ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಶೇಕಡ 50ರಷ್ಟು ಪ್ರದೇಶದಲ್ಲಿ ಬರ: ಐಐಟಿ ವಿಜ್ಞಾನಿಗಳ ಅಧ್ಯಯನ

ಶೇಕಡ 16ರಷ್ಟು ಭಾಗದಲ್ಲಿ ಭೀಕರ ಪರಿಸ್ಥಿತಿ
Last Updated 28 ಫೆಬ್ರುವರಿ 2019, 20:27 IST
ಅಕ್ಷರ ಗಾತ್ರ

ಗಾಂಧಿನಗರ: ದೇಶದ ಸುಮಾರು ಶೇಕಡ 50ರಷ್ಟು ಪ್ರದೇಶ ಸದ್ಯ ಬರ ಪರಿಸ್ಥಿತಿ ಎದುರಿಸುತ್ತಿದೆ ಎಂದು ಇಲ್ಲಿನ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ವಿಜ್ಞಾನಿಗಳು ತಿಳಿಸಿದ್ದಾರೆ.

ಭಾರತೀಯ ಹವಾಮಾನ ಇಲಾಖೆಯಿಂದ ಮಳೆ ವಿವರ ಸೇರಿದಂತೆ ವಿವಿಧ ಸ್ಥಳಗಳ ಸಮಗ್ರ ಮಾಹಿತಿ ಹಾಗೂ ಮಣ್ಣಿನ ತೇವಾಂಶ ಮತ್ತು ಇತರ ಅಂಶಗಳ ಆಧಾರದ ಮೇಲೆ ಬರ ಪರಿಸ್ಥಿತಿಯನ್ನು ವಿಜ್ಞಾನಿಗಳು ವಿಶ್ಲೇಷಣೆ ನಡೆಸಿದ್ದಾರೆ.

'ಬರದಿಂದಾಗಿ ಈ ಬಾರಿಯ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಗಂಭೀರವಾಗಲಿದೆ' ಎಂದು ಸಹ ಪ್ರಾಧ್ಯಾಪಕ ವಿಮಲ್‌ ಮಿಶ್ರಾ ವಿವರಿಸಿದ್ದಾರೆ.

‘ದೇಶದ ಶೇಕಡ 47ರಷ್ಟು ಪ್ರದೇಶದಲ್ಲಿ ಬರ ಇದೆ. ಶೇಕಡ 16ರಷ್ಟು ಭಾಗದಲ್ಲಿ ಭೀಕರ ಪರಿಸ್ಥಿತಿ ಇದೆ. ಅರುಣಾಚಲ ಪ್ರದೇಶದಲ್ಲಿ ಈ ಬಾರಿ ಉತ್ತಮ ಮಳೆಯಾಗಿಲ್ಲ. ಜಾರ್ಖಂಡ್‌, ಆಂಧ್ರಪ್ರದೇಶದ ದಕ್ಷಿಣ ಭಾಗ, ಗುಜರಾತ್‌ ಮತ್ತು ತಮಿಳುನಾಡಿನ ಉತ್ತರ ಭಾಗಗಳು ಬರ ಪರಿಸ್ಥಿತಿ ಎದುರಿಸುತ್ತಿವೆ’ ಎಂದು ಮಿಶ್ರಾ ತಿಳಿಸಿದ್ದಾರೆ.

‘ಸತತ ಬರದಿಂದ ದೇಶದಲ್ಲಿನ ಅಂತರ್ಜಲ ಕುಸಿಯಲಿದೆ. ಅಂತರ್ಜಲ ಮರುಪೂರಣಕ್ಕೆ ಉತ್ತೇಜನ ನೀಡುತ್ತಿಲ್ಲ. ಬದಲಾಗಿ ಭೂಮಿಯಿಂದ ಅಪಾರ ಪ್ರಮಾಣದಲ್ಲಿ ನೀರು ಪಡೆಯುವ ಕಾರ್ಯದಲ್ಲೇ ಹೆಚ್ಚು ತೊಡಗಿದ್ದೇವೆ. ಬೇಜವಾಬ್ದಾರಿಯಿಂದ ಅಂತರ್ಜಲವನ್ನು ಬಳಸಲಾಗುತ್ತಿದೆ. ಇದರಿಂದ ನೀರಿಗೆ ಹಾಹಾಕಾರ ಉಂಟಾಗುತ್ತದೆ.

ಬರದಿಂದ ದೇಶದ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ. ಬಡವರು ಮತ್ತು ಸಣ್ಣ ರೈತರು ಅತಿ ಹೆಚ್ಚು ಸಂಕಷ್ಟಕ್ಕೆ ಸಿಲುಕಲಿದ್ದಾರೆ’ ಎಂದು ವಿವರಿಸಿದ್ದಾರೆ.

ಅಂತರ್ಜಲ ದುರುಪಯೋಗ ತಡೆಗೆ ಸಲಹೆ

ಅತಿ ಹೆಚ್ಚು ನೀರು ಬೇಕಾಗುವ ಬೆಳೆಗಳಿಗೆ ನಿರ್ಬಂಧ ವಿಧಿಸಬೇಕು. ಉದಾಹರಣೆಗೆ ಪಂಜಾಬ್‌ನಲ್ಲಿ ಭತ್ತ ಬೆಳೆಯುವುದನ್ನು ನಿಲ್ಲಿಸಬೇಕು. ಜತೆಗೆ ಅಂತರ್ಜಲ ಸಂರಕ್ಷಣೆಗೆ ಸರ್ಕಾರ ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಮಿಶ್ರಾ ಸಲಹೆ ನೀಡಿದ್ದಾರೆ.

* ಅಂತರ್ಜಲವನ್ನು ಮರುಪೂರಣ ಮಾಡದಿದ್ದರೆ ಮತ್ತು ಸುಸ್ಥಿರವಾಗಿ ನಿರ್ವಹಣೆ ಮಾಡದಿದ್ದರೆ ಮುಂದಿನ ವರ್ಷಗಳಲ್ಲಿ ಸಂಕಷ್ಟಕ್ಕೆ ಸಿಲುಕಲಿದ್ದೇವೆ
-ವಿಮಲ್‌ ಮಿಶ್ರಾ, ಐಐಟಿ ಸಹ ಪ್ರಾಧ್ಯಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT