂಪೂರ್ಣ ನಿರ್ಬಂಧ

* ದೇಶದ ಅಂತರರಾಷ್ಟ್ರೀಯ ಗಡಿ ಭಾಗಗಳಿಂದ ಕನಿಷ್ಠ 25 ಕಿ.ಮೀ ಒಳ ಪ್ರದೇಶಗಳಲ್ಲಿ ಮಾತ್ರ ಹಾರಾಟಕ್ಕೆ ಅನುಮತಿ

* ದೆಹಲಿಯಲ್ಲಿ ರಾಷ್ಟ್ರಪತಿ ಭವನ ಮತ್ತು ಅದರ ಬಳಿ ಇರುವ ವಿಜಯ ಚೌಕ್‌ನಿಂದ ಐದು ಕಿ.ಮೀ. ವ್ಯಾಪ್ತಿಯಲ್ಲಿ, ಅತ್ಯಂತ ಜನದಟ್ಟಣೆಯ ಪ್ರದೇಶಗಳಲ್ಲಿ, ಸೇನಾ ನೆಲಗಳಿಂದ ಐದು ಕಿ.ಮೀ. ವ್ಯಾಪ್ತಿಯಲ್ಲಿ, ಪರಿಸರ ಸೂಕ್ಷ್ಮ ವಲಯಗಳಾದ ರಾಷ್ಟ್ರೀಯ ಉದ್ಯಾನಗಳು ಮತ್ತು ಅಭಯಾರಣ್ಯಗಳಲ್ಲಿ ಡ್ರೋನ್‌ಗಳನ್ನು ಹಾರಿಸುವಂತಿಲ್ಲ

ಡ್ರೋನ್ 2.0

ಡ್ರೋನ್‌ ನಿಯಮಾವಳಿಗೆ ಪೂರಕವಾಗಿ ಮತ್ತೊಂದು ನಿಯಮಾವಳಿಯನ್ನು ರೂಪಿಸಲು ನಾಗರಿಕ ವಿಮಾನಯಾನ ಸಚಿವಾಲಯ ಸಿದ್ಧತೆ ನಡೆಸಿದೆ. ಈ ಹೊಸ ನಿಯಮಾವಳಿಗೆ ‘ಡ್ರೋನ್ 2.0’ ಎಂದು ಹೆಸರಿಡಲಾಗಿದೆ. ಮೊದಲ ಡ್ರೋನ್ ನಿಯಮಾವಳಿಯಲ್ಲಿ ಇರುವ ಕೆಲವು ನಿರ್ಬಂಧಗಳನ್ನು ‘ಡ್ರೋನ್‌ 2.0’ ಸಡಿಲಗೊಳಿಸುತ್ತದೆ. ಇದು ಡ್ರೋನ್ ಉದ್ಯಮವನ್ನು ಉತ್ತೇಜಿಸಲಿದೆ ಎಂದು ಸಚಿವ ಜಯಂತ್ ಸಿನ್ಹಾ ಹೇಳಿದ್ದಾರೆ

* ದೃಷ್ಟಿ ವ್ಯಾಪ್ತಿಯಿಂದ ಆಚೆಗೂ ಡ್ರೋನ್ ಹಾರಾಟ ನಡೆಸಲು ಅನುಮತಿ

* ಸರಕುಗಳನ್ನು ಹೊತ್ತೊಯ್ಯಲು ಅವಕಾಶ

* ಸ್ವಯಂಚಾಲಿತ ಡ್ರೋನ್‌ಗಳ ಹಾರಾಟಕ್ಕೂ ಅನುಮತಿ

* ತುರ್ತು ಸಂದರ್ಭಗಳಲ್ಲಿ ಮಾನವನ ಅಂಗ ಸಾಗಾಟಕ್ಕೆ ಅವಕಾಶ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು