ತೆಲಂಗಾಣ ವಿಧಾನಸಭೆ ವಿಸರ್ಜನೆ ಸಾಧ್ಯತೆ

7
ತೆಲಂಗಾಣ ರಾಷ್ಟ್ರ ಸಮಿತಿಯಿಂದ ಬೃಹತ್ ರ್‍ಯಾಲಿ

ತೆಲಂಗಾಣ ವಿಧಾನಸಭೆ ವಿಸರ್ಜನೆ ಸಾಧ್ಯತೆ

Published:
Updated:

ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ಅವಧಿಗೂ ಮುನ್ನವೇ ಭಾನುವಾರ ವಿಧಾನಸಭೆ ವಿಸರ್ಜಿಸುವ ಸಾಧ್ಯತೆ ಇದೆ ಎಂದು ವರದಿಯಗಿದೆ.

ಭಾನುವಾರ ಮಧ್ಯಾಹ್ನ 1 ಗಂಟೆಗೆ ತೆಲಂಗಾಣ ಸಚಿವಸಂಪುಟ ಸಭೆ ನಿಗದಿಪಡಿಸಲಾಗಿದೆ. ಸಭೆಯ ಬಳಿಕ ಮುಖ್ಯಮಂತ್ರಿಗಳು ಮಹತ್ವದ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

‘ಸಚಿವ ಸಂಪುಟ ಸಭೆಯ ಬಳಿಕ ನಮ್ಮ ಪಕ್ಷದ ನಾಯಕನಿಂದ ಮಹತ್ವದ ನಿರ್ಧಾರ ಪ್ರಕಟವಾಗಲಿರುವುದನ್ನು ನೀವು ನಿರೀಕ್ಷಿಸಬಹುದು. ನಂತರ ರಾಜ್ಯದ ರಾಜಕೀಯ ಕಾವೇರಲಿದೆ’ ಎಂದು ಮುಖ್ಯಮಂತ್ರಿಗಳ ಪುತ್ರ, ಮಾಹಿತಿ ತಂತ್ರಜ್ಞಾನ ಸಚಿವ ಕೆ.ಟಿ. ರಾಮ ರಾವ್ ತಿಳಿಸಿದ್ದಾರೆ ಎಂದು ಸುದ್ದಿವಾಹಿನಿಯೊಂದು ವರದಿ ಮಾಡಿದೆ. ಆದರೆ, ವಿಧಾನಸಭೆ ವಿಸರ್ಜಿಸಿ ಅವಧಿಪೂರ್ವ ಚುನಾವಣೆಗೆ ತೆರಳುವ ಬಗ್ಗೆ ಅವರು ಅಧಿಕೃತ ಹೇಳಿಕೆ ನೀಡಿಲ್ಲ.

ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಸರ್ಕಾರದ ಅವಧಿ 2019ರ ಮೇನಲ್ಲಿ ಪೂರ್ಣಗೊಳ್ಳಲಿದೆ. ಅವಧಿಪೂರ್ಣಗೊಂಡ ನಂತರವಾದರೆ ಲೋಕಸಭೆ ಚುನಾವಣೆ ಜತೆಗೇ ವಿಧಾನಸಭೆ ಚುನಾವಣೆಯೂ ನಡೆಯಬಹುದು. ಆದರೆ, ಅವಧಿಗೂ ಮುನ್ನ ವಿಧಾನಸಭೆ ವಿಸರ್ಜನೆಯಾದರೆ ಡಿಸೆಂಬರ್‌ನಲ್ಲಿ ನಡೆಯಲಿರುವ ಇತರ ಮೂರು ರಾಜ್ಯಗಳ ವಿಧಾನಸಭೆ ಚುನಾವಣೆಯೊಂದಿಗೇ ಮತದಾನ ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ.

ತೆಲಂಗಾಣದ ಮುಖ್ಯಮಂತ್ರಿಗಳು ಇತ್ತೀಚಿನ ಕೆಲ ದಿನಗಳಲ್ಲಿ ನೀಡಿರುವ ಸುಳಿವು, ಆಗಸ್ಟ್‌ನಲ್ಲಿ ಎರಡು ಬಾರಿ ಪ್ರಧಾನಿ ನರೇಂದ್ರ ಮೋದಿ ಜತೆ ಮಾತುಕತೆ ನಡೆಸಿರುವುದು ವಿಧಾನಸಭೆ ವಿಸರ್ಜನೆ ಅನುಮಾನಕ್ಕೆ ಪುಷ್ಟಿ ನೀಡಿದೆ ಎಂದು ಮೂಲಗಳು ಹೇಳಿವೆ.

ಆದರೆ, ಟಿಆರ್‌ಎಸ್‌ ಸರ್ಕಾರಕ್ಕೆ ಇನ್ನೂ ಎಂಟು ತಿಂಗಳ ಅವಧಿ ಬಾಕಿ ಇದೆ. ಹೀಗಾಗಿ ರಾವ್ ಅವರು ವಿಧಾನಸಭೆ ವಿಸರ್ಜಿಸುವ ಸಾಧ್ಯತೆ ಕಡಿಮೆ ಇದೆ ಎಂದು ಬಿಜೆಪಿ ನಾಯಕರು ಅಭಿಪ್ರಾಯಪಟ್ಟಿದ್ದಾರೆ.

ಬೃಹತ್ ರ್‍ಯಾಲಿ: ಟಿಆರ್‌ಎಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದು ಸೆಪ್ಟೆಂಬರ್ 2ರಂದು ನಾಲ್ಕು ವರ್ಷವಾಗುತ್ತದೆ. ಈ ಹಿನ್ನೆಲೆಯಲ್ಲಿ ಬೃಹತ್ ರ್‍ಯಾಲಿಯನ್ನೂ ಪಕ್ಷ ಹಮ್ಮಿಕೊಂಡಿದೆ. ‘ಪ್ರಗತಿ ನಿವೇದನಾ’ ಹೆಸರಿನ ರ್‍ಯಾಲಿಯಲ್ಲಿ ಸುಮಾರು 25 ಲಕ್ಷ ಜನ ಭಾಗವಹಿಸಲಿದ್ದಾರೆ ಎಂದು ಅಂದಾಜಿಸಲಾಗಿದೆ. ಪಕ್ಷವು 47 ಲಕ್ಷ ಸದಸ್ಯರನ್ನು ಹೊಂದಿದೆ. ಈ ಪೈಕಿ ಅರ್ಧದಷ್ಟು ಮಂದಿ ಭಾಗವಹಿಸಿದರೂ ರ್‍ಯಾಲಿ ಯಶಸ್ವಿಯಾಗಲಿದೆ ಎಂದು ರಾಮ ರಾವ್ ಅಭಿಪ್ರಾಯಪಟ್ಟಿದ್ದಾರೆ.

ಈ ಮಧ್ಯೆ, ಟಿಆರ್‌ಎಸ್ ಸರ್ಕಾರ ಆಡಳಿತ ದುರುಪಯೋಗ ಮಾಡುತ್ತಿದೆ. ರ್‍ಯಾಲಿಗೆ ಎಲ್ಲಿಂದ ಹಣ ಹೊಂದಿಸಲಾಗಿದೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಆಗ್ರಹಿಸಿವೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !