ರಾಜ್ಯಕ್ಕೆ ಬರ ಅಧ್ಯಯನ ತಂಡ

7

ರಾಜ್ಯಕ್ಕೆ ಬರ ಅಧ್ಯಯನ ತಂಡ

Published:
Updated:

ನವದೆಹಲಿ: ರಾಜ್ಯದಲ್ಲಿನ ಬರಪರಿಸ್ಥಿತಿಯ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಅಧಿಕಾರಿಗಳ ತಂಡವೊಂದನ್ನು ಶೀಘ್ರ ಕಳುಹಿಸಿಕೊಡುವುದಾಗಿ ಕೇಂದ್ರ ಗೃಹಸಚಿವ ರಾಜನಾಥಸಿಂಗ್ ಅವರು ಮಂಗಳವಾರ ಇಲ್ಲಿ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರಿಗೆ ತಿಳಿಸಿದ್ದಾರೆ.

ನೆರೆ, ಬರದಿಂದ₹11,384.47 ಕೋಟಿಯ ನಷ್ಟವಾಗಿದ್ದು, ₹2,064.30 ಕೋಟಿ ಪರಿಹಾರಕ್ಕೆ ಮನವಿ ಸಲ್ಲಿಸಿರುವುದಾಗಿ ಸಚಿವ ದೇಶಪಾಂಡೆ ಸುದ್ದಿಗಾರರಿಗೆ ತಿಳಿಸಿದರು.

ರಾಜ್ಯದ 156 ತಾಲ್ಲೂಕುಗಳು ಬರಪೀಡಿತವಾಗಿವೆ. ಈ ಪೈಕಿ 107 ತಾಲ್ಲೂಕುಗಳಲ್ಲಿ ತೀವ್ರ ಬರದ ಸ್ಥಿತಿಯಿದೆ. 19.46 ಲಕ್ಷ ಹೆಕ್ಟೇರುಗಳ 23,313 ಕೋಟಿ ರುಪಾಯಿ ಮೌಲ್ಯದ ಬೆಳೆ ಹಾನಿಯಾಗಿದೆ. 2018ರಲ್ಲಿ ನೆರೆ-ಬರದ ಕಾರಣ ಒಟ್ಟು 32,335 ಕೋಟಿ ರುಪಾಯಿಗಳಷ್ಟು ನಷ್ಟವಾಗಿದ್ದು, ರಾಜ್ಯದ ಹಣಕಾಸು ಪರಿಸ್ಥಿತಿ ತೀವ್ರ ಒತ್ತಡ ಎದುರಿಸಿದೆ. ಕೃಷ್ಣಾ ಮತ್ತು ಕಾವೇರಿ ಜಲಾಶಯಗಳ ನೀರಿನ ಸಂಗ್ರಹ ಇದೇ ಜನವರಿ ಅಂತ್ಯದ ವೇಳೆಗೆ ಅನುಕ್ರಮವಾಗಿ ಕೇವಲ ಶೇ.38 ಮತ್ತು ಶೇ.44ರ ಪ್ರಮಾಣಕ್ಕೆ ಕುಸಿದಿದೆ. ಈ ನೀರನ್ನು ಕುಡಿಯುವ ಬಳಕೆಗಷ್ಟೇ ಸೀಮಿತಗೊಳಿಸಲಾಗಿದೆ. 3,611 ಸಣ್ಣ ನೀರಾವರಿ ಕೆರೆಗಳ ಪೈಕಿ ಶೇ.48ರಷ್ಟು ಕೆರೆಗಳು ಅಷ್ಟಿಷ್ಟು ನೀರು ನಿಂತಿದೆ ಇಲ್ಲವೇ ಪೂರ್ಣ ಒಣಗಿ ಹೋಗಿವೆ.

ರಾಜ್ಯದ ಶೇ.70ರಷ್ಟು ಭೂಪ್ರದೇಶದಲ್ಲಿ ಅಂತರ್ಜಲದ ಮಟ್ಟ ತೀವ್ರ ಕುಸಿದಿದೆ. 247 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕುಡಿಯುವ ನೀರನ್ನು ಟ್ಯಾಂಕರ್‌ಗಳಿಂದ ಪೂರೈಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇಂತಹ ಸ್ಥಳೀಯ ಸಂಸ್ಥೆಗಳ ಸಂಖ್ಯೆ 437ಕ್ಕೆ ಏರಲಿದೆ. 645 ಹಳ್ಳಿಗಳಲ್ಲಿ ಇದೇ ಪರಿಸ್ಥಿತಿ ಇದೆ. ಬೇಸಿಗೆಗೆ ನೀರಿನ ಸಂಕಟ ಬಿಗಡಾಯಿಸಲಿದೆ. ಕೃಷಿ ಕುಂಠಿತವಾಗಿದ್ದು, ನಗರಕ್ಕೆ ವಲಸೆ ಹೆಚ್ಚುತ್ತಿದೆ. ಇದೇ ಜನವರಿ 11ರವರೆಗೆ 6.96 ಕೋಟಿ ಮಾನವ ದಿನಗಳಷ್ಟು ಉದ್ಯೋಗವನ್ನು ಉದ್ಯೋಗ ಖಾತರಿ ಯೋಜನೆಯಡಿ ಒದಗಿಸಲಾಗಿದೆ ಎಂದು ಅವರು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !