ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪುಟದ ಮುಂದೆ ಕುಡಿಯುವ ನೀರು ಯೋಜನೆ

Last Updated 5 ಫೆಬ್ರುವರಿ 2018, 6:56 IST
ಅಕ್ಷರ ಗಾತ್ರ

ಬಿಡದಿ (ರಾಮನಗರ) : ಮಂಚನಬೆಲೆ ಜಲಾಶಯದ ನೀರನ್ನು ನಲ್ಲಿಗುಡ್ಡಕೆರೆಗೆ ತಂದು ಬಿಡದಿಗೆ ಕುಡಿಯುವ ನೀರು ಒದಗಿಸುವ ಯೋಜನೆ ಅನುಮೋದನೆಗಾಗಿ ಸಚಿವ ಸಂಪುಟಕ್ಕೆ ಹೋಗಿದೆ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿದರು.

ಇಲ್ಲಿನ ಕೇತಗಾನಹಳ್ಳಿಯಲ್ಲಿ ಶನಿವಾರ ನಡೆದ ಬಿಡದಿ - ಕೇತಗಾನಹಳ್ಳಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ಹಾಗೂ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ನಲ್ಲಿಗುಡ್ಡಕೆರೆಯಿಂದ ನೀರು ಒದಗಿಸುವ ಯೋಜನೆಯನ್ನು ₹170 ಕೋಟಿ ವೆಚ್ಚದಲ್ಲಿ ರೂಪಿಸಲಾಗಿದೆ. ಇದಕ್ಕೆ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆತರೆ ಬಿಡದಿ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದರು.

ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವುದು ಹಾಗೂ ನೀರಾವರಿ ಯೋಜನೆಗಳನ್ನು ಜಾರಿಗೆ ತರಲು ಕಾಂಗ್ರೆಸ್ ನೇತೃತ್ವದ ರಾಜ್ಯಸರ್ಕಾರ ಮೊದಲ ಆದ್ಯತೆ ನೀಡುತ್ತಿದೆ. ಜಿಲ್ಲೆಯಲ್ಲಿ ಡಿ.ಕೆ.ಚಾರಿಟಬಲ್ ಟ್ರಸ್ಟ್ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸುವ ಕೆಲಸ ಆರಂಭಿಸಿತು. ಈಗ ಸರ್ಕಾರದ ಸಹಯೋಗದಲ್ಲಿ ಘಟಕಗಳನ್ನು ಸ್ಥಾಪನೆ ಮಾಡಿ ಜನರಿಗೆ ಶುದ್ಧ ನೀರು ಒದಗಿಸಲಾಗುತ್ತಿದೆ ಎಂದರು.

ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿದ ಸಂಸದ ಡಿ.ಕೆ.ಸುರೇಶ್ ಮಾತನಾಡಿ, ಬಿಡದಿಯ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಬದ್ಧವಾಗಿದೆ. ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡುತ್ತಿದೆ. ವಿರೋಧ ಪಕ್ಷದವರು ಅಥವಾ ಜನರನ್ನು ಮೆಚ್ಚಿಸುವ ಸಲುವಾಗಿ ಬಿಡದಿ - ಕೇತಗಾನಹಳ್ಳಿ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲು ಬಂದಿಲ್ಲ ಎಂದರು.

‘ಪುರಸಭೆ ಚುನಾವಣೆಯ ಸಂದರ್ಭದಲ್ಲಿ ನಾನು ರಸ್ತೆ ಅಭಿವೃದ್ಧಿ ಪಡಿಸುವುದಾಗಿ ವಾಗ್ದಾನ ಮಾಡಿದ್ದೆ. ಅದರಂತೆ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿದ್ದೇವೆ. ನಾಳೆ ದಿನ ಅವರು ಬಂದು ಈ ಕಾಮಗಾರಿಯನ್ನು ನಾನೇ ಮಾಡಿಸಿದ್ದು ಎನ್ನಲೂ ಬಹುದು’ ಎಂದು ಲೇವಡಿ ಮಾಡಿದರು.

‘ನಮಗೆ ನುಡಿದಂತೆ ನಡೆಯಲಷ್ಟೇ ಬರುತ್ತದೆ. ಅವರಂತೆ ಡ್ರಾಮಾ ಮಾಡಲು, ಆಣೆ ಪ್ರಮಾಣ ಮಾಡಲು, ಕಣ್ಣೀರು ಸುರಿಸಲು ಬರುವುದಿಲ್ಲ’ ಎಂದು ಶಾಸಕ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

ಕೇತಗಾನಹಳ್ಳಿ ಪ್ರತಿಷ್ಠೆಯ ಗ್ರಾಮ. ಇಲ್ಲಿ ಬಂದು ನೋಡಿದರೆ ಗೊತ್ತಾಗುತ್ತದೆ ವಾಸ್ತವ ಸ್ಥಿತಿ. ಏನೇ ಆಗಲಿ ಅವರ ಪ್ರತಿಷ್ಠೆಗೆ ಧಕ್ಕೆ ಬರದಂತೆ ಗ್ರಾಮವನ್ನು ಅಭಿವೃದ್ಧಿ ಪಡಿಸುತ್ತೇವೆ. ಏಕೆಂದರೆ ಅಭಿವೃದ್ಧಿಯೇ ಕಾಂಗ್ರೆಸ್ ಪಕ್ಷ ಮೂಲಮಂತ್ರ ಎಂದು ಅವರು ಹೇಳಿದರು.

ವಿಧಾನ ಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ಗಾಣಕಲ್ ನಟರಾಜ್, ಪುರಸಭೆ ಸದಸ್ಯ ವೈ. ರಮೇಶ್, ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಎಲ್. ಚಂದ್ರಶೇಖರ್, ಮುಖಂಡರಾದ ಅಬ್ಬನಕುಪ್ಪೆ ರಮೇಶ್, ದೊಡ್ಡವೆಂಕಟಪ್ಪ, ವಾಜರಹಳ್ಳಿರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT