ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಧಿಕಾರ ದುರುಪಯೋಗದಿಂದ ಡಿಕೆಶಿ ಅಕ್ರಮ ಆಸ್ತಿ’

1990ರಿಂದ 2019ರ ಅವಧಿಯಲ್ಲಿ ಸಂಗ್ರಹ l ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ಇ.ಡಿ. ಆರೋಪ
Last Updated 25 ಸೆಪ್ಟೆಂಬರ್ 2019, 3:51 IST
ಅಕ್ಷರ ಗಾತ್ರ

ನವದೆಹಲಿ: ‘ಅಕ್ರಮ ಆಸ್ತಿ ಸಂಪಾದಿಸಿರುವ ಡಿ.ಕೆ. ಶಿವಕುಮಾರ್‌ ಅವರು ಅನೇಕ ವರ್ಷಗಳಿಂದ ಶಾಸಕ, ಸಚಿವರಾಗಿ ಅಧಿಕಾರವನ್ನು ಸ್ಪಷ್ಟವಾಗಿ ದುರುಪಯೋಗ ಪಡಿಸಿಕೊಂಡಿದ್ದಾರೆ’ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಆರೋಪಿಸಿದೆ.

ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿ ಬಂಧನಕ್ಕೆ ಒಳಗಾಗಿರುವ ಡಿ.ಕೆ. ಶಿವಕುಮಾರ್‌ ಅವರನ್ನು ವಿಚಾರಣೆಗಾಗಿ ಮತ್ತಷ್ಟು ಅವಧಿಗೆ ವಶಕ್ಕೆ ನೀಡುವಂತೆ ಕೋರಿ ಶುಕ್ರವಾರ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ಮೇಲ್ಮನವಿಯಲ್ಲಿ ಇ.ಡಿ ಅಧಿಕಾರಿಗಳು ಈ ಅಂಶವನ್ನು ಪ್ರಸ್ತಾಪಿಸಿದ್ದಾರೆ.

ಶಿವಕುಮಾರ್‌ ಅವರು 1990ರಿಂದ 2019ರ ಅವಧಿಯಲ್ಲಿ ಸಾರ್ವಜನಿಕ ಜೀವನದಲ್ಲಿದ್ದುಕೊಂಡು ಭಾರಿ ಪ್ರಮಾಣದ ಅಕ್ರಮ ಆಸ್ತಿ ಸಂಪಾದಿಸಿರುವುದು ತನಿಖೆಯ ವೇಳೆ ಪತ್ತೆಯಾದ ದಾಖಲೆಗಳಿಂದ ದೃಢಪಟ್ಟಿದೆ. ಅವರ ಆಸ್ತಿಯು ಸಂಸ್ಥೆ ಅಂದಾಜಿಸಿದ್ದಕ್ಕಿಂತ ಇನ್ನೂ ಹೆಚ್ಚಿನ ಪ್ರಮಾಣದಲ್ಲಿರುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.

ಆರೋಪಿ ಹಣವನ್ನು ಅಕ್ರಮವಾಗಿ ವರ್ಗಾಯಿಸುವುದನ್ನೇ ಅಭ್ಯಾಸ ಮಾಡಿಕೊಂಡಂತಿದೆ. ಇಂಥ ಪ್ರಕ್ರಿಯೆಯು ರಾಷ್ಟ್ರೀಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಇನ್ನಷ್ಟು ತನಿಖೆ ನಡೆಸಿದಲ್ಲಿ ಇವರು ಹೊಂದಿರುವ ಮತ್ತಷ್ಟು ಆಸ್ತಿ ಪತ್ತೆಯಾಗುವ ಸಾಧ್ಯತೆಯೂ ಇದೆ ಎಂಬುದು ಇ.ಡಿ.ಯ ನೇರ ಆರೋಪವಾಗಿದೆ.

ಒಟ್ಟು ಮೂರು ಬ್ಯಾಂಕ್ ಖಾತೆಗಳ ಮೂಲಕ ₹ 200 ಕೋಟಿಗೂ ಅಧಿಕ ಪ್ರಮಾಣದ ವ್ಯವಹಾರ ಮಾಡಿರುವ ಅಂಶವನ್ನು ಶಿವಕುಮಾರ್‌ ಅವರ ವಿಚಾರಣೆ ವೇಳೆ ಪಡೆಯಲಾದ ಹೇಳಿಕೆಗಳ ಮೂಲಕ ದೃಢಪಟ್ಟಿದೆ. ಆರೋಪಿ ಹಾಗೂ ಅವರ ಕುಟುಂಬ ಸದಸ್ಯರು 20ಕ್ಕೂ ಅಧಿಕ ಬ್ಯಾಂಕ್‌ಗಳಲ್ಲಿ ಹೊಂದಿರುವ 317 ಖಾತೆಗಳ ಮೂಲಕ ನಡೆಸಿರುವ ದೊಡ್ಡಮಟ್ಟದ ವ್ಯವಹಾರದ ಕುರಿತ ತನಿಖೆಯನ್ನು ನಡೆಸುವುದು ಬಾಕಿ ಇದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಅಕ್ರಮದ ಕುರುಹು ಪತ್ತೆಯಾಗದಂತೆ ನೋಡಿಕೊಳ್ಳುವ ಉದ್ದೇಶದಿಂದಲೇ ಶಿವಕುಮಾರ್‌, ಅವರ ಆಪ್ತರು ಹಾಗೂ ಕುಟುಂಬ ಸದಸ್ಯರು ಯಾವುದೇ ಬಲವಾದ ಕಾರಣಗಳಿಲ್ಲದೆ ಅಪಾರ ಪ್ರಮಾಣದ ಹಣವನ್ನು ಒಂದು ಖಾತೆಯಿಂದ ಮತ್ತೊಂದು ಖಾತೆಗೆ ವರ್ಗಾಯಿಸಿದ್ದಾರೆ. ಹೀಗೆ ವರ್ಗಾವಣೆಗೊಂಡ ಹಣವು ಕೊನೆಗೆ ಇವರ ಕುಟುಂಬ ಸದಸ್ಯರ ಖಾತೆಗೇ ಜಮೆಯಾಗಿದೆ. ಆದರೆ, ವಿಚಾರಣೆ ಸಂದರ್ಭ ಎಲ್ಲರೂ ಸಮಂಜಸ ವಿವರಣೆ ನೀಡಲು ವಿಫಲರಾಗಿದ್ದಾರೆ ಎಂದು ದೂರಲಾಗಿದೆ.

ತಾವು ಹೊಂದಿರುವ ಆಸ್ತಿಯು ಪಿತ್ರಾರ್ಜಿತವಾಗಿ, ಸ್ವಯಂ ದುಡಿಮೆಯಿಂದ ಹಾಗೂ ಉಡುಗೊರೆ ಮೂಲಕ ಬಂದಿದೆ ಎಂಬ ಹೇಳಿಕೆ ನೀಡಲಾಗಿದೆ. ಆದರೆ, ಈ ಬಗ್ಗೆ ಸಮರ್ಪಕ ವಿವರಣೆ ದೊರೆತಿಲ್ಲ. ಇವರ ಹೆಸರಿನಲ್ಲಿ ಇನ್ನೂ ಅಧಿಕ ಪ್ರಮಾಣದ ಬೇನಾಮಿ ಆಸ್ತಿ ಇರಬಹುದು ಎಂದೂ ಹೇಳಲಾಗಿದೆ.

ಒಂದು ಅಂದಾಜಿನ ಪ್ರಕಾರ ಶಿವಕುಮಾರ್ ಬಳಿ ಇರುವ ಆಸ್ತಿಯ ಮೌಲ್ಯ ₹ 800 ಕೋಟಿಗೂ ಅಧಿಕ ಪ್ರಮಾಣದ್ದಾಗಿದೆ. ಕೇವಲ 22 ವರ್ಷ ವಯಸ್ಸಿನ ಇವರ ಪುತ್ರಿ ಐಶ್ವರ್ಯಾ ಹೆಸರಿನಲ್ಲಿ ₹ 108 ಕೋಟಿ ಆಸ್ತಿ ಇದೆ. ಆದರೆ, ಈ ಆದಾಯದ ಮೂಲ ಯಾವುದು ಎಂಬ ಬಗ್ಗೆ ತಂದೆ– ಮಗಳಿಬ್ಬರೂ ಸೂಕ್ತ ವಿವರಣೆ ನೀಡುತ್ತಿಲ್ಲ ಎಂದು ಉಲ್ಲೇಖಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸುನಿಲ್‌ ಕುಮಾರ್‌ ಶರ್ಮಾ, ಸಚಿನ್‌ ನಾರಾಯಣ (ಇಬ್ಬರೂ ಮೂರು ದಿನ), ತನುಜ್‌, ಆಂಜನೇಯ ಹನುಮಂತಯ್ಯ, ಅನಿಲ್‌ ಜೈನ್‌, ಅಜಯ್‌ ಖನ್ನಾ, ಎನ್‌.ಎನ್‌. ಸೋಮೇಶ್‌ ಹಾಗೂ ಐಶ್ವರ್ಯಾ (ಎಲ್ಲರೂ ತಲಾ ಒಂದು ದಿನ) ಅವರನ್ನು ವಿಚಾರಣೆಗೆ ಒಳಪಡಿಸಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ ಎಂಬ ವಿವರವನ್ನು ಅರ್ಜಿಯಲ್ಲಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT