ಶುಕ್ರವಾರ, ಡಿಸೆಂಬರ್ 6, 2019
24 °C
ದನಗಳನ್ನು ಉಳಿಸಿಕೊಳ್ಳಲು ಊರೂರು ತಿರುಗಾಟ

ಬರ: ಜಾನುವಾರುಗಳೊಂದಿಗೆ ವಲಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಹೂವಿನಹಡಗಲಿ (ಬಳ್ಳಾರಿ ಜಿಲ್ಲೆ): ನೀರು, ಮೇವು ಅರಸಿ ಕೊಪ್ಪಳ ಜಿಲ್ಲೆಯಿಂದ ಸಾವಿರಾರು ಜಾನುವಾರುಗಳೊಂದಿಗೆ ಮಾಲೀಕರು ತಾಲ್ಲೂಕಿಗೆ ವಲಸೆ ಬಂದಿದ್ದಾರೆ.

ಭೀಕರ ಬರ ಪರಿಸ್ಥಿತಿಯಿಂದಾಗಿ, ಕೊಪ್ಪಳ ತಾಲ್ಲೂಕಿನ ಕಾಮನೂರು ಮತ್ತು ಹಾಲವರ್ತಿಯ ಜಾನುವಾರುಗಳ ಎರಡು ದೊಡ್ಡ ಹಿಂಡು ಶನಿವಾರ ಮತ್ತು ಭಾನುವಾರ ತಾಲ್ಲೂಕಿಗೆ ಬಂದಿದ್ದು, ನಾಗತಿಬಸಾಪುರ ಕೆರೆ ದಡದಲ್ಲಿ ಬೀಡುಬಿಟ್ಟಿವೆ. 

ಕುರಿ ತರುಬುವಂತೆಯೇ ಹೊಲದಲ್ಲಿ ದನಗಳನ್ನೂ ತರುಬಿ ಅವುಗಳ ಮೇವು–ನೀರಿನ ವ್ಯವಸ್ಥೆ ಮಾಡುತ್ತಿರುವ ದನಗಾಹಿಗಳು, ಹೇಗಾದರೂ ಮಾಡಿ ಜಾನುವಾರುಗಳನ್ನು ಬದುಕಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.

ಕಾಮನೂರಿನ ಜಂತ್ಲಿ ಹನುಮೇಶಪ್ಪ ಮತ್ತು ಹಾಲವರ್ತಿಯ ಕುರಗಟ್ಟಿ ಬಾಳಪ್ಪ ತಲಾ 500 ದೇಸಿ ಹಸುಗಳನ್ನು ಸಾಕುತ್ತಿದ್ದಾರೆ. ಆ ಜಿಲ್ಲೆಯಲ್ಲಿ ಈ ವರ್ಷ ಭೀಕರ ಬರ ಇರುವ ಕಾರಣ ಮೇವು, ನೀರಿಗೆ ತತ್ವಾರ ಉಂಟಾಗಿದೆ. ಹೀಗಾಗಿ, ದೊಡ್ಡ ಸಂಖ್ಯೆಯಲ್ಲಿ ದನಗಳನ್ನು ಸಾಕಿರುವ ಹನುಮೇಶಪ್ಪ, ಬಾಳಪ್ಪ ಕುಟುಂಬದವರು ಈ ಭಾಗಕ್ಕೆ ವಲಸೆ ಬಂದಿದ್ದಾರೆ.

ಇದುವರೆಗೆ ಸಮರ್ಪಕ ಮೇವು– ನೀರು ಸಿಗದೇ ಕಂಗೆಟ್ಟಿರುವ ದನಗಳು, ನಾಗತಿಬಸಾಪುರ ಮತ್ತು ಬೆಟ್ಟದ ಮಲ್ಲೇಶ್ವರ ಭಾಗದಲ್ಲಿ ಕಟಾವು ಮುಗಿದ ಹೊಲಗಳಲ್ಲಿನ ಒಣ ಮೇವು ತಿಂದು ಹಸಿವು ನೀಗಿಸಿಕೊಳ್ಳುತ್ತಿವೆ. ಕೆರೆಯ ನೀರು ಕುಡಿದು ಬಾಯಾರಿಕೆ ತಣಿಸಿಕೊಳ್ಳುತ್ತಿವೆ. ದನಗಾಹಿಗಳು ಮೇವು, ನೀರು ಇರುವ ಸ್ಥಳಗಳನ್ನು ಹುಡುಕಿ ಅಲ್ಲೇ ಬಿಡಾರ ಹೂಡುತ್ತಿದ್ದಾರೆ. ಹೊಲ ಗದ್ದೆಗಳಲ್ಲಿ ಕುರಿ ಮಂದೆಯನ್ನು ನಿಲ್ಲಿಸುವ ಮಾದರಿಯಲ್ಲೇ ಇವರು ಜಾನುವಾರುಗಳನ್ನು ನಿಲ್ಲಿಸುತ್ತಿದ್ದಾರೆ. ದನ ಮೇಯಿಸಲು ಬಂದವರಿಗೆ ಊಟ, ಒಂದಿಷ್ಟು ಖರ್ಚಿಗೆ ಕಾಸು ಮಾತ್ರ ನೀಡಬೇಕಿದೆ. ದನದ ಸಗಣಿ, ಗಂಜಲಿನಿಂದ ಭೂಮಿಯ ಫಲವತ್ತತೆ ಹೆಚ್ಚಾಗುವ ಕಾರಣ ಕೆಲವು ರೈತರು ತಮ್ಮ ಹೊಲಗಳಲ್ಲಿ ಜಾನುವಾರುಗಳನ್ನು ನಿಲ್ಲಿಸುವಂತೆ ಕೇಳುತ್ತಿದ್ದಾರೆ.

‘ಈ ವರ್ಷ ಕೊಪ್ಪಳ ಭಾಗದಾಗ ಮಳಿ, ಬೆಳಿ ಇಲ್ದ ಕೆಟ್ಟ ಬರ ಬಿದ್ದೈತ್ರಿ. ನಮ್ಮೂರ ಸುತ್ತಮುತ್ತ, ಗುಡ್ಡಗಾಡು ಪ್ರದೇಶದಾಗ ಒಣ ದಂಟೂ ಸಿಗದಂಗ ಆಗೇತ್ರಿ. ಈ ಭಾಗದಾಗ ಒಂದಿಷ್ಟು ಒಣಮೇವು, ಕೆರಿಯಾಗ ನೀರಾದ್ರೂ ಸಿಗತೈತಿ. ಅದ್ಕ ಈ ಕಡೆ ದನಾ ಹೊಡಕೊಂಡು ಬಂದೇವಿ’ ಎಂದು ಜಾನುವಾರು ಹಿಂಡಿನೊಂದಿಗೆ ಬಂದಿರುವ ಕಾಮನೂರಿನ ಸ್ವಾಮಿಲಿಂಗಪ್ಪ ಹೇಳಿದರು.

‘ಹೆಂಗರ ಮಾಡಿ ದನಾ ಉಳಿಸ್ಕೋಬೇಕ್ರಿ. ಅದ್ಕ ಊರೂರು ತಿರುಗಾಕತ್ತೇವಿ. ನಮ್ಮ ದನಗಳ ಬಗ್ಗೆ ಜನ ಅನುಕಂಪ ತೋರಸ್ತಾರ. ದನಾ ನಿಲ್ಲಸಾಕ ನಾವೇನೂ ಹೆಚ್ಚಿಗಿ ರೊಕ್ಕಾ ಕೇಳಂಗಿಲ್ರೀ. ದನಕ್ಕ ಒಂದಿಷ್ಟು ಮೇವು, ನಮಗ ಊಟ, ಬ್ಯಾರೆ ಊರಿಗೆ ಹೋಗಾಕ ಒಂದಿಷ್ಟು ರೊಕ್ಕ ಕೊಟ್ರ ಅಷ್ಟ... ಸಾಕು’ ಎಂದು ಅವರು ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು