ಸಾಲ ಮಾಡಿ ಓಡಿ ಹೋದ ನೀರವ್ ಮೋದಿ ಆಸ್ತಿ ಮುಟ್ಟುಗೋಲು

7

ಸಾಲ ಮಾಡಿ ಓಡಿ ಹೋದ ನೀರವ್ ಮೋದಿ ಆಸ್ತಿ ಮುಟ್ಟುಗೋಲು

Published:
Updated:

ನವದೆಹಲಿ: ಪಂಜಾಬ್‌ ನ್ಯಾಷನಲ್ ಬ್ಯಾಂಕ್‌ಗೆ ₹13 ಸಾವಿರ ಕೋಟಿ ವಂಚಿಸಿದ ಆರೋಪಿ ನೀರವ್ ಮೋದಿ ವಿರುದ್ಧ ಕ್ರಮ ಜರುಗಿಸಿರುವ ಜಾರಿ ನಿರ್ದೇಶನಾಲಯವು, ನ್ಯೂಯಾರ್ಕ್‌ನ ಪ್ರತಿಷ್ಠಿತ ಸೆಂಟ್ರಲ್ ಪಾರ್ಕ್‌ನಲ್ಲಿರುವ ಎರಡು ಅಪಾರ್ಟ್‌ಮೆಂಟ್ ಸೇರಿ ಒಟ್ಟು ₹637 ಕೋಟಿ ಮೊತ್ತದ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದೆ.

ಲೇವಾದೇವಿ ಕಾಯ್ದೆಯ ಅನ್ವಯ ನಿರ್ದೇಶನಾಲಯವು ಒಟ್ಟು ಐದು ಹಂಗಾಮಿ ಆದೇಶಗಳನ್ನು ಜಾರಿ ಮಾಡಿದೆ. ಲಂಡನ್‌, ನ್ಯೂಯಾರ್ಕ್‌ ನಗರಗಳಲ್ಲಿರುವ ಆಸ್ತಿ, ಸಿಂಗಪುರ ಮತ್ತು ಇತರ ದೇಶಗಳ ಬ್ಯಾಂಕ್ ಖಾತೆಗಳಲ್ಲಿರುವ ಹಣ, ಮುಂಬೈನಲ್ಲಿರುವ ಫ್ಲಾಟ್, ಸಿಂಗಪುರದಿಂದ ಮುಂಬೈಗೆ ಬಂದಿರುವ ವಜ್ರದ ಆಭರಣಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶಿಸಿದೆ.

‘ಈ ಸಂಬಂಧ ಮೂರು ತಿಂಗಳುಗಳಿಂದ ತನಿಖಾಧಿಕಾರಿಗಳು ವಿವಿಧ ದೇಶಗಳಲ್ಲಿರುವ ನ್ಯಾಯಾಲಯಗಳಲ್ಲಿ ಕಾನೂನು ಪ್ರಕ್ರಿಯೆ ಆರಂಭಿಸಿದ್ದರು. ಸತತ ಪರಿಶ್ರಮ ಇದೀಗ ಫಲ ನೀಡಿದೆ. ಭಾರತ ಮತ್ತು ಕೆಲ ಇತರ ದೇಶಗಳಲ್ಲಿ ನೀರವ್ ಮೋದಿ ಹೊಂದಿರುವ ₹637 ಕೋಟಿ ಮೊತ್ತದ ಆಸ್ತಿಯನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಳ್ಳಲು ಆದೇಶ ಹೊರಡಿಸಲಾಗಿದೆ. ವಿದೇಶಗಳಲ್ಲಿ ಸಿದ್ಧಪಡಿಸಿದ್ದ ಒಡವೆಗಳನ್ನು ಮುಟ್ಟುಗೋಲು ಹಾಕಿಕೊಂಡು, ಭಾರತಕ್ಕೆ ತರಲಾಗಿದೆ’ ಎಂದು ಜಾರಿ ನಿರ್ದೇಶನಾಲಯವು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಭಾರತದ ತನಿಖಾ ಸಂಸ್ಥೆಗಳು ವಿದೇಶಗಳಲ್ಲಿ ಆಸ್ತಿ ಮುಟ್ಟುಗೋಲು ಹಾಕಿಕೊಂಡಿರುವ ಪ್ರಕರಣಗಳು ವಿರಳಾತಿವಿರಳ. ಇದೀಗ ಮುಟ್ಟುಗೋಲು ಹಾಕಿಕೊಂಡಿರುವ ನೀರವ್ ಮೋದಿ ಆಸ್ತಿಗಳಲ್ಲಿ ನ್ಯೂಯಾರ್ಕ್‌ನ ಸೆಂಟ್ರಲ್‌ ಪಾರ್ಕ್ ಪ್ರದೇಶದಲ್ಲಿರುವ ಅಪಾರ್ಟ್‌ಮೆಂಟ್ ₹216 ಕೋಟಿ ಬೆಲೆ ಬಾಳುತ್ತದೆ. ಲಂಡನ್‌ನ ಮಾರ್ಲೆಬೋನ್ ರಸ್ತೆಯಲ್ಲಿರುವ ಫ್ಲಾಟ್ ₹56.97 ಕೋಟಿ ಬೆಲೆ ಬಾಳುತ್ತದೆ. ಹಾಂಕಾಂಗ್‌ನಿಂದ ಭಾರತಕ್ಕೆ ಬಂದಿದ್ದ ₹22.69 ಕೋಟಿ ಮೊತ್ತದ ವಜ್ರದ ಆಭರಣಗಳು ಮತ್ತು ಸಿಂಗಪುರದ ಬ್ಯಾಂಕ್ ಖಾತೆಯಲ್ಲಿ ಬ್ರಿಟಿಷ್ ವರ್ಜಿನ್ ಐಲಾಂಡ್ ಮೂಲದ ಕಂಪನಿಯೊಂದರ ಹೆಸರಿನಲ್ಲಿದ್ದ ₹44 ಕೋಟಿ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ಹಣ ನೀರವ್ ಮೋದಿ ಅವರ ಸೋದರಿ ಪೂರ್ವಿ ಮೋದಿ ಮತ್ತು ಆಕೆಯ ಗಂಡ ಮಾಯಂಕ್ ಮೆಹ್ತಾ ಅವರಿಗೆ ಸೇರಿತ್ತು ಎಂದು ಜಾರಿ ನಿರ್ದೇಶನಾಲಯ ಹೇಳಿದೆ.

ನೀರವ್ ಮೋದಿ, ಪೂರ್ವಿ ಮೋದಿ ಅವರ ಮಾಲೀಕತ್ವದ ಕಂಪನಿಗಳಿಗೆ ಸೇರಿದ ಐದು ಬ್ಯಾಂಕ್ ಖಾತೆಗಳಲ್ಲಿದ್ದ ₹278 ಕೋಟಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ಖಾತೆಗಳಿಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್‌ ಹಗರಣ ಬೆಳಕಿಗೆ ಬಂದ ನಂತರವೇ ಸಾಕಷ್ಟು ಹಣ ವರ್ಗಾವಣೆ ಮಾಡಲಾಗಿತ್ತು. ಮುಟ್ಟುಗೋಲು ಹಾಕಿಕೊಂಡಿರುವ ಆಸ್ತಿಗಳಲ್ಲಿ ದಕ್ಷಿಣ ಮುಂಬೈನಲ್ಲಿದ್ದ ಪೂರ್ವಿ ಮೋದಿ ಮಾಲೀಕತ್ವದ ₹19.5 ಕೋಟಿ ಮೌಲ್ಯದ ಫ್ಲಾಟ್ ಸಹ ಸೇರಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನೀರವ್ ಮೋದಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಆದಿತ್ಯ ನಾನಾವತಿ ವಿರುದ್ಧ ಇಂಟರ್‌ಪೋಲ್‌ನಲ್ಲಿ ರೆಡ್‌ಕಾರ್ನರ್ ನೊಟೀಸ್ (ಜಾಗತಿಕ ಅರೆಸ್ಟ್ ವಾರಂಟ್) ಹೊರಡಿಸಲಾಗಿದೆ. ಹಗರಣ ಬೆಳಕಿಗೆ ಬಂದ ನಂತರ ನೀರವ್ ಮೋದಿ ತಲೆಮರೆಸಿಕೊಂಡಿದ್ದರು. ಪ್ರಸ್ತುತ ಇಂಗ್ಲೆಂಡ್‌ನಲ್ಲಿ ನೆಲೆಸಿರಬಹುದು ಎಂದು ಶಂಕಿಸಲಾಗುತ್ತಿದೆ. ಇಂಟರ್‌ಪೋಲ್‌ನಲ್ಲಿ ಅವರ ವಿರುದ್ಧವೂ ಬಂಧನ ವಾರಂಟ್ ಹೊರಡಿಸಲಾಗಿದೆ. ಆರೋಪಿಯನ್ನು ಹಸ್ತಾಂತರಿಸುವಂತೆ ಭಾರತ ಸರ್ಕಾರವು ಬ್ರಿಟನ್ ಸರ್ಕಾರವನ್ನು ಕೋರಿದೆ.

ಈವರೆಗೆ ನೀರವ್ ಮೋದಿ ಅವರ ಕುಟುಂಬಕ್ಕೆ ಸೇರಿದ ಒಟ್ಟು ₹700 ಕೋಟಿಯಷ್ಟು ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ. ತನ್ನ ಹಾಗೂ ತನ್ನ ಕುಟುಂಬದ ನಿಯಂತ್ರಣದಲ್ಲಿದ್ದ ಬೇನಾಮಿ ಕಂಪನಿಗಳ ಹೆಸರಿನಲ್ಲಿ ನೀರವ್ ಮೋದಿ ₹6400 ಕೋಟಿ ಸಾಲ ಪಡೆದು ಬೇರೆ ಉದ್ದೇಶಗಳಿಗೆ ಬಳಸಿಕೊಂಡ ಆರೋಪದ ಮೇಲೆ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ನೀರವ್ ಮೋದಿ, ಮೆಹುಲ್ ಚೋಸ್ಕಿ ಮತ್ತು ಇತರರ ವಿರುದ್ಧ ಹಲವು ಅಪರಾಧ ಕಾನೂನುಗಳ ಅನ್ವಯ ತನಿಖೆ ನಡೆಯುತ್ತಿದೆ. ನೀರವ್ ಮೋದಿ ₹13 ಸಾವಿರ ಕೋಟಿಗೂ ಹೆಚ್ಚು ಮೊತ್ತವನ್ನು ವಂಚಿಸಿದ್ದಾರೆ ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ದೂರು ನೀಡಿದ ನಂತರ ಹಗರಣ ಬೆಳಕಿಗೆ ಬಂದಿತ್ತು.

ಬರಹ ಇಷ್ಟವಾಯಿತೆ?

 • 22

  Happy
 • 1

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !